ಚಾಮರಾಜನಗರ: ದ್ವಿತೀಯ ಪಿಯುಸಿ ಪರೀಕ್ಷೆ ಇದೇ ಫೆಬ್ರವರಿ 28 ರಿಂದ ಮಾರ್ಚ್ 17ರವರೆಗೆ ನಡೆಯಲಿದ್ದು, ಪರೀಕ್ಷಾ ಕಾರ್ಯವನ್ನು ಪಾರದರ್ಶಕವಾಗಿ ನಡೆಸಲು ನಿಯೋಜಿತ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ವೀಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿಂದು ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ನಡೆದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 6285 ಹೊಸ ವಿದ್ಯಾರ್ಥಿಗಳು, 150 ಖಾಸಗಿ ವಿದ್ಯಾರ್ಥಿಗಳು, 474 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 6909 ವಿದ್ಯಾರ್ಥಿಗಳು ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷಾ ಕಾರ್ಯವು ಮುಕ್ತ, ಸುವ್ಯವಸ್ಥಿತ ಹಾಗೂ ಪಾರದರ್ಶಕವಾಗಿ ನಡೆಯಲು ಅಧಿಕಾರಿಗಳು ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಪರೀಕ್ಷಾ ಕೇಂದ್ರಗಳಿಗೆ ಅವಶ್ಯಕತೆಗನುಗುಣವಾಗಿ ಸೂಕ್ತ ಪೊಲೀಸ್ ಬಂದೋ ಬಸ್ತ್ ಒದಗಿಸಬೇಕು. ಅಗತ್ಯಕ್ಕೆ ತಕ್ಕಂತೆ ಮಹಿಳಾ ಸಿಬ್ಬಂದಿಯನ್ನು ಸಹ ನಿಯೋಜಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಅನಧಿಕೃತ ವ್ಯಕ್ತಿಗಳು ಅತಿಕ್ರಮ ಪ್ರವೇಶ ಮಾಡದಂತೆ ತಡೆಯಬೇಕು. ಪರೀಕ್ಷಾ ಕೇಂದ್ರಗಳ ಬಳಿ ಅಕ್ರಮಗಳಿಗೆ ಪ್ರಚೋದಿಸುವವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪರೀಕ್ಷಾ ಅಕ್ರಮಗಳಿಗೆ ಆಸ್ಪದ ಕೊಡಬಾರದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಆರೋಗ್ಯ ಇಲಾಖೆಯಿಂದ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರು ಶುಶ್ರೂಷಕರನ್ನು ಪ್ರಥಮ ಚಿಕಿತ್ಸೆ ಕಿಟ್ ನೊಂದಿಗೆ ನೇಮಕ ಮಾಡಬೇಕು. ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕಾರ್ಯಗಳಿಗೆ ತೊಂದರೆಯಾಗದಂತೆ ನಿರಂತರವಾಗಿ ವಿದ್ಯುತ್ ಪೂರೈಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ಮೂಲ ಸೌಕರ್ಯಗಳು ಸಮರ್ಪಕವಾಗಿ ಇರುವಂತೆ ಮೊದಲೇ ನೋಡಿಕೊಳ್ಳಬೇಕು ಎಂದರು.
ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು ಕೆಎಸ್‍ಆರ್‍ಟಿಸಿ ಬಸ್ಸುಗಳಲ್ಲಿ ಪರೀಕ್ಷಾ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಸಂಚರಿಸಲು ಆದೇಶಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ನಿಗದಿತ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಅನುಕೂಲವಾಗುವಂತೆ ಪಟ್ಟಣ ಹಾಗೂ ಎಲ್ಲ ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷಾ ಕೇಂದ್ರಗಳಿರುವ ಮಾರ್ಗಗಳಲ್ಲಿ ವಿದ್ಯಾರ್ಥಿಗಳು ಕಂಡು ಬಂದಲ್ಲಿ ಕಡ್ಡಾಯವಾಗಿ ಬಸ್ ನಿಲುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಪರೀಕ್ಷೆ ಹಾಗೂ ಪ್ರಶ್ನೆ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಗೊಂದಲ, ಸಂದೇಹ, ಸುಳ್ಳು ವದಂತಿ ಹಬ್ಬಿಸುವ ಹಾಗೂ ರವಾನಿಸುವವರ ವಿರುದ್ದ ಕಾನೂನಿನ ಪ್ರಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಾರ್ವಜನಿಕರು, ಪೋಷಕರು, ವಿದ್ಯಾರ್ಥಿಗಳು ಪರೀಕ್ಷೆ ಸಂಬಂಧ ಸುಳ್ಳು ಮಾಹಿತಿಗಳಿಗೆ ಕಿವಿಗೊಡಬಾರದು. ಈ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದರು.
ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಶಿಸ್ತು ಬದ್ದವಾಗಿ ಪರೀಕ್ಷಾ ಕಾರ್ಯವನ್ನು ನಿರ್ವಹಿಸಬೇಕು. ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಯಶಸ್ವಿಯಾಗಿ ಪರೀಕ್ಷಾ ಕರ್ತವ್ಯವನ್ನು ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪುಟ್ಟಗೌರಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಸುರೇಶ್, ಖಜಾನೆ ಇಲಾಖೆ ಉಪನಿರ್ದೇಶಕರಾದ ಕೆ.ಎಸ್. ರಾಜೇಶ್ವರಿ, ತಾಲೂಕುಗಳ ತಹಶೀಲ್ದಾರರು, ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರಾಂಶುಪಾಲರು ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಸಭೆಗೂ ಮೊದಲು ಜಿಲ್ಲಾಡಳಿತ ಭವನದ ಹಳೆ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ಪ್ರಾಂಶುಪಾಲರೊಂದಿಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಗತಿ ಸುಧಾರಣಾ ಸಂಬಂಧ ಸಭೆ ನಡೆಸಲಾಯಿತು.
Like this:
Like Loading...
Related