* ಕಳೆದ 22 ವರ್ಷಗಳಿಂದ ವಿಜ್ಞಾನಿಯಾಗಿ, ಗೆಜೆಟೆಡ್ ಅಧಿಕಾರಿಯಾಗಿ ಸೇವೆ
* ಕ್ಯಾನ್ಸರ್, ಹೆಚ್ ಐ ವಿ, ಡಯಾಬಿಟಿಕ್ ಮತ್ತು ವೃದ್ಧಾಪ್ಯದಲ್ಲಿ ಉಂಟಾಗುವ ಮರೆಗುಳಿತನ ಕಾಯಿಲೆಗಳಿಗೆ ಔಷದಿ ಕಂಡುಹಿಡಿಯುವ ವಿಜ್ಞಾನಿ ಸಮೂಹದೊಂದಿಗೆ ಕೆಲಸ ನಿರ್ವಹಣೆ
* ನಿಮ್ಮೆಲ್ಲರ ಸಮಸ್ಯೆಗಳಿಗೆ ಧ್ವನಿಯಾಗಲು, ತಮ್ಮ ಸೇವೆ ಮಾಡಲು ಒಂದು ಅವಕಾಶ ನೀಡಿ

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ಪ್ರವೇಶ ಬಯಸಿ, ಸಮಾಜವಾದಿ ಪಾರ್ಟಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಯುವ ನಾಯಕ, ಯುವ ವಿಜ್ಞಾನಿ, ನಂಜನಗೂಡು ತಾಲೂಕಿನ ಹೆಮ್ಮರಗಾಲ ಗ್ರಾಮದ ಲೇಟ್ ಮರಿಶೆಟ್ಟಿ ಅವರ ಮಗ ಎಚ್.ಎಂ.ನಂಜುಂಡಸ್ವಾಮಿ ಅವರು ತಮ್ಮ ಉದ್ದೇಶ, ಸ್ಪರ್ಧೆ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಸುವರ್ಣ ಬೆಳಕು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ನೀವು ರಾಜಕೀಯಕ್ಕೆ ಏಕೆ ಪ್ರವೇಶಿಸುತ್ತಿರುವಿರಿ?
ಸಮಾಜದ ಸರ್ವತೋಮುಖ ಅಭಿವೃಧ್ಧಿಗಾಗಿ ರಾಜಕೀಯವು ಒಂದು ಉತ್ತಮ ವೇದಿಕೆ ಮತ್ತು ಅವಕಾಶ ಎಂಬುದನ್ನು ಕಂಡು ಕೊಂಡಿದ್ದೇನೆ ಈ ಕಾರಣಕ್ಕಾಗಿ ರಾಜಕೀಯ ಪ್ರವೇಶಿಸುತ್ತಿದ್ದೇನೆ. ರಾಜಕೀಯ ಶಕ್ತಿಯಿಂದ ಆಯಾ ಭೌಗೋಳಿಕ ಸನ್ನಿವೇಶಕ್ಕೆ ತಕ್ಕಂತೆ, ಜನ ಜೀವನವನ್ನು ಉತ್ತಮಪಡಿಸಲು ಸಾಧ್ಯವಾಗುವ ಹೊಸಯೋಜನೆಗಳನ್ನು ರೂಪಿಸಬಹುದು. ಅದು ಸ್ವಾಭಾವಿಕ ಸಂಪನ್ಮೂಲಗಳ ಸದುಪಯೋಗ, ಉದಾಹರಣೆಗೆ, ಜಲಸಂಪನ್ಮೂಲ, ರಸ್ತೆ ನಿರ್ಮಾಣ, ಆರೋಗ್ಯದ ಸೇವೆ, ಶಿಕ್ಷಣ, ಅಥವಾ ಸಾಮಾಜಿಕ ಮತ್ತು ಪರಿಸರ ಕಾಳಜಿ ಬಗ್ಗೆ ಹೆಚ್ಚಿನ ಒತ್ತು ಕೊಡುವುದರ ಬಗ್ಗೆ, ಬದಲಾವಣೆಗಳನ್ನು ಮಾಡುವುದು. ಎಲ್ಲರಿಗೂ ಉತ್ತಮ ಭವಿಷ್ಯವನ್ನು ನಿರ್ಮಿಸಲು ಬೆಳಕನ್ನು ನೀಡುವುದಕ್ಕಾಗಿ.
ನಿಮ್ಮಪ್ರೇರಣೆಯಾರು?
ನನ್ನ ಪ್ರೇರಣೆ ನಾನು ಕಣ್ಣಾರೆಕಂಡಂತಹ ಹಳ್ಳಿಯ ಜನಜೀವನ. ಭಾರತಕ್ಕೆ ಸ್ವಾತಂತ್ರ್ಯ ಬಂದು ಇಂದಿಗೆ ೭೭ ವರ್ಷಗಳು ಕಳೆದರೂ ಸಹ ಇಂದಿಗೂ ಮೂಲ ಭೂತ ಸೌಕರ್ಯಗಳು ಮರೀಚಿಕೆಯಾಗಿವೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಸಮರ್ಪಕ ವಿದ್ಯುತ್ ಇಲ್ಲ, ಸಾರಿಗೆ ವ್ಯವಸ್ಥೆ ಇಲ್ಲ, ನೀರಾವರಿ ಯೋಜನೆಗಳಿಲ್ಲದೆ ನಮ್ಮ ನೀರನ್ನು ನಾವು ಉಪಯೋಗಿಸಿಕೊಳ್ಳುವ ಸ್ಥಿತಿ ಇಲ್ಲ, ಉತ್ತಮ ಶಿಕ್ಷಣ ಸಿಗಬೇಕೆಂದರೆ, ಖಾಸಗಿ ಶಿಕ್ಷಣಸಂಸ್ಥೆಗಳ ಅವಲಂಬನೆ, ಉಚಿತ ಆರೋಗ್ಯ ಕೇವಲ ಆಶ್ವಾಸನೆ, ರೈತರು ವ್ಯವಸಾಯ ಮಾಡಿ ಜೀವನಸಾಗಿಸಲು ನರಕಯಾತನೆ ಅನುಭವಿಸುತ್ತಿರುವುದು.ಇವುಗಳನ್ನೆಲ್ಲಾ ಕಣ್ಣಾರೆ ಕಂಡಿರುವ ನಾನು, ಈ ಎಲ್ಲಾ ಸಮಸ್ಯೆಗಳೇ ನನ್ನ ಪ್ರೇರಣೆ.
ನಿಮ್ಮವಿದ್ಯಾಭ್ಯಾಸ?
ನಾನು ಮೆಟ್ರಿಕ್‌ವರೆಗೂ ನಂಜನಗೂಡು ತಾಲ್ಲೂಕಿನ ನನ್ನ ಹುಟ್ಟೂರಾದ ಹೆಮ್ಮರಗಾಲದಲ್ಲಿ ಓದಿ, ಪಿಯುಸಿ ಮತ್ತು ಬಿ.ಎಸ್ಸಿ ಪದವಿಯನ್ನು ನಂಜನಗೂಡಿನಲ್ಲಿ, ಎಂ.ಎಸ್ಸಿ (ರಾಸಾಯನಶಾಸ್ತ್ರ) ಮೈಸೂರಿನ ಮಾನಸ ಗಂಗೋತ್ರಿಯಲ್ಲಿ, ಪಿ.ಹೆಚ್ಡಿ (ರಾಸಾಯನಶಾಸ್ತ್ರ) ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ೨೦೦೮ರಲ್ಲಿಪಡೆದಿರುತ್ತೇನೆ.
ನೀವು ಈಗಾಗಲೇ ಯಾವಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೀರಿ?
ನಾನು ಕರ್ನಾಟಕ ರಾಜ್ಯದ ಬೇಂಗಳೂರು, ಗುಲ್ಬರ್ಗ ಮತ್ತು ಮಂಗಳೂರು ವಲಯಗಳಲ್ಲಿ ಆರೋಗ್ಯಇಲಾಖೆ, ಅಬಕಾರಿ ಇಲಾಖೆ ಮತ್ತು ಪೋಲೀಸ್ ಇಲಾಖೆಗಳಿಗೆ ಅವಶ್ಯಕ ಭಾಗವಾದ ವಿಜ್ಞಾನ ಪ್ರಯೋಗಾಲಯದಲ್ಲಿ ವಿಜ್ಞಾನಿಯಾಗಿ, ಗೆಜೆಟೆಡ್‌ಅಧಿಕಾರಿಯಾಗಿ ಸುಮಾರು ೨೨ ವರ್ಷಗಳ ಸೇವೆ ಸಲ್ಲಿದ್ದೇನೆ.
ಕರ್ನಾಟಕ ರಾಜ್ಯ ಸರ್ಕಾರದ ಅನುಮತಿಯನ್ನು ಪಡೆದು ವಿದೇಶಗಳಲ್ಲಿಯೂ ಸಹ ರಾಸಾಯನ ಶಾಸ್ತ್ರದಲ್ಲಿ ಪೋಸ್ಟ್ ಡಾಕ್ಟರೇಟ್ ಪಡೆದಿರುತ್ತೇನೆ ಮತ್ತು ಕ್ಯಾನ್ಸರ್, ಹೆಚ್ ಐ ವಿ, ಡಯಾಬಿಟಿಕ್ ಮತ್ತು ವೃದ್ಧಾಪ್ಯದಲ್ಲಿ ಉಂಟಾಗುವ ಮರೆಗುಳಿತನ ಈ ಕಾಯಿಲೆಗಳಿಗೆ ಔಷದಿ ಕಂಡುಹಿಡಿಯುವ ವಿಜ್ಞಾನಿ ಸಮೂಹದೊಂದಿಗೆ ಕೆಲಸ ಮಾಡಿ ನನ್ನದೇ ಆದ ಕೊಡುಗೆ ನೀಡಿದ್ದೇನೆ.
ನೀವು ನಿಮ್ಮದೇ ಕ್ಷೇತ್ರದಲ್ಲಿ ಮುಂದುವರೆದರೆ ನಿಮಗೆ ಉತ್ತಮ ಭವಿಷ್ಯ ಇದೆ ಅಲ್ಲವೇ?
ಖಂಡಿತವಾಗಿಯೂ ಹೌದು. ಆದರೆ, ನಾನು ನನ್ನ ಜನರಿಗಾಗಿ ಕಂಡ ಕನಸು ಕನಸಾಗಿಯೇ ಉಳಿಯುವುದು.
ರಾಜಕೀಯ ಕ್ಷೇತ್ರಕ್ಕೆ ಬಂದರೆ ನಿಮ್ಮ ವಿಜ್ಞಾನ ಕ್ಷೇತ್ರದಲ್ಲಿ ಪಡೆದ ಅನುಭವ ಮತ್ತು ಜ್ಞಾನ ವ್ಯರ್ಥವಾಗುವುದಿಲ್ಲವೇ?
ಖಂಡಿತವಾಗಿಯೂ ಇಲ್ಲ. ಏಕೆಂದರೆ, ನಾನು ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಕೆಲಸ ಮುಂದುವರೆಸಲು ಸಾಕಷ್ಟು ವಿಜ್ಞಾನ ಸಮೂಹವೇ ಇದೆ. ಆದರೆ ಸಮಾಜಮುಖಿ ಕೆಲಸಗಳ ಕಡೆ ಗಮನ ಕೊಡದ ರಾಜಕಾರಣಿಗಳ ಕೊರತೆ ತುಂಬಾ ಇದೆ. ಆದ್ದರಿಂದ ಸಮಾಜದ ಪ್ರತಿ ಯೋಜನೆಗಳಿಗೂ ವೈಜ್ಞಾನಿಕ ಸ್ಪರ್ಷ ಕೊಡುವುದೇ ನನ್ನ ಗುರಿ. ಗೊತ್ತು ಗುರಿಯಿಲ್ಲದ ಯೋಜನೆಗಳು, ಧೀರ್ಘ-ಮುನ್ನೋಟ ಇಲ್ಲದ ಆಲೋಚನೆಗಳಿಂದ ಸಂಪನ್ಮೂಲಗಳ ವ್ಯರ್ಥ ಆಗುವುದನ್ನು ತಡೆಯುವುದು ಮತ್ತು ಸದ್ಬಳಕೆ ನನ್ನ ಮುಖ್ಯ ಗುರಿ.
ಯಾವುದಾದರೂ ರಾಷ್ಟ್ರೀಯ ಪಕ್ಷಗಳನ್ನು ಸೇರಬಹುದಲ್ಲವೇ?
ಪ್ರತಿ ಪಕ್ಷಗಳಿಗೂ ಅದರದೇ ಆದ ತತ್ವ, ಸಿದ್ದಾಂತ ಮತ್ತು ಕಾರ್ಯವೈಖರಿ ಬೇರೆಯೇ ಇರುತ್ತದೆ. ನಮ್ಮ ಆಲೋಚನೆಗಳನ್ನು ಮತ್ತು ಯೋಜನೆಗಳಿಗೆ ಬೆಂಬಲ ಸಿಗಬಹುದು ಅಥವಾ ಸಿಗದಿರಬಹುದು. ಆದ ಕಾರಣಕ್ಕೆ ರಾಷ್ಟ್ರೀಯ ಪಕ್ಷಗಳನ್ನು ಸೇರುವ ಉದ್ದೇಶ ಇಲ್ಲ.
ಪ್ರಸ್ತುತ ಮೈಸೂರು ಕೊಡಗು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೀರಿ. ಜನರು ನಿಮ್ಮ ಕೈ ಹಿಡಿಯುವರೇ? ಗೆಲುವು ಸಾಧಿಸುತ್ತೇನೆ ಅನ್ನಿಸುತ್ತಿದೆಯಾ?
ಭಾರತ ದೇಶದ ಜನತೆ ಪ್ರಜ್ಞಾವಂತರಾಗಿದ್ದಾರೆ, ಅಭಿವೃಧ್ದಿಯ ಕನಸಿಗೆ ಎಲ್ಲವೂ ಅವರ ಕಣ್ಣ ಮೂಂದೆ ಇದೆ. ಆಯ್ಕೆ ಜನರದ್ದು, ಜನತೆ ಮತ ಹಾಕಿ ಗೆಲ್ಲಿಸಿದರೆ ಅದು ನನ್ನ ಗೆಲುವಲ್ಲ, ಅದು ಜನತೆಯೇ ಗೆದ್ದಂತೆ.