ಈಗ ಐಪಿಎಲ್ ಕ್ರಿಕೆಟ್ ಪಂದ್ಯಗಳ ಗುಂಪಿನಲ್ಲಿ ಇದ್ದೇವೆ!. ಪ್ರತಿದಿನ ಸಂಜೆ ಮ್ಯಾಚ್ ನಡೆದೇ ನಡೆಯುತ್ತದೆ. ಈ ಟ್ವೆಂಟಿ ಓವರ್ ಮ್ಯಾಚ್ ನೋಡುವುದೇ ಒಂದು ರೀತಿಯಲ್ಲಿ ಸೊಬಗು!. ಇಂತಹ ಹೊತ್ತಿನಲ್ಲಿ ಒಂದು ಕಾಲದಲ್ಲಿ ಕ್ರಿಕೆಟ್ನ ಜೀವಂತ ದಂತ ಕಥೆಯಾಗಿದ್ದ ಆ ವ್ಯಕ್ತಿ ಇಂದು ನಿವೃತ್ತರಾಗಿದ್ದರು ಕೂಡ ಅವರ ಹೆಸರು ಕ್ರಿಕೆಟ್ ಲೋಕದಲ್ಲಿ ಉಳಿದುಬಿಟ್ಟಿದೆ!.
ಅವರೇ "ಸಚಿನ್ ತೆಂಡೂಲ್ಕರ್!." ಇವರ ಹೆಸರು ಕೇಳಿದೊಡನೆ ಕ್ರಿಕೆಟ್ ರಂಗದಲ್ಲಿ ಅಲ್ಲದೆ, ಆಬಾಲವೃದ್ಧರಾಗಿಯಾಗಿ ಎಲ್ಲರ ಮೈ- ಮನಗಳು ರೋಮಾಂಚನಗೊಳ್ಳುತ್ತವೆ. ಕ್ರಿಕೆಟ್ನ ದೈತ್ಯ ಪ್ರತಿಭೆ. ಪ್ರೇಕ್ಷಕರನ್ನು ತಮ್ಮ ಬ್ಯಾಟಿಂಗ್ ಶೈಲಿಯ ಮೂಲಕ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಅವರ ಆಟದ ವೈಖರಿ, ಮೈದಾನದ ಮೂಲೆ ಮೂಲೆಗೂ ಚಂಡಿನ ಓಟ, ರನ್ನುಗಳ ಸುರಿಮಳೆ, ಹುಚ್ಚೆದ್ದು ಕುಣಿಯುವ ಪ್ರೇಕ್ಷಕರು. ಸಚಿನ್ ಔಟ್ ಆಗದೆ ಇದ್ದಾರೆ ಎಂದರೆ ಕ್ರಿಕೆಟ್ ಆಟ ಸ್ವಲ್ಪ ಜೀವಂತವಾಗಿದೆ ಎಂದು ನಂಬುತ್ತಿದ್ದರು. ತಾಳ್ಮೆಯಿಂದ ಆಟವಾಡಿ ಅನೇಕ ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಇದೇ ಸಚಿನ್ ಸ್ಪೆಷಲ್!.
ಇಂತಹ ಜನ-ಮನದ ಕ್ರಿಕೆಟ್ ಆಟಗಾರ ಸಚಿನ್ ರಮೇಶ್ ತೆಂಡೂಲ್ಕರ್ ಜನ್ಮದಿನ. 24.04.1973. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಕ್ರಿಕೆಟ್ ಲೋಕದ "ದೇವರು" ಎಂದೇ ಹೆಸರು ಮಾಡಿರುವ ಸಚಿನ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದಾಖಲೆಗಳ ಸರದಾರ ಎನಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಹಾಗೂ ರನ್ಗಳನ್ನು ಭಾರಿಸಿರುವ ದಾಖಲೆ ಹೊಂದಿರುವ ಸಚಿನ್ ಅವರನ್ನು ಲಿಟಲ್ ಮಾಸ್ಟರ್ ಎಂದೂ ಕರೆಯಲಾಗುತ್ತದೆ. ಅವರ ಹಲವು ದಾಖಲೆಗಳು ಬೇರೆ ಆಟಗಾರರಿಂದ ಈಗ ಮುರಿದಿದ್ದರೂ ಕೂಡ ಒಂದು ಕಾಲದಲ್ಲಿ ಅವರ ಸಾಧನೆ ಅಪ್ರತಿಮವಾದದ್ದು!.
ಇನ್ನೊಂದು ಹೆಮ್ಮೆಯ ವಿಷಯವೆಂದರೆ.......ವಿಸ್ಡನ್ ಪತ್ರಿಕೆ ಇವರನ್ನು ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್ ನಂತರ ವಿಶ್ವದ ಅತಿ ಶ್ರೇಷ್ಠ ಆಟಗಾರರೆಂದು ಹೆಸರಿಸಿದೆ. ಅಲ್ಲದೆ ಡಾನ್ ಬ್ರಾಡ್ಮನ್ ಆಸ್ಟ್ರೇಲಿಯಾದ ಮತ್ತೋರ್ವ ದೈತ್ಯ ಆಟಗಾರ. ಅವರೇ ಸಚಿನ್ ರವರನ್ನು ಕರೆಸಿಕೊಂಡು ನಾನು ನಿಮ್ಮ ಅಭಿಮಾನಿ ಎಂದು ಹೇಳಿಕೊಂಡಿದ್ದರು.
ಅವರ ಜೊತೆ ಇರುವ ಫೋಟೋ ನೋಡಿದರೆ ಪ್ರತಿಯೊಬ್ಬ ಭಾರತೀಯರಿಗೂ ಕೂಡ ಸಂತಸ ಹೊರಹೊಮ್ಮುವ ಸಮಯ.
ಮೊದಮೊದಲು ಬ್ಯಾಟಿಂಗ್ ಮಾಡುವಾಗ ಬೇರೆ ದೇಶದ ಆಟಗಾರರು ಇವರನ್ನು ಒಂದು ರೀತಿಯಲ್ಲಿ ಚುಡಾಯಿಸುತ್ತಿದ್ದರು. ಅದನ್ನು ಎಂದೂ ಅವರು ಮನಸ್ಸಿಗೆ ಹೆಚ್ಚಿಕೊಳ್ಳದೆ, ತಮ್ಮ ಆಟವನ್ನು ಮುಂದುವರಿಸಿದರು. ನಂತರ ಬ್ಯಾಟಿನಿಂದ ಹೊರಹೊಮ್ಮಿದ ಸಾಧನೆ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ದಾಖಲಾಗಿದೆ.
ಸಚಿನ್ ರವರು ಬ್ಯಾಟಿಂಗ್ ಹಿಡಿದು ಆಟವಾಡುತ್ತಿರುವ ಬಾಲ್ಯದ ಚಿತ್ರ ಇದೆ. ಈ ಚಿತ್ರ ನಿಜಕ್ಕೂ ದೊಡ್ಡವರಾಗಿ ಬೆಳೆದಾಗ ನಿಜವಾಯಿತು. ಬೆಳೆಯುವ ಸಿರಿ ಮೊಳಕೆಯಲಿ ನೋಡು ಎನ್ನುವಂತೆ ಅವರ ಬಾಲ್ಯದ ಆಸಕ್ತಿಗೆ ಅವರ ಕುಟುಂಬದವರು ಸ್ಪಂದಿಸಿದರು.
ಕ್ರಿಕೆಟ್ ಬಗೆಗಿನ ಅವರ ಪ್ರೀತಿ ಮುಂದೆ ಹೆಮ್ಮರವಾಯಿತು. ಇದರಿಂದಾಗಿ
ಬಾಲಕನಾಗಿದ್ದಾಗಲೇ ಕ್ರಿಕೆಟ್ ಆಟದಲ್ಲಿ ಉತ್ತಮ ಕೌಶಲ್ಯ ತೋರಿದ ಬಲಗೈ ಬ್ಯಾಟ್ಸಮನ್ ಸಚಿನ್.
ಮುಂಬಯಿ ತಂಡದ ಪರವಾಗಿ ರಣಜಿ ಪಂದ್ಯಗಳನ್ನಾಡಿದರು. ನಂತರ, ತಮ್ಮ ಹದಿನಾರನೇ ವಯಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ 1989ರಲ್ಲಿ ಟೆಸ್ಟ್ ಪಂದ್ಯ ಆಡುವುದರ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.
ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನ್ನುವ ಶ್ರೇಯಕ್ಕೆ ಪಾತ್ರರಾದರು.
ಏಕದಿನ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಬ್ಯಾಟ್ ಮಾಡುವ ಸಚಿನ್, ಟೆಸ್ಟ್ ಪಂದ್ಯಗಳಲ್ಲಿ ನಾಲ್ಕನೆ ಕ್ರಮಾಂಕ ದಲ್ಲಿ ಆಡುವುದು ಸಾಮಾನ್ಯ. ಅವಶ್ಯವೆನಿಸಿದಾಗ, ನಿಧಾನ ವೇಗದ ಬೌಲಿಂಗ್ ಕೂಡ ಮಾಡುವುದುಂಟು.
16 ನವಂಬರ್ 2013 ರಂದು, ಸಚಿನ್ ಕ್ರಿಕೆಟ್ ಗೆ ವಿದಾಯ ಹೇಳಿದರು. ಕ್ರಿಕೆಟ್ ಸಾಧನೆ ಬಗ್ಗೆ ಚಿಕ್ಕದಾಗಿ ಹೇಳುವುದಾದರೆ…..
ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳ ಸುರಿಮಳೆ ಇವರಿಂದ ಆಗಿದೆ.
ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು ಬಂದಿವೆ.
ಅತಿ ಹೆಚ್ಚು ಟೆಸ್ಟ್ ಪಂದ್ಯಗಳು,
ಅತಿ ಹೆಚ್ಚು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು,
ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚು ರನ್ನುಗಳು,
ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು,
ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯಪುರುಷೋತ್ತಮ ಪ್ರಶಸ್ತಿಗಳು,
ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 200ರನ್ ಹೊಡೆದ ಮೊದಲ ಆಟಗಾರ ಕೂಡ ಸಚಿನ್ ರವರು ಮಿಂಚಿದ್ದಾರೆ.
ವಿಶ್ವಕಪ್ ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್ನುಗಳು ಕೂಡ ಇವರ ದಾಖಲೆಯಲ್ಲಿವೆ.
ಟೆಸ್ಟ್ ಪಂದ್ಯಗಳಲ್ಲಿ 50 ಶತಕಗಳಿಸಿದ ವೊದಲನೆ ಆಟಗಾರ. ಹೀಗೆ ಸಚಿನ್ ರವರು ತಾವು ಕ್ರಿಕೆಟ್ ಆಡುತ್ತಿದ್ದ ಕಾಲದಲ್ಲಿ ದಾಖಲೆ ಮೇಲೆ ದಾಖಲೆಗಳನ್ನು ಬಾರಿಸುತ್ತಲೇ ಆಟಗಾರರ ಜನಪ್ರಿಯ ನಾಯಕ ಆಗಿದ್ದರು. ಅವರು ಆಟ ಶುರು ಮಾಡಿದಾಗ ಏನಾದರೊಂದು ದಾಖಲೆ ಮಾಡುತ್ತಾ, ನಿರಂತರವಾಗಿ ಪಂದ್ಯಗಳನ್ನು ಆಡಲು ಆಯ್ಕೆ ತಂಡದ ಗಮನ ಸೆಳೆಯುತ್ತಿದ್ದರು ಇದರಿಂದಾಗಿ ಅವರು ರಾಷ್ಟ್ರೀಯ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಹೆಚ್ಚಿನ ಸ್ಥಾನ ಪಡೆದುಕೊಂಡು ಅತಿ ಹೆಚ್ಚು ಪಂದ್ಯಗಳನ್ನು ಕೂಡ ಚಿಕ್ಕ ವಯಸ್ಸಿನಿಂದಲೂ ಕೂಡ ಆಡುತ್ತಾ ಬಂದರು. ನಂತರದಲ್ಲಿ ನಮ್ಮ ಭಾರತದ ಕ್ರಿಕೆಟ್ ತಂಡದ ಆಟಗಾರರು ಜೊತೆಗೆ ಇತರೆ ದೇಶದ ಆಟಗಾರರು ಸಚಿನ್ ರವರ ಕೆಲವು ದಾಖಲೆಗಳನ್ನು ಮುರಿದರು.
ಇದು ಸರ್ವೇಸಾಮಾನ್ಯ ಏಕೆಂದರೆ ಕ್ರಿಕೆಟ್ ಎನ್ನುವುದು ನಿಂತ ನೀರಲ್ಲ ಅದು ಸದಾ ಅರಿಯುತ್ತಲೇ ಇರುತ್ತದೆ ಪ್ರತಿಯೊಂದು ಆಟಗಳಲ್ಲೂ ಕೂಡ ಈಗ ಎಲ್ಲಾ ದೇಶದ ಆಟಗಾರರು ಒಂದಲ್ಲ ಒಂದು ದಾಖಲೆಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಕ್ರಿಕೆಟ್ ಇರುವುದೇ ದಾಖಲೆ ಮರೆಯುವುದಕ್ಕಾಗಿ ಎನ್ನುವುದು ಮಾತು.
ಅದರಲ್ಲೂ ಈಗ ಟಿ- 20 ಪಂದ್ಯಗಳು ಕ್ರಿಕೆಟ್ ತಂಡದ ಆಟದ ವೈಖರಿಯನ್ನೇ ಬದಲಾಯಿಸಿಬಿಟ್ಟವು. ಮುಂದುವರೆದು ಗರಿಷ್ಠ ರನ್ ಬಾರಿಸುವ ಆಟಗಾರರು ಕೂಡ ದಾಖಲೆ ಮಾಡಿದ್ದಾರೆ. ಅತಿ ಹೆಚ್ಚು ಫೋರ್, ಅತಿ ಹೆಚ್ಚು ಸಿಕ್ಸರ್ ಗಳನ್ನು ಲೀಲಾ ಜಾಲವಾಗಿ ಬಾರಿಸುತ್ತಾರೆ. ಹಲವು ಆಟಗಾರರು ತಮ್ಮ ಮೊದಲ ಪಂದ್ಯದಲ್ಲೇ ಶತಕ ಬಾರಿಸಿ ಎಲ್ಲರ ಗಮನ ಸೆಳೆಯುತ್ತಾರೆ.
ಅದರಲ್ಲೂ ಈಗ ಐಪಿಎಲ್ ಬಂದ ಮೇಲಂತೂ ಕ್ರಿಕೆಟ್ ಶಕೆ ಮತ್ತಷ್ಟು ರೋಮಾಂಚನಕಾರಿಯಾಗಿ ಆಟಗಳು ಶುರುವಾಗುತ್ತಿವೆ.
ಪ್ರತಿಯೊಬ್ಬರ ಮನೆ- ಮನದಲ್ಲೂ ಕೂಡ ಕ್ರಿಕೆಟ್ ತನ್ನತ್ತ ಸೆಳೆಯುತ್ತಿದೆ. ಆಟಗಾರರನ್ನು ಹೆಚ್ಚು ಮೊತ್ತ ಕೊಟ್ಟು ಕೊಂಡುಕೊಳ್ಳುವರು ಹೆಚ್ಚಾಗುತ್ತಿದ್ದಾರೆ.
ಕ್ರಿಕೆಟ್ ಜಾಹಿರಾತಿನಿಂದ ಕೋಟ್ಯಾಂತರ ದುಡ್ಡು ಕೂಡ ಬರುತ್ತಿದೆ. ಒಟ್ಟಿನಲ್ಲಿ ಕ್ರಿಕೆಟ್ ಎನ್ನುವ ಜ್ವರ ಎಲ್ಲರಿಗೂ ಕೂಡ ನಿರಂತರವಾಗಿ ಇದ್ದೇ ಇರುತ್ತದೆ.
ಅದರಿಂದಾಗಿ ತಮ್ಮ ಮನೆಯ ಮುಂದೆ ಶಾಲಾ-ಕಾಲೇಜು ಆಟದ ಮೈದಾನಗಳಲ್ಲಿ ಈ ಕ್ರಿಕೆಟ್ ಆಟ ಎಲ್ಲರನ್ನು ಸೆಳೆಯುತ್ತದೆ.
ಭಾರತ ಕ್ರಿಕೆಟ್ ಕ್ಷೇತ್ರದ ದೇವರು ಸಚಿನ್ ತೆಂಡೂಲ್ಕರ್ ಅವರು 50ನೇ ವರ್ಷದ ಜನುಮದಿನ ಆಚರಿಸಿಕೊಂಡಾಗ ಅವರ ಜನುಮದಿನದ ಶುಭ ಸಂದರ್ಭದಲ್ಲಿ ಮಾಜಿ, ಹಾಲಿ ಕ್ರಿಕೆಟಿಗರು ಹಾಗೂ ನಾನಾ ಕ್ಷೇತ್ರದ ಗಣ್ಯರು ಶುಭ ಹಾರೈಸಿದ್ದಾರೆ. ತಮ್ಮ ಜನುಮ ದಿನದ ಕುರಿತು ಮಾತನಾಡಿದ್ದ ಸಚಿನ್, ಇದು ನನ್ನ ನಿಧಾನಗತಿಯ ಅರ್ಧ ಶತಕ. ಆದರೆ, ತೃಪ್ತಿದಾಯಕ ಇನಿಂಗ್ಸ್ ಇದು ಎಂದಿದ್ದಾರೆ.
ಜನುಮದಿನದ ಹಿನ್ನೆಲೆಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಸಾಧನೆಗಳನ್ನು ಮೆಲುಕು ಹಾಕಿದರು.
ಅಂತಹ ಮತ್ತಷ್ಟು ಕೆಲವೊಂದು ದಾಖಲೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ 34,357 ರನ್ಗಳನ್ನು ಕಲೆ ಹಾಕಿದ್ದಾರೆ. ಈ ಮೂಲಕ ಗರಿಷ್ಠ ರನ್ ಪೇರಿಸಿದ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ಸಾಧನೆ ಮಾಡಿದರು 664 ಅಂತಾರಾಷ್ಟ್ರೀಯ ಪಂದ್ಯಗಳಿಂದ 48.52ರ ಸರಾಸರಿ ಹಾಗೂ 67.58ರ ಸ್ಟ್ರೈಕ್ ರೇಟ್ನಲ್ಲಿ ರನ್ ಶಿಖರವನ್ನೇ ನಿರ್ಮಿಸಿದ್ದಾರೆ. ಉತ್ತರದಲ್ಲಿ ಕೆಲವು ಆಟಗಾರರು ಇವರ ಹತ್ತಿರಕ್ಕೆ ಜೊತೆಗೆ ದಾಖಲೆಗಳನ್ನು ಕೂಡ ಮೊದಲೇ ಹೇಳಿದಂತೆ ಮುರಿದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕಗಳ ಸಾಧನೆ ಮಾಡಿದೆ ಏಕಮೇವ ಆಟಗಾರ ಸಚಿನ್ ತೆಂಡೂಲ್ಕರ್. ವಿರಾಟ್ ಕೊಹ್ಲಿ 75 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಈಗಿನ ಅಂಶಗಳು ಮಾಹಿತಿ ನನಗೆ ಲಭ್ಯವಿಲ್ಲ.
ಸಚಿನ್ ತೆಂಡೂಲ್ಕರ್ ಅರೆಕಾಲಿಕ ಬೌಲರ್ ಆಗಿಯೂ ತಂಡಕ್ಕೆ ನೆರವಾಗುತ್ತಿದ್ದರು. 24 ವರ್ಷಗಳ ವೃತ್ತಿ ಕ್ರಿಕೆಟ್ನಲ್ಲಿ ಅವರು 200ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ 30 ಸಾವಿರಕ್ಕೂ ಅಧಿಕ ರನ್ ಹಾಗೂ 200ಕ್ಕೂ ಅಧಿಕ ವಿಕೆಟ್ ಪಡೆದ ಏಕೈಕ ಆಟಗಾರ ಎಂಬ ಸಾಧನೆ ತಮ್ಮದಾಗಿಸಿಕೊಂಡಿದ್ದಾರೆ.
ಮೂರನೆ ಅಂಪೈರ್ ನಿರ್ಣಯದಿಂದ ರನ್ಔಟ್ ಆದ ಮೊದಲ ಆಟಗಾರ.
ಯಾರ್ಕ್ಶೈರ್ ತಂಡದ ಪರವಾಗಿ ಮೊದಲ ಬಾರಿಗೆ ಆಡಿದ ಬೇರೆ ದೇಶದ ಆಟಗಾರ
ನಿವೃತ್ತಿ
ಬದಲಾಯಿಸಿ
ಡಿಸೆಂಬರ್ 23, 2012 ರಂದು ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದರು.
ನವೆಂಬರ್ 16, 2013 ರಂದು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದರು. ಇವರ ಸಾಧನೆಗೆ ಅನೇಕ ಪ್ರಶಸ್ತಿಗಳು
ಗೌರವ ಒಂದಿವೆ.
ಭಾರತರತ್ನ,
ಪದ್ಮವಿಭೂಷಣ ಪ್ರಶಸ್ತಿ,
ಪದ್ಮಶ್ರೀ ಪ್ರಶಸ್ತಿ,
ರಾಜೀವ್ ಗಾಂಧಿ ಖೇಲ್ ರತ್ನ,
ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ 2020. ಇವು ಪ್ರಮುಖ ಪ್ರಶಸ್ತಿಗಳು ಮತ್ತಷ್ಟು ಪ್ರಶಸ್ತಿಗಳು ಕೂಡ ಇವರನ್ನು ಪ್ರಾರಂಭದಿಂದ ಅವರ ಆಟದ ಕೊನೆಯವರೆಗೂ ಕೂಡ ಸಂದಿವೆ.
ಇಂತಹ ದೈತ್ಯ ಕ್ರಿಕೆಟ್ ಆಟಗಾರನ ಬಗ್ಗೆ ಎಷ್ಟು ಹೇಳಿದರೂ ಕೂಡ ಸಾಲದು.
ಭಾರತದಲ್ಲಿ ಕ್ರಿಕೆಟ್ ಎಂದರೆ ಸಚಿನ್, ಸಚಿನ್ ಎಂದರೆ ಕ್ರಿಕೆಟ್ ಎನ್ನುವಂತಾಗಿದೆ. ಈಗ ನಮ್ಮ ಭಾರತದಲ್ಲಿ ಹೊಸ ಹೊಸ ಆಟಗಾರರು ಸೇರ್ಪಡೆಗೊಂಡು ಮತ್ತಷ್ಟು ಸಾಧನೆ ಮಾಡುತ್ತಿದ್ದಾರೆ. ಸಚಿನ್ ಹಾದಿಯಲ್ಲಿ ಸಾಗುತ್ತಿದ್ದಾರೆ.
ನಾನು ಮೊದಲೇ ಹೇಳಿದಂತೆ ಕ್ರಿಕೆಟ್ ಎನ್ನುವುದು ಹರಿಯುವ ನೀರಿನಂತೆ ಒಬ್ಬ ಆಟಗಾರನ ದಾಖಲೆಯು ಮತ್ತೊಬ್ಬ ಆಟಗಾರನ ದಾಖಲೆಯಿಂದ ಮುನ್ನುಗುತ್ತವೆ.
ಮತ್ತೊಮ್ಮೆ ಸಚಿನ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

-ಕಾಳಿಹುಂಡಿ ಶಿವಕುಮಾರ್, ಮೈಸೂರು.