ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಿಂದ ವರ್ಚುವಲ್ ಮೂಲಕ ಮಕ್ಕಳ ಬೇಡಿಕೆ, ಸಮಸ್ಯೆಗಳ ಆಲಿಕೆ : ತ್ವರಿತ ಕ್ರಮಕ್ಕೆ ಸೂಚನೆ
ಚಾಮರಾಜನಗರ: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹನೂರು ತಾಲೂಕಿನ ಮಣಗಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಮಕ್ಕಳ ವಿಶೇಷ ಗ್ರಾಮಸಭೆ ಮಾದರಿಯಾಗುವ ಮೂಲಕ ಗಮನಸೆಳೆಯಿತು.
ಮಕ್ಕಳ ಹಕ್ಕುಗಳು ಹಾಗೂ ಬೇಡಿಕೆಗೆ ಪೂರಕವಾಗಿ ಮಕ್ಕಳಿಂದಲೇ ಸಮಸ್ಯೆಗಳು ಹಕ್ಕುಗಳನ್ನು ಮಂಡನೆ ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ದೊಡ್ಡಮಟ್ಟದಲ್ಲಿ ಮಣಗಳ್ಳಿಯಲ್ಲಿ ಆಯೋಜನೆಗೊಂಡಿದ್ದ ಮಕ್ಕಳ ವಿಶೇಷ ಗ್ರಾಮಸಭೆಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ವರ್ಚುವಲ್ ಮೂಲಕ ಚಾಲನೆ ನೀಡಿದರು.
ಮೊದಲಿಗೆ ಮಕ್ಕಳೊಂದಿಗೆ ವೀಡಿಯೋ ಸಂವಾದ ನಡೆಸಿದ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಮಕ್ಕಳು ಮಂಡಿಸಿದ ಬೇಡಿಕೆಗಳು, ಸಮಸ್ಯೆಗಳನ್ನು ಆಲಿಸಿದರು.
ಸ್ಥಳೀಯ ಭಾಗದ ತಮ್ಮ ಶಾಲೆಯಲ್ಲಿ ಅಕ್ಷರ ದಾಸೋಹ ಕೊಠಡಿ, ಬೋಜನಾಲಯ ನಿರ್ಮಾಣ, ಆಟದ ಮೈದಾನ, ಕ್ರೀಡಾ ಸಾಮಗ್ರಿ ಕಿಟ್, ಶೌಚಾಲಯ, ಕುಡಿಯುವ ನೀರು, ಶಾಲೆಯ ಮುಂದೆ ಚರಂಡಿ ನೀರು ಹರಿಯದಿರುವುದು, ಗ್ರಾಮದ ರಸ್ತೆಗಳನ್ನು ಸುಸಜ್ಜಿತಗೊಳಿಸುವುದು, ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಮಕ್ಕಳು ಸಚಿವರ ಗಮನಕ್ಕೆ ತಂದರು.
ಶಾಲಾ ಮಕ್ಕಳೊಂದಿಗೆ ಮಾತನಾಡಿದ ಸಚಿವರು ಮುಂದೆ ಏನಾಗಬೇಕೆಂದು ಬಯಸಿದ್ದೀರಿ? ಕಲಿಕೆಗೆ ಇನ್ನೂ ಯಾವ ಸೌಲಭ್ಯಗಳು ನಿಮಗೆ ಅಗತ್ಯವಿದೆ ಎಂದು ಪ್ರಶ್ನಿಸಿದರು. ವೈದ್ಯರು, ಜಿಲ್ಲಾಧಿಕಾರಿ, ಐಎಎಸ್ ನಂತಹ ಹುದ್ದೆಗಳನ್ನು ಅಲಂಕರಿಸುವ ಅಭಿಲಾಷೆ ವ್ಯಕ್ತಪಡಿಸಿದ ವಿದ್ಯಾರ್ಥಿಗಳಿಗೆ ಈಗಿನಿಂದಲೇ ಚೆನ್ನಾಗಿ ಓದಬೇಕು. ಜಿಲ್ಲೆಯಲ್ಲಿರುವ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್ಲರು ಮಹಿಳೆಯರೇ ಆಗಿದ್ದಾರೆ. ನಿಮಗೆ ಇವರೇ ಸ್ಪೂರ್ತಿಯಾಗಿದ್ದಾರೆ ಎಂದರು. ಹಿರಿಯ ಅಧಿಕಾರಿಗಳ ಜೊತೆ ವಿದ್ಯಾರ್ಥಿಗಳನ್ನು ಮಾತನಾಡಿಸಿ ಹುರಿದುಂಬಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಪಂಚಾಯತ್ ರಾಜ್ ಇಲಾಖೆ ಮುಖಾಂತರ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏರ್ಪಾಡಾಗಿರುವ ಮಕ್ಕಳ ವಿಶೇಷ ಗ್ರಾಮಸಭೆ ಮಾದರಿಯಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಪಾರದರ್ಶಕತೆ ಹಾಗೂ ಜನಸ್ನೇಹಿ ಆಡಳಿತವನ್ನು ನೀಡುವ ಉದ್ದೇಶ ಕಾರ್ಯಕ್ರಮದ್ದಾಗಿದೆ ಎಂದರು.
ಇಂದಿನ ಸಭೆಯಲ್ಲಿ ಮಕ್ಕಳು ಪ್ರಸ್ತಾಪಿಸಿರುವ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಕೂಡಲೇ ಕ್ರಮ ವಹಿಸಬೇಕು. ಕುಡಿಯುವ ನೀರು, ರಸ್ತೆಯಂತಹ ಮೂಲ ಸೌಲಭ್ಯಗಳನ್ನು ಒದಗಿಸುವ ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ರಸ್ತೆ, ಅಕ್ಷರ ದಾಸೋಹಕ್ಕೆ ಪ್ರತ್ಯೇಕ ಕೊಠಡಿ, ಭೋಜನಾಲಯಕ್ಕೆ ತಕ್ಷಣವೇ ಪ್ರಸ್ತಾವನೆ ಸಲ್ಲಿಸಬೇಕು. ಮಕ್ಕಳು ಮುಂದಿಟ್ಟಿರುವ ಕ್ರೀಡಾ ಸಾಮಾಗ್ರಿ ಇನ್ನಿತರ ಸೌಕರ್ಯಗಳಿಗೆ ಸಿಎಸ್‍ಆರ್ ನೆರವಿನಡಿ ಅಗತ್ಯ ಕ್ರಮವಹಿಸಿ ಒದಗಿಸುತ್ತೇನೆ ಎಂದು ಸಚಿವರು ತಿಳಿಸಿದರು.
ಮಕ್ಕಳಿಗೆ ಕಲಿಕೆಯ ಹಸಿವಿದೆ. ಉನ್ನತ ಹುದ್ದೆಗಳ ಬಗ್ಗೆ ಆಕಾಂಕ್ಷೆ ಹೊಂದಿದ್ದು, ಅವರಿಗೆ ಈಗಿನಿಂದಲೇ ಉತ್ತೇಜನ ನೀಡಬೇಕು. ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಪುಸ್ತಕಗಳನ್ನು ಇಡಲು ಅಗತ್ಯವಿರುವ ಪುಸ್ತಕಗಳ ಪಟ್ಟಿ ಮಾಡಿ ಕಳುಹಿಸಿಕೊಡಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳಿಗೆ ನೆರವು ನೀಡಲಾಗುವುದು. ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದ ಅಶಯ, ನಾಗÀರಿಕರ ಹಕ್ಕು, ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ ಎಂದು ಸಚಿವರಾದ ಪ್ರಿಯಾಂಕ ಖರ್ಗೆ ಅವರು ತಿಳಿಸಿದರು.
ಸ್ಥಳೀಯವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದ ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಮಾಹಿತಿ ತಂತ್ರಜ್ಞಾನದಲ್ಲಿ ಮುಂದಿರುವ ನಮ್ಮ ರಾಜ್ಯವು ಹೊರ ಭಾಗದವರಿಗು ಸೇವೆ ನೀಡುವಷ್ಟು ಸಮರ್ಥವಾಗಿದೆ. ಇಂದಿನ ಮಕ್ಕಳ ವಿಶೇಷ ಗ್ರಾಮಸಭೆಯನ್ನು ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ಮಕ್ಕಳಿಂದಲೇ ಅವರ ಹಕ್ಕುಗಳು, ಬೇಡಿಕೆಗಳ ಬಗ್ಗೆ ತಿಳಿದು ಪರಿಹರಿಸುವ ಇಂತಹ ಕಾರ್ಯಕ್ರಮಗಳು ಪಾರದರ್ಶಕತೆ, ಉತ್ತರದಾಯಿತ್ವ ಗ್ರಾಮೀಣ ಅಭಿವೃದ್ದಿಗೆ ನೆರವಾಗಲಿವೆ ಎಂದರು.
ಯಳಂದೂರಿನ ಕೆಸ್ತೂರು ಗ್ರಾಮ ಪಂಚಾಯಿತಿಯ ಮಕ್ಕಳ ವಿಶೇಷ ಸಭೆಯಲ್ಲಿ ಪಾಲ್ಗೊಂಡು ವರ್ಚುವಲ್ ಮೂಲಕ ಸಚಿವರೊಂದಿಗೆ ಮಾತನಾಡಿದ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಮಕ್ಕಳು ತಮ್ಮ ಹಕ್ಕುಗಳು ಹಾಗೂ ಆಗಬೇಕಿರುವ ಸೌಲಭ್ಯಗಳ ಬಗ್ಗೆ ಮುಕ್ತವಾಗಿ ಸಭೆಯಲ್ಲಿ ಗಮನಸೆಳೆದಿದ್ದಾರೆ. ಇಂತಹ ಮಕ್ಕಳ ವಿಶೇಷ ಗ್ರಾಮಸಭೆ ಆಯೋಜನೆ ಮಾಡಿರುವುದು ಬರೀ ರಾಜ್ಯವಲ್ಲ ಇಡೀ ದೇಶಕ್ಕೆ ಮಾದರಿಯಾಗಿದೆ. ಇದಕ್ಕಾಗಿ ಅಭಿನಂದಿಸುತ್ತೇನೆ. ಮಕ್ಕಳ ಗ್ರಾಮಸಭೆಯಲ್ಲಿ ವ್ಯಕ್ತವಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಅನುಸರಣಾ ಕ್ರಮ ಆಗಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶೃತಿ ಅವರು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಪಂಚಾಯತ್ ರಾಜ್ ಇಲಾಖೆಯ ರಾಜ್ಯಮಟ್ಟದ ಉನ್ನತ ಅಧಿಕಾರಿಗಳು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.
ಮಣಗಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಚಿಕ್ಕವೆಂಕಟಮ್ಮ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷರಾದ ರಾಚಯ್ಯ, ಚಾಮುಲ್ ನಿರ್ದೇಶಕರಾದ ಮಹದೇವಪ್ರಸಾದ್, ಪ್ರೌಢಶಾಲೆಯ ಸ್ಥಳದ ದಾನಿಗಳಾದ ರಾಜು, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಚಂದ್ರ ಪಾಟೀಲ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದು ಜಿಲ್ಲೆಯ 9 ಗ್ರಾಮಗಳಲ್ಲಿ ಮಕ್ಕಳ ವಿಶೇಷ ಗ್ರಮಸಭೆ ನಡೆದಿದ್ದು, ಆಯಾ ಗ್ರಾಮ ಪಂಚಾಯಿತಿ ಯೂಟ್ಯೂಬ್ ಚಾನಲ್ ಗಳಲ್ಲಿ ನೇರ ಪ್ರಸರವಾಯಿತು