ಶೋಷಣೆ, ದೌರ್ಜನ್ಯ ವಿರುದ್ದ ನಿಲ್ಲುವುದು ಸಾಮಾಜಿಕ ಜವಾಬ್ದಾರಿ : ಎನ್. ಮುನಿರಾಜು

ಚಾಮರಾಜನಗರ: ಸಮಾಜದಲ್ಲಿ ಯಾವುದೇ ಶೋಷಣೆ, ದೌರ್ಜನ್ಯ, ಅನ್ಯಾಯ ಎಸಗುವುದು ಕಂಡು ಬಂದಾಗ ಪ್ರಶ್ನಿಸಿ ನೊಂದವರ ಪರ ನಿಲ್ಲುವುದು ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಎನ್. ಮುನಿರಾಜು ಅವರು ತಿಳಿಸಿದರು. 

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಜನಹಿತಾಸಕ್ತಿ ಹೋರಾಟ ವೇದಿಕೆ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ ಕುರಿತ ವಿಚಾರ ಸಂಕಿರಣ ಹಾಗೂ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. 

ಅನ್ಯಾಯ, ಶೋಷಣೆ ನೋಡಿಕೊಂಡು ಸುಮ್ಮನಿರಬಾರದು. ದೌರ್ಜನ್ಯ, ತಾರತಮ್ಯ ಮಾಡುವುದು ಕಂಡು ಬಂದಲ್ಲಿ ಕೇಳುವುದು ನಾಗರಿಕ ಹಕ್ಕು. ಯಾವುದೇ ಅನ್ಯಾಯವಾದಾಗ ನೋವು ಅನುಭವಿಸಿದವರ ಪರ ನಿಂತು ನೆರವಿಗೆ ಬರಬೇಕು. ಶೋಷಿತರ ರಕ್ಷಣೆಗೆ ಮುಂದಾಗಬೇಕು ಎಂದು ಮುನಿರಾಜು ಅವರು ತಿಳಿಸಿದರು. 

ಸಂವಿಧಾನ ಪ್ರತಿಯೊಬ್ಬರಿಗೂ ಹಕ್ಕುಗಳನ್ನು ನೀಡಿದೆ. ಹಕ್ಕುಗಳ ಉಲ್ಲಂಘನೆಯಾದಾಗ ಪ್ರಶ್ನಿಸಿ ಸಂರಕ್ಷಣೆ ಮಾಡಲು ಕಾಯ್ದೆಗಳಿ ಇವೆ. ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989 ಇದ್ದು ನೊಂದವರ ರಕ್ಷಣೆಗೆ ಇದೆ. ಇಂತಹ ಕಾನೂನುಗಳ ಬಗ್ಗೆ ತಿಳಿವಳಿಕೆ ನೀಡಲು ವಿಚಾರ ಸಂಕಿರಣ ಕಾರ್ಯಗಾರವನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.

ದೂರದೃಷ್ಠಿಯುಳ್ಳವರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ. ಎಲ್ಲ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿರುವ ನಮ್ಮ ಸಂವಿಧಾನ ಉತ್ಜೃಷ್ಠವಾಗಿದೆ. ದೇಶದ ಭವಿಷ್ಟ ವಿದ್ಯಾರ್ಥಿಗಳ ಮೇಲೆ ನಿಂತಿದೆ. ರಾಷ್ಟ್ರದ ಅಭಿವೃದ್ದಿ, ಆರೋಗ್ಯ, ಪ್ರಕೃತಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಬೆಳವಣಿಗೆಗೆ ಯುವ ಜನರು ಕೊಡುಗೆ ನೀಡಬೇಕಿದೆ ಎಂದು ಮುನಿರಾಜು ಅವರು ತಿಳಿಸಿದರು. 

ವಿಚಾರವಾದಿ, ಹಿರಿಯ ಸಾಹಿತಿ ಸೋಮಶೇಖರ ಬಿಸಲವಾಡಿ ಅವರು ಮಾತನಾಡಿ ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿದೆ. ಸಮಾನತೆಯ ಹಕ್ಕು ಪರಿಚ್ಚೇದದ ಅಡಿ ಅಸೃಶ್ಯತಾ ಪ್ರತಿಬಂಧಕ ಕಾಯ್ದೆ, ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಅಧಿನಿಯಮಗಳನ್ನು ತರಲಾಗಿದೆ. ಸಮಾನತೆ ಸ್ವಾತಂತ್ರ ಪ್ರತಿಯೊಬ್ಬರಿಗೂ ಇದೆ. ಮೇಲು ಕೀಳು ಭಾವನೆಯಿಂದ ನೋಡುವುದು ಸಲ್ಲದು. ದಬ್ಬಾಳಿಕೆ ತಾರತಮ್ಯ ಮಾಡುವಂತಿಲ್ಲ ಎಂದರು.

ಸಂವಿಧಾನಾತ್ಮಕ ಹಕ್ಕುಗಳ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಅರಕಲವಾಡಿ ನಾಗೇಂದ್ರ ಅವರು ಮಾತನಾಡಿ ಅಂಕಗಳ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವು ಮುಖ್ಯವಾಗಿದೆ. ಸಂವಿಧಾನಾತ್ಮಕ ಹಕ್ಕು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕಿದೆ. ದೌರ್ಜನ್ಯ ಪ್ರತಿಬಂಧ ಕಾಯ್ದೆಗಳ ಬಗ್ಗೆ ಹೆಚ್ಚು ಅರಿವು ಹೊಂದಿದಾಗ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಲಿದೆ. ವಿದ್ಯೆಯೊಂದಿಗೆ ಪ್ರಜ್ಞಾವಂತರು ಆಗಬೇಕು. ಸಂವಿಧಾನ, ಕಾನೂನುಗಳ ಬಗ್ಗೆ ನಡೆಯುವ ಸಂವಾದ, ವಿಚಾರಣ ಸಂಕಿರಣಗಳಲ್ಲಿ ಹೆಚ್ಚು ಭಾಗವಹಿಸಿ ಜಾಗೃತರಾಗಬೇಕು ಎಂದು ತಿಳಿಸಿದರು.  

ಜನಹಿತಾಸಕ್ತಿ ಹೋರಾಟ ವೇದಿಕೆ ಜಿಲ್ಲಾ ಅಧ್ಯಕ್ಷರಾದ ರಾಮಸಮುದ್ರ ಸುರೇಶ್ ಅವರು ಮಾತನಾಡಿ ತಮ್ಮ ಸಂಸ್ಥೆಯು ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದು ಸರ್ಕಾರದ ಇಲಾಖೆಗಳೊಂದಿಗೆ ಜೊತೆಗೂಡಿ ಅನೇಕ ಕಾರ್ಯಗಾರಗಳನ್ನು ಆಯೋಜಿಸುತ್ತಾ ಬಂದಿದೆ. ಇಂದಿನ ವಿಚಾರ ಸಂಕಿರಣ ಹಾಗೂ ಕಾರ್ಯಗಾರ ನಡೆಸಲು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಅನುವು ಮಾಡಿಕೊಟ್ಟಿದೆ. ಇದಕ್ಕಾಗಿ ಇಲಾಖೆ ಹಾಗೂ ಇತರರಿಗೂ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು. 

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರಾದ ಹೆಚ್.ಜಿ. ಲೋಕೇಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಸಂವಿಧಾನ ಪೀಠಿಕೆ ವಾಚನ ಮಾಡಲಾಯಿತು.

ಕಲಾವಿದರಾದ ಮಹದೇವು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎ. ರಮೇಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *