ಸುಗಮ್ಯ ಯಾತ್ರಾ ಸಮೀಕ್ಷೆ-ಜಾಥಾಗೆ ನಗರದಲ್ಲಿಂದು ಜಿ.ಪಂ ಸಿ.ಇ.ಒ ಮೋನಾ ರೋತ್ ಚಾಲನೆ

ಚಾಮರಾಜನಗರ: ಸರ್ಕಾರಿ ಕಚೇರಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷಚೇತನರಿಗೆ ಅಡೆ-ತಡೆರಹಿತ ವಾತಾವರಣ ನಿರ್ಮಿಸುವ ಸಂಬಂಧ ಸುಗಮ್ಯ ಯಾತ್ರಾ ಸಮೀಕ್ಷೆ ಜಾಥಾಗೆ ನಗರದಲ್ಲಿಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಚಾಲನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ‘ಸುಗಮ್ಯ ಯಾತ್ರೆಯ ಪ್ರತಿ ಹೆಜ್ಜೆ ಸಮಾನತೆಯ ಕಡೆಗೆ’ ಘೋಷವಾಕ್ಯದಡಿ ಹಮ್ಮಿಕೊಳ್ಳಲಾಗಿದ್ದ ಸಮೀಕ್ಷೆ ಹಾಗೂ ಜಾಥಾಗೆ ಹಸಿರು ನಿಶಾನೆ ತೋರಿದರು. 

ಇದೇ ವೇಳೆ ಸಮೀಕ್ಷೆ ಹಾಗೂ ಜಾಥಾ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ವಿಶೇಷಚೇತನ ವ್ಯಕ್ತಿಗಳ ಹಕ್ಕುಗಳನ್ನು ಸಂರಕ್ಷಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ಸರ್ಕಾರವು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ -2016ನ್ನು ಜಾರಿಗೊಳಿಸಿದೆ. ಅದರನ್ವಯ ಸರ್ಕಾರಿ ಕಚೇರಿಗಳು, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷಚೇತನರಿಗೆ ಅವಶ್ಯವಿರುವ ಮೂಲಸೌಲಭ್ಯ ಒದಗಿಸಿ ಅಡೆ-ತಡೆರಹಿತ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಸರ್ಕಾರಿ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ರ್ಯಾಂಪ್ ವ್ಯವಸ್ಥೆ, ಮನರಂಜನೆ ಸ್ಥಳಗಳು, ಉದ್ಯಾನವನಗಳು, ಗ್ರಂಥಾಲಯಗಳು, ಮಾರುಕಟ್ಟೆಗಳು, ಪ್ರವಾಸಿ ತಾಣಗಳು, ಸಾರ್ವಜನಿಕ ಶೌಚಾಲಯಗಳು ಸೇರಿದಂತೆ ಇತರೆ ಸ್ಥಳಗಳಲ್ಲಿ ವಿಶೇಷಚೇತನರಿಗೆ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿ ಯಾವುದೇ ಅಡೆ-ತಡೆರಹಿತ ವಾತಾವರಣ ಸೃಷ್ಠಿಸಿ ಅನುಕೂಲ ಮಾಡಿಕೊಡಬೇಕಾಗಿದೆ. ಈ ಸಂಬಂಧ ಭಾರತ ಸರ್ಕಾರದ ಎಂ.ಎಸ್.ಜೆ ಮತ್ತು ಇ ಮಂತ್ರಾಲಯವು ಸುಗಮ್ಯ ಯಾತ್ರಾ ಅಭಿಯಾನದಡಿ ಸಾರ್ವಜನಿಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತಿಳಿಸಿದರು.

ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಮೀನಾಕ್ಷಿ ಅವರು ವಿಶೇಷಚೇತನರಿಗೆ ಮೂಲಸೌಕರ್ಯಗಳನ್ನು ಒದಗಿಸಿ ಸರ್ಕಾರಿ ಕಚೇರಿ, ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ವಿಕಲಚೇತನ ವ್ಯಕ್ತಿಗಳ ಸ್ನೇಹಮಯಿ ವ್ಯವಸ್ಥೆಯನ್ನಾಗಿ ರೂಪಿಸಿರುವ ಬಗ್ಗೆ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಿಂದ ಮಾಹಿತಿ ಕ್ರೋಢಿಕರಿಸಲು ಸಮೀಕ್ಷೆಯನ್ನು ಇಂದಿನಿಂದ ಹಮ್ಮಿಕೊಳ್ಳಲಾಗಿದೆ. ಸರ್ಕಾರವು ಬೆಂಗಳೂರಿನ ಎ.ಪಿ.ಡಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಮಾಹಿತಿ ಸಂಗ್ರಹಣೆ ಬಗ್ಗೆ ಸಂಸ್ಥೆಯು ವಿ.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂ ಪುನರ್ವಸತಿ ಕಾರ್ಯಕರ್ತರಿಗೆ ತರಬೇತಿ ನೀಡಲಿದೆ. ಇದಕ್ಕಾಗಿ ಎಸ್ ಟು ಎಕ್ಸೆಸ್ (ಥಿes ಚಿಛಿಛಿess) ಆಪ್ ಅನ್ನು ಸಹ ಸಂಸ್ಥೆ ಸಿದ್ದಪಡಿಸಿದೆ ಎಂದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ. ಸುರೇಶ್, ವಿ.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂ ಪುನರ್ವಸತಿ ಕಾರ್ಯಕರ್ತರು, ಇತರರು ಇದೇ ಸಂದರ್ಭದಲ್ಲಿ ಇದ್ದರು. 

ಜಾಥಾ ಬಳಿಕ ನಗರದ ತಾಲೂಕು ಪಂಚಾಯಿತಿ ಸಾಮಥ್ರ್ಯ ಸೌಧದಲ್ಲಿರುವ ಸಭಾಂಗಣದಲ್ಲಿ ಸರ್ಕಾರಿ ಕಚೇರಿ, ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ವಿಕಲಚೇತನ ವ್ಯಕ್ತಿಗಳ ಸ್ನೇಹಮಯಿ ವ್ಯವಸ್ಥೆಯನ್ನಾಗಿ ರೂಪಿಸುವ ಬಗ್ಗೆ ಮಾಹಿತಿ ಸಂಗ್ರಹಿಸುವ ಕುರಿತು ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಿಗೆ ತರಬೇತಿ ನಡೆಯಿತು.

Leave a Reply

Your email address will not be published. Required fields are marked *