ಬಸವಮಾರ್ಗದಲ್ಲಿ ವಚನ ಪಠಣ : ವ್ಯಸನಮುಕ್ತ ಜೀವನ ಕುರಿತು ವಿಶೇಷ ಉಪನ್ಯಾಸ

  • ಶರಣ ಸಾಹಿತ್ಯ ತಾಲೂಕು ಪರಿಷತ್ ಸಹಯೋಗ


ಮೈಸೂರು : ಶರಣ ಸಾಹಿತ್ಯ ತಾಲೂಕು ಪರಿಷತ್ತು ಮತ್ತು ಬಸವಮಾರ್ಗ ಫೌಂಡೇಷನ್(ರಿ) ವತಿಯಿಂದ ನಗರದ ಶ್ರೀರಾಮಪುರದಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ಶುಕ್ರವಾರ “ವಚನಗಳಲ್ಲಿ ವ್ಯಸನಮುಕ್ತ ಜೀವನ’ ಕುರಿತು ಎರಡನೇ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

‘ವಚನಗಳಲ್ಲಿ ವ್ಯಸನಮುಕ್ತ ಜೀವನ’ ವಿಷಯ ಕುರಿತು, ಹಿರಿಯ ವಿದ್ವಾಂಸ ಪ್ರೊ.ಕೆ.ಅನಂತರಾಮು ಮಾತನಾಡಿ,
ಯಾರು ತಮಗಾಗಿ ಬದುಕುತ್ತಾರೋ ಅವರು ಸತ್ತಂತೆ, ಯಾರು ಇತರರಿಗಾಗಿ ಬದುಕುತ್ತಾರೋ ಅವರು ಮಾತ್ರ ಬದುಕುತ್ತಾರೆ. ಮಾನವ ಜನ್ಮದ ದೊಡ್ಡದು, ಪವಿತ್ರವಾದದ್ದು‌. ಇದನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಅದಕ್ಕಾಗಿ ವ್ಯಸನಮುಕ್ತ ಜೀವನ ಮಾಡಬೇಕು ಎಂದು ಸಲಹೆ ನೀಡಿದರು‌.

ಸಹಜ, ಸುಂದರ ಜೀವನಕ್ಕೆ ಬಸವಣ್ಣ ಅವರು ಮಹತ್ವದ ಸಂದೇಶ ಕೊಟ್ಟಿದ್ದಾರೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇತರರ ಅಳೆಯಬೇಡ, ತನ್ನ ಬಣ್ಣಿಸಬೇಡ, ಇದೇ ಅಂತರಂಗ ಶುದ್ಧಿ ,ಇದೆ ಬಹಿರಂಗ ಶುದ್ಧಿ. ಬಸವಾದಿ ಶರಣರ ಈ ಏಳು ತತ್ವ ಗಳನ್ನು ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವ್ಯಸನದಿಂದ ಮನುಷ್ಯ ಎಲ್ಲವನ್ನು ಕಳೆದುಕೊಳ್ಳುತ್ತಾನೆ. ವ್ಯಸನ ಜೀವನವನ್ನೇ ನಾಶ ಮಾಡುತ್ತದೆ‌. ದ್ರವ್ಯನಾಶ, ಬುದ್ದಿನಾಶ, ಶಕ್ತಿನಾಶ, ಆರೋಗ್ಯ ನಾಶ, ಬಂಧುತ್ವ ನಾಶಮಾಡುತ್ತದೆ. ಎಲ್ಲದಕ್ಕೂ ಮನಸ್ಸೆ ಕಾರಣ. ಹಾಗಾಗಿ ಬಸವಣ್ಣ ಅವರು ಮನಸ್ಸನ್ನು ಸರಿಯಾದ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಂದು ಸಲಹೆ ನೀಡಿದ್ದಾರೆ ಎಂದು ತಿಳಿಸಿದರು‌.

ಯಾವುದೇ ವ್ಯಸನಕ್ಕೆ ನಾನು ಸಿಲುಕಿಕೊಳ್ಳಬಾರದು ಎಂದು ಬಸವಣ್ಣ ಅವರು ದೇವರು ಹತ್ತಿರ ಕೇಳಿಕೊಳ್ಳುತ್ತಾರೆ. ಲಿಂಗ ಪೂಜೆ, ದಾಸೋಹ, ಜಂಗಮ ಸಂಗದ ವ್ಯಸನಿಯನ್ನಾಗಿ ಮಾಡು ಎಂದು ಪರಿಪರಿಯಾಗಿ ಶಿವನನ್ನು ಬೇಡುತ್ತಾರೆ. ಹಾಗೆ ನಾವು ಕೂಡ ಒಳ್ಳೆಯ ವ್ಯಸನವನ್ನು ಮೈಗೂಡಿಸಿಕೊಳ್ಳಬೇಕು. ಅದರ ಹೊರತು ವ್ಯರ್ಥವಾದ ವ್ಯಸನಕ್ಕೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು.

ಈ ಜಗತ್ತು ಶಾಶ್ವತವಲ್ಲ. ಇದು ಮಾಯ ಜಗತ್ತು ಎಂದು ಬಸವಣ್ಣ ಅವರು ಹೇಳುತ್ತಾರೆ‌. ಅಶಾಶ್ವತ ಜೀವನದಲ್ಲಿ ಭಗವಂತ ಕೊಟ್ಟಿರುವ ಸಮಯದಲ್ಲಿ ಒಳ್ಳೆಯ ಜೀವನ ಮಾಡು ಎಂದು ಅವರು ಹೇಳುತ್ತಾರೆ. ಈ ಶರೀರ, ಮನಸ್ಸನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಬೇಕು‌. ವ್ಯರ್ಥ ವ್ಯಸನಕ್ಕೆ ದೇಹ, ಮನಸ್ಸು ಬಳಕೆಯಾಗಬಾರದು ಎಂದು ಪ್ರೊ.ಕೆ.ಅನಂತರಾಮು ಅವರು ತಿಳಿಸಿದರು.

ವ್ಯಸನಕ್ಕೆ ದಾಸರನ್ನಾಗಿಸುವುದು ಸರ್ಕಾರ ಹಾಗೂ ಇತರರ ಕೆಲಸವಾದರೆ, ನಾವು ವ್ಯಸನಮುಕ್ತ ಜೀವನ ಮಾಡುವುದೇ ನಮ್ಮ ಮೊದಲ ಕೆಲಸವಾಗಬೇಕು. ಚಟಕ್ಕೆ ತಳ್ಳುವುವರು ಸಾವಿರಾರು ಜನರು ಇದ್ದಾರೆ. ಹಾಗಾಗಿ ಯಾರೇ ಏನೇ ಹೇಳಿದರೂ, ನಾವು ನಮ್ಮ ಮನಸ್ಸನ್ನು ಘಾಸಿಗೊಳಿಸಿಕೊಳ್ಳಬಾರದು. ಸಮರ್ಪಕವಾಗಿ ನಮ್ಮ ಮನಸ್ಸನ್ನು ಇಟ್ಡುಕೊಂಡು ವ್ಯಸನಮುಕ್ತ ಜೀವನ ಮಾಡಬೇಕು ಎಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತ ಎಂ.ಆರ್.ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಾದಿ ಶರಣರು ವ್ಯಸನಮುಕ್ತ ಜೀವನಕ್ಕೆ ದೊಡ್ಡ ಸಂದೇಶ ಸಾರಿದರು. ಅವರ ಆಶಯಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವ್ಯಸನಗಳು ಸಮಾಜದ ದಿಕ್ಕನ್ನು ತಪ್ಪಿಸುತ್ತಿದೆ. ಯುವ ಸಮುದಾಯ ದಾರಿತಪ್ಪುತ್ತಿದೆ. ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಅವರನ್ನು ದಾರಿ ತಪ್ಪಿಸಲು ಹಲವು ಮಾರ್ಗಗಳು ಇಂದು ವೈವಿದ್ಯಮಯವಾಗಿ ಬದಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಯಾವುದೆ ವಿಚಾರಗಳು ಇತಿಮಿತಿಯ ಪರಿಧಿಯನ್ನು ದಾಟಬಾರದು. ಆ ಪರಿಧಿಯನ್ನು ದಾಟಿದರೆ ಯಾವುದೇ ಹವ್ಯಾಸ ವ್ಯಸನವಾಗಿ ಪರಿವರ್ತನೆಯಾಗುತ್ತದೆ‌. ಅರಿಷಡ್ ವರ್ಗ ನಮ್ಮನ್ನು ಆಳಬಾರದು. ಕಾಮ, ಕೋದ್ರ, ಲೋಭ, ಮೋಹ, ಮಧ, ಮತ್ಸರಗಳು ಎಲ್ಲವೂ ಹಿತಿಮಿತಿಯಲ್ಲಿ ಇರಬೇಕು. ಹೆಣ್ಣು, ಹೊನ್ನು, ಮಣ್ಣಿನ ಮೇಲಿನ ವ್ಯಾಮೋಹ ಹಿಡಿತದಲ್ಲಿ ಇರಬೇಕು. ಇದರ ಚೌಕಟ್ಟು ಮೀರಿದಾಗ ಮಾತ್ರ ವ್ಯಕ್ತಿ ವ್ಯಸನಿಯಾಗುತ್ತಾನೆ ಎಂದು ವಿಷಾಧಿಸಿದರು.

ಸಮ ಸಮಾಜ ನಿರ್ಮಾಣ ಶರಣರ ಕನಸಾಗಿತ್ತು. ತಾರತಮ್ಯ ಇರಬಾರದು ಎಂದು ತಮ್ಮ ವಚನಗಳ ಮೂಲಕ ಬಹುದೊಡ್ಡ ಸಂದೇಶ ಸಾರಿದರು. ಅದರಲ್ಲಿ ಬಸವಣ್ಣ ಅವರ ಪಾತ್ರ ಇತಿಹಾಸ ಪುಟಗಳಲ್ಲಿ ಅಚ್ಚಳಿಯದ ರೀತಿಯಲ್ಲಿ ಹಡಗಿದೆ. ವಚನಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಬದುಕನ್ನು ಕಟ್ಡಿಕೊಳ್ಳಬೇಕು. ಕ್ಷಣಿಕ ಸುಖಕ್ಕೆ ಬಲಿಯಾಗಬಾರದು. ಜೀವನದಲ್ಲಿ ಪರಿವರ್ತನೆ ತಂದುಕೊಳ್ಳುವ ಮೂಲಕ ವ್ಯಸನಮುಕ್ತ ಜೀವನ ಮಾಡಬೇಕು ಎಂದು ಸಲಹೆ ನೀಡಿದರು.

ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಅಣ್ಣ ಬಸವಣ್ಣ ಹೇಳಿದ ಮಾತು ಪ್ರಸ್ತುತ. ವ್ಯಸನಕ್ಕೆ ದಾಸರಾದ ನಿಮ್ಮಿಂದ ಹಲವಾರು ಉಪಯುಕ್ತ ಕೆಲಸ ಸಮಾಜ, ಕುಟುಂಬಕ್ಕೆ ಆಗಬೇಕು. ಈ ದಿಕ್ಕಿನಲ್ಲಿ ಚಿಂತನೆ ಮಾಡಿ, ನಡೆಯಬೇಕು. ವ್ಯಸನ ದೂರವಾಗಬೇಕು ಎಂದು ಸಲಹೆ ನೀಡಿದರು.

ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಶರಣ ದೇವರಾಜು ಪಿ.ಚಿಕ್ಕಹಳ್ಳಿ(ದೇಚಿ) ಮಾತನಾಡಿ, ತಾಲೂಕು ಶರಣ ಸಾಹಿತ್ ಪರಿಷತ್ತಿನ ಸೇವೆ ಎಲ್ಲ ವರ್ಗದ ಜನರಿಗೂ ಸಿಗಬೇಕು ಎಂದು ಮನಗಂಡು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿದೆ. ವಚನ ಸಾಹಿತ್ಯದಲ್ಲಿ ಮನುಷ್ಯನ ಬದುಕಿನ ನಿಜವಾದ ಮಾರ್ಗ ಅಡಗಿದೆ. ಶಾಲಾ, ಕಾಲೇಜು, ವಸತಿ ನಿಲಯಗಳು ಹೀಗೆ ಹತ್ತು ಹಲವು ಸಂಘ, ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ.ಹೆಳವರಹುಂಡ ಸಿದ್ದಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಶಾಖಾ ವ್ಯವಸ್ಥಾಪಕರಾದ ವಸಂತ್ ಕುಮಾರ್, ಸಂಜಯ್, ರಾಘವೇಂದ್ರ ಇತರರು ಇದ್ದರು.

ಬಸವಮಾರ್ಗ ಫೌಂಡೇಷನ್(ರಿ) ಸಂಸ್ಥಾಪಕ ಅಧ್ಯಕ್ಷ ಎಸ್. ಬಸವರಾಜು ಮಾತನಾಡಿ, ಸತತ 17 ವರ್ಷಗಳ ಕಾಲ ನಾನು ಕುಡಿತದ ವ್ಯಸನಕ್ಕೆ ದಾಸನಾಗಿದೆ. ಅದರಿಂದ ಹೊರ ಬಂದ ನಂತರ ವ್ಯಸನಕ್ಕೆ ದಾಸರಾದವರನ್ನು ವ್ಯಸನದಿಂಸ ಹೊರತರಬೇಕು ಎಂದು ಮನಗಂಡು ಬಸವಮಾರ್ಗ ಸಂಸ್ಥೆ ಪ್ರಾರಂಭಮಾಡಲಾಯಿತು. ಅದಕ್ಕೆ ನನಗೆ ಪ್ರೇರಣೆ ನೀಡಿದವರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು‌. ಅವರು ಹಾಕಿಕೊಟ್ಟ ಮಾರ್ಗ, ಶ್ರೀ ನಿರ್ಮಾಲನಂದ ನಾಥ ಸ್ವಾಮೀಜಿ ಆಶೀರ್ವಾದಿಂದ ಸಂಸ್ಥೆ ನಡೆಯುತ್ತಿದೆ. ಇದುವರೆಗೆ 15 ಸಾವಿರ ವ್ಯಸನಿಗಳು ಸಂಸ್ಥೆಯಿಂದ ಸೇವೆ ಪಡೆದು ಪರಿವರ್ತನಯಾಗಿದ್ದಾರೆ. ಇದರಿಂದ ಅವರ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು.
6 ವರ್ಷಗಳಲ್ಲಿ 55 ಕುಡಿತ ಬಿಡಿಸುವ ಉಚಿತ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಇದುವರೆಗೆ ೧೫ ಸಾವಿರ ವ್ಯಸನಿಗಳಿಗೆ ಸೇವೆ ನೀಡಿದೆ. ಇದರಿಂದ ಇಂದು ಸಾವಿರಾರು ಕುಟುಂಬಗಳು ನೆಮ್ಮಂದಿಯಿಂದ ಇದ್ದಾರೆ. ಇಷ್ಟು ವರ್ಷ ಪುರಿಷರಿಗಷ್ಟೆ ಸೀಮಿತವಾಗಿದ್ದ ಪುನರ್ವಸತಿ ಕೇಂದ್ರವನ್ನು ಮಹಿಳೆಯರಿಗೂ ವಿಸ್ತಾರ ಮಾಡಿ, ಅವರಿಗೂ ಸೇವೆ ನೀಡಲಾಗುತ್ತಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *