ಚಾಮರಾಜನಗರ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವು ಚಾಮರಾಜನಗರ ಜಿಲ್ಲೆಯಲ್ಲಿ ಸೆಪ್ಟೆಂಬರ್ 22 ರಿಂದ ಆರಂಭವಾಗಿದ್ದು, ಅಕ್ಟೋಬರ್ 7ರವರೆಗೆ ನಡೆಯಲಿದೆ. ಸಮೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ನಾಗರಿಕರ ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಸಮೀಕ್ಷೆಯಿಂದ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ಯಶಸ್ಸಿಗೆ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ಸಮೀಕ್ಷೆಯಲ್ಲಿ ಕೇಳಲಾಗುವ 60 ಪ್ರಶ್ನೆಗಳಿಗೆ ಸರಿಯಾದ ಮಾಹಿತಿಯನ್ನು ನೀಡಿ ಸಮೀಕ್ಷೆಯನ್ನು ಯಶಸ್ವಿಗೊಳಿಸುವಂತೆ ಜಿಲ್ಲೆಯ ನಾಗರಿಕರಲ್ಲಿ ಜಿಲ್ಲಾಧಿಕಾರಿಯವರು ಕೋರಿದ್ದಾರೆ.
ಸಮೀಕ್ಷಾ ಸಂಬಂಧ ಜಿಲ್ಲೆಯಲ್ಲಿ 2025ಕ್ಕೆ ಒಟ್ಟು 11,03,619 ಜನಸಂಖ್ಯೆ ಇದ್ದು ಒಟ್ಟು 3,11,624 ಕುಟುಂಬಗಳನ್ನು ಅಂದಾಜಿಸಲಾಗಿದೆ. ಒಟ್ಟು 2,61,680 ಬ್ಲಾಕ್‍ಗಳನ್ನು ಗುರುತಿಸಲಾಗಿದೆ.
ಚಾಮರಾಜನಗರ ತಾಲೂಕಿನಲ್ಲಿ 3,86,831 ಜನಸಂಖ್ಯೆಯಿದ್ದು, ಸಾಂಖ್ಯಿಕ ಇಲಾಖೆ ಪ್ರಕಾರ 1,10,306 ಕುಟುಂಬಗಳಿವೆ. ಸಮೀಕ್ಷಾ ಸಂಬಂಧ 98,955 ಬ್ಲಾಕ್‍ಗಳನ್ನು ಗುರುತಿಸಲಾಗಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ 2,41,170 ಜನಸಂಖ್ಯೆಯಿದ್ದು, 69,502 ಕುಟುಂಬಗಳಿವೆ. ಸಮೀಕ್ಷಾ ಸಂಬಂಧ 58,727 ಬ್ಲಾಕ್‍ಗಳನ್ನು ಗುರುತಿಸಲಾಗಿದೆ. ಹನೂರು ತಾಲೂಕಿನಲ್ಲಿ 1,97,749 ಜನಸಂಖ್ಯೆಯಿದ್ದು, 55,676 ಕುಟುಂಬಗಳಿವೆ. ಸಮೀಕ್ಷಾ ಸಂಬಂಧ 41,294 ಬ್ಲಾಕ್‍ಗಳನ್ನು ಗುರುತಿಸಲಾಗಿದೆ. ಕೊಳ್ಳೇಗಾಲ ತಾಲೂಕಿನಲ್ಲಿ 1,89,141 ಜನಸಂಖ್ಯೆಯಿದ್ದು, 52,095 ಕುಟುಂಬಗಳಿವೆ. ಸಮೀಕ್ಷಾ ಸಂಬಂಧ 45015, ಬ್ಲಾಕ್‍ಗಳನ್ನು ಗುರುತಿಸಲಾಗಿದೆ. ಯಳಂದೂರು ತಾಲೂಕಿನಲ್ಲಿ 88,728 ಜನಸಂಖ್ಯೆಯಿದ್ದು, 24,045 ಕುಟುಂಬಗಳಿವೆ. ಸಮೀಕ್ಷಾ ಸಂಬಂಧ 17,689 ಬ್ಲಾಕ್‍ಗಳನ್ನು ಗುರುತಿಸಲಾಗಿದೆ.
ಸಮೀಕ್ಷೆಯ ಮೊದಲ ಹಂತದಲ್ಲಿ ಇಂಧನ ಇಲಾಖೆಯ ಮೂಲಕ ಮನೆಗಳ ಪಟ್ಟಿ ಮತ್ತು ಅವುಗಳ ಜಿಯೋ ಟ್ಯಾಗಿಂಗ್ ಮಾಡಲು ವಿದ್ಯುತ್ ಸಂಪರ್ಕ ಹೊಂದಿರುವ ಮನೆಗಳಿಗೆ ಮೀಟರ್ ರೀಡರ್‍ಗಳ ಮೂಲಕ ಮೊಬೈಲ್ ಅಪ್ಲಿಕೇಷನ್ ನಲ್ಲಿ ಯುಹೆಚ್‍ಐಡಿ ಸಂಖ್ಯೆ ಸೃಜಿಸಿ, ಸ್ಟಿಕ್ಕರ್‍ಗಳನ್ನು ಪ್ರತಿ ಮನೆಗಳಿಗೂ ಅಂಟಿಸುವ ಕೆಲಸ ಪೂರ್ಣಗೊಳಿಸಲಾಗಿರುತ್ತದೆ.
ಆರ್.ಆರ್ ಸಂಖ್ಯೆ ಹೊಂದಿಲ್ಲದ ಮತ್ತು ಕಾಡಂಚಿನ ಪ್ರದೇಶಗಳ ಕುಟುಂಬಗಳಿಗೆ ಮೊಬೈಲ್ ಅಪ್ಲಿಕೇಷನ್ ನಲ್ಲಿ ಯುಹೆಚ್‍ಐಡಿ ಸಂಖ್ಯೆ ಸೃಜಿಸಿ, ಸ್ಟಿಕ್ಕರ್‍ಗಳನ್ನು ಪ್ರತಿ ಮನೆಗಳಿಗೂ ಅಂಟಿಸುವ ಕೆಲಸಗಳನ್ನು ಈಗಾಗಲೇ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಪೂರ್ಣಗೊಳಿಸಲಾಗಿರುತ್ತದೆ.
ಒಟ್ಟು ಕುಟುಂಬಗಳ ಸಂಖ್ಯೆಗೆ ಅನುಗುಣವಾಗಿ 3,11,624 ಕುಟುಂಬಗಳಿಗೆ 150 ಮನೆಗಳಿಗೆ ಒಬ್ಬರಂತೆ 2,456 ಗಣತಿದಾರರು, 50 ಗಣತಿದಾರರಿಗೆ ಒಬ್ಬರಂತೆ 45 ಮಾಸ್ಟರ್ ಟ್ರೈನರ್ಸ್, 20 ಗಣತಿದಾರರಿಗೆ ಒಬ್ಬರಂತೆ 110 ಮೇಲ್ವಿಚಾರಕರು ನೇಮಕಗೊಂಡಿದ್ದಾರೆ.
ಸಮೀಕ್ಷೆಗಾಗಿ 6 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಆಧಾರ್ ಕಾರ್ಡ್ ಹೊಂದಿರಬೇಕು ಹಾಗೂ ಮಾಹಿತಿ ನೀಡುವ ಪ್ರತಿ ಮನೆಯ ಸದಸ್ಯರ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಜೋಡಣೆ (ಲಿಂಕ್) ಆಗಿರುವುದು ಕಡ್ಡಾಯವಾಗಿರುತ್ತದೆ.
ಸಮೀಕ್ಷೆಗಾಗಿ ಕುಟುಂಬ ಪಡಿತರ ಚೀಟಿಯನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ಪಡಿತರ ಚೀಟಿ ಹೊಂದಿಲ್ಲದವರು ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ಆಧಾರ್ ಸಂಖ್ಯೆ ಹೊಂದಿಲ್ಲದಿದ್ದಲ್ಲಿ ಹತ್ತಿರದ ಆಧಾರ್ ಸೆಂಟರ್‍ಗಳಲ್ಲಿ ನೊಂದಣಿ ಮಾಡಿಕೊಳ್ಳಬೇಕು. ಜೊತೆಗೆ ಚುನಾವಣಾ ಗುರುತಿನ ಚೀಟಿ ಹಾಗೂ ಇತ್ಯಾದಿ ದಾಖಲೆಗಳನ್ನು ಹೊಂದಿರಬೇಕಾಗಿರುತ್ತದೆ.
ಕುಟುಂಬದ ಸದಸ್ಯರಲ್ಲಿ ಯಾರಾದರೂ ಅಂಗವಿಕಲರಿದ್ದಲ್ಲಿ ಯುಡಿಐಡಿ ಸಂಖ್ಯೆಯನ್ನು ಹೊಂದಿರಬೇಕು. ಇಲ್ಲದಿದ್ದಲ್ಲಿ ಅಂಗವಿಕಲರ ಗುರುತಿನ ಚೀಟಿಯನ್ನು ಹಾಜರುಪಡಿಸಬೇಕು.
ಆಯೋಗದ ವತಿಯಿಂದ ಸಿದ್ಧಪಡಿಸಿರುವ ಪ್ರಶ್ನಾವಳಿಗಳ ಮಾದರಿ ನಮೂನೆಯನ್ನು ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಡಿ ನೋದಾಯಿಸಿಕೊಂಡಿರುವ ಸ್ವ-ಸಹಾಯ ಗುಂಪುಗಳ ಸದಸ್ಯರುಗಳಿಂದ ಪ್ರತಿ ಮನೆಗಳಿಗೆ ವಿತರಣೆ ಮಾಡಿಸಿ ಮೇಲ್ಕಂಡ ದಾಖಲಾತಿಗಳನ್ನು ಸಿದ್ದಪಡಿಸಿಟ್ಟುಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಟೆಲಿಕಾಂ ಶ್ಯಾಡೋ ಪ್ರದೇಶ ಮತ್ತು ಕಾಡಂಚಿನ ಪ್ರದೇಶಗಳ 24 ಗ್ರಾಮ ಪಂಚಾಯಿತಿಗಳಲ್ಲಿನ 94 ಹಾಡಿ, ಗ್ರಾಮಗಳಲ್ಲಿ 17,449 ಕುಟುಂಬಗಳು ಇದ್ದು ಇಲ್ಲಿನ ಸಮೀಕ್ಷಾ ಕಾರ್ಯಕ್ಕೆ ಹತ್ತಿರದ ಗ್ರಾಮ ಪಂಚಾಯಿ, ಸರ್ಕಾರಿ ಶಾಲೆ, ಗ್ರಂಥಾಲಯ ಮತ್ತು ಇತ್ಯಾದಿ ಸ್ಥಳಗಳಲ್ಲಿ ಶಿಬಿರ ಆಯೋಜನೆ ಮಾಡಲಾಗಿರುತ್ತದೆ.
ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಕಾಲೋನಿಗಳಲ್ಲಿ ಆರ್.ಆರ್ ಸಂಖ್ಯೆ ಹೊಂದಿಲ್ಲದೇ ಇರುವ ಮನೆಗಳಿಗೆ ಗ್ರಾಮಾಡಳಿತ ಅಧಿಕಾರಿಗಳಿಂದ ಯುಹೆಚ್‍ಐಡಿ ಸಂಖ್ಯೆಗಳನ್ನು ಸೃಜಿಸಲು ಕ್ರಮವಹಿಸಲಾಗುತ್ತಿದೆ.
ಜಿಲ್ಲಾಮಟ್ಟದ ಅಧಿಕಾರಿಗಳ ತಂಡದೊಂದಿಗೆ ಕ್ಷೇತ್ರಕ್ಕೆ ಭೇಟಿ ನೀಡಿ ಖುದ್ದು ಸಮೀಕ್ಷೆ ಕಾರ್ಯವನ್ನು ಮೊಬೈಲ್ ಆಪ್‍ನಲ್ಲಿ ಪರಿಶೀಲನೆ ಮಾಡಿದ್ದೇನೆ. ಪ್ರಸ್ತುತ ತಾಂತ್ರಿಕ ಸಮಸ್ಯೆ ಪರಿಹರಿಸಲಾಗಿದೆ. ಯಾವುದೇ ತಾಂತ್ರಿಕ ಸಮಸ್ಯೆಗಳು ಉದ್ಭವಿಸಿದಲ್ಲಿ ಪರಿಹಾರಕ್ಕಾಗಿ ತಾಂತ್ರಿಕ ಪರಿಣಿತರನ್ನು ತಾಲ್ಲೂಕುವಾರು ನೇಮಕಗೊಳಿಸಲಾಗಿದೆ. ಜೊತೆಗೆ ಜಿಲ್ಲಾ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ಹೆಲ್ಪ್ ಲೈನ್ ತೆರೆಯಲಾಗಿದೆ. ಗಣತಿದಾರರು ತಮ್ಮ ಮನೆಗಳಿಗೆ ಸಮೀಕ್ಷೆಗೆ ಬಂದಾಗ ಸಾರ್ವಜನಿಕರು ಸಹಕರಿಸಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
Like this:
Like Loading...
Related