ಸಾಮಾಜಿಕ ಅಭಿವೃದ್ದಿಗೆ ಸಂಶೋಧನೆಗಳು ಅನಿವಾರ್ಯ : ಪ್ರೊ.‌ಎಂ ಆರ್ ಗಂಗಾಧರ್

ಚಾಮರಾಜನಗರ : ಸೆಂಟರ್ ಪಾರ್ ಎಜುಕೇಷನಲ್ ಅಂಡ್ ಸೋಸಿಯಲ್ ಸ್ಟಡಿಸ್, ಬೆಂಗಳೂರು, ಚಾಮರಾಜನಗರ ವಿಶ್ವವಿದ್ಯಾಲಯ, ಸುವರ್ಣಗಂಗೋತ್ರಿ, ಚಾಮರಾಜನಗರ ಮತ್ತು ಬಹು-ಶಿಸ್ತಿನ ಸಂಶೋಧನಾ ಕೇಂದ್ರ, ಧಾರವಾಡ ಇವರ ಸಹಯೋಗದೊಂದಿಗೆ “ಸಂಶೋಧನಾ ಪ್ರಕ್ರಿಯೆ ಮತ್ತು ಪ್ರಶ್ನಾವಳಿಯ ವಿನ್ಯಾಸ” ಎಂಬ ವಿಷಯವನ್ನು ಕುರಿತ ಎರಡು ದಿನಗಳ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಲಪತಿಗಳಾದ ಪ್ರೊ ಎಂ ಆರ್ ಗಂಗಾಧರ್ ಅವರು ಸಂಶೋಧನೆ ಹೊಸ ಹೊಸದನ್ನು ಕಾಣುವ ಕಟ್ಟುವ ಮತ್ತು ಹೊಸತನ್ನು ಸೃಷ್ಟಿಸುವ ಕಾರ್ಯವನ್ನು ಮಾಡುತ್ತದೆ. ದೇಶದ ಮಾನವ ಸಂಪನ್ಮೂಲಗಳ ಕ್ರೋಢಿಕರಣ ಹಾಗೂ ಅದರ ಸದ್ಬಳಕೆಗೆ ಮಾನವಶಾಸ್ತ್ರೀಯ ಅಧ್ಯಯನ, ಕುಲಶಾಸ್ತ್ರೀಯ ಅಧ್ಯಯನ ಜೊತೆಗೆ ಇತರ ಮಾನವಿಕ ಸಂಶೋಧ‌ನೆಗಳ ಜೊತೆಗೆ ವಿಜ್ಞಾನದ ಸಂಶೋಧನೆಗಳು ಸಹಕಾರಿಯಾಗುತ್ತವೆ.

ಸಮಾಜದ ಅಭಿವೃದ್ಧಿಯ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ಅಥವಾ ಅದರ ಫಲಾನುಭವಿಗಳಿಗೆ ಸೂಕ್ತವಾಗಿ ತಲುಪುತ್ತಿದೆಯೇ ಎಂಬುದರನ್ನು ತೀರ್ಮಾನಿಸಲು ಸಾಮಾಜಿಕ ಸಂಶೋಧನೆಗಳು ಅನಿವಾರ್ಯವಾಗಿದೆ. ಸಮಾಜದಲ್ಲಿನ ಓರೆಕೋರೆಗಳನ್ನು ಶೋಧಿಸಿ ಅವುಗಳಿಗೆ ಪರಿಹಾರವನ್ನು ಹುಡುಕಿ ಸಾಮಾಜಿಕ ಸ್ವಾಸ್ಥ್ಯವನ್ನು, ಸಾಮಾಜಿಕ ಸಮಾನತೆಯನ್ನು ಸಾಧಿಸಲು ಸಮಾಜ ವಿಜ್ಞಾನಿಗಳ ಸಂಶೋಧನೆಗಳ ಕೊಡುಗೆ ಅಪಾರವಾದದ್ದು ಇಂತಹ ಸಮಾಜ ವಿಜ್ಞಾನಿಗಳನ್ನು ತಯಾರಿಸುವ ಕಾರ್ಯವನ್ನು ವಿಶ್ವವಿದ್ಯಾನಿಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳು ನಿರಂತರವಾಗಿ ಮಾಡುತ್ತಾ ಬಂದಿವೆ ಹಾಗಾಗಿ ಉನ್ನತ ಶಿಕ್ಷಣದ ಅಭಿವೃದ್ಧಿ ಹಾಗೂ ಸಮಾಜಕ್ಕೆ ಅನಿವಾರ್ಯವಾದ ವೈಜ್ಞಾನಿಕ ಸಂಶೋಧನೆಯನ್ನು ಯಶಸ್ವಿಯಾಗಿ ನೆರವೇರಬೇಕಾದರೆ ಸರ್ಕಾರಗಳು ಉನ್ನತ ಶಿಕ್ಷಣಕ್ಕೆ ಅದರಲ್ಲೂ ಸಂಶೋಧ‌ನೆಗೆ ಹೆಚ್ಚಿನ ಆಧ್ಯತೆಯನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರದ ಸಹ ಸಂಶೋಧಕಿ ಧರಣಿ, ಸಂಪನ್ಮೂಲ ವ್ಯಕ್ತಿಗಳಾದ ಡಾ ಮಂಜುನಾಥ್ ವಿವಿಧ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು, ಸಂಶೋಧನಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *