ಪಟ್ಟಭದ್ರ ಹಿತಾಸಕ್ತಿಗಳಿಂದ ಮಾಹಿತಿ ಹಕ್ಕು ಕಾಯ್ದೆ ದುರುಪಯೋಗ : ಸಚಿವ. ಡಾ.ಎಚ್.ಸಿ.ಮಹದೇವಪ್ಪ ಬೇಸರ

ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ರಾಜ್ಯ ಘಟಕದಿಂದ ರಾಜ್ಯಮಟ್ಟದ ಕಾರ್ಯಾಗಾರ

ಮೈಸೂರು : ಮಾಹಿತಿ ಹಕ್ಕು ಕಾಯ್ದೆಯನ್ನು ಕೆಲ ಪಡ್ಟಭದ್ರ ಹಿತಾಸಕ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಇದರಿಂದ ಪರಿಣಾಮಕಾರಿಯಾದ ಕಾಯ್ದೆಗೆ ಕೊಡಲಿ ಪೆಟ್ಟು ಬೀಳುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ. ಡಾ.ಎಚ್.ಸಿ.ಮಹದೇವಪ್ಪ ಬೇಸರ ವ್ಯಕ್ತಪಡಿಸಿದರು.

‘ನ್ಯಾಯದ ದಿಕ್ಕು, ಮಾಹಿತಿ ಹಕ್ಕು’ ವಿಷಯ ಕುರಿತು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ರಾಜ್ಯ ಘಟಕ ವತಿಯಿಂದ ಶನಿವಾರ ನಗರದ ದಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭ್ರಷ್ಟಾಚಾರದ ಕೆಲಸಗಳಿಗೆ ಮಾಹಿತಿ ಹಕ್ಕು ಕಾಯ್ದೆ ಎಚ್ಚರಿಕೆ ಗಂಟೆಯಾಗಿದೆ. ಆದರೆ ಈ ಕಾಯ್ದೆಯನ್ನು ಕೆಲ ವ್ಯಕ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಪರಿಣಾಮ ಕಳಂಕ ಅಂಟುತ್ತಿದ್ದಾರೆ. ವ್ಯಕ್ತಿಯನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಲು ಕಾಯ್ದೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜನ ಸ್ನೇಹಿಯಾದ ಕಾಯ್ದೆಯ ಮೂಲ ಸ್ವರೂಪದ ಹಾದಿ ತಪ್ಪುತ್ತಿದೆ. ಅನ್ಯರು ತಮ್ಮ ಸ್ವಾರ್ಥಕ್ಕಾಗಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ನೈಜ ಹೋರಾಟಗಾರರ ಮೇಲೆ ಇದೆ ಎಂದು ಅಭಿಪ್ರಾಯ ಪಟ್ಟರು.

ಮಾಹಿತಿ ಹಕ್ಕು ಕಾಯ್ದೆ ಅತ್ಯಂತ ಪಾರದರ್ಶಕ ಹಾಗೂ ಕ್ರಾಂತಿಕಾರಿಕ ಕಾಯ್ದೆ ಆಗಿದೆ. ಈ ಕಾಯ್ದೆ ಜಾರಿಗೆ ಬಂದ ಮೇಲೆ ಕಾನೂನು ವಿರುದ್ಧವಾಗಿ ನಡೆಯುತ್ತಿದ್ದ ಕಾರ್ಯಗಳು ನಿಯಂತ್ರಣಕ್ಕೆ ಬಂದಿದೆ. ಮಾಹಿತಿ ಹಕ್ಕು ಕಾಯ್ದೆ ಹೋರಾಟಕ್ಕೆ ನೈತಿಕತೆ ಇರಬೇಕು. ನಮ್ಮ ಸಂವಿಧಾನ ಮುಕ್ತವಾಗಿದೆ. ಮಾಹಿತಿ ಪಾರದರ್ಶಕವಾಗಿ ಜನರಿಗೆ ಸಿಗಬೇಕು ಎಂದು ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಈ ಕಾಯ್ದೆಯನ್ನು ಜಾರಿಗೆ ತಂದರು ಎಂದು ಮಾಹಿತಿ‌ ನೀಡಿದರು.

ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ ಆರ್.ಎ.ಚೇತನ್ ರಾಮ್ ಮಾತನಾಡಿ, ಸಾರ್ವಜನಿಕರು ತಪ್ಪು ಮಾಡದ ವ್ಯಕ್ತಿತ್ವ ಬೆಳಸಿಕೊಳ್ಳಬೇಕು. ಆಗಿದ್ದರಷ್ಟೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಸಾಧ್ಯ.
ನಮ್ಮ ವ್ಯಕ್ತಿತ್ವ ಬೆಳಸಿಕೊಳ್ಳದೆ ಸಮಾಜ ಬದಲಾವಣೆ ಆಗದು. ಮಾಹಿತಿ ಹಕ್ಕು ಸದಸ್ಯರು ದೊಡ್ಡ ದೊಡ್ಡ ಗುರಿ, ದೊಡ್ಡ, ದೊಡ್ಡ ಕನಸುಗಳನ್ನು ಇಟ್ಟುಕೊಳ್ಳಬೇಕು. ಸಮಾಜ ಸುಧಾರಣೆಗೆ ಹೋರಾಟ ಬಹಳ ಮುಖ್ಯ. ಹೋರಾಟದಿಂದಲೇ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಸಂಸ್ಥಾಪಕ ಎಸ್.ಬಸವರಾಜು ಮಾತನಾಡಿ, ಪ್ರತಿಯೊಬ್ಬರು ಹೋರಾಟ ಮನೋಭಾವ ಬೆಳಸಿಕೊಳ್ಳಬೇಕು. ಸರ್ಕಾರ ಮಟ್ಟದಲ್ಲಿ ಕೆಲಸ ಆಗಬೇಕಾದರೆ ಕೇಳಲು ನಮಗೆ ಕೀಳರಿಮೆ ಇದೆ. ಇದನ್ನು ತ್ಯಜಿಸಬೇಕು. ಆರ್ ಟಿ ಐ ಕಾಯ್ದೆಗೆ ದೊಡ್ಡ ಶಕ್ತಿ ಇದೆ. ಇದರ ಸದ್ಬಳಿಕೆ ಆಗಬೇಕು. ಆರ್ ಟಿ ಐ ಬಂದಮೇಲೆ ಹೋರಾಟಕ್ಕೆ ಶಕ್ತಿ ಬರುತ್ತಿದೆ. ಜನರಿಗೆ ಇದರಿಂದ ಧ್ವನಿ ಸಿಕ್ಕಿದೆ. ಹೋರಾಟಗಾರರು ಸಮಸ್ಯೆಗಳಿಗೆ ಹಿಂದೆ ಸರಿಯಬೇಡಿ. ಸರಿಯಾದ ಹೋರಾಟ ಮಾಡಿದರೆ ಇಡೀ ಸಮಾಜವೇ ನಿಮ್ಮ ಹಿಂದೆ ಇರುತ್ತದೆ ಎಂದು ತಿಳಿಸಿದರು.

ಗ್ರಾಹಕರ ಹಕ್ಕುಗಳು ಮತ್ತು ಮಾಹಿತಿ ಹಕ್ಕು ತಜ್ಞರಾದ ವೈ.ವಿ.ಮುರಳೀಧರನ್,
‘ಮಾಹಿತಿ ಹಕ್ಕು ಕಾಯ್ದೆ ಅಧಿನಿಯಮ 2005- ಪಕ್ಷಿನೋಟ’ ವಿಷಯ ಕುರಿತು ಮಾತನಾಡಿ, ಮಾಹಿತಿ ಹಕ್ಕು ಬಳಕೆ ಈಗ ನಿದ್ರಾವಸ್ಥೆಯಲ್ಲಿ ಇದೆ. ಇದನ್ನು ಸರಿಯಾಗಿ ಬಳಕೆ‌ ಮಾಡಲು ಆಗುತ್ತಿಲ್ಲ. ಗ್ರಾಮಾಂತರ ಪ್ರದೇಶದ ಜನರಿಗೂ ಈ ಕಾಯ್ದೆ ತಲುಪಬೇಕು. ಕಾಯ್ದೆ ಬಂದು 20 ವರ್ಷವಾದರೂ ಇನ್ನೂ ಇದರ ಬಗ್ಗೆ ಅರಿವು ಮೂಡಿಸುತ್ತಿರುವುದು ಶೋಚನೀಯ ಸ್ಥಿತಿ. ಈ ಕಾಯ್ದೆ ಪರಿಣಾಮಕಾರಿಯಾಗಿ ಬಳಕೆ ಆಗಬೇಕು. ಆಗಿದ್ದರಷ್ಟೆ ಕಾಯ್ದೆ ಜೀವಂತಿಕೆ ಸಾಧ್ಯ. ಪ್ರಜಾಪ್ರಭುತ್ವದಲ್ಲಿ ಜನರ ಸಹಭಾಗಿತ್ವ ಅತ್ಯಗತ್ಯ. ಇದಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯ್ದೆ ಪರಿಣಾಮವಾಗಿ ಬಳಕೆಯಾಗಬೇಕು ಎಂದು ತಿಳಿಸಿದರು.

ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ವೀರೇಶ್ ಬೆಳ್ಳೂರು ಮಾತನಾಡಿ, ಕೇವಲ ಸಂಸದರು, ಶಾಸಕರಿಗೆ ಸೀಮಿತವಾಗಿದ್ದ ಮಾಹಿತಿ, ಈಗ ಜನ ಸಾಮಾನ್ಯನಿಗೂ ಮಾಹಿತಿ ಪಡೆಯುವ ಹಕ್ಕನ್ನು ನೀಡಲಾಗಿದೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಸಾಮಾನ್ಯನಿಗೆ ಪ್ರಭುತ್ವದ ಅಧಿಕಾರ ನೀಡಲಾಗಿದೆ. ಕಾನೂನಿನ ಪಾರದರ್ಶಕತೆಯಲ್ಲಿ ಜನರಿಗೆ ಯಾವುದೇ ಅಡೆ, ತಡೆ ಇಲ್ಲದೆ ಮಾಹಿತಿ ಸಿಗಬೇಕು. ಇದಕ್ಕೆ ಮಾಹಿತಿ ಹಕ್ಕು ಕಾಯ್ದೆ ಪೂರಕವಾಗಿದೆ ಎಂದು ತಿಳಿಸಿದರು.

ಸಮಾರೋಪ ‌ಸಮಾರಂಭದಲ್ಲಿ ಮಾತನಾಡಿದ ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಕಾಳಚೆನ್ನೇಗೌಡ, ಮಾಹಿತಿ ಹಕ್ಕು ಕಾಯ್ದೆ ಸರ್ಕಾರಿ ವ್ಯವಸ್ಥೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಕಾಯ್ದೆಯಾಗಿದೆ.
ಅಧಿಕಾರಿಗಳು ಪ್ರಾಮಾಣಿಕವಾಗಿ ಇದ್ದರೆ ಹೆದರುವ ಅವಶ್ಯಕತೆ ಇಲ್ಲ. ಸರಿಯಾಗಿ ಇದ್ದರೆ ಯಾವುದೇ ಮಾಹಿತಿ ಕೇಳಿದರೂ ನೀಡಲಿ. ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಜನಪರವಾಗಿ ಕೆಲಸ ಮಾಡಲು ಮಾಹಿತಿ ಹಕ್ಕು ಕಾಯ್ದೆ ಸಮರ್ಪಕವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ಭ್ರಷ್ಟಾಚಾರ ‌ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಯಿತು. ಆದರೆ ಕಾಯ್ದೆ ಜಾರಿಯಾಗಿ 20 ವರ್ಷವಾದರೂ ಭ್ರಷ್ಟಾಚಾರ ಪ್ರಮಾಣ ಕಡಿಮೆ ಆಗಿಲ್ಲ. ಹಾಗಾದರೆ ಆರ್ ಟಿ ಐ ಕಾರ್ಯಕರ್ತರ ಹೊಣೆಗಾರಿಕೆ ಏನು ಎಂಬುದನ್ನು ಯೋಚನೆ ಮಾಡಬೇಕಾಗಿದೆ. ಭ್ರಷ್ಟಾಚಾರ ಮನಸ್ಥಿತಿಯಿಂದ ಹೊರಬರಲಿಲ್ಲ ಎಂದರೆ ಯಾವ ಕಾಯ್ದೆಯೂ ಏನು ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ವ್ಯವಸ್ಥೆಯ ಮನಸ್ಥಿತಿ ಬದಲಾಗಬೇಕು ಎಂದರು.

ವಾಸ್ತವವಾಗಿ ಸಂಘಟಿತ ಭ್ರಷ್ಟಾಚಾರ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕಾಯ್ದೆಯನ್ನು ಜನ ಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದರ ಕುರಿತು ತುರ್ತು ಯೋಚನೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಜನರ ವಿಶ್ವಾಸವನ್ನು ವೇದಿಕೆ ಎಂದೂ ಕಳೆದುಕೊಳ್ಳದಿರಲಿ. ಜನಪರ ಕೆಲಸ ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ, ರಾಜ್ಯ ವೇದಿಕೆ ಘಟಕದ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೇಮಂತ್ ನಾಗರಾಜು ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ ಪರಿಣಾಮಕಾರಿಯಾಗಿ ಒಳ್ಳೆಯ ಕಾರ್ಯಕ್ಕೆ ಬಳಕೆ ಆಗಬೇಕು. ಕಾಯ್ದೆಯನ್ನು ನಾವು ಎಂದೂ ದುರುಪಯೋಗ ಪಡಿಸಿಕೊಳ್ಳುವುದಿಲ್ಲ. ಒಂದುವರೆ ವರ್ಷದಲ್ಲಿ 16 ಜಿಲ್ಲೆಯಲ್ಲಿ ಘಟಕ ಸ್ಥಾಪನೆಯಾಗಿದೆ. ಜನಪರವಾದ ವೇದಿಕೆ ಮಾಡಬಹುದಾದ ಅಷ್ಟು ಕೆಲಸವನ್ನು ಮಾಡಲಾಗುತ್ತಿದೆ. ಕಾಯ್ದೆಯ ಕುರಿತು ಸಾಕಷ್ಟು ಗೊಂದಲಗಳು ನಮ್ಮ ಸದಸ್ಯರಿಗೆ ಇತ್ತು. ಆ ಕುರಿತು ಸಾಕಷ್ಟು ಮಾಹಿತಿಯನ್ನು ಈ ಕಾರ್ಯಾಗಾರ ಒದಗಿಸಿದೆ ಎಂದರು.

ಇದೇ ಸಂದರ್ಭದಲ್ಲಿ ಯಾದವಗಿರಿ ಜಿಲ್ಲಾ ಘಟಕವನ್ನು ಉದ್ಘಾಟಿಸಲಾಯಿತು.

Leave a Reply

Your email address will not be published. Required fields are marked *