ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ : ವೆಂಕಟಪ್ಪನಾಗಪ್ಪಶೆಟ್ಟಿ

ಚಾಮರಾಜನಗರ: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದು ಭಾರತಸೇವಾ ದಳದ ಜಿಲ್ಲಾಧ್ಯಕ್ಷ ವೆಂಕಟಪ್ಪನಾಗಪ್ಪಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮರಿಯಾಲ ಗ್ರಾಮದಲ್ಲಿರುವ ಶ್ರೀ ಮುರುಘರಾಜೇಂದ್ರ ವಿದ್ಯಾಸಂಸ್ಥೆಯಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಚಾಮರಾಜನಗರ, ಶಾಲಾ ಶಿಕ್ಷಣ ಇಲಾಖೆ, ಶ್ರೀ ಮುರುಘರಾಜೇಂದ್ರ ವಿದ್ಯಾಸಂಸ್ಥೆ ಇವರ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 2 ದಿನಗಳ ಜಿಲ್ಲಾ ಮಟ್ಟದ ಮಕ್ಕಳ ನಾಯಕತ್ವ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತ ಸೇವಾದಳದ ಮುಖ್ಯ ಉದ್ದೇಶ ಸೇವೇಗಾಗಿ ಬಾಳು ಎಂಬುದಾಗಿದೆ. ವಿದ್ಯಾರ್ಥಿಗಳು ಈಗಿನಿಂದಲೇ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಮುಂದೆ ನೀವು ಯಾವುದೇ ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳಿ, ಆ ಕ್ಷೇತ್ರದಲ್ಲಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಈ ಸೇವಾ ಮನೋಭಾವನೆ ಮುಂದೊಂದು ದಿನ ಹೆಮ್ಮರವಾಗಿ ಬೆಳೆದು ನಿಮ್ಮ ಭವಿಷ್ಯಕ್ಕೆ ಸಾಕಷ್ಟು ಅನುಕೂಲವಾಗುತ್ತದೆ ಎಂದರು.
ಭಾರತ ಸೇವಾದಳದ ಧೇಯೋದ್ದೇಶವನ್ನು ಈಡೇರಿಸಲು ನಿಮ್ಮೆಲ್ಲರ ಸಂಪೂರ್ಣ ಸಹಕಾರ ಅತ್ಯಗತ್ಯ. ಶಿಬಿರದಲ್ಲಿ ಮಕ್ಕಳು ಸಂಪೂರ್ಣವಾಗಿ ಭಾಗವಹಿಸುವ ಮೂಲಕ ನಿಮ್ಮಲ್ಲಿರುವ ನಾಯಕತ್ವ, ಪ್ರತಿಭೆಗಳನ್ನು ಹೊರ ಹಾಕಿ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಭಾರತ ಸೇವಾದಳದ ಕೋಶಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸಮಯ ಪಾಲನೆ, ಛಲ, ಹಠ ಇವೆಲ್ಲವೂ ಕೂಡಾ ಇದ್ದರೆ ನಾಯಕತ್ವದ ಗುಣಗಳು. ಇವೆಲ್ಲವರನ್ನು ಬೆಳೆಸಿಕೊಳ್ಳುವ ಮೂಲಕ ತಾವು ಉತ್ತಮ ನಾಯಕರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು.

ಶಾಖಾ ನಾಯಕರು, ಸಂಪನ್ಮೂಲ ವ್ಯಕ್ತಿಗಳು ನಿಮಗೆ ಸಾಕಷ್ಟು ಮಾಹಿತಿಗಳನ್ನು ನೀಡುತ್ತಾರೆ. ನೀವು ಅದನ್ನು ಪಡೆಯುವ ಮೂಲಕ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ದೇಶ ಪ್ರೇಮವನ್ನು ಹೆಚ್ಚಾಗಿ ಬೆಳೆಸಿಕೊಳ್ಳುವ ಮೂಲಕ ಉತ್ತಮ ನಾಯಕರಾಗಿ ದೇಶಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮೊದಲೇ ಧ್ವಜವಂದನೆ ಕಾರ್ಯಕ್ರಮವನ್ನು ಭಾರತ ಸೇವಾದಳದ ಕಾರ್ಯದರ್ಶಿ ವಿ.ಮಹದೇವಯ್ಯ ನೆರವೇರಿಸಿ, ಶಿಬಿರದಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು.

ಮುರುಘ ರಾಜೇಂದ್ರ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಆರ್.ಡಿ.ನಾಗರಾಜು ಅವರು ಮಾತನಾಡಿ, 1923ರಲ್ಲಿ ಪ್ರಾರಂಭವಾದ ಹಿಂದೂಸ್ಥಾನಿ ಸೇವಾದಳ ಮುಂದೆ ಭಾರತ ಸೇವಾದಳ ಎಂದು ನಾಮಕರಣವಾಯಿತು. ಸೇವಾದಳ ಗುಂಪಲ್ಲ, ಸಮೂಹವಲ್ಲ, ಇದು ಸೈನಿಕ ದಳ. ಸ್ವಾತಂತ್ರ್ಯದ ಸಂದರ್ಭದಲ್ಲಿ ಸೇವಾದಳ ಬ್ರಿಟೀಷರ ಕೈಲಿ ಸಾಕಷ್ಟು ಹೊಡೆತ ತಿಂದು, ಕೈಕಾಲು ಮುರಿಸಿಕೊಂಡು, ಎಷ್ಟೇ ನೋವಾದರೂ ಸಹ ಅವರು ಮುನ್ನೆಡೆದು ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಹೆಚ್ಚಿನ ಪ್ರಾಮುಖ್ಯತೆ ವಹಿಸಿದೆ. ಅಂದಿನಿಂದಲೂ ಜೀವ ಉಳಿಸಿಕೊಂಡು ಬಂದಿರುವ ಸೇವಾದಳ ಉತ್ತಮವಾಗಿ ಬೆಳೆದು, ಭಾರತದ ಬೆನ್ನೆಲುಬಾಗಬೇಕು. ರಾಷ್ಟ್ರ ಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕೇಂದ್ರ ಸಮಿತಿ ಸದಸ್ಯರಾದ ಲಿಂಗರಾಜು ಎಂ.ಬಿ. ರವರು ಗಿಡಕ್ಕೆ ನೀರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಸಂಘಟಕರಾದ ಅರುಣ್.ಈ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಜಿ.ಬಳಿಗಾರ್, ಸೇವಾದಳದ ತಾಲೂಕು ಅಧಿನಾಯಕ ನಾಗಣ್ಣ, ಮುರುಘರಾಜೇಂದ್ರ ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹದೇವಸ್ವಾಮಿ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್.ಎಸ್., ಭಾರತ ಸೇವಾದಳದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೋಸೆಫ್ ಎನ್., ಎಂ.ಆರ್.ಸ್ವಾಮಿ, ಶಾಖಾ ನಾಯಕಿಯರಾದ ಶ್ರೀಮತಿ ಜ್ಯೋತಿ ಕೆ.ಬಿ., ಅನ್ನಪೂರ್ಣಮ್ಮ, ಮಹೇಶ್ವರಿ, ಮಂಗಳಮ್ಮ, ಸರ್ಗುಣಂ, ಪುಟ್ಟಮಾದಮ್ಮ, ಪ್ರಮಿಳಾ, ದೀಪಿಕಾ, ಶಾಖಾ ನಾಯಕ ನಾಗರಾಜೇಗೌಡ, ಗುಂಡ್ಲುಪೇಟೆ ಅಧಿನಾಯಕ ಸಿದ್ದಶೆಟ್ಟಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *