- ಜಿಲ್ಲಾ ಬಿಜೆಪಿ ಎಸ್‌ಟಿ ಮೋರ್ಚಾದ ವಿಶೇಷ ಕಾರಕಾರಿಣಿ ಸಭೆ
- ಇಡೀ ವಿಶ್ವದಲ್ಲೇ ಬಿಜೆಪಿ ದೊಡ್ಡಪಕ್ಷ
ಚಾಮರಾಜನಗರ : ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ದಿವಾಳಿ ಮಾಡಿದೆ ಎಂದು ಎಸ್‌ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದರ್ ಹೇಳಿದರು.
ನಗರದ ರಾಮಸಮುದ್ರ ಕುಲಮೆ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಎಸ್‌ಟಿ ಮೋರ್ಚಾದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರದ ದುರಾಡಳಿತ ವಿರುದ್ಧ ರಾಜ್ಯದ ಜನತೆ ಈಗಾಗಲೇ ಬೇಸತ್ತು ಹೋಗಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರ ತೊಲಗಲಿ ಎನ್ನುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳು, ರಾಜ್ಯ ಸರ್ಕಾರದ ದುರಾಡಳಿತ ವಿರುದ್ಧ ಜಾಗೃತಿ ಮೂಡಿಸಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ನಾವೆಲ್ಲರೂ ಶ್ರಮಿಸೋಣ ಎಂದರು.
ಬಿಜೆಪಿ ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಪಕ್ಷವಾಗಿದ್ದು 13 ಸಾವಿರ ಕೋಟಿ ಸದಸ್ಯತ್ವ ಹೊಂದಿರುವ ಏಕೈಕ ಪಕ್ಷವಾಗಿದೆ ಈ ಪಕ್ಷದಲ್ಲಿ ಜವಾಬ್ದಾರಿ ಹೊಂದಿದ್ದರೆ ಸಮಾಜದಲ್ಲಿ ಒಂದು ಗೌರವ ಸಿಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತಿದ್ದು ಪಕ್ಷದ ಕಾರ್ಯಕರ್ತರು, ಮುಖಂಡರು ಪಕ್ಷಕ್ಕೆ ನಿಷ್ಠೆ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಿ ಅವರಿಗೆ ಅಧಿಕಾರ ಸಿಗುವಂತೆ ನೋಡಿಕೊಳ್ಳಬೇಕಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಬಿಜೆಪಿ ಸರ್ಕಾರ ನಾಯಕ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ಮೀಸಲಾತಿ ಹೆಚ್ಚಳ, ಶ್ರೀಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಿ ಸರ್ಕಾರದ ವತಿಯಿಂದಲೇ ಜಯಂತಿ ಆಚರಣೆ ಮಾಡುವಂತೆ ಮಾಡಿದೆ. ಜಿಲ್ಲೆಯಲ್ಲಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲು ಶ್ರಮಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜು ಹುತ್ತೂರು, ಮಹೇಶ್ ಬಸವಾಪುರ, ಉಪಾಧ್ಯಕ್ಷರಾದ ಚಂದ್ರಶೇಖರ್, ಪ್ರದೀಪ್, ಸೀಗಮಾರನಾಯಕ, ಸಾಮಾಜಿಕ ಜಾಲತಾಣ ಸಂಚಾಲಕ ರಾಜಶೇಖರನಾಯಕ, ಜಿಲ್ಲಾ ಉಸ್ತುವಾರಿ ಮಹೇಶ್, ಚಾಮರಾಜನಗರ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆಂಪನಾಯಕ, ಕೊಳ್ಳೇಗ ಗ್ರಾಮಾಂತರ ಅಧ್ಯಕ್ಷ ಸಿದ್ದರಾಜು, ಗುಂಡ್ಲುಪೇಟೆ ಅಧ್ಯಕ್ಷ ಮಂಜು, ಹನೂರು ಅಧ್ಯಕ್ಷ ಮಣಿ ಚುಂಗವಾಡಿ, ರಘು, ರಾಜೇಶ್ ಇತರರು ಭಾಗವಹಿಸಿದ್ದರು.