ಕ್ರೀಡೆ ಮಕ್ಕಳಿಗೆ ಒಂದು ಶಕ್ತಿಯುತವಾದ ಆಯಾಮ

ಜಿಲ್ಲಾ ನೆಟ್‍ಬಾಲ್ ಅಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಹೇಳಿಕೆ


ಚಾಮರಾಜನಗರ: ಕ್ರೀಡೆ ಎಂಬುದು ಮಕ್ಕಳಿಗೆ ಒಂದು ಶಕ್ತಿಯುತವಾದ ಆಯಾಮವಾಗಿದೆ. ಮಕ್ಕಳ ಪ್ರತಿಭೆಗಳನ್ನು ಹೊರತರಲು ಇಂತಹ ಅಸೋಸಿಯೇಷನ್‍ಗಳು ಬಹಳಷ್ಟು ಸಹಕಾರಿಯಾಗಲಿದೆ ಎಂದು ಚಾಮರಾಜನಗರ ಜಿಲ್ಲಾ ನೆಟ್‍ಬಾಲ್ ಅಸೋಸಿಯೇಷನ್ ಅಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.


ರೆಹ್ಬರ್ ಅಸೋಸಿಯೇಶನ್ ಹಾಗೂ ಚಾಲೆಂಜರ್ಸ್ ಸ್ಕೇಟ್ ಅಕಾಡೆಮಿ ವತಿಯಿಂದ ಪ್ರಪ್ರಥಮ ಬಾರಿಗೆ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಆಯೋಜಿಸಲಾಗಿದ್ದ ಸೈಕ್ಲಿಂಗ್ ಮ್ಯಾರಥಾನ್‍ಗೆ ಚಾಲನೆ ನೀಡಿ ಮಾತನಾಡಿದರು.


ಇತ್ತೀಚಿನ ದಿನಗಳಲಿ ಮಕ್ಕಳು ಅತಿ ಹೆಚ್ಚು ಮೊಬೈಲ್ ವ್ಯಸನಿಗಳಾಗುತ್ತಿದ್ದಾರೆ. ಇದು ಅವರ ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ಹೆಚ್ಚು ಪರಿಣಾಮ ಬೀರುತ್ತಿದೆ. ಪೋಷಕರು ತಮ್ಮ ಮಕ್ಕಳು ಮೊಬೈಲ್ ಬಳಕೆ ಮಾಡದಂತೆ ಎಚ್ಚರಿಕೆ ವಹಿಸುವುದು. ಜೊತೆಗೆ ದುಶ್ಚಟಗಳಿಗೆ ಬಲಿಯಾಗದಂತೆ ಕೂಡಾ ನೋಡಿಕೊಳ್ಳುವುದು ಬಹಳ ಮುಖ್ಯ ಎಂದು ತಿಳಿಸಿದರು.

ನಾನು ಕೂಡಾ ಕ್ರೀಡಾಪಟುವಾಗಿದ್ದು, ನಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿ ಕ್ರೀಡೆಗಳು ಇಷ್ಟೊಂದು ಬೆಳವಣಿಗೆ ಇರಲಿಲ್ಲ. ಇತ್ತೀಚೆಗೆ ಕ್ರೀಡೆಗೆ ಉತ್ತಮವಾದ ಅವಕಾಶಗಳು ದೊರಕುತ್ತಿದೆ. ಮಕ್ಕಳು ಇದನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಮ್ಮ ಬಾಲ್ಯದ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು.

ಮಕ್ಕಳಿಗಾಗಿ ಇಂತಹ ಕಾರ್ಯಕ್ರಮಗಳನ್ನು ಆಯೊಜಿಸುತ್ತಿರುವ ರೆಹ್ಬರ್ ಅಸೋಸಿಯೇಷನ್ ಹಾಗೂ ಚಾಲೆಂಜರ್ಸ್ ಅಕಾಡೆಮಿಯು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಇವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ (ಮುನ್ನ) ಅವರು ಮಾತನಾಡಿ, ವಯಸ್ಸಿನ ಮಿತಿ ಇಲ್ಲದೆ ಸೈಕ್ಲಿಂಗ್ ಮ್ಯಾರಾಥಾನ್‍ಗೆ ಸಣ್ಣ ಮಕ್ಕಳಿಂದ ದೊಡ್ಡವರೂ ಕೂಡಾ ಭಾಗವಹಿಸಿರುವುದು ಸಂತೋಷದ ವಿಚಾರ ಎಂದರು.

ಮಕ್ಕಳು ಕ್ರೀಡೆಯಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಬೇಕು. ಇದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದರು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಸೈಕ್ಲಿಂಗ್ ಮ್ಯಾರಥಾನ್ ಪ್ರಾರಂಭವಾಗಿ, ನಗರದ ಜೋಡಿರಸ್ತೆ ಮೂಲಕ ಡಿವೈಎಸ್ಪಿ ಕಚೇರಿ ಬಳಿ ತಿರುವಿ, ಪಚ್ಚಪ್ಪ ವೃತ್ತ, ಕೆಎಸ್‍ಆರ್ಟಿಸಿ ಬಸ್ ನಿಲ್ದಾಣದ ಮೂಲಕ, ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಮೂಲಕ ಸಾಗಿ ಎಲ್‍ಐಸಿ ಕಚೇರಿ ಮುಂಭಾಗದಿಂದ ಡಿವಿಯೇಷನ್ ರಸ್ತೆಯವರೆಗೆ ಸುಮಾರು 5 ಕಿ.ಮೀ. ವರೆಗೆ ಆಯೋಜಿಸಲಾಗಿತ್ತು.

ಈ ಮ್ಯಾರಥಾನ್‍ನಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರಿಗೂ ಮೆಡಲ್ ಹಾಗೂ ಸರ್ಟಿಫಿಕೇಟ್‍ಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಅಸೋಸಿಯೇಷನ್‍ನ ಕಾರ್ಯದರ್ಶಿ ಫುರ್ಖಾನ್ ಪಾಷಾ, ವಾಲೆಂಟಿಯರ್ಸ್‍ಗಳಾದ ಇರ್ಷಾದ್ ಪಾಷಾ, ಸಿದ್ದಿಕ್, ಹರ್ಷಿಲ್, ಅಬೂಜರ್, ನದೀಂ, ಇದ್ರೀಸ್, ನಬೀಲ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *