ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ತೆರಿಗೆ ವಸೂಲಾತಿ ಅಭಿಯಾನ : ಹೆಚ್ಚಿನ ಪ್ರಗತಿ ಸಾಧಿಸಲು ಜಿ.ಪಂ. ಸಿ.ಇ.ಒ ಮೋನಾ ರೋತ್ ಸೂಚನೆ

ಚಾಮರಾಜನಗರ: ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿ ಬುಧವಾರ ಹಾಗೂ ಶುಕ್ರವಾರಗಳಂದು ವಿಶೇಷ ತೆರಿಗೆ ವಸೂಲಾತಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಆಯೋಜಿಸಲಾಗಿದ್ದು, ಪ್ರತಿದಿನ ಅಭಿಯಾನದ ಮೂಲಕ ತೆರಿಗೆ ವಸೂಲಿ ಮಾಡಿ ಹೆಚ್ಚಿನ ಪ್ರಮಾಣದಲ್ಲ್ಲಿ ಪ್ರಗತಿ ಸಾಧಿಸಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಸೂಚಿಸಿದರು.

   ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ 30 ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳೊಂದಿಗೆ ತೆರಿಗೆ ವಸೂಲಾತಿ ಸಂಬಂಧ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

   ಜಿಲ್ಲೆಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಸಾರ್ವಜನಿಕರು ಕುಡಿಯುವ ನೀರು, ಅಂಗಡಿ ಮಳಿಗೆ, ವಿದ್ಯುಚ್ಛಕ್ತಿ, ವಸತಿ ಹಾಗೂ ಸರ್ಕಾರಿ-ಸಾರ್ವಜನಿಕ ಆಸ್ತಿಗಳಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿಸಬೇಕಾಗಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿರುವ ಸರ್ಕಾರಿ ಆಸ್ತಿಗಳಿಗೆ ಅನುಗುಣವಾಗಿ ತೆರಿಗೆ ವಸೂಲಾತಿ ಮಾಡಬೇಕು ಎಂದರು.

  ತೆರಿಗೆ ವಸೂಲಾತಿ ಅಭಿಯಾನದ ಮೂಲಕ ಪ್ರತಿನಿತ್ಯದ ಆನ್‍ಲೈನ್ ಪ್ರಗತಿಯನ್ನು ಪರಿಶೀಲನೆ ಮಾಡಲಾಗಿದ್ದು, ತೆರಿಗೆ ವಸೂಲಾತಿಗೆ ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡರೂ ಸಹ ಕೆಲ ಗ್ರಾಮ ಪಂಚಾಯಿತಿಗಳು ನಿಗದಿತ ಗುರಿ ಸಾಧಿಸದೇ ತೆರಿಗೆ ವಸೂಲಾತಿಯಲ್ಲಿ ಹಿನ್ನಡೆ ಅನುಭವಿಸಿವೆ. ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಗ್ರಾಮ ಪಂಚಾಯಿತಿವಾರು ನಿಗದಿಪಡಿಸಲಾಗಿರುವ ಬೇಡಿಕೆಗನುಗುಣವಾಗಿ ಶೇ.100ರಷ್ಟು ತೆರಿಗೆ ವಸೂಲಾತಿ ಮಾಡಬೇಕು. ಈ ಸಂಬಂಧ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡಂತೆ ಪ್ರತಿ ಬುಧವಾರ ಹಾಗೂ ಶುಕ್ರವಾರಗಳಂದು ವಿಶೇಷ ತೆರಿಗೆ ವಸೂಲಾತಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು. 

   ತೆರಿಗೆ ವಸೂಲಾತಿಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿದಲ್ಲಿ ಮಾತ್ರ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ವೇತನವನ್ನು ಪಾವತಿಸಲು ಅವಕಾಶವಿದ್ದು, ಹಾಗೂ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿಗಳಿಗೆ ವರ್ಷಾನುಗಟ್ಟಲೆ, ತಿಂಗಳುಗಳ ಕಾಲ ವೇತನ ಪಾವತಿ ಬಾಕಿ ಇರುವುದರಿಂದ ಇಂತಿಷ್ಟು ಮೊತ್ತದ ತೆರಿಗೆ ವಸೂಲಾತಿಯನ್ನು ಕಡ್ಡಾಯವಾಗಿ ವಸೂಲಿ ಮಾಡುವ ಮೂಲಕ ಯಾವುದೇ ಗ್ರಾಮ ಪಂಚಾಯಿತಿ ಸಿಬ್ಬಂದಿಯ ವೇತನವು ಬಾಕಿ ಉಳಿಯದಂತೆ ಕ್ರಮವಹಿಸುವ ಸಲುವಾಗಿ ತೆರಿಗೆ ವಸೂಲಾತಿ ಮಾಡಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. 

   ಇದೇ ವೇಳೆ ಉದ್ಯೋಗ ಖಾತರಿ ಯೋಜನೆ, ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಪರಿಶೀಲಿಸಲಾಯಿತು. ಉದ್ಯೋಗ ಖಾತರಿ ಯೋಜನೆ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಗಳಡಿ ಹಣಪಾವತಿಗೆ ಸಂಬಂಧಿಸಿದಂತೆ ಡ್ಯಾಂಗಲ್ ಬಗೆಗಿನ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಬೇಕು.  ಅನುದಾನ ವ್ಯಪಗತವಾಗದಂತೆ ಕಾಲಕಾಲಕ್ಕೆ ಹಣಪಾವತಿಗೆ ಅಗತ್ಯ ಕ್ರಮ ವಹಿಸಬೇಕು. ಏನಾದರೂ ಸಮಸ್ಯೆಗಳಿದ್ದಲ್ಲಿ ಸಂಬಂಧಿಸಿದ ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಜಿಲ್ಲಾ ಪಂಚಾಯಿತಿಯ ಗಮನಕ್ಕೆ ತರುವಂತೆ ಜಿ.ಪಂ. ಸಿಇಒ ಅವರು ಸೂಚಿಸಿದರು. 
    ಹನೂರು ತಾಲೂಕು ವ್ಯಾಪ್ತಿಯ ಕೌದಳ್ಳಿ, ಶೆಟ್ಟಳ್ಳಿ, ಮಾರ್ಟಳ್ಳಿ, ಕುರಟ್ಟಿ ಹೊಸೂರು, ಎಲ್ಲೇಮಾಳ, ಅಜ್ಜೀಪುರ ಹಾಗೂ ಯಳಂದೂರು ತಾಲೂಕಿನ ಮದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ತುರ್ತು ಕ್ರಮವಹಿಸಬೇಕು. ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಾಸಗಳು ಉಂಟಾದಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರಿನ ಸರಬರಾಜನ್ನು ಪೂರೈಸಲು ಪರ್ಯಾಯ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತಿಳಿಸಿದರು. 

   ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರಿಕಂಠರಾಜೇ ಅರಸ್, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *