ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ...... ಎಂಬ ಸುಮಧುರ ಗೀತೆ ಯಾರಿಗೆ ತಾನೇ ನೆನಪಾಗುವುದಿಲ್ಲ!. ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ದ ರಾ ಬೇಂದ್ರೆಯವರ ರಚನೆಯಲ್ಲಿರುವ, ಸಿ ಅಶ್ವಥ್ ರವರ ಸಂಗೀತ ನಿರ್ದೇಶನ ದೊಂದಿಗೆ ಅವರ ಸಿರಿಕಂಠದಲ್ಲಿ ದಾಖಲಾಗಿರುವ ಗೀತೆಯ ಸಾಲುಗಳು ಹಬ್ಬಕ್ಕೆಂದೇ ಹೇಳಿ ಮಾಡಿಸಿದಂತಿದೆ!.
ಅದೇ ರೀತಿ ಶ್ರಾವಣ ಮಾಸ ಬಂದಾಗ....
ಆನಂದ ತಂದಾಗ…. ಡಾ ರಾಜಕುಮಾರ್ ಅವರ ಧ್ವನಿಯಲ್ಲಿರುವ ಈ ಗೀತೆಯನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ!.
ಇಂತಹ ನೂರಾರು ಚಿತ್ರಗೀತೆಗಳು, ಭಾವಗೀತೆಗಳು, ಭಕ್ತಿಗೀತೆಗಳು, ಕೂಡ ಈ ಸಮಯದಲ್ಲಿ ನೆನಪಾಗುತ್ತವೆ. ಅವೆಲ್ಲವು ಹಬ್ಬಗಳ ಮಹತ್ವವನ್ನು ಸಾರುತ್ತವೆ.
ಶ್ರಾವಣ ಮಾಸದ ಬಗ್ಗೆ…… ಬರುವ ಹಬ್ಬಗಳ ಬಗ್ಗೆ…… ಎಷ್ಟು ಬರೆದರೂ ಕೂಡ ಸಾಲದು.
ಈ ಶ್ರಾವಣ ಮಾಸದಲ್ಲಿ ಚಿಟಪಟ ಚಿಟಪಟ ಅಂತ ಮಳೆರಾಯ ಬರುತ್ತಿರುತ್ತಾನೆ…… ಮೋಡ ಕವಿದ ವಾತಾವರಣ….. ಎಳೆ ಬಿಸಿಲು….. ಹಿತಕರವಾದ ವಾತಾವರಣ. ಮಳೆರಾಯನ ಕಣ್ಣಾಮುಚ್ಚಾಲೆ ಆಟ…… ಒಟ್ಟಿನಲ್ಲಿ ರೋಮಂಚನಗೊಳ್ಳುವಂತಹ ಸೃಷ್ಟಿಯ ಸೊಬಗು ಒಂದು ರೀತಿಯಲ್ಲಿ ಚೆಲುವಿನ ಚಿತ್ತಾರ ಮೂಡಿಸುತ್ತದೆ!.
ಈ ಮಳೆರಾಯ ತಾನು ಬರುವಾಗ ಸಕಲ ಜೀವಕೋಟಿ ರಾಶಿಗಳಿಗೂ ಕೂಡ ನವೋಲ್ಲಾಸ ತರುತ್ತಾನೆ. ಮತ್ತೆ ಈ ಮಳೆರಾಯ ಬಂದರೂ ಕಷ್ಟ….. ಬರದಿದ್ದರು ಕಷ್ಟ….. ಒಂದು ರೀತಿಯಲ್ಲಿ ಹೊಂದಾಣಿಕೆಯೊಂದಿಗೆ ಪ್ರಕೃತಿಯೇ ಸಮತೋಲನ ಕಾಪಾಡಿ ಕೊಂಡು ಮುಂದೆ ಮುಂದೆ ಸಾಗುತ್ತಿದೆ!.
ಎಲ್ಲಾ ನದಿ, ತೊರೆಗಳು ತುಂಬಿ ತುಳುಕುತ್ತಿರುತ್ತವೆ. ಒಂದೆಡೆ ಅನೇಕ ಕಡೆ ಪ್ರವಾಹ ಆತಂಕ ಸೃಷ್ಟಿಸಿ ಬಿಡುತ್ತದೆ. ಮತ್ತೊಂದೆಡೆ ಎಲ್ಲರೂ ಪ್ರವಾಸ ಮಾಡುವ ಮೂಲಕ ಸಂಭ್ರಮ ಪಡುತ್ತಾರೆ. ಅನೇಕ ಜಲಪಾತಗಳು ನವವಧುವಿನಂತೆ ಸಿಂಗಾರ ಗೊಂಡಿರುತ್ತವೆ. ಒಂದು ರೀತಿಯಲ್ಲಿ ಸೃಷ್ಟಿಯ ಸೊಬಗನ್ನು ಸವಿಯುವುದೇ ಸೊಗಸಾಗಿರುತ್ತದೆ!.
ಈ ಪ್ರಕೃತಿ ಎನ್ನುವುದೇ ವಿಸ್ಮಯ. ಎಲ್ಲಾ ಕಾಲದಲ್ಲೂ ಒಂದೊಂದು ರೀತಿಯಲ್ಲಿ ನವೋಲ್ಲಾಸ ಮೂಡಿಸುತ್ತದೆ. ಇಂತಹ ಸುಮಧುರ ಸುಂದರ ಪರಿಸರವನ್ನು ಮಾನವ ಅತಿಯಾಸೆಯಿಂದ ದೌರ್ಜನ್ಯ ವೆಸಗುತ್ತಿದ್ದಾನೆ. ಹಲವು ಸಮಸ್ಯೆಗಳೊಂದಿಗೆ ತಾನೇ ತೋಡಿದ ಗುಂಡಿಯಲ್ಲಿ ತಾನೇ ಬೀಳುವಂತಾಗಿದೆ!.
ಶ್ರಾವಣ ಮಾಸದಲ್ಲಿ ಪ್ರಾರಂಭವಾಗುವ ಪ್ರತಿಯೊಂದು ಹಬ್ಬಗಳು ಸಹ ಒಂದಲ್ಲ ಒಂದು ರೀತಿಯಲ್ಲಿ ಮೈ-ಮನಗಳಿಗೆ ಮುದ ನೀಡಿ, ಅಬಾಲವೃದ್ಧರಾದಿಯಾಗಿ ಸಂತಸ ನೀಡುತ್ತವೆ.
ನಾಗರ ಪಂಚಮಿ, ವರಮಹಾಲಕ್ಷ್ಮಿ ಹಬ್ಬ, ರಕ್ಷಾಬಂಧನ ಹಬ್ಬ, ಇನ್ನು ಮಂಗಳಗೌರಿ ಹಬ್ಬ, ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬ, ಗಣಪತಿ ಹಬ್ಬ…… ಒಂದೇ ಎರಡೇ….?!. ಹಬ್ಬಗಳಿಗೆ ತಕ್ಕಂತೆ ಪುರಾಣ ಕಥೆಗಳು ಇವೆ.
ಅದರಲ್ಲೂ ನಮ್ಮ ಬಾಲ್ಯದಲ್ಲಿ ನಮಗೆ ಹಬ್ಬಗಳು ತುಂಬಾ ಸೊಗಸಾಗಿದ್ದವು. ಸಕಲ ರೀತಿಯಲ್ಲೂ ದೊಡ್ಡವರಿಗೆ ಕಾಟ ಕೊಡುತ್ತಾ ಸಂಭ್ರಮ ಪಡುತ್ತಿದ್ದ ಮಜಾವೇ ಬೇರೆ. ಹಬ್ಬಗಳು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ?!. ಎಲ್ಲರೂ ಕೂಡ ಹಬ್ಬದ ವೈಭವದಲ್ಲಿ ಮಿಂದೇಳುತ್ತಾರೆ!.
ಶ್ರಾವಣ ಮಾಸ ಬಂದಾಗ ಬಾಲ್ಯದಲ್ಲಿ ನಮಗೆ ನಾಲ್ಕು ಶ್ರಾವಣ ಶನಿವಾರಗಳು ಕೂಡ ರಂಜನೀಯವಾಗಿದ್ದವು!. ಏಕೆಂದರೆ 4 ಶನಿವಾರ ಸಂಜೆ 6 ರಿಂದ ನಮ್ಮ ಊರಿನಲ್ಲಿ ಪ್ರತಿಯೊಂದು ಮನೆಯಲ್ಲೂ ಸಂಭ್ರಮದ ವಾತಾವರಣ.
ಮೈಕ್ ಸೆಟ್ ಬೇರೆ ಇರುತ್ತಿತ್ತು. ಪ್ರತಿವಾರ ಕೂಡ ಶನಿಮಹಾತ್ಮನ ಕಥೆ, ಇತರ ಕಥೆಗಳನ್ನು ದೊಡ್ಡವರು ಓದುತ್ತಿದ್ದರು. ಹಾರ್ಮೋನಿಯಂ… ತಬಲಾ…. ಗೆಜ್ಜೆ…. ಎಲ್ಲವೂ ಕೂಡ ಒಳಗೊಂಡಿರುತ್ತಿತ್ತು. ಊರಿಗೆ ಊರೇ ಸಂಭ್ರಮದ ವಾತಾವರಣ.
ಶನಿಕಥೆಯ ನಂತರ ರಾತ್ರಿ 9 ಗಂಟೆಗೆ ಸರಿಯಾಗಿ ಮಂಗಳಾರತಿ ಆಗುತ್ತಿತ್ತು. ನಿದ್ದೆ ಮಾಡುತ್ತಿದ್ದವರೆಲ್ಲಾ ಮಂಗಳಾರತಿಯ ಸದ್ದು ಕೇಳಿ ಎಚ್ಚರಗೊಳ್ಳುತ್ತಿದ್ದೆವು!. ಏಕೆಂದರೆ ನಂತರ ಪ್ರಸಾದ ವಿತರಣೆ ಆಗುತ್ತಿತ್ತು!!.
ಕಡಲೆಪುರಿ, ಪಂಚಾಮೃತ, ಎಳ್ಳುಡಿ, ಮುಂತಾದ ಪ್ರಸಾದಗಳು ನಮಗಾಗಿ ಕಾಯುತ್ತಿದ್ದೆವು. (ಈಗ ಪ್ರಸಾದಗಳೆಲ್ಲ ಬದಲಾಗಿವೆ) ನಾವು ಎರಡೆರಡು ಬಾರಿ ತಿಂದಿದ್ದು ಉಂಟು! ಅದಲ್ಲದೆ ಮಾಡಿಟ್ಟಿದ್ದ ತಿಂಡಿಯನ್ನು ಕದ್ದು ಕೂಡ ತಿಂದಿದ್ದು ನೆನಪಿಗೆ ಬರುತ್ತದೆ!!.
ಒಂದು ರೀತಿಯಲ್ಲಿ ಹೇಳುವುದಾದರೆ ನಾವೇ ಪುಣ್ಯವಂತರು!! ನಮ್ಮ ಮಕ್ಕಳಿಗೆ ಈ ರೀತಿಯ ಹಬ್ಬಗಳ ರಸದೌತಣ ಕಾಣಸಿಗುವುದಿಲ್ಲ. ಕಾಲ ಬದಲಾದಂತೆ ಹಬ್ಬಗಳು ಕೂಡ ತಮ್ಮತನ ಮೆರೆದಿವೆ ನಿಜ, ಆದರೂ ಕೂಡ ನಾವು ಬಾಲ್ಯದಲ್ಲಿ ಆಚರಿಸುತ್ತಿದ್ದ ಹಬ್ಬದ ಸಡಗರದ ಎಲ್ಲೋ ಒಂದು ಕಡೆ ಮಾಯವಾಗಿದೆ!. ಏನಂತೀರಿ ನಿಜ ತಾನೇ?!.
ಎಷ್ಟೇ ಸವಲತ್ತುಗಳು……. ಬಟ್ಟೆ ಬರೆ…… ತಿಂಡಿ-ತಿನಿಸುಗಳು…… ಸಮೃದ್ಧಿಯಾಗಿದ್ದರೂ ಕೂಡ ನಾವು ಹಬ್ಬದಲ್ಲಿ ಪಡುತ್ತಿದ್ದ ಸಂಭ್ರಮ ಮಾತ್ರ ಮರುಕಳಿಸುವುದೇ ಇಲ್ಲ!. ಈ ಸಮಯದಲ್ಲಿ ನನಗೆ ನಮ್ಮ ಬಾಲ್ಯ ಮತ್ತೆ ಮತ್ತೇ ಮರುಕಳಿಸಬಾರದೇ ಎಂದೆನಿಸುತ್ತದೆ!. ಇನ್ನು ನಿಮಗೆ?!…..
ವರ್ಷಕ್ಕೆ ಒಮ್ಮೆ ಮಾತ್ರ ಹೊಸಬಟ್ಟೆ!. ಅದನ್ನು ಎಲ್ಲೆಡೆ ಹಾಕಿಕೊಂಡು ಸಂಭ್ರಮ ಪಡುತ್ತಿದ್ದ ಕಾಲ. ಈಗ ಪ್ರತಿಯೊಬ್ಬರೂ ಎಲ್ಲಾ ಹಬ್ಬಗಳಿಗೂ ವರ್ಣರಂಜಿತ….. ದುಬಾರಿ… ಬಟ್ಟೆಗಳನ್ನು ಖರೀದಿ ಮಾಡುತ್ತಾರೆ. ಆದರೆ ಸಂಭ್ರಮ ಕಾಣಸಿಗುವುದಿಲ್ಲ.
ಹೀಗೆ ನಮ್ಮ ಕಾಳಿಹುಂಡಿ ಯಲ್ಲಿ 4 ವಾರ ಕೂಡ ಶ್ರಾವಣದ ವಾತಾವರಣ, ಸಂಭ್ರಮ ಸಡಗರ ಎಲ್ಲವೂ ಮುಗಿಲು ಮುಟ್ಟುತ್ತಿತ್ತು!!.
ಎಚ್ ಡಿ ಕೋಟೆ ತಾಲೂಕಿನ ತುಂಬಸೋಗೆ ಗ್ರಾಮದಲ್ಲಿ ನಮ್ಮ ಚಿಕ್ಕಮ್ಮನ ಮನೆಯಲ್ಲಿ ಶ್ರಾವಣದ ಮೊದಲ ಶನಿವಾರ ವನ್ನು ಬಹಳ ಅದ್ದೂರಿಯಿಂದ ಮಾಡುತ್ತಾರೆ. ನಾವು ನಗರ ಪ್ರದೇಶದಲ್ಲಿ ವಾಸವಾಗಿದ್ದರು ಕೂಡ ಆ ದಿನ ತಪ್ಪದೇ ಭೇಟಿಯಾಗಿ ಒಟ್ಟಾಗಿ ಸಂಭ್ರಮ ಪಡುತ್ತೇವೆ.
ಇನ್ನೂ ನಮ್ಮ ಕಾಳಿಹುಂಡಿ ಯಿಂದ ಸುಮಾರು ನಾಲ್ಕೈದು ಕಿಲೋಮೀಟರ್ ದೂರದಲ್ಲಿರುವ “ಸಿಂಗರ ಸ್ವಾಮಿ” ಬೆಟ್ಟ ಇದೆ. ಮಾದಾಪುರ- ಚಕ್ಕೂರು- ಕೆ.ಬೆಳತೂರು ಮಾರ್ಗ ಸಿಂಗರ ಸ್ವಾಮಿ ಬೆಟ್ಟಕ್ಕೆ ಹೋಗಬಹುದು. ನಾಲ್ಕು ಶನಿವಾರ ಕೂಡ ಜನಜಂಗುಳಿಯಿಂದ ಇಡೀ ಬೆಟ್ಟ ಸಂಭ್ರಮಿಸುತ್ತದೆ. 5ನೇ ಶನಿವಾರ ಬಡ ಶನಿವಾರ ವೆಂದು ಅವತ್ತು ಕೂಡ ಪೂಜೆ ಮಾಡುತ್ತಾರೆ.
ಸಿಂಗರ ಸ್ವಾಮಿ ಬೆಟ್ಟಕ್ಕೆ ನಮ್ಮ ಬಾಲ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದೆವು. ಜೊತೆಗೆ ಎತ್ತಿನ ಗಾಡಿ, ಸೈಕಲ್ನಲ್ಲಿ ಹೋಗಿದ್ದುಂಟು. ದೊಡ್ಡವರು ಚಿಕ್ಕವರನ್ನು ಹೆಗಲಮೇಲೆ ಕೂರಿಸಿಕೊಂಡು ಹೋಗುತ್ತಿದ್ದರು.
ಈಗ ಕಾಲ ಬದಲಾದಂತೆ ಉತ್ತಮ ರಸ್ತೆ ಇದೆ, ಬಸ್ಸು, ಜೀಪು, ಟ್ರ್ಯಾಕ್ಟರ್, ಕಾರು ಇನ್ನಿತರ ವಾಹನಗಳಲ್ಲಿ ಹೋಗುತ್ತಾರೆ. ಈಗ ಬಸ್ಸಿನ ವ್ಯವಸ್ಥೆ ಕೂಡ ಇದೆ.
ಬೆಟ್ಟದ ಕೆಳಗಡೆ ದೇವಸ್ಥಾನ ಇದೆ. ಬೆಟ್ಟದ ಮೇಲೂ ಕೂಡ ದೊಡ್ಡದಾದ ಬಂಡೆ ನಡುವೆ ದೇವಸ್ಥಾನ ಕ್ಕೆ ಪೂಜೆ-ಪುನಸ್ಕಾರ ಸಂಭ್ರಮವಾಗಿ ನಡೆಯುತ್ತದೆ.
ಈ ಬೆಟ್ಟಕ್ಕೆ 4 ಶನಿವಾರ ಕೂಡ ಭಕ್ತಾದಿಗಳು ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸುತ್ತಾರೆ. ಒಂದು ರೀತಿಯಲ್ಲಿ ಬೆಟ್ಟದ ಕೆಳಗೆ ಜಾತ್ರೆಯ ವಾತಾವರಣ!. ಎಲ್ಲಾ ತಿಂಡಿ ತಿನಿಸುಗಳು….. ಆಟದ ಸಾಮಾನುಗಳು….. ಸಿಗುತ್ತವೆ. ಯಾರ್ಯಾರು ಅಂಗಡಿಗಳ ಮುಂದೆ ಖರೀಸುತ್ತಾರೋ ಅವರತ್ತಿರ ಹೋಗಿ ನಿಂತು ನಾವು ತಿಂಡಿ-ತಿನಿಸು ಆಟಗಳನ್ನು ಪಡೆದುಕೊಳ್ಳುತ್ತಿದ್ದೆವು!.
ನಾಲ್ಕು ಶ್ರಾವಣ ಶನಿವಾರ ಹೊರತುಪಡಿಸಿ ಬೇರೆ ಯಾವ ದಿನಗಳಲ್ಲೂ ಕೂಡ ಬೆಟ್ಟದಲ್ಲಿ ಪೂಜೆ ಮಾಡುವುದಿಲ್ಲ. ಬೆಟ್ಟದ ಮೇಲೆ ಚಿಕ್ಕದಾದ ಪ್ರದೇಶವಾಗಿರುವುದರಿಂದ ಸ್ವಲ್ಪ ಬೆಟ್ಟವು ಕೂಡ ಕುಸಿಯುತ್ತಿದೆ. ಮತ್ತಷ್ಟು ಮೂಲಭೂತ ಸೌಕರ್ಯಗಳನ್ನು ನೀಡಬೇಕಾಗಿದೆ. ಇರುವ ಮೆಟ್ಟಿಲುಗಳು ಕೂಡ ಸುಧಾರಿಸಬೇಕಾಗಿದೆ.
ಇದು ಶ್ರಾವಣ ಶನಿವಾರ ಗಳ ಹಬ್ಬದ ವಾತಾವರಣ ವಾದರೆ…… ಇನ್ನು ಪಂಚಮಿ ಬಗ್ಗೆ ತಿಳಿಸಲೇಬೇಕು!.
ನಮ್ಮ ಊರಿನಿಂದ ಎರಡು ಮೂರು ಕಿಲೋಮೀಟರ್ ದೂರದಲ್ಲಿ ಕಪಿಲಾ ನದಿ (ಕಬಿನಿ) ಇದೆ. ಇದರ ದಡದಲ್ಲಿ ನಾವು “ಪಂಚಮಿ”ಯನ್ನು ನಮ್ಮ ಸಂಬಂಧಿಕರು ಎಲ್ಲರೂ ಸೇರಿ ಆಚರಿಸುತ್ತೇವೆ. ಮೊದಲೇ ನಮ್ಮದು ಒಟ್ಟು ಕುಟುಂಬ. ಮಕ್ಕಳು, ಮರಿ ಎಲ್ಲರೂ ಸೇರಿದರೆ ಬರೋಬ್ಬರಿ ಮೂರರಿಂದ 150 ಜನರು ಸೇರುತ್ತೇವೆ!. ನಮ್ಮಗಳ ಜೊತೆ ನಮ್ಮ ದಾಯಾದಿಗಳು ಕೂಡ ಬರುತ್ತಾರೆ. ಹೊಳೆಯ ದಡದಲ್ಲಿ ಮಹಿಳೆಯರೆಲ್ಲ ಸೇರಿ ಹಬ್ಬದಡಿಗೆ ಪ್ರಾರಂಭವಾಗುತ್ತದೆ.
ಹಬ್ಬಕ್ಕಾಗಿ ಕಿಚಡಿ ಅನ್ನ, ಸಿಹಿ ಪೊಂಗಲ್, ಖಾರ ಪೊಂಗಲ್ ಎಲ್ಲವೂ ತಯಾರಾಗುತ್ತವೆ. ಅವರು ತಯಾರು ಮಾಡುವವರೆಗೆ ನಾವು ಪಕ್ಕದಲ್ಲೇ ಹರಿಯುವ ಹೊಳೆಯಲ್ಲಿ ಸ್ನಾನ ಮಾಡುತ್ತೇವೆ. ಅದಕ್ಕೂ ಮುಂಚೆ ಕಪಿಲಾನದಿಯ ಮಧ್ಯಭಾಗದಲ್ಲಿ ಇದ್ದ ಅಪಾರ ಮರಳು ರಾಶಿಯ ಮೇಲೆ ನಮ್ಮ ಆಟ, ಕುಣಿದಾಟಕ್ಕೆ ಯಾವುದು ಸರಿಸಾಟಿ ಆಗುತ್ತಿರಲಿಲ್ಲ. ಮನಸೋ ಇಚ್ಛೆ ಕುಣಿದು ನಂತರ ಊಟಕ್ಕೆ ತಯಾರಾಗುತ್ತಿದ್ದವು!. ಸಂಜೆಯವರೆಗೂ ಕೂಡ ಹಬ್ಬದ ವಾತಾವರಣ. ದಣಿದು ಸುಸ್ತಾಗಿದ್ದರಿಂದ ಅವತ್ತು ಬೇಗ ಮಲಗುತ್ತಿದ್ದೆವು.
ಈಗ ಹೊಳೆಯ ದಡದಲ್ಲಿ ಮಾಡುತ್ತಿದ್ದ ಪಂಚಮಿ ಹಬ್ಬದ ಸಂಭ್ರಮವು ಇಲ್ಲ…… ಕಪಿಲಾ ನದಿಯ ಮಧ್ಯ ಭಾಗದಲ್ಲಿ ಇದ್ದ ಅಪಾರ ಮರಳರಾಶಿ ಯೂ ಕೂಡ ಇಲ್ಲ!.
ಪಂಚಮಿ ಹಬ್ಬವನ್ನು ತಮ್ಮ ತಮ್ಮ ಮನೆಯ ಅಳತೆಗೆ ತಕ್ಕಂತೆ ಮಾಡಿಕೊಳ್ಳುತ್ತಾರೆ. ಅಪಾರ ಪ್ರವಾಹದ ನಡುವೆ ಮರಳು ರಾಶಿ ಕೂಡ ಮಾಯವಾಗಿದೆ. ಇವೆರಡರ ಜೊತೆಗೆ ನಮ್ಮ ಬಾಲ್ಯದ ಪಂಚಮಿ ಹಬ್ಬವು ಕೂಡ ಕಾಣೆಯಾಗಿದ್ದು, ಈಗ ನಗರಪ್ರದೇಶಗಳಲ್ಲಿ ಕೇವಲ ಬಾಯಿರುಚಿಗೆ ಎನ್ನುವಷ್ಟು ಹಬ್ಬ ನಡೆಯುತ್ತಿವೆ ಇದು ನನ್ನ ಭಾವನೆ!.
ಹೀಗೆ ಶ್ರಾವಣ ಮಾಸದಲ್ಲಿ ಹಬ್ಬಗಳು ಸಾಲುಸಾಲು ಬರುತ್ತವೆ, ಹೋಗುತ್ತವೆ ಆದರೆ ಅವೆಲ್ಲವೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ನಮ್ಮಗಳ ನಡುವೆ ಬಾಂಧವ್ಯದ ಸೊಗಡನ್ನು ಬಿತ್ತುತ್ತವೆ.
ಗಗನಕ್ಕೇರಿರುವ ಬೆಲೆಗಳ ನಡುವೆಯೂ ಕೂಡ ಹಬ್ಬಗಳು ತನ್ನತನವನ್ನು ಕಳೆದುಕೊಂಡಿಲ್ಲ. ಆಚರಣೆಯ ರೀತಿ ಬದಲಾಗಿದೆ ಅಷ್ಟೇ.
ಸಾಮೂಹಿಕವಾಗಿ ಮಾಡುವ ಹಬ್ಬಗಳು ಕುಟುಂಬದ ಅಳತೆಯಲ್ಲಿ ಮಾತ್ರ ಸಾಗುತ್ತಿವೆ. ಅವಿಭಕ್ತ ಕುಟುಂಬಗಳು ಕಾಣೆಯಾಗಿವೆ!. ಇದರಿಂದಾಗಿ ವಿಭಕ್ತ ಕುಟುಂಬಗಳು ಹಬ್ಬವನ್ನು ತಮಗಿಷ್ಟ ಬಂದ ರೀತಿಯಲ್ಲಿ ಆಚರಿಸುತ್ತಾರೆ.
ಈಗಲೂ ಕೂಡ ಹಿರಿಯರನ್ನು ನಿಮ್ಮ ಕಾಲದಲ್ಲಿ ಹಬ್ಬವನ್ನು ಹೇಗೆ ಆಚರಿಸುತ್ತಿದ್ದಿರಿ ಎಂದು ಕೇಳಿದರೆ ಅವರು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. ಯಾವುದೇ ಆಡಂಬರವಿಲ್ಲದೆ…. ಕಡಿಮೆ ಖರ್ಚಿನಲ್ಲಿ….. ಕುಟುಂಬ ಸಮೇತ…. ಸಡಗರ ಸಂಭ್ರಮಗಳೊಂದಿಗೆ…… ಹಬ್ಬವನ್ನು ವೈವಿಧ್ಯಮಯವಾಗಿ ಆಚರಿಸುತ್ತಿದ್ದರು. ಹಬ್ಬ ಬರುವುದಕ್ಕೆ ಮುಂಚಿತವಾಗಿಯೇ ಮನೆಯ ವಾತಾವರಣವೆಲ್ಲ ಸಿಂಗಾರಗೊಳ್ಳುತ್ತಿತ್ತು. ಎಲ್ಲರೂ ಒಂದೊಂದು ಕೆಲಸಗಳನ್ನು ಹಂಚಿಕೊಂಡು ಒಟ್ಟಾಗಿರುತ್ತಿದ್ದರು. ಈಗ ಹಬ್ಬದ ಆಚರಣೆ ಸಂಪೂರ್ಣ ಬದಲಾಗಿದೆ.
ಮುಖ್ಯವಾಗಿ ಮಕ್ಕಳಿಗೆ ಹಬ್ಬಗಳ ಬಗ್ಗೆ ತಿಳಿಸಬೇಕು ಅವರಿಗೆ ಮಾಹಿತಿ ಕೊರತೆಯಿದೆ. ಹಬ್ಬಗಳ ಆಚರಣೆಯ ಮಹತ್ವ, ಹಿನ್ನೆಲೆ ಎಲ್ಲದರ ಬಗ್ಗೆ ತಿಳಿಸಬೇಕು. ಹಬ್ಬಗಳು ಒಂದಲ್ಲ ಒಂದು ರೀತಿಯಲ್ಲಿ ಭಾವನೆಗಳ ಸಂಗಮದಂತೆ ಇರುತ್ತವೆ.
ಆದರೆ ಈಗ ಹಬ್ಬಗಳು ಎಂದರೆ ಹೊಸ ಬಟ್ಟೆ ಹಾಕಿಕೊಳ್ಳುವುದು ಎಂಬಂತಾಗಿದೆ!. ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಗಳಿಗೂ ಸಹ ತನ್ನದೇ ಆದ ಇತಿಹಾಸ, ಆಚರಣೆಯ ಮಹತ್ವ ಅಡಗಿರುತ್ತದೆ.
ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ಭಾರತದಲ್ಲಿ ಹಬ್ಬಗಳ ಆಚರಣೆಯ ಜೊತೆಗೆ ಮೊದಲೇ ಹೇಳಿದಂತೆ ಬಾಂಧವ್ಯದ ಸುಮಧುರವಾದ ಬೆಸುಗೆಯನ್ನು
ಏರ್ಪಡಿಸುತ್ತವೆ. ಬರಲಿರುವ ಪ್ರತಿಯೊಂದು ಹಬ್ಬಗಳಿಗೂ ಶುಭಾಶಯ ಕೋರುತ್ತೇನೆ. ಮತ್ತೊಂದು ಮಾತು ಮುಖ್ಯವಾಗಿ ನಮ್ಮ ಯುವಜನತೆಗೆ ಪ್ರತಿಯೊಂದು ಹಬ್ಬಗಳ ಬಗ್ಗೆಯೂ ಕೂಡ ಅಂದರೇ…. ಅದರ ಮಹತ್ವ, ಅದರ ಹಿನ್ನೆಲೆ, ಅದರ ಐತಿಹಾಸಿಕ ಕಥೆಗಳು ಇವೆಲ್ಲವುಗಳ ಬಗ್ಗೆ ತಿಳಿಸಿದರೆ ಅವರು ಮುಂದಿನ ತಲೆಮಾರಿಗೂ ಕೂಡ ಒಂದಿಷ್ಟು ಅಂಶಗಳನ್ನಾದರೂ ಕೊಂಡೊಯ್ಯುತ್ತಾರೆ. ಈ ಕೆಲಸವನ್ನು ನಾವು, ಗುರುಗಳು, ತಂದೆ- ತಾಯಿಗಳು ಜರೂರಾಗಿ ಮಾಡಬೇಕಾಗಿದೆ.
ಎಲ್ಲರಿಗೂ ಒಳಿತಾಗಲಿ
“ಸರ್ವೇ ಜನ ಸುಖಿನೋ ಭವಂತು”!.
ಕಾಳಿಹುಂಡಿ ಶಿವಕುಮಾರ್ ಮೈಸೂರು.