ನಗರದಲ್ಲಿ ಅದ್ದೂರಿ ಗಣರಾಜ್ಯೋತ್ಸವ ಆಚರಣೆ

ಚಾಮರಾಜನಗರ: ಜಿಲ್ಲಾಡಳಿತದ ವತಿಯಿಂದ ನಗರದಲ್ಲಿಂದು ಆಯೋಜಿಸಲಾಗಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಧ್ವಜಾರೋಹಣ ನೆರವೇರಿಸಿದರು.

   ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದ ಅದ್ದೂರಿ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೇರವೇರಿಸಿದ ಬಳಿಕ ಪಥಸಂಚಲನಕ್ಕಾಗಿ ಸಿದ್ದರಾಗಿದ್ದ ಪೊಲೀಸ್ ತುಕಡಿಗಳು ಹಾಗೂ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳ ತಂಡಗಳನ್ನು ಪರಿವೀಕ್ಷಣೆ ಮಾಡಿ ಗೌರವ ವಂದನೆ ಸ್ವೀಕರಿಸಿದರು. 

ಪೊಲೀಸ್ ಸಿವಿಲ್ ಹಾಗೂ ಮೀಸಲು ಮತ್ತು ಮಹಿಳಾ ಪೊಲೀಸ್ ಪಡೆಗಳು, ಗೃಹರಕ್ಷಕ ದಳ, ಮೆಡಿಕಲ್ ಕಾಲೇಜು ಎನ್.ಸಿ.ಸಿ ತಂಡ, ಸಂತ ತೆರೆಸಾ ಪ್ರೌಢಶಾಲೆ, ಬಂಜಾರ ಇಂಡಿಯನ್ಸ್ ಶಾಲೆ, ಜೆ.ಎಸ್.ಎಸ್ ಬಾಲಕ ಹಾಗೂ ಬಾಲಕಿಯರ ತಂಡ, ಎಂಸಿ.ಎಸ್ ಪ್ರೌಢಶಾಲೆ, ಸಂತ ಜೋಸೆಫರ ಶಾಲೆ, ಸಂತ ಫ್ರಾನ್ಸಿಸ್ ಸಾಲೆ, ಆದರ್ಶ ಶಾಲೆ, ಸಂತ ಪೌಲರ ಶಾಲೆ, ಸೇವಾಭಾರತಿ ಪ್ರೌಢಶಾಲೆ ಹಾಗೂ ಇದೇ ಮೊದಲ ಬಾರಿ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಯುವಘಟಕ ಸೇರಿದಂತೆ ಒಟ್ಟು 12 ತಂಡಗಳು ಕಾರ್ಯಕ್ರಮದಲ್ಲಿ ಆಕರ್ಷಕ ಪಥಸಂಚಲನ ನಡೆಸಿ ಗಣರಾಜ್ಯೋತ್ಸವದ ಮೆರುಗು ಹೆಚ್ಚಿಸಿದವು.

   ನಂತರ ಗಣರಾಜ್ಯೋತ್ಸವದ ಸಂದೇಶ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಭಾರತವು ಪ್ರಜಾಪ್ರಭುತ್ವ ಆಡಳಿತ ಅಳವಡಿಸಿಕೊಂಡ ಈ ಸುದಿನವನ್ನು ಪ್ರತಿವರ್ಷ ದೇಶಾದ್ಯಂತ ಗಣರಾಜ್ಯೋತ್ಸವವನ್ನಾಗಿ ಅಚರಿಸುತ್ತಿದ್ದೇವೆ. ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕನ್ನು ನೀಡಿ ಸಮಾನ ಅವಕಾಶಗಳನ್ನು ಕಲ್ಪಿಸುವುದೇ ಸಂವಿಧಾನದ ಮಹತ್ತರ ಉದ್ದೇಶವಾಗಿದೆ. ದೇಶದ ಏಕತೆ, ಜಾತ್ಯಾತೀತ ಮೌಲ್ಯಗಳನ್ನು ಎತ್ತಿ ಹಿಡಿದು ಪರಸ್ಪರ ಗೌರವ, ಸಹಬಾಳ್ವೆಯಿಂದ ಮುನ್ನೆಡೆಯುವುದು ಸಂವಿಧಾನದ ಆಶಯವಾಗಿದೆ ಎಂದರು.

ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಎಂ.ಎಸ್.ಐ.ಎಲ್ ಅಧ್ಯಕ್ಷರಾದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ ಸೇರಿದಂತೆ ಗಣ್ಯರು ರಾಷ್ಟ್ರನಾಯಕರಾದ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಿ ಗೌರವ ಸಮರ್ಪಣೆ ಮಾಡಿದರು. 

ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಸೇವಾಭಾರತಿ ಪ್ರೌಢಶಾಲೆ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಮಲ್ಲಯ್ಯನಪುರ ಸರ್ಕಾರಿ ಆದರ್ಶ ಶಾಲೆ, ಸಂತ ಜೋಸೆಫರ ಶಾಲೆ, ಜೆ.ಎಸ್.ಎಸ್ ಬಾಲಕಿಯರ ಪ್ರೌಢಶಾಲೆಗಳ ನೃತ್ಯರೂಪಕ ಪ್ರದರ್ಶನ ಮತ್ತು ರಸ್ತೆ ಸುರಕ್ಷತೆ ಕುರಿತು ನಗರದ ಅತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಕಲಾವಿದರು ನಡೆಸಿಕೊಟ್ಟ ಬೀದಿನಾಟಕ ಎಲ್ಲರ ಗಮನ ಸೆಳೆಯಿತು. 

ಜಿಲ್ಲೆಯಲ್ಲಿ ಸಾಮಾಜಿಕ ಅಭಿವೃದ್ಧಿ ಕಾರ್ಯಗಳಿಗೆ ಸಿ.ಎಸ್.ಆರ್. ಅನುದಾನ ನೀಡಿದ ವಿವಿಧ ಸಂಘಸಂಸ್ಥೆಗಳು, ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆಗೈದ ಕ್ರೀಡಾಪಟುಗಳು ಮತ್ತು ಅಂಗಾಂಗ ದಾನ ಮಾಡಿದ ಕುಟುಂಬಕ್ಕೆ ಗಣ್ಯರು ಸ್ಮರಣಿಕೆ, ಪ್ರಸಂಶನಾ ಪತ್ರ ನೀಡಿ ಗೌರವಿಸಿದರು.

   ಇದೇ ವೇಳೆ ಕಾಡಂಚಿನ ಜನರ ಅನುಕೂಲಕ್ಕಾಗಿ ಆರೋಗ್ಯ ಇಲಾಖೆಯ ಸಂಚಾರಿ ಗಿರಿಜನ ಆರೋಗ್ಯ ಘಟಕದದ ನೂತನ ಅಂಬುಲೆನ್ಸ್ ವಾಹನಗಳಿಗೆ ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಹಸಿರು ನಿಶಾನೆ ತೋರಿ ಶುಭ ಹಾರೈಸಿದರು

Leave a Reply

Your email address will not be published. Required fields are marked *