
ವರದಿ: ಕೆ.ಟಿ.ಮೋಹನ್ ಕುಮಾರ್
ಕೆ.ಆರ್.ನಗರ: ರಾಜ್ಯ ಸರ್ಕಾರವು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುವ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ಬರುವ ಗಣತಿದಾರರಿಗೆ ಉಪ್ಪಾರ ಸಮುದಾಯದವರು ಜಾತಿಯ ಕಾಲಂ ನಲ್ಲಿ “ಉಪ್ಪಾರ” ಎಂದು ಬರೆಸಬೇಕೆಂದು ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಕಾಟ್ನಾಳು ಮಹಾದೇವ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ಉಪ್ಪಾರ ಸಮುದಾಯದ ಬಂಧುಗಳು ಸರ್ಕಾರದಿಂದ ಸಾಮಾಜಿಕ, ಶಿಕ್ಷಣ, ಆರ್ಥಿಕ ಹಾಗೂ ಉದ್ಯೋಗ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಸರ್ಕಾರದ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಸೆ.22 ರಿಂದ ಅ.7ರ ವರೆಗೆ ರಾಜ್ಯದೆಲ್ಲೆಡೆ ನಡೆಯುವ ಸಮೀಕ್ಷೆಯಲ್ಲಿ ಸರ್ವರೂ ಪಾಲ್ಗೊಂಡು ತಮ್ಮ ಹಾಗೂ ತಮ್ಮ ಕುಟುಂಬದ ಎಲ್ಲಾ ಸದಸ್ಯರುಗಳ ಮಾಹಿತಿಯನ್ನು ಗಣತಿದಾರರಿಗೆ ನೀಡಬೇಕು.
ಪ್ರಮುಖವಾಗಿ ಈ ಸಂದರ್ಭದಲ್ಲಿ ಜಾತಿಯ ಕಾಲಂ ನಂಬರ್ 9ರಲ್ಲಿ “ಉಪ್ಪಾರ” ಎಂದು ಬರೆಸಬೇಕು ಎಂದು ಮನವಿ ಮಾಡಿರುವ ಅವರು ಸಮಸ್ತ ಉಪ್ಪಾರ ಬಂಧುಗಳು ಈ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವ ಮೂಲಕ ರಾಜ್ಯದಲ್ಲಿ ಉಪ್ಪಾರ ಸಮುದಾಯದ ಜನಸಂಖ್ಯೆಯು ಎಷ್ಟಿದೆ ಎಂಬುದನ್ನು ತಿಳಿಯಲು ಅನುಕೂಲವಾಗುತ್ತದೆ ಹಾಗೂ ಸರ್ಕಾರದಿಂದ ಸಮಾಜಕ್ಕೆ ದೊರಕಬೇಕಾದ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದಿದ್ದಾರೆ.
ಈ ಸಮೀಕ್ಷೆಯ ಸಂದರ್ಭದಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಇರುವ ಉಪ್ಪಾರ ಸಮುದಾಯದ ನೌಕರರು, ಯುವಕರು, ಸಂಘಟನೆಗಳವರು, ವಿದ್ಯಾರ್ಥಿಗಳು ಸಮೀಕ್ಷೆ ಕಾರ್ಯವು ಆರಂಭ ಆಗುವ ಮುನ್ನ ತಮ್ಮ ತಮ್ಮ ಭಾಗಗಳಲ್ಲಿ ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕು ಜೊತೆಗೆ ಸಮೀಕ್ಷೆ ನಡೆಯುವ ವೇಳೆಯಲ್ಲಿ ಎಲ್ಲರೂ ಭಾಗವಹಿಸಿ ಎಲ್ಲಾ ಮನೆಗಳ ಸಂಪೂರ್ಣ ಹಾಗೂ ಸಮಗ್ರವಾದ ಮಾಹಿತಿಯನ್ನು ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.