ಚಾಮರಾಜನಗರ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.86.37ರಷ್ಟಿರುವ ಜಿಲ್ಲೆಯ ಫಲಿತಾಂಶವನ್ನು ಈ ಬಾರಿ ಶೇ. 95ಕ್ಕಿಂತ ಹೆಚ್ಚಿನ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಸೂಚಿಸಿದರು.
ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಉತ್ತಮ ಪಡಿಸುವ ಸಂಬಂಧ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸರಳ ಪ್ರಶ್ನೆಗಳಿಗೆ ಕಡ್ಡಾಯವಾಗಿ ಉತ್ತರಿಸಲು ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಬೇಕು. ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆ-3ರಲ್ಲಿ ಚಾಮರಾಜನಗರ ತಾಲ್ಲೂಕಿನ ಫಲಿತಾಂಶವು ಉಳಿದ ತಾಲ್ಲೂಕುಗಳಿಗಿಂತ ಕಡಿಮೆ ಇದ್ದು, ಮುಖ್ಯ ಪರೀಕ್ಷೆವರೆಗಿನ ಉಳಿದ ದಿನಗಳಲ್ಲಿ ಫಲಿತಾಂಶವನ್ನು ಉತ್ತಮ ಪಡಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದರು.
ಪರೀಕ್ಷಾ ಸಮಯದಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬಗಳ ಆಚರಣೆ ಇರುವುದರಿಂದ ವಿದ್ಯಾರ್ಥಿಗಳಿಗೆ ಈ ಹಬ್ಬಗಳ ಬಗ್ಗೆ ಮಹತ್ವ ನೀಡದೇ ಪರೀಕ್ಷೆಯ ಗಂಭೀರತೆಯ ಬಗ್ಗೆ ತಿಳಿ ಹೇಳಬೇಕು. ಉತ್ತಮ ಫಲಿತಾಂಶ ಪಡೆಯಲು ಸೂಕ್ತ ಸಲಹೆಗಳನ್ನು ನೀಡಬೇಕು. ಇದಕ್ಕೆ ಪೂರಕವಾಗಿ ಹಬ್ಬದ ದಿನಗಳಂದು ಶಾಲೆ ನಡೆಸಲು ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಮುಂದಾಗಬೇಕು ಎಂದು ನಿರ್ದೇಶನ ನೀಡಿದರು.
ಪರೀಕ್ಷೆಯು ಮಾರ್ಚ್ 18 ರಿಂದ ಏಪ್ರಿಲ್ 2ರವರೆಗೆ ನಡೆಯಲಿದ್ದು, ಪರೀಕ್ಷಾ ವಿಷಯಗಳ ನಡುವೆ ವಿದ್ಯಾರ್ಥಿಗಳು ಅಭ್ಯಾಸ ಮಾಡಲು ಅನುಕೂಲವಾಗುವಂತೆ ಬಿಡುವಿನ ದಿನಗಳಂದು ಕಡ್ಡಾಯವಾಗಿ ಶಾಲೆ ನಡೆಸಿ ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆಗಳನ್ನು ನೀಡಬೇಕು. ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಹಬ್ಬದ ದಿನಗಳಂದು ಮತ್ತು ಪರೀಕ್ಷಾ ವಿಷಯಗಳ ನಡುವೆ ಇರುವ ಬಿಡುವಿನ ದಿನಗಳಂದು ಮನೆಗೆ ಕಳುಹಿಸಬಾರದು. ವಿದ್ಯಾರ್ಥಿನಿಲಯಗಳಲ್ಲಿಯೇ ಅಭ್ಯಾಸ ನಡೆಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸಿಇಒ ಅವರು ತಿಳಿಸಿದರು.
ಪರೀಕ್ಷಾ ಸಮಯದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದಂತೆ ಈಗಾಗಲೇ ಸಾಧಿಸಿರುವ ಕಲಿಕಾ ಪ್ರಗತಿಯನ್ನು ಖಾತ್ರಿ ಪಡಿಸಿಕೊಂಡು ಪುನರಾವರ್ತನೆ ಮತ್ತು ಪುನರ್ ಅಭ್ಯಾಸ ಮಾಡಲು ಸಲಹೆ ನೀಡಬೇಕು. ಪೆÇೀಷಕರು ವಿದ್ಯಾರ್ಥಿಗಳ ಅಧ್ಯಯನಕ್ಕೆ ಮನೆಯಲ್ಲಿ ಸೂಕ್ತ ವಾತಾವರಣ, ಅವಕಾಶ ಒದಗಿಸಬೇಕು. ಕಲಿಕೆಗೆ ಸೂಕ್ತವಾದ ಪ್ರೇರಣೆ, ಪೆÇ್ರೀತ್ಸಾಹ ನೀಡಬೇಕು. ಇತರೆ ವಿದ್ಯಾರ್ಥಿಗಳೊಡನೆ ಹೋಲಿಕೆ ಮಾಡಿ ಯಾವುದೇ ರೀತಿಯ ಒತ್ತಡ ಹೇರದಂತೆ ವಿದ್ಯಾರ್ಥಿಗಳ ಪೆÇೀಷಕರಿಗೆ ತಿಳಿ ಹೇಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರಪಾಟಿಲ್, ಡಯಟ್ ಪ್ರಾಂಶುಪಾಲರಾದ ಕಾಶಿನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಶಿಕ್ಷಣ ಇಲಾಖೆಯ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.