ಪತ್ರಕರ್ತರ ಕ್ಷೇಮಾಭಿವೃದ್ದಿ ನಿಧಿಗೆ 25 ಲಕ್ಷ ರೂ. ನೆರವು : ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್

ಚಾ.ನಗರದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ


ಚಾಮರಾಜನಗರ: ಜಿಲ್ಲೆಯ ಅಭಿವೃದ್ದಿಯ ಜೊತೆಗೆ ಜಿಲ್ಲೆಯ ಪತ್ರಕರ್ತ ಹಿತ ಕಾಪಾಡುವ ನಿಟ್ಟಿನಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ದಿ ನಿಧಿಗೆ 25 ಲಕ್ಷ ರೂ. ನೆರವು ಕೊಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರೇಷ್ಮೆ, ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ತಿಳಿಸಿದರು.

ನಗರದ ವರ್ತಕರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಯೋಜನೆ ಮಾಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಪತ್ರಕರ್ತರು ಬಹಳಷ್ಟು ಮಂದಿ ಇದ್ದಾರೆ. ನಮ್ಮ ಸರ್ಕಾರ ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುತ್ತಿದೆ. ಅಭಿವೃದ್ದಿಯತ್ತ ಜಿಲ್ಲೆ ಮುನ್ನುಗುತ್ತಿದೆ. ಪತ್ರಕರ್ತರ ಕ್ಷೇಮಾಭಿವೃದ್ದಿ ನಿಧಿಗೆ ಮುಖ್ಯಮಂತ್ರಿಗಳಿಂದ 25 ಲಕ್ಷ ರೂ. ಕೊಡಿಸುವುದಾಗಿ ತಿಳಿಸಿದ ಅವರು, ಮಾಧ್ಯಮ ಕಾರ್ಯದರ್ಶಿ ಕೆ.ವಿ. ಪ್ರಭಾಕರ್ ಅವರಿಗೂ ಈಗಾಗಲೇ ಮನವಿ ಮಾಡಿಕೊಂಡಿದ್ದೇನೆ. ಸಂಘದ ಭವನದ ಮುಂದುವರಿದ ಕಾಮಗಾರಿಗೂ ಸಹ ಅನುದಾನ ಕೊಡಿಸಲು ಬದ್ದನಾಗಿರುವುದಾಗಿ ತಿಳಿಸಿದರು.

ಚಾಮರಾಜನಗರ ಜಿಲ್ಲೆಯನ್ನು ಅಭಿವೃದ್ದಿ ಪಡಿಸಲು ನಾವೆಲ್ಲರು ಒಗ್ಗಟ್ಟಿನಿಂದ ದುಡಿಯೋಣ. ಜಿಲ್ಲೆಯ ಅಭಿವೃದ್ದಿಗೆ ಪೂರಕವಾದ ವಾತಾವರಣ ಕಲ್ಪಿಸುವುದು ಹಾಗೂ ಯೋಜನೆಗಳನ್ನು ರೂಪಿಸುವುದು ನಮ್ಮ ಸರ್ಕಾರ ಮೊದಲ ಅಧ್ಯತೆಯಾಗಿದೆ. ಪತ್ರಕರ್ತರು ಜಿಲ್ಲೆಯ ಹಿತದೃಷ್ಟಿಯಿಂದ ಉತ್ತಮ ಲೇಖನಗಳನ್ನು ಮಾಡುವ ಮೂಲಕ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಬೇಕು. ಪತ್ರಕರ್ತರು ಪ್ರಾಮಾಣಿಕತೆಯನ್ನು ಮರೆಯುವ ಜೊತೆಗೆ ವಸ್ತುನಿಷ್ಠ ವರದಿಗಳನ್ನು ಮಾಡಿ, ನೊಂದವರ ಪರವಾಗಿ ನಿಂತು ನ್ಯಾಯ ಕಲ್ಪಿಸಲು ಮುಂದಾಗಬೇಕು ಎಂದರು.

ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಡಿವಿಜಿ ಅವರು ಭಾವಚಿತ್ರಕ್ಕೆ ಪುಷ್ರ್ಪಾಚನೆ ನೆರವೇರಿಸಿ ಮಾತನಾಡಿ, ಪತ್ರಕರ್ತರ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಸಮಾಜದ ಅಂಕುಡೋಕುಗಳನ್ನು ತಿದ್ದುವ ಜೊತೆಗೆ ಜನಪ್ರತಿಗಳಿಗೆ ಮಾರ್ಗದರ್ಶನ ನೀಡಿ, ಸಮಾಜದ ಅಭಿವೃದ್ದಿಯಲ್ಲಿ ತನ್ನದೇ ಅದ ಸೇವೆಯನ್ನು ಸಲ್ಲಿಸುತ್ತಿದೆ. ಈ ವೃತ್ತಿಯಲ್ಲಿರುವ ಪತ್ರಕರ್ತರ ಹಿತ ರಕ್ಷಣೆಯು ಸಹ ಮುಖ್ಯವಾಗಿರುತ್ತದೆ. ಈಗಾಗಲೇ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ನಿವೇಶನ ಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿರುವ ಕಾರ್ಯನಿರತ ಪತ್ರಕರ್ತರ ಭವನದ ಮುಂದುವರಿದ ಕಾಮಗಾರಿಗೆ 25 ಲಕ್ಷ ರೂ. ಅನುದಾನ ನೀಡುವೆ. ಪತ್ರಕರ್ತರ ಕ್ಷೇಮಾಭಿವೃದ್ದಿಗೆ ನಿಧಿಗೆ ಎಂಎಸ್‍ಐಎಲ್‍ನಿಂದ ಹಣ ಕೊಡುವ ಬಗ್ಗೆಯು ಸಹ ಭರವಸೆ ನೀಡಿದರು. ಜಿಲ್ಲೆಯ ಅಭಿವೃದ್ದಿಯಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

ಪತ್ರಿಕಾ ದಿನಾಚರಣೆಯ ಅಂಗವಾಗಿ ಜಿಲ್ಲೆಯ ಐದು ತಾಲೂಕುಗಳ ಹಿರಿಯ ಪತ್ರಕರ್ತರಾದ ನಮ್ಮೂರು ಸುದ್ದಿ ಪತ್ರಿಕೆಯ ಸಂಪಾದಕÀ ವಿ.ಗಂಗಾಧರ್, ಗುಂಡ್ಲುಪೇಟೆ ತಾಲ್ಲೂಕಿನ ವಿಜಯ ಕರ್ನಾಟಕ ವರದಿಗಾರÀ ಮಹೇಶ್ ಮಡಹಳ್ಳಿ, ಯಳಂದೂರು ತಾಲ್ಲೂಕಿನ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಇರ್ಫಾನ್, ಕೊಳ್ಳೇಗಾಲ ತಾಲ್ಲೂಕಿನ ವಾರ್ತಾಭಾರತಿ ಪತ್ರಿಕೆಯ ವರದಿಗಾರ ಎಂ.ಮರಿಸ್ವಾಮಿ ಹಾಗೂ ಹನೂರು ತಾಲ್ಲೂಕಿನ ಪ್ರತಿನಿಧಿ ಪತ್ರಿಕೆ ವರದಿಗಾರ ಸುರೇಶ್ ಅಜ್ಜೀಪುರ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಶಾಸಕ ಸಿ . ಪುಟ್ಟರಂಗಶೆಟ್ಟಿ ಶಾಲು ಹೊದಿಸಿ, ಫಲಕ, ಫಲತಾಂಬಲ, ನಗದು ಪುರಸ್ಕಾರ ನೀಡಿ ಸನ್ಮಾನಿಸಿದರು.

ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.75 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಪತ್ರಕರ್ತರ ಮಕ್ಕಳಾದ ಡಿ.ಎಸ್. ಬೇಬಿ, ಈಶಾನಿ, ಹರ್ಷಿತ್‍ಗೌಡ, ಅರ್ಜುನ್ ಅವರನ್ನು ಗೌರವಿಸಲಾಯಿತು.

ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ಜಿ.ಪಂ. ಸಿಇಓ ಮೋನಾ ರೋತ್, ಎಸ್ಪಿ ಡಾ.ಬಿ.ಟಿ. ಕವಿತಾ, ಅಪರ ಜಿಲ್ಲಾಧಿಕಾರಿ ಜವರೇಗೌಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜ್ ಕಪ್ಪಸೋಗೆ, ಪ್ರಧಾನಕಾರ್ಯದರ್ಶಿ ಲಕ್ಕೂರು ಪ್ರಸಾದ್, ರಾಜ್ಯ ಸಮಿತಿ ಸದಸ್ಯ ಗೂಳಿಪುರ ನಂದೀಶ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಮೇಶ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಖಜಾಂಚಿ ಎಂ. ರೇಣುಕೇಶ್, ನಿರ್ದೇಶಕರಾದ ಬನಶಂಕರ ಆರಾಧ್ಯ, ಸವಿತಾ ಜಯಂತ್, ಸಿದ್ದಲಿಂಗಸ್ವಾಮಿ, ನಿಂಪುರಾಜೇಶ್, ಆರ್. ರಾಜೇಂದ್ರ ಮತ್ತು ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರು ಹಿತೈಷಿಗಳು ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *