ಹನೂರು ಭಾಗದ ಕುಡಿಯುವ ನೀರು ಸಮಸ್ಯೆ ಪರಿಹಾರ ಹಾಗೂ ಕೆರೆ ಕಟ್ಟೆ ಚೆಕ್ ಡ್ಯಾಂ ತುಂಬಿಸಲು 490 ಕೋಟಿ ರೂ. ಮೊತ್ತದ ಯೋಜನೆ : ಬಜೆಟ್‍ಗೆ ಸೇರ್ಪಡೆಗೊಳ್ಳುವ ವಿಶ್ವಾಸ-ಲೋಕಸಭಾ ಸದಸ್ಯರಾದ ಸುನೀಲ್ ಬೋಸ್
ಹನೂರು ಭಾಗದ ಕುಡಿಯುವ ನೀರು ಸಮಸ್ಯೆ ಪರಿಹಾರ ಹಾಗೂ ಕೆರೆ ಕಟ್ಟೆ ಚೆಕ್ ಡ್ಯಾಂ ತುಂಬಿಸಲು 490 ಕೋಟಿ ರೂ. ಮೊತ್ತದ ಯೋಜನೆ : ಬಜೆಟ್‍ಗೆ ಸೇರ್ಪಡೆಗೊಳ್ಳುವ ವಿಶ್ವಾಸ-ಲೋಕಸಭಾ ಸದಸ್ಯರಾದ ಸುನೀಲ್ ಬೋಸ್
ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ಸರಗೂರು ಗ್ರಾಮದ ಬಳಿಯ ಕಾವೇರಿ ನದಿಯಿಂದ ನೀರನ್ನು ಎತ್ತಿ ಹನೂರು ತಾಲ್ಲೂಕಿನ ಉಡುತೊರೆ ಹಳ್ಳ ಜಲಾಶಯ ಮತ್ತು ಕುರಟ್ಟಿಹೊಸೂರು ಹಾಗೂ ಸಂತೇಕಾನೆ ಸುತ್ತಮುತ್ತಲಿನ ಕೆರೆ-ಕಟ್ಟೆಗಳು, ಚೆಕ್ ಡ್ಯಾಮ್‍ಗಳನ್ನು ತುಂಬಿಸಲು 490 ಕೋಟಿ ರೂ. ಮೊತ್ತಕ್ಕೆ ವಿಸೃತ ಯೋಜನಾ ವರದಿ ತಯಾರಿಸಲಾಗಿದ್ದು, 2026-27ನೇ ಸಾಲಿನ ಬಜೆಟ್‍ನಲ್ಲಿ ಸೇರ್ಪಡೆಗೊಳಿಸಲು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಲಾಗಿದ್ದು, ಈ ಬಾರಿ ಬಜೆಟ್ ಗೆ ಸೇರ್ಪಡೆಗೊಳ್ಳುವ ವಿಶ್ವಾಸವಿದೆ ಎಂದು ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕುರಟ್ಟಿಹೊಸೂರು, ಕೌದಳ್ಳಿ, ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಮತ್ತು ವಿವಿಧ ಸಂಘಟನೆಗಳು ಕುಡಿಯುವ ನೀರಿಗೆ ತೊಂದರೆ ಮತ್ತು ಅಂತರ್ಜಲ ಮಟ್ಟ ವ್ಯಾಪಕವಾಗಿ ಕುಸಿದಿರುವ ಬಗ್ಗೆ ಗಮನ ಸೆಳೆದಿದ್ದಾರೆ. ಈ ಸಂಬಂಧ ಉಂಟಾಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ತೊಂದರೆಗಳ ಬಗ್ಗೆ ವಿವರಿಸಿದ್ದಾರೆ. ಕ್ಷೇತ್ರದ ಪ್ರವಾಸದ ಸಮಯದಲ್ಲಿ ಗ್ರಾಮಸ್ಥರು, ರೈತ ಸಂಘಟನೆಗಳ ಮುಖಂಡರು, ಪ್ರತಿನಿಧಿಗಳು ಕುಡಿಯುವ ನೀರಿನ ಕೊರತೆ ನೀಗಿಸಲು ಯೋಜನೆ ರೂಪಿಸಲು ಮನವಿ ಮಾಡಿದ್ದಾರೆ.
ಈ ಸಂಬಂಧವಾಗಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳೊಂದಿಗೆ ಹಲವು ಹಂತಗಳಲ್ಲಿ ಸಭೆಗಳನ್ನು ನಡೆಸಲಾಗಿದೆ. ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರು, ಕೌದಳ್ಳಿ, ಮಾರ್ಟಳ್ಳಿ, ದಿನ್ನಳ್ಳಿ ಗ್ರಾಮ ಪಂಚಾಯಿತಿಗಳಿಗೆ ಒಳಪಡುವ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಮಗ್ರವಾಗಿ ವಿಸೃತ ಯೋಜನಾ ವರದಿಯನ್ನು ತಯಾರಿಸಲು ಸೂಚನೆ ನೀಡಲಾಗಿತ್ತು. ಅದರಂತೆ ಕೊಳ್ಳೇಗಾಲ ತಾಲ್ಲೂಕಿನ ಸರಗೂರು ಗ್ರಾಮದ ಬಳಿಯ ಕಾವೇರಿ ನದಿಯಿಂದ ನೀರನ್ನು ಎತ್ತಿ ಹನೂರು ತಾಲ್ಲೂಕಿನ ಉಡುತೊರೆ ಹಳ್ಳ ಜಲಾಶಯ ಮತ್ತು ಕುರಟ್ಟಿಹೊಸೂರು ಹಾಗೂ ಸಂತೇಕಾನೆ ಸುತ್ತಮುತ್ತಲಿನ ಕೆರೆ-ಕಟ್ಟೆಗಳು, ಚೆಕ್ ಡ್ಯಾಮ್‍ಗಳನ್ನು ತುಂಬಿಸಲು 490 ಕೋಟಿ ರೂ. ಮೊತ್ತಕ್ಕೆ ವಿಸೃತ ಯೋಜನಾ ವರದಿಯನ್ನು ತಯಾರಿಸಲಾಗಿದೆ.
ಸದರಿ ಯೋಜನೆಯಡಿ ಕಾವೇರಿ ನದಿಯಿಂದ ನೀರೆತ್ತಿ, ಏರು ಕೊಳವೆಯ ಮೂಲಕ ಅಜ್ಜಿಪುರ ಗ್ರಾಮದ ಬಳಿ ವಿತರಣಾ ತೊಟ್ಟಿಗೆ ನೀರು ಹರಿಸುವುದು ತದನಂತರ ಗುರುತ್ವಾಕರ್ಷಣಾ ಮೂಲಕ ಉಡುತೊರೆಹಳ್ಳ ಜಲಾಶಯ ಮತ್ತು ದಂಟಳ್ಳಿ, ಕುರಟ್ಟಿಹೊಸೂರು ಹಾಗೂ ಮಾರ್ಟಳ್ಳಿ ಗ್ರಾಮದ ಸುತ್ತಮುತ್ತಲಿನ ಕೆರೆ ಕಟ್ಟೆ ಹಾಗೂ ರಾಮಾಪುರ-ಕೌದಳ್ಳಿ ಹಳ್ಳದ ಚೆಕ್ ಡ್ಯಾಂಗಳಿಗೆ ನೀರನ್ನು ಹರಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯಿಂದ 9 ಗ್ರಾಮ ಪಂಚಾಯಿತಿಯ ಪರಿಮಿತಿಗೆ ಒಳಪಡುವ ಗ್ರಾಮಗಳಿಗೆ ಪ್ರಯೋಜನವಾಗಲಿದೆ.
ಹನೂರು ಭಾಗದ ಜನರ ದಶಕಗಳ ಕನಸನ್ನು ನನಸು ಮಾಡಲು ನಾನು ಬದ್ದವಾಗಿದ್ದು, ಶೀಘ್ರದಲ್ಲೇ ಯೋಜನೆಗೆ ಅನುಮೋದನೆ ದೊರಕಿಸಿ ಕಾಮಗಾರಿ ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಲೋಕಸಬಾ ಸದಸ್ಯರಾದ ಸುನೀಲ್ ಬೋಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.