ಚಾಮರಾಜನಗರ: ಭಾರತೀಯ ಇತಿಹಾಸದಲ್ಲಿ ಶಿವಾಜಿ ಮಹಾರಾಜರ ಶ್ರೇಷ್ಠ ಆದರ್ಶ ವ್ಯಕ್ತಿತ್ವ, ನಾಯಕತ್ವ ಗುಣ, ಸ್ವರಾಜ್ಯ ಕಲ್ಪನೆ, ಸ್ವಾಭಿಮಾನಿ ರಾಷ್ಟ್ರ ಕಲ್ಪನೆ ಹಾಗೂ ಧಾರ್ಮಿಕ ಸಹಿಷ್ಣುತೆ ಇಂದಿಗೂ ಸ್ಮರಣೀಯವಾಗಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಹೇಳಿದರು.
ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿಯವರ 399ನೇ ಜಯಂತಿ ಕಾರ್ಯಕ್ರಮದಲ್ಲಿ ಶಿವಾಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾರಾಷ್ಟ್ರದ ಶಿವನೇರಿ ದುರ್ಗದಲ್ಲಿ 1627ರಲ್ಲಿ ಜನಿಸಿದ ಶಿವಾಜಿ ಅವರು ಬಾಲ್ಯದಲ್ಲಿ ತಾಯಿ ಜೀಜಾ ಬಾಯಿ ಅವರಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ತಾಯಿಯವರು ಹೇಳುತ್ತಿದ್ದ ರಾಮಾಯಣ, ಮಹಾಭಾರತ ಪರಂಪರೆಯ ಇತಿಹಾಸವನ್ನು ಅರ್ಥೈಸಿಕೊಂಡು ಸದೃಢ ಸ್ವರಾಜ್ಯ ಕಟ್ಟಲು ಮುಂದಾದರು. ಅವರ ಧೈರ್ಯ, ಸಾಹಸ, ಹೋರಾಟ ಗುಣ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು.
ಗೆರಿಲ್ಲಾ ಯುದ್ಧತಂತ್ರದ ಮೂಲಕ ಮೊಘಲರು ಮತ್ತು ಬಿಜಾಪುರದ ಆದಿಲ್ ಶಾಹಿಗಳಿಗೆ ಸಿಂಹಸ್ವಪ್ನರಾಗಿದ್ದ ಶಿವಾಜಿಯವರು ಆಡಳಿತದಲ್ಲಿ ಎಲ್ಲಾ ವರ್ಗದ ಜನರನ್ನು ಸಮಾನತೆಯಿಂದ ಕಾಣುತ್ತಿದ್ದರು. ದೇಶ ಸಂರಕ್ಷಣೆಗೆ ಸೈನ್ಯವನ್ನು ಸಜ್ಜುಗೊಳಿಸುವುದರಲ್ಲಿ ಇತರೆ ರಾಜರಿಗೂ ಶಿವಾಜಿ ಮಾದರಿಯಾಗಿದ್ದರು. ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಶಿವಾಜಿಯವರು ಸದಾಕಾಲ ಸ್ಮರಣೀಯರಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ ಅವರು ಮಾತನಾಡಿ ಬಾಲ್ಯದಲ್ಲಿಯೇ ಹೋರಾಟ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಶಿವಾಜಿ ಮಹಾರಾಜರು ಒಬ್ಬ ಆದರ್ಶ ರಾಜ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದಾರೆ. ಅವರ ಧೈರ್ಯ, ಶೌರ್ಯ, ವೀರತ್ವ ಹಾಗೂ ಮುಂಚೂಣಿ ನಾಯಕತ್ವ ಗುಣಗಳು ಚಿರಸ್ಥಾಯಿಯಾಗಿವೆ. ಈ ದೇಶಕ್ಕೆ, ನಾಡಿಗೆ ಅಪಾರ ಕೊಡುಗೆ ನೀಡಿರುವ ಶಿವಾಜಿ ಮಹಾರಾಜರ ಆದರ್ಶಗಳನ್ನು ಎಲ್ಲರು ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷರಾದ ವೆಂಕಟರಾವ್ ಸಾಠೆ ಅವರು ಮಾತನಾಡಿ ದೇಶಾದ್ಯಂತ ಇಂದು ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಗುತ್ತಿದೆ. ಉತ್ತಮ ಚಾಣಾಕ್ಷರು ಹಾಗೂ ಧರ್ಮ ಸಹಿಷ್ಣುವಾಗಿದ್ದ ಶಿವಾಜಿ ಮಹಾರಾಜರು ತನ್ನ ರಾಜ್ಯದಲ್ಲಿ ಎಲ್ಲಾ ಪ್ರಜೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿದ್ದರು. ಎಲ್ಲರನ್ನು ಸರ್ವ ಸಮಾನತೆಯಿಂದ ನೋಡಿಕೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನೆಡೆಯಬೇಕಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜು, ನಗರದ ಪೊಲೀಸ್ ವೃತ್ತ ನಿರೀಕ್ಷಕರಾದ ಜಗದೀಶ್, ಸಮುದಾಯದ ಮುಖಂಡರಾದ ಚಂದ್ರರಾವ್, ಶ್ರೀನಿವಾಸ್, ಮಮತಾ ಬಾಯಿ, ಲೋಕೇಶ್ ರಾವ್, ಬಾಬು ರಾವ್, ಅಭಿರಾಮ್, ಶಿವಕುಮಾರ್, ಅನಿತಾ ಬಾಯಿ, ಎಲ್. ಸುರೇಶ್, ಇತರರು ಇದೇ ಸಂದರ್ಭದಲ್ಲಿ ಇದ್ದರು.