ಇ-ಖಾತಾ ಇಲ್ಲದ ಆಸ್ತಿ ಮಾಲೀಕರಿಗೆ ಬಿ-ಖಾತಾ ನೀಡಲು ರಾಜ್ಯ ಸರ್ಕಾರ ತೀರ್ಮಾನ

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಇ – ಖಾತಾ ಇಲ್ಲದ ಎಲ್ಲಾ ಆಸ್ತಿ ಆಸ್ತಿಗಳಿಗೂ ಬಿ-ಖಾತಾ ನೀಡಲು ತೀರ್ಮಾನಿಸುವ ಮೂಲಕ
ರಾಜ್ಯದ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ಉದ್ಯಾನ ನಗರಿ ಬೆಂಗಳೂರನ್ನು ಹೊರತುಪಡಿಸಿ, ರಾಜ್ಯದ ಬೇರೆ ಬೇರೆ ಸ್ಥಳೀಯ ಸಂಸ್ಥೆಗಳು ಹಾಗೂ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ 55 ಲಕ್ಷ ನಿವೇಶನಗಳಿವೆ. ಈ ಪೈಕಿ 22 ಲಕ್ಷ ನಿವೇಶನ ಮಾಲೀಕರು ಇ- ಖಾತಾ ಮಾಡಿಸಿದ್ದಾರೆ. ಆದರೆ, 30 ರಿಂದ 32 ಲಕ್ಷ ನಿವೇಶನ ಆಸ್ತಿಗಳಿಗೆ ಯಾವುದೇ ರೀತಿಯಾದ ಇ – ದಾಖಲೆ ಇರುವುದಿಲ್ಲ. ಈ ಎಲ್ಲರಿಗೂ ಒನ್ ಟೈಮ್ ಮಾದರಿಯಲ್ಲಿ ಬಿ-ಖಾತಾ ನೀಡಲು ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸೂಚನೆ ನೀಡಿದ್ದಾರೆ.

ವಿವಿಧ ಜಿಲ್ಲಾಧಿಕಾರಿಗಳ ಜತೆ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಆ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ನಗರ ಪ್ರದೇಶಗಳಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳ ಅಡಿಯಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ನಿವೇಶನಗಳು ಯಾವುದೇ ದಾಖಲೆಗಳನ್ನು ಹೊಂದಿಲ್ಲ. ಇದನ್ನು ಒಂದೇ ಬಾರಿ ಪರಿಗಣಿಸಿ, ಈ ನಿವೇಶನಗಳಿಗೆ ಬಿ-ಖಾತಾ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.

ದಾಖಲೆಗಳಿಲ್ಲದಿದ್ದರೆ ಇ-ಪ್ರಾಪರ್ಟೀಸ್ ಅಡಿಯಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಅಗತ್ಯ ದಾಖಲೆಗಳನ್ನು ಒದಗಿಸಿದರೆ ಬಿ ಖಾತಾ ನೀಡಬಹುದು ಎಂದು ಸಿಎಂ ಇತ್ತೀಚಿನ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಹೀಗಾಗಿ ಫೆ.10 ರೊಳಗೆ ಸುತ್ತೋಲೆ ಹೊರಡಿಸಿ, ಬಾಕಿ ಇರುವ ಆಸ್ತಿಗಳಿಗೆ ಗರಿಷ್ಠ ಮೂರು ತಿಂಗಳ ಒಳಗೆ ಅಭಿಯಾನ ಮಾದರಿಯಲ್ಲಿ ಬಿ-ಖಾತಾ (ಒನ್ ಟೈಮ್ ಮಾದರಿ) ಮಾಡಿಕೊಡಲಾಗುವುದು ಎಂದರು.
ಅನಧಿಕೃತ ನಿವೇಶನಗಳ ಬಗ್ಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಅದನ್ನು ಪಾಲಿಸಲೇಬೇಕಾದ ತುರ್ತು ಎದುರಾಗಿದೆ.

ಎಷ್ಟು ಸ್ವತ್ತುಗಳು ಇವೆ ಎಂದು ಗುರುತಿಸಿ ಸರ್ಕಾರವೇ ಬಿ-ಖಾತಾ ಮಾಡಿಕೊಡಲಿದೆ. ಇದಾದ ಮೇಲೆ ರಾಜ್ಯದಲ್ಲಿ ಬಿ-ಖಾತಾ ವ್ಯವಸ್ಥೆ ಇರುವುದಿಲ್ಲ. ಎ-ಖಾತಾ ಮಾತ್ರ ಇರಲಿದ್ದು, ಮುಂದಿನ ದಿನಗಳಲ್ಲಿ ಅನಧಿಕೃತ ನಿವೇಶನಗಳಿಗೆ ಅವಕಾಶವೇ ಇರುವುದಿಲ್ಲ. ನಗರ ವ್ಯಾಪ್ತಿಯಲ್ಲಿ ಈ ಅಭಿಯಾನ ಮುಗಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇದೇ ಮಾದರಿ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.

Leave a Reply

Your email address will not be published. Required fields are marked *