ಸಾಮಾಜಿಕ ನ್ಯಾಯ-ಮಾಧ್ಯಮ ಸಂವೇದನೆ- ವಿಚಾರಸಂಕಿರಣ

  • ಡಾ.ಮನಮೋಹನ್ ಸಿಂಗ್ ವಿಶ್ವವಿದ್ಯಾನಿಲಯ

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಪ್ರಯುಕ್ತ ಕರ್ನಾಟಕ ಮಾಧ್ಯಮ ಅಕಾಡೆಮಿ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ “ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಇಂದಿನ ಮಾಧ್ಯಮ ಸಂವೇದನಾಶೀಲತವಾಗಿದಿಯೇ” ಎಂಬ ವಿಷಯದ ಕುರಿತ ವಿಚಾರಸಂಕಿರಣವನ್ನು ಆಯೋಜಿಸಿತ್ತು.

ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ನೂತನ ಶೈಕ್ಷಣಿಕ ವಿಭಾಗದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಈ ವಿಚಾರಸಂಕಿರಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು.

ಸಾಮಾಜಿಕ ಸಮಾನತೆಯ ಹರಿಕಾರ ಅಂಬೇಡ್ಕರ್ ಅವರ ಸಾರಥ್ಯದಲ್ಲಿ ರಚನೆಯಾದ ಭಾರತದ ಸಂವಿಧಾನ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಕೈದೀವಿಗೆಯಾಗಿದೆ ಎಂದು ಅವರು ಬಣ್ಣಿಸಿದರು.

ಜಾತಿ, ಧರ್ಮ, ಲಿಂಗ ಮತ್ತು ಭಾಷೆಯ ಆಧಾರದ ತಾರತಮ್ಯ ಹಾಗೂ ಅಸ್ಪೃಶ್ಯತೆಯ ಆಚರಣೆ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಇಂದಿಗೂ ಜ್ವಲಂತ ಸಮಸ್ಯೆಗಳಾಗಿ ದೇಶವನ್ನು ಕಾಡುತ್ತಿರುವುದು ವಿಷಾದನೀಯ ಎಂದು ಅವರು ವಿಶ್ಲೇಷಿಸಿದರು.

ಭಾರತದಲ್ಲಿ 19,658 ಭಾಷೆಗಳಿದ್ದು ಜನ ಸಂಸ್ಕೃತಿಯ ಪ್ರತೀಕವಾದ ಅನೇಕ ಸಣ್ಣ ಭಾಷೆಗಳು ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದು ಬಹುಸಂಖ್ಯಾತರ ಭಾಷೆಗಳ ಪ್ರಾಬಲ್ಯದಿಂದ ದಮನಿಸಲ್ಪಡುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬ್ರಿಟಿಷರ ಕಾಲದಲ್ಲಿ ಪ್ರಾದೇಶಿಕ ಭಾಷಾ ಪತ್ರಿಕೆಗಳ ಮೇಲೆ ಪ್ರಾರಂಭವಾದ ಪ್ರಹಾರ ಇಂದಿಗೂ ಮುಂದುವರಿದಿದ್ದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮಾಧ್ಯಮ ದಿಟ್ಟತನದಿಂದ ಎತ್ತಿಹಿಡಿಯಬೇಕೆಂದು ಅವರು ಅಭಿಪ್ರಾಯಪಟ್ಟರು.

ಪ್ರಧಾನ ಭಾಷಣ ಮಾಡಿದ ಹಿರಿಯ ಪತ್ರಕರ್ತ ಮತ್ತು ಚಿಂತಕರಾದ ಕೋಟಿಗಾನಹಳ್ಳಿ ರಾಮಯ್ಯನವರು ಮಾತನಾಡಿ ಪ್ರಬುದ್ಧ ಭಾರತ ನಿರ್ಮಾಣದ ಗುರಿ ಸಾಧನೆಗೆ ಯುವ ಪೀಳಿಗೆ ಅಂಬೇಡ್ಕರ್ ಕಟ್ಟಿಕೊಟ್ಟಿರುವ ಆದರ್ಶಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಪ್ರೇರೇಪಿಸಿದರು.

1990ರ ದಶಕದಿಂದ ಆರಂಭವಾದ ಕಾರ್ಪೊರೇಟ್ ಬಂಡವಾಳಶಾಹಿಯ ತುಷ್ಠೀಕರಣ ಸೃಷ್ಟಿಸಿರುವ ಪಲ್ಲಟ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಹರಿಸುವ ಅಪಾಯಕಾರಿ ಹಂತ ತಲುಪಿದೆ ಎಂದು ಅವರು ಎಚ್ಚರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ರಮೇಶ್.ಬಿ. ಸಮಕಾಲೀನ ಸಂದರ್ಭದ ಮಾಧ್ಯಮ ಜನದನಿಯಾಗಿ ಸಾಮಾಜಿಕ ನ್ಯಾಯದ ಆಶಯಗಳಿಗೆ ಹೆಚ್ಚಿನ ಸಂವೇದನೆ ತೋರಬೇಕಿದೆ ಎಂಬ ಅನಿಸಿಕೆ ವ್ಯಕ್ತಪಡಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ ಪ್ರಾಸ್ತಾವಿಕ ಭಾಷಣ ಮಾಡಿದರು. ಮಾಧ್ಯಮ ಅಕಾಡೆಮಿ ಕಾರ್ಯದರ್ಶಿಗಳಾದ ಸಹನಾ.ಎಂ., ಮೈಸೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಮಮತಾ. ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಎಸ್. ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ತಾಂಡವಗೌಡ ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *