ಭಾರತದಲ್ಲಿ ಸ್ವದೇಶಿ ಸಾಮ್ರಾಜ್ಯ ನಿರ್ಮಿಸಿದವರಲ್ಲಿ ಶಿವಾಜಿ ಮೊದಲಿಗರು : ಸುರೇಶ್ ಋಗ್ವೇದಿ

ಚಾಮರಾಜನಗರ: ಶಿವಾಜಿ ಮಹಾರಾಜರು ಉತ್ತಮ ನಾಯಕತ್ವ ಗುಣ, ಸುಭದ್ರ ರಾಜಕೀಯ ಆಡಳಿಯ ವ್ಯವಸ್ಥೆಯಿಂದ ಭಾರತದಲ್ಲಿ ಸ್ವದೇಶಿ ಸಾಮ್ರಾಜ್ಯ ನಿರ್ಮಿಸಿದ ಮೊದಲಿಗರಾಗಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುರೇಶ್ ಎನ್. ಋಗ್ವೇದಿ ಅವರು ಅಭಿಪ್ರಾಯಪಟ್ಟರು.

ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಅವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ 397 ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. 

ಅಪ್ರತಿಮ ದೇಶಪ್ರೇಮಿಯಾಗಿದ್ದ ಶಿವಾಜಿಯವರು ರಾಜ ಪರಂಪರೆಯಲ್ಲಿ ಭಾರತೀಯತೆಯನ್ನು ಉಳಿಸಲು ಪಣತೊಟ್ಟಿದ್ದರು. ಬುಡಕಟ್ಟು ಜನರನ್ನು ಒಂದೇಡೆ ಸೇರಿಸಿ ಗೆರಿಲ್ಲಾ ಯುದ್ಧದ ತರಬೇತಿ ನೀಡಿ 53 ಕೋಟೆಗಳನ್ನು ಗೆದ್ದು ಸ್ವಾಭಿಮಾನದ ಸಾಮ್ರಾಜ್ಯ ಕಟ್ಟಿದ್ದರು. ಅವರ ರಾಜಕೀಯ ಚತುರತೆ, ಸ್ಪೂರ್ತಿಯುತ ಜೀವನ ಎಲ್ಲರಿಗೂ ಅದರ್ಶಪ್ರಾಯವಾಗಿದೆ ಎಂದರು. 

ಯುದ್ಧ ಸಂದರ್ಭದಲ್ಲಿ ಯಾವುದೇ ಮಹಿಳೆಯರಿಗೂ ತೊಂದರೆಯಾಗದಂತೆ ರಕ್ಷಿಸಿದ ಜಗತ್ತಿನ ಏಕೈಕ ರಾಜ ಹಾಗೂ ಸ್ತ್ರೀ ಗೌರವದ ಸಂಕೇತ ಶಿವಾಜಿ ಮಹಾರಾಜರು ಎಂದರೆ ತಪ್ಪಾಗಲಾರದು. ಶಿವಾಜಿಯವರು ಇತರೆ ರಾಜರಿಗೂ ಅನುಕರಣೀಯರಾಗಿದ್ದಾರೆ. ಪ್ರತಿಯೊಬ್ಬರು ಶಿವಾಜಿಯವರ ರಾಷ್ಟ್ರೀಯ ಮನೋಭಾವನೆ, ಯುದ್ಧ ತಂತ್ರಗಾರಿಕೆ, ಸೇನೆಯ ಶಿಸ್ತು, ನ್ಯಾಯ ಪರಿಕಲ್ಪನೆಯನ್ನು ಕಂದಾಯ ವ್ಯವಸ್ಥೆಯನ್ನು ಮಾದರಿಯಾಗಿಸಿಕೊಳ್ಳಬೇಕು ಎಂದು ಸುರೇಶ್ ಋಗ್ವೇದಿ ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಮಾತನಾಡಿ ಶಿವಾಜಿ ಮಹಾರಾಜರು ಭಾರತದ ಸ್ವಾಭಿಮಾನದ ಸಂಕೇತವಾಗಿದ್ದಾರೆ. ಅವರ ಇತಿಹಾಸವನ್ನು ಪ್ರತಿಯೊಬ್ಬರು ಮನನ ಮಾಡಬೇಕು. ರಾಜಪರಂಪರೆಯ ಪರಿಪೂರ್ಣ ವ್ಯಕ್ತಿತ್ವ ಅಂದರೆ ಅದು ಶಿವಾಜಿ ಮಹಾರಾಜರು ಮಾತ್ರ. ಅವರ ಶ್ರೇಷ್ಠ ಆಡಳಿತ ಚಿಂತನೆಗಳನ್ನು ಎಲ್ಲರು ಮೈಗೂಡಿಸಿಕೊಳ್ಳಬೇಕು ಎಂದರು.

ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್‍ನ ಚಾಮರಾಜನಗರ ಜಿಲ್ಲಾಧ್ಯಕ್ಷರಾದ ವೆಂಕಟರಾವ್ ಸಾಠೆ ಅವರು ಕಾರ್ಯಕ್ರಮದಲ್ಲಿ ಇದ್ದರು. 

ವೇದಿಕೆ ಕಾರ್ಯಕ್ರಮದ ಬಳಿಕ ಮೈಸೂರಿನ ದಿವ್ಯಶ್ರೀ ಕಲಾಬಳಗದ ತಂಡದವರು ಶಿವಾಜಿ ಮಹಾರಾಜರ ಕುರಿತು ನಾಟಕ ನಡೆಸಿಕೊಟ್ಟರು.

Leave a Reply

Your email address will not be published. Required fields are marked *