ಚಾಮರಾಜನಗರ: ಜಿಲ್ಲಾಡಳಿತ ಹಾಗೂ ಸಮುದಾಯಗಳ ಸಹಕಾರದೊಂದಿಗೆ ಏಪ್ರಿಲ್ 20ರಂದು ಬಸವ ಜಯಂತಿಯನ್ನು ವಿಚಾರ ಸಂಕಿರಣ ಏರ್ಪಡಿಸುವ ಮೂಲಕ ಸಾಂಕೇತಿಕವಾಗಿ ಆಚರಣೆ ಮಾಡಿ ಸಮುದಾಯದ ಅಭಿಪ್ರಾಯದಂತೆ ಮತ್ತೊಂದು ದಿನ ಅದ್ದೂರಿಯಾಗಿ ಬಸವಜಯಂತಿ ಆಚರಣೆ ಕಾರ್ಯಕ್ರಮ ಆಯೋಜನೆಗೆ ತೀರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಶ್ರೀರೂಪ ಅವರ ಅಧ್ಯಕ್ಷತೆಯಲ್ಲಿ ಬಸವ ಜಯಂತಿ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಸಮುದಾಯದ ಮುಖಂಡರ ಅಭಿಪ್ರಾಯ ಸಲಹೆ ಅನುಸಾರ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ಆರಂಭದಲ್ಲಿಯೇ ಬಸವ ಜಯಂತಿ ಆಚರಣೆ ಸಂಬಂಧ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಸಮುದಾಯದ ಮುಖಂಡರು ಏಪ್ರಿಲ್ 20ರಂದು ಬಸವ ಜಯಂತಿಯನ್ನು ಸಾಂಕೇತಿಕವಾಗಿ ಆಚರಣೆ ಮಾಡಬೇಕು. ಅಂದು ಬಸವೇಶ್ವರರ ವಿಚಾರಗಳನ್ನು ತಲುಪಿಸುವ ಉದ್ದೇಶದೊಂದಿಗೆ ವಿಚಾರ ಸಂಕಿರಣ, ವಚನ ಗಾಯನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮತ್ತೊಂದು ದಿನ ಅದ್ದೂರಿಯಾಗಿ ಬಸವ ಜಯಂತಿ ಆಚರಣೆ ಮಾಡಬೇಕೆಂದು ಈಗಾಗಲೇ ಸಮುದಾಯದ ಮುಖಂಡರು ತೀರ್ಮಾನಿಸಿದ್ದಾರೆ. ಹೀಗಾಗಿ ಮತ್ತೊಂದು ದಿನಾಂಕ ನಿಗದಿಪಡಿಸಿ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಹಕರಿಸಬೇಕು ಎಂದರು.
ಬಸವ ಜಯಂತಿ ಆಚರಣೆ ಎಲ್ಲ ತಾಲೂಕು, ಗ್ರಾಮ ಪಂಚಾಯಿತಿ ಸೇರಿದಂತೆ ಇತರೆ ಕಚೇರಿಗಳಲ್ಲೂ ಆಗಬೇಕು. ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ಸೂಚನೆ ನೀಡಬೇಕು. ಸರ್ಕಾರದ ಆದೇಶ ಅನುಸಾರ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರ ಇರಬೇಕು. ಮಹಾನ್ ನಾಯಕರ ಜಯಂತಿ ಆಚರಣೆ ಸಂಬಂಧ ನೇಮಕ ಮಾಡಿರುವ ಸಮಿತಿಯಂತೆ ಬಸವ ಜಯಂತಿ ಆಚರಣೆಗೂ ಸಮಿತಿಗಳು ಸಕ್ರಿಯವಾಗಿ ತೊಡಗುವಂತಾಗಬೇಕು. ವಿಚಾರ ಸಂಕಿರಣ ಉಪಸಮಿತಿಗೆ ಭಾಷಣಕಾರರನ್ನು ಆಯ್ಕೆ ಮಾಡಿ ಅಗತ್ಯ ಏರ್ಪಾಡುಗಳನ್ನು ಮಾಡುವ ಹೊಣೆಗಾರಿಕೆ ನೀಡಬೇಕು ಎಂದು ಮುಖಂಡರು ಅಭಿಪ್ರಾಯ ಸಲಹೆಗಳನ್ನು ನೀಡಿದರು.
ಬಸವಣ್ಣನವರು ಮಹಿಳಾ ಸಮಾನತೆಗೆ ಒತ್ತು ನೀಡಿದ್ದರು. ಹೀಗಾಗಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಿದ ಬಸವಣ್ಣನವರ ವಿಚಾರಗಳ ಬಗ್ಗೆಯೂ ಹೆಚ್ಚು ತಿಳಿಸಬೇಕಿದೆ. ಬಸವ ಜಯಂತಿ ಕಾರ್ಯಕ್ರಮದಂದು ಬಸವೇಶ್ವರರ ಕುರಿತ ಪುಸ್ತಕಗಳ ಮಳಿಗೆ ಸಹ ತೆರೆಯಬೇಕು. ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಷ್ಠಾಪಿಸಿರುವ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಮೆಟ್ಟಿಲುಗಳ ನಿರ್ಮಾಣ ಮಾಡಬೇಕು. ಈ ಕಾಮಗಾರಿಗೆ ಅಂದಾಜು ಪಟ್ಟಿ ಸಿದ್ದಪಡಿಸಿ ಶೀಘ್ರವೇ ಕಾರ್ಯಗತವಾಗಬೇಕು ಎಂಬೂದು ಸೇರಿದಂತೆ ಕಾರ್ಯಕ್ರಮ ಸಂಬಂಧ ಇನ್ನಿತರ ಸಲಹೆ ಅಭಿಪ್ರಾಯಗಳನ್ನು ಮುಖಂಡರು ಸಭೆಯ ಗಮನಕ್ಕೆ ತಂದರು.
ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ ಎಲ್ಲರ ಸಲಹೆ, ಅಭಿಪ್ರಾಯದಂತೆ ಏಪ್ರಿಲ್ 20ರಂದು ವಿಚಾರ ಸಂಕಿರಣ ಆಯೋಜಿಸಲಾಗುವುದು. ಸಮುದಾಯದ ಮುಖಂಡರು ತೀರ್ಮಾನಿಸಿರುವಂತೆ ಮತ್ತೊಂದು ದಿನ ಬಸವ ಜಯಂತಿ ಆಚರಣೆಗೆ ಜಿಲ್ಲಾಡಳಿತ ವತಿಯಿಂದ ಎಲ್ಲ ಸಹಕಾರ ನೀಡಲಾಗುವುದು. ಬಸವೇಶ್ವರರ ಪ್ರತಿಮೆಗೆ ಮೆಟ್ಟಿಲುಗಳನ್ನು ನಿರ್ಮಾಣ ಮಾಡುವುದಕ್ಕೂ ಶೀಘ್ರವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಡಿವೈಎಸ್‍ಪಿ ಸ್ನೇಹ ರಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜು, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾದ ಮೂಡ್ಲುಪುರ ನಂದೀಶ್, ಮುಖಂಡರಾದ ಆಲೂರು ಮಲ್ಲು, ಬಿ.ಕೆ. ರವಿಕುಮಾರ್, ಸಿ.ಎಂ. ಕೃಷ್ಣಮೂರ್ತಿ, ಅರಕಲವಾಡಿ ನಾಗೇಂದ್ರ, ದೊಡ್ಡರಾಯಪೇಟೆ ಗಿರೀಶ್, ವೀರಭದ್ರಸ್ವಾಮಿ, ಕೋಡಿಮೋಳೆ ರಾಜಶೇಖರ್, ಚಾ.ಗು. ನಾಗರಾಜು, ಸುರೇಶ್ ನಾಯಕ, ರತ್ನಮ್ಮ ಬಸವರಾಜು, ಬ್ಯಾಡಮೂಡ್ಲು ಬಸವಣ್ಣ, ಸಯ್ಯದ್ ರಫಿ, ಚಾ.ರಂ. ಶ್ರೀನಿವಾಸಗೌಡ, ಪರ್ವತ್ ರಾಜ್, ಕಂದಹಳ್ಳಿ ನಾರಾಯಣ, ಶಿವಶಂಕರ್, ಆಲೂರು ನಾಗೇಂದ್ರ, ಲತಾ ಜಯಣ್ಣ, ಹೊಸೂರ್ ನಟೇಶ್, ನಿರಂಜನಮೂರ್ತಿ, ಮಂಜೇಶ್, ಇನ್ನಿತರ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Like this:
Like Loading...
Related