ಸುಗ್ರೀವಾಜ್ಞೆ ತರುವ ಮೂಲಕ ತಮಿಳುನಾಡಿಗೆ ಕಾವೇರಿ ನೀರು ನಿಲ್ಲಿಸಿ…

ಚಾಮರಾಜನಗರ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು 174ನೇ ದಿನವಾದ ಇಂದು ಭುವನೇಶ್ವರಿ ವೃತ್ತದಲ್ಲಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.

173ದಿನಗಳಿಂದಲೂ ನಿರಂತರವಾಗಿ ಪ್ರತಿಭಟಿಸುತ್ತಿರುವ ಕಾರ್ಯಕರ್ತರು, ಇಂದು ಕೂಡಾ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ನಗರದ ಭುವನೇಶ್ವರಿ ವೃತ್ತದಲ್ಲಿ ಹೆದ್ದಾರಿ ಸಂಚಾರವನ್ನು ತಡೆದು ಪ್ರತಿಭಟಿಸಿದರು.

ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕರ್ನಾಟಕದಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ. ಜಲಾಶಯಗಳು ಬತ್ತಿಹೋಗುತ್ತಿವೆ. ಬಿಸಿಲಿನ ತಾಪ ಹೆಚ್ಚಾಗಿದ್ದು, ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಕ್ರಮವನ್ನು ಖಂಡಿಸಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಮತ್ತು ಕಾವೇರಿ ನಿರ್ವಹಣಾ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆ ತರುವ ಮೂಲಕ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಜಲಕ್ಷಾಮ ಉಂಟಾಗಿ, ಮುಂದಿನ ದಿನಗಳಲ್ಲಿ ಕುಡಿಯಲು ನೀರಿಲ್ಲದಂತಹ ಪರಿಸ್ಥಿತಿಗೆ ಸಿಲುಕಬೇಕಾಗುತ್ತದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಒಕ್ಕೂಟದ ವ್ಯವಸ್ಥೆಯ ಮೇಲೆ ಗೌರವ ಇದ್ದರೆ, ಎರಡು ರಾಜ್ಯಗಳನ್ನು ಕರೆದು ಮಾತನಾಡುವ ಮೂಲಕ ಮಧ್ಯ ಪ್ರವೇಶ ಮಾಡಿ ರಾಜ್ಯದ ಜನತೆಗೆ ನ್ಯಾಯ ಒದಗಿಸುವಂತಹ ಕೆಲಸವನ್ನು ಮಾಡಬೇಕು ಎಂದರು.

ಎಲ್ಲಿಯವರೆಗೆ ನೀವು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗು.ಪುರುಷೋತ್ತಮ್, ವೀರಭದ್ರ, ಮಹೇಶ್‍ಗೌಡ, ತಾಂಡವಮೂರ್ತಿ, ನಂಜುಂಡಶೆಟ್ಟಿ, ಪಣ್ಯದಹುಂಡಿ ರಾಜು, ರಾಜಪ್ಪ ಮತ್ತಿತರರಿದ್ದರು.

Leave a Reply

Your email address will not be published. Required fields are marked *