- ಹಿಮಾಲಯ ಪ್ರತಿಷ್ಠಾನದಿಂದ ಆಯೋಜನೆ
- ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಶ್ರೀವತ್ಸ ಇತರರು ಭಾಗಿ
ಮೈಸೂರು : ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಹಿಮಾಲಯ ಪ್ರತಿಷ್ಠಾನ ವತಿಯಿಂದ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಹಿತ್ಯ ಕ್ಷೇತ್ರದಿಂದ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಡಾ.ಪ್ರದೀಪ್‌ಕುಮಾರ್ ಹೆಬ್ರಿ, ಡಾ.ಜಯಪ್ಪ ಹೊನ್ನಾಳಿ, ಮಾಧ್ಯಮ ಕ್ಷೇತ್ರದಿಂದ ಎಂ.ಆರ್. ಸತ್ಯನಾರಾಯಣ, ಸಮಾಜ ಸೇವೆ ಕ್ಷೇತ್ರದಿಂದ ಎಸ್.ಬಸವಣ್ಣ, ಡಾ.ಈ.ಸಿ.ನಿಂಗರಾಜ್ ಗೌಡ,
ಶಿಕ್ಷಣ ಕ್ಷೇತ್ರದಿಂದ ಎಸ್. ಮುರಳಿ, ಎಚ್.ಎಸ್. ಭವಾನಿ, ದೇವರಾಜ್ ಪಿ.ಚಿಕ್ಕಹಳ್ಳಿ, ವೈದ್ಯಕೀಯ ಕ್ಷೇತ್ರದಿಂದ ಡಾ.ಅನೀಲ್ ದೀಕ್ಷಿತ್, ರಂಗಭೂಮಿ ಕ್ಷೇತ್ರದಿಂದ ಕೆರೆಹಳ್ಳಿ ದೊರೆಸ್ವಾಮಿ, ಸಂಗೀತ ಕ್ಷೇತ್ರದಿಂದ ಶುಭಾ ರಾಘವೇಂದ್ರ, ಧಾರ್ಮಿಕ ಕ್ಷೇತ್ರದಿಂದ ಎಸ್.ಅಭಿಲಾಶ್ ದೀಕ್ಷಿತ್ ಅವರಿಗೆ ಸ್ಮರಣಿಕೆ ನೀಡಿ ಗಣ್ಯರು ಗೌರವ ಸಮರ್ಪಿಸಿದರು.
ಕಾರ್ಯಕ್ರಮ ಸಾನಿಧ್ಯ ವಹಿಸಿದ್ದ ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿಗಳು ಮಾತನಾಡಿ, ಆಚಾರ್ಯ ಶ್ರೀ ವಿದ್ಯಾರಣ್ಯ, ಕನ್ನಡ ನಾಡಿಗೆ ಅಪಾರ ಕೊಡಿಗೆ ನೀಡಿದರು. ಅದರ ಫಲವಾಗಿಯೇ ಸಂಸ್ಕೃತಿ, ಆಚಾರ, ವಿಚಾರಗಳ ನೆಲೆಗಟ್ಟಿನಲ್ಲಿ ನಾಡನ್ನು ಕಟ್ಟಲು ಪ್ರೇರಣೆ ನೀಡಿದರು. ಪರಿಣಾಮ ಶ್ರೀಗಳ ಶ್ರಮದಿಂದ ಕನ್ನಡ ಭಾಷೆ ಎಲ್ಲಡೆ ಪಸರಿಸಿತು ಎಂದು ನುಡಿದರು.
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಶಿಕ್ಷಣದ ಹಿಂದ ಓಡುತ್ತಿದ್ದೇವೆ. ಶಾಲೆಗಳಲ್ಲೂ ಕೂಡ ಪಾಠ ಪೂರ್ಣಗೊಳಿಸುವ ಕಡೆಗೆ ತಮ್ಮ ಗಮನ ಕೇಂದ್ರಿಕರಿಸಲಾಗುತ್ತಿದೆ. ಅದರ ಹೊರತು ಸಂಸ್ಕಾರ ಕಲಿಸಲು ಮುಂದಾಗುತ್ತಿಲ್ಲ. ಈ ನೆಲದಲ್ಲಿ ಆಧ್ಯಾತ್ಮ ಹಾಗೂ ಸಂಸ್ಕಾರ ಆಸುಹೊಕ್ಕಾಗಿದೆ. ಪಾಶ್ಚಿಮಾತ್ಯರೇ ನಮ್ಮ ಸಂಸ್ಕೃತಿಗೆ ಮಾರುಹೋಗುತ್ತಿರುವಾಗ ನಾವು ಪಾಶ್ಚಿಮಾತ್ಯರ ಜೀವನ ಶೈಲಿ ಅನುಸರಿಸುತ್ತಿದೇವೆ. ಈ ನಿಟ್ಟಿನಲ್ಲಿ ಪಾಲಕರು ಎಚ್ಚೆತ್ತುಕೊಳ್ಳಬೇಕು. ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಆ ಮೂಲಕ ಸಮಾಜಕ್ಕೆ ಪ್ರೇರಣ ದಾಯಕ ಸಾಧಕರನ್ನು ಕೊಡುಗೆಯನ್ನಾಗಿ ನೀಡಬೇಕು ಎಂದು ಸಲಹೆ ನೀಡಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಸಂಸ್ಕೃತಿಯಿಂದ ಮನುಷ್ಯನ ಜೀವನದಲ್ಲಿ ಸಂಸ್ಕಾರ ಮೂಡುತ್ತದೆ. ಆ ಮೂಲಕ ಆತನ ಬದುಕು ಸಮಾಜಮುಖಿಯಾಗಿರುತ್ತದೆ. ಇಂತಹದೊಂದು ವಾತಾವರಣ ಸೃಷ್ಟಿಸುವ ಮೂಲಕ ಸಂಸ್ಕೃತಿ ವಿಸ್ತರಿಸುವ ಅಭಿಮಾನದ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಪದ್ಮಾಶೇಖರ್ ಮಾತನಾಡಿ, ಸಮಾಜದ ವಿವಿಧ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಸೇವೆ ಮತ್ತಷ್ಟು ಹೆಚ್ಚಾಗುವಂತೆ ಮಾಡುವ ಕಾರ್ಯ ಶ್ಲಾಘನೀಯ. ಸಾಹಿತ್ಯ, ಸಂಸ್ಕೃತಿ, ಪ್ರಾಚೀನ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಹಿಮಾಲಯ ಪ್ರತಿಷ್ಠಾನ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ ಎಂದು ಬಣ್ಣಿಸಿದರು.
ಎಡಿಸಿ ಡಾ.ಶಿವರಾಜ್ ಮಾತನಾಡಿ, ಆಚಾರ್ಯ ಶ್ರೀ ವಿದ್ಯಾರಣ್ಯರಿಗೂ ಕನ್ನಡ ರಾಜ್ಯೋತ್ಸವಕ್ಕೂ ಅವಿನಾಭಾವ ಸಂಬಂಧ ಇದೆ. ಕನ್ನಡ ಇತಿಹಾಸದ ಪುಟದಲ್ಲಿ ಶ್ರೀ ವಿದ್ಯಾರಣ್ಯರ ಹೆಸರು ಅಗ್ರಗಣ್ಯ. ನಾಡಿಗೆ ಅವರ ಕೊಟ್ಟ ಕೊಡುಗೆ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಕೊಡುಗೆ ನೀಡಬೇಕು ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಹಿಮಾಲಯ ಪ್ರತಿಷ್ಠಾನ ದರ್ಶನಂ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು. ಸಮಾಜ ಸೇವಕ ಎನ್. ಶ್ರೀಧರ ದೀಕ್ಷಿತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಹಿಮಾಲಯ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಎನ್.ಅನಂತ, ಉಪಾಧ್ಯಕ್ಷರಾದ ಎಸ್. ನಾಗಮಲ್ಲು, ಎಸ್. ಕೃಷ್ಣಮೂರ್ತಿ, ಸಂಚಾಲಕ ಎಂ.ವಿ.ನಾಗೇಂದ್ರ ಬಾಬು, ಕಾರ್ಯದರ್ಶಿ ಎ. ಹರ್ಷವರ್ಧನ, ಸಲಹೆಗಾರರಾದ ಕೆ.ವಿ.ರಾಮನಾಥ್, ರವೀಂದ್ರರಾವ್, ಬಿ. ಪ್ರಶಾಂತ್ ಇತರರು ಇದ್ದರು.
ಚಿತ್ರ : ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಹಿಮಾಲಯ ಪ್ರತಿಷ್ಠಾನ ವತಿಯಿಂದ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಟಿ.ಎಸ್.ಶ್ರೀವತ್ಸ, ಡಾ.ಪದ್ಮಾಶೇಖರ್, ಡಾ.ಶಿವರಾಜ್, ಎನ್. ಶ್ರೀಧರ ದೀಕ್ಷಿತ್, ಮಡ್ಡೀಕೆರೆ ಗೋಪಾಲ್, ಎನ್.ಅನಂತ ಇತರರು ಇದ್ದಾರೆ.