ದೇಶದ ಅಭಿವೃದ್ದಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪುಟ್ಟರಂಗಶೆಟ್ಟಿ ಮನವಿ

ದೊಡ್ಡಮೋಳೆ, ಹೆಬ್ಬಸೂರು, ಆಲೂರು ಪಂಚಾಯಿತಿ ವ್ಯಾಪ್ತಿ ಗ್ರಾಮಗಳಲ್ಲಿ ಸುನೀಲ್ ಬೋಸ್ ಪರ ಮತಯಾಚನೆ
ಚಾಮರಾಜನಗರ: ಕ್ಷೇತ್ರದ ಮತದಾರರು ಅಭಿವೃದ್ದಿಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಮೂಲಕ ಕೇಂದ್ರದಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಎಂಐಎಸ್‍ಎಲ್ ಅಧ್ಯಕ್ಷರು ಆದ ಶಾಸಕ ಸಿ. ಪುಟ್ಟರಂಗಶೆಟ್ಟಿ ಮನವಿ ಮಾಡಿದರು.

ತಾಲೂಕಿನ ದೊಡ್ಡಮೋಳೆ, ಹೆಬ್ಬಸೂರು ಹಾಗೂ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 20ಕ್ಕು ಹೆಚ್ಚು ಗ್ರಾಮಗಳಿಗೆ ಬೆಳಗಿನಿಂದ ಸಾಯಂಕಾಲದವರೆಗೆ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‍ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಬಿಜೆಪಿ ಕೇವಲ ಭಾವನಾತ್ಮಕವಾಗಿ ಮತ ಕೇಳುತ್ತಿದೆ. ಯಾವುದೇ ಅಭಿವೃದ್ದಿ ಗುರಿ ಇಲ್ಲ. ಕೇವಲ ಧರ್ಮ, ಜಾತಿಯ ಹೆಸರಿನಲ್ಲಿ ಜನರನ್ನು ಭಾವನಾತ್ಮಕವಾಗಿ ಮತ ಕೇಳುವುದು ಆ ಪಕ್ಷದ ಸಿದ್ದಾಂತವಾಗಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಯಾವುದೇ ಅಭಿವೃದ್ದಿ ಮಾಡದೇ ದೇಶದ ಜನರನ್ನು ಸಾಲದ ಕೂಪಕ್ಕೆ ದೂಡಿರುವ ಬಿಜೆಪಿಯನ್ನು ಈ ಬಾರಿ ಸೋಲಿಸಬೇಕು ಎಂದು ತಿಳಿಸಿದರು.

ಕಳೆದ 15 ವರ್ಷಗಳ ಅವಧಿಯಲ್ಲಿ ಶಾಸಕನಾಗಿ ಬಹಳಷ್ಟು ಅಭಿವೃದ್ದಿ ಮಾಡಿದ್ದೇನೆ. ಈ ಭಾಗದ ಜನರ ಭಾವನೆಗಳಿಗೆ ತಕ್ಕಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಅವರು ಕಷ್ಟ ಸುಖಗಳಿಗೆ ಸ್ಪಂದಿಸಿದ್ದೇನೆ. ಇನ್ನು ಹೆಚ್ಚಿನ ಅಭಿವೃದ್ದಿ ಮಾಡಲು ಕೇಂದ್ರದಲ್ಲಿಯು ನಮ್ಮ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಗೆಲ್ಲಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದಾಗ ಅನುದಾನಗಳನ್ನು ಹೆಚ್ಚಿನ ರೀತಿಯಲ್ಲಿ ತಂದು ಅಭಿವೃದ್ದಿ ಪಡಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಮತ ಹಸ್ತಕ್ಕೆ ನೀಡಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿ, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಭಾರಿ ಅನ್ಯಾಯವಾಗಿದೆ. ಸರಿಯಾಗಿ ಅನುದಾನ ನೀಡುವುದಿಲ್ಲ. ಅಲ್ಲದೇ ಇಲ್ಲಿಂದ ಗೆದ್ದು ಹೋದ ಬಿಜೆಪಿ ಸಂಸದರು ಕೇವಲ ನರೇಂದ್ರ ಮೋದಿ ಜಪ ಮಾಡುತ್ತಾರೆಯೇ ಹೊರತು ದೇಶ ಹಾಗೂ ರಾಜ್ಯ ಜನರ ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಈ ಬಾರಿ ಪ್ರಬುದ್ದ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಅವರ ಕೈ ಬಲಪಡಿಸಬೇಕು ಎಂದು ಕೋರಿದರು.

ಸಂದರ್ಭದಲ್ಲಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್, ಬ್ಲಾಕ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ, ಮುಖಂಡರಾದ ನಾಗವಳ್ಳಿ ನಾಗಯ್ಯ, ರಾಮಸಮುದ್ರ ನಾಗರಾಜು , ಹೆಬ್ಬಸೂರು ರಂಗಸ್ವಾಮಿ, ಕಾಗಲವಾಡಿ ಚಂದ್ರು, ಕೋಡಿಮೋಳೆ ಪ್ರಕಾಶ್, ಆಯ್ಯನಪುರ ಶಿವಕುಮಾರ್, ನಾಗವಳ್ಳಿ ಕಮಾಲ್, ದಡದಹಳ್ಳಿ ರಮೇಶ್, ರೇವಣ್ಣ, ಕರಿನಂಜನಪುರ ಸ್ವಾಮಿ, ಅನೇಕರು ಇದ್ದರು.

ಚಾಮರಾಜನಗರ ತಾಲೂಕಿನ ಹೆಬ್ಬಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಡಹಳ್ಳಿಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡಿದರು.

Leave a Reply

Your email address will not be published. Required fields are marked *