ವಿದ್ಯಾರ್ಥಿಗಳು ಉತ್ಕೃಷ್ಟವಾದ ಶಿಕ್ಷಣ ಪಡೆದುಕೊಳ್ಳಿ: ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ

ನಾಗವಳ್ಳಿ ಪಿ.ಎಂ.ಶ್ರೀ ಶಾಲೆಯ ವಾರ್ಷಿಕೋತ್ಸವ ಸಮಾರಂಭ

ಚಾಮರಾಜನಗರ: ವಿದ್ಯಾರ್ಥಿಗಳು ಶಾಲೆಯಲ್ಲಿ ಸಿಗುವಂತಹ ಸವಲತ್ತುಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಉತ್ಕೃಷ್ಟವಾದ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲ್ಲೂಕಿನ ನಾಗವಳ್ಳಿ ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜ್ಞಾನ ಶಿಕ್ಷಣದ ಮೂಲಕ ಸಿಗುವ ಸಂಪತ್ತು. ಶಾಲೆಗಳನ್ನು ಜ್ಞಾನ ದೇಗುಲ ಎಂದು ಕರೆಯುತ್ತಾರೆ ಈ ಅಮೂಲ್ಯವಾದ ಜ್ಞಾನ ಸಂಪತ್ತನ್ನು ಹೆಚ್ಚಾಗಿ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ನಿರಂತರವಾಗಿ ಶ್ರದ್ಧೆಯಿಂದ ಅಧ್ಯಯನ ಮಾಡಿ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಿ ಎಂದರು.

ಶಾಲಾ ವಾರ್ಷಿಕೋತ್ಸವ ಸಮಾರಂಭ ಅತ್ಯಂತ ಸಂಭ್ರಮ ಸಡಗರದಿಂದ ನಡೆಯುತ್ತಿದೆ. ಇಂತಹ ಸಂಭ್ರಮದ ವಾತಾವರಣವನ್ನು ಖಾಸಗಿ ಶಾಲೆಗಳಲ್ಲಿ ನೋಡುತ್ತಿದ್ದೆವು. ಆದರೆ ಇಂತಹ ಸಂಭ್ರಮವನ್ನು ಸರ್ಕಾರಿ ಶಾಲೆಯಲ್ಲಿ ನೋಡುತ್ತಿರುವುದು ಬಹಳ ಸಂತಸ ಹಾಗೂ ಹೆಮ್ಮೆಯಾಗಿದೆ ಎಂದು ಹೇಳಿದರು.

ಪಿಎಂಶ್ರೀ ಶಾಲೆ ಪ್ರಧಾನಮಂತ್ರಿಯವರ ಮಹತ್ವಕಾಂಕ್ಷೆಯ ಶಾಲೆಯಾಗಿದೆ. ಮುಂದಿನ ಉದಯೋನ್ಮುಖ ಭಾರತಕ್ಕೆ ಅಗತ್ಯವಾಗಿ ಬೇಕಾಗುವ ಗುಣಮಟ್ಟದ ಶಿಕ್ಷಣವನ್ನು ಗ್ರಾಮೀಣ ಪ್ರದೇಶದಲ್ಲಿ ನೀಡಲು ಇಂತಹ ಶಾಲೆಯನ್ನು ತೆರೆಯುವ ಉತ್ತಮ ಯೋಜನೆ ಇದಾಗಿದೆ. ಪಿಎಂ ಶ್ರೀ ಶಾಲೆಗೆ ಈಗಾಗಲೇ ಹೆಚ್ಚಿನ ಅನುದಾನ ಬಂದಿದ್ದು, ಆ ಅನುದಾನವನ್ನು ಶಾಲೆಯ ಮೂಲಭೂತ ಸೌಕರ್ಯ ಹಾಗೂ ಕಲಿಕಾ ಸಾಮಗ್ರಿ ಉತ್ತಮ ಕಾರ್ಯಕ್ರಮಗಳನ್ನು ಮಾಡಲು ಬಳಸಿಕೊಳ್ಳಬೇಕಾಗಿದೆ. ಆರಂಭದಲ್ಲಿ ಸರ್ಕಾರಿ ಶಾಲೆಯಲ್ಲಿ ಎಲ್ ಕೆಜಿ ಯುಕೆಜಿ ಇಲ್ಲ ಎಂಬ ಕೊರಗಿತ್ತು. ಆದರೆ ಅದನ್ನು ಹೋಗಲಾಡಿಸಲು ಎಲ್ ಕೆಜಿ ಯುಕೆಜಿ ಯನ್ನು ತೆರೆಯಲಾಗಿದೆ ಎಂದು ಹೇಳಿದರು.

ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಮುಖ್ಯ ಸಂಚಾಲಕಾರದ ಬಿ.ಕೆ.ದಾನೇಶ್ವರಿ ಬೆಹನ್ ಜೀ ಮಾತನಾಡಿ, ಮನೆಯ ಮೊದಲ ಪಾಠಶಾಲೆ, ಮಾತೆ ಮೊದಲ ಗುರು ಪೋಷಕರು ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಾರೋ ಅದೇ ರೀತಿಯಲ್ಲಿ ಮಕ್ಕಳು ಕೂಡ ನಡೆದುಕೊಳ್ಳುತ್ತಾರೆ ಆದ್ದರಿಂದ ಪೋಷಕರ ಉತ್ತಮ ನಡತೆಯೇ ಮಕ್ಕಳಿಗೆ ಶಿಕ್ಷಣವಾಗಬೇಕು. ಮಕ್ಕಳು ಉಜ್ವಲ ಭವಿಷ್ಯವನ್ನು ಪಡೆದುಕೊಳ್ಳಬೇಕು ಅಂದರೆ ಮೊದಲು ಪೋಷಕರಲ್ಲಿ ಬದಲಾವಣೆಯಾಗಬೇಕು. ಮನೆಯ ವಾತಾವರಣ ಸಕರಾತ್ಮಕವಾಗಿರಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಮೊಬೈಲ್ ಟಿವಿ ಇನ್ನಿತರ ಕಡೆ ಹೆಚ್ಚು ವಿದ್ಯಾರ್ಥಿಗಳು ಗಮನ ಹರಿಸುತ್ತಿದ್ದಾರೆ. ಪೋಷಕರು ಮೊದಲು ಧ್ಯಾನವನ್ನು ಅಭ್ಯಾಸವನ್ನು ಮಾಡಿ ನಂತರ ತಮ್ಮ ಮಕ್ಕಳಿಗೆ ಧ್ಯಾನ ಮಾಡುವಂತಹ ಅಭ್ಯಾಸವನ್ನು ಬೆಳೆಸಬೇಕು ಮಕ್ಕಳಿಗೆ ಆಸ್ತಿಯನ್ನು ಮಾಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ, ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ಕೊಡುವುದರ ಮೂಲಕ ಮಕ್ಕಳು ಉನ್ನತ ಸ್ಥಾನವನ್ನು ತಲುಪುತ್ತಾರೆ ಎಂದರು.

ಗ್ರಾಮ ಪಂಚಾಯತಿ ಸದಸ್ಯ ಪ್ರಶಾಂತ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಈ ಕಾರ್ಯಕ್ರಮದಿಂದ ಹಬ್ಬದ ವಾತಾವರಣ ಹಬ್ಬಿದೆ ಇದಕ್ಕೆ ಮೂಲ ಕಾರಣಕರ್ತರು ಈ ಶಾಲೆಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳು ಇಂತಹ ವಿದ್ಯಾರ್ಥಿಗಳನ್ನು ವಿಶ್ವಮಾನವನಾಗಿ ಮಾಡಬೇಕು. ವಾರ್ಷಿಕೋತ್ಸವ ಅಂತ ತಕ್ಷಣ ನೆನಪಾಗುವುದು ಸರ್ಕಾರಿ ಶಾಲೆಯಲ್ಲಿ ಇರುವಂತಹ ವೈಭವ. ಇದನ್ನು ನೋಡಿದಾಗ ಪ್ರತಿಯೊಬ್ಬ ಪೋಷಕರಿಗೆ ಹಾಗೂ ಇನ್ನಿತರರಿಗೆ ನಮ್ಮ ಮಕ್ಕಳು ಇಂತಹ ಸರ್ಕಾರಿ ಶಾಲೆಯಲ್ಲಿ ಓದಬೇಕು ಎಂಬ ಮನೋಭಾವನೆ ಬರುತ್ತದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಮಕ್ಕಳು ಓದಬೇಕು ಅಲ್ಲಿರುವಂತಹ ಮೂಲಭೂತ ಸೌಕರ್ಯಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ತಲುಪಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾ ಶ್ರೀನಿವಾಸ್, ಸದಸ್ಯರಾದ ಮುದ್ದುಮಲ್ಲಯ್ಯ, ರಂಗಸ್ವಾಮಿ, ನಭಿ ಖಾನ್, ಪುಟ್ಟನಂಜಮ್ಮ, ಶಾಂತಮ್ಮ, ಪಿಎಂಶ್ರೀ ನೂಡಲ್ ಅಧಿಕಾರಿ ಮಹದೇವಪ್ಪ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲ್ಲೂಕು ಅಧ್ಯಕ್ಷ ರಾಮಸ್ವಾಮಿ, ಸಾವಿತ್ರಿ ಬಾಯಿ ಫುಲೆ ಸಂಘದ ಅಧ್ಯಕ್ಷೆ ಭವಾನಿದೇವಿ, ಎಸ್ ಡಿ.ಎಂ.ಸಿ ಅಧ್ಯಕ್ಷ ಸಿದ್ದರಾಜು, ಶಾಲೆಯ ಮುಖ್ಯ ಶಿಕ್ಷಕಿ ಎಂ.ಶಾಂತಿ, ಶಿಕ್ಷಕರಾದ ಎನ್.ಎಸ್ ಮಹದೇವಸ್ವಾಮಿ, ನಾಗರಾಜು, ಮುಖಂಡ ಕುಮಾರ್ ಹಾಗೂ ಶಾಲೆಯ ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *