ಚಾಮರಾಜನಗರ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ ವಸತಿ ಶಾಲೆ, ಹಾಸ್ಟೆಲ್, ಆಶ್ರಮ ಶಾಲೆಗಳ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಸಂಬಂಧಪಟ್ಟ ಅಧಿಕಾರಿಗಳು, ವಾರ್ಡನ್‍ಗಳು, ವಿಶೇಷವಾಗಿ ಕಾಳಜಿವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ವಸತಿಶಾಲೆ, ವಿದ್ಯಾರ್ಥಿನಿಲಯ, ಅಶ್ರಮ ಶಾಲೆಗಳ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ ಫಲಿತಾಂಶ ಹಾಗೂ ಮೂಲ ಸೌಕರ್ಯಗಳ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚೆಗೆ ನಡೆದ ಪೂರ್ವಭಾವಿ ಪರೀಕ್ಷೆಗಳಲ್ಲಿ ಹಾಸ್ಟೆಲ್, ವಸತಿ ಶಾಲೆಗಳು ಪಡೆದಿರುವ ಫಲಿತಾಂಶ ಪರಾಮರ್ಶೆ ನಡೆಸಿದ ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೋತ್ ಅವರು ಫಲಿತಾಂಶದಲ್ಲಿ ಇನ್ನೂ ಸುಧಾರಣೆಯಾಗಬೇಕಿರುವ ಕೆಲವು ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಿ ಉತ್ತಮ ಸಾಧನೆ ಮಾಡಲು ವಾರ್ಡನ್‍ಗಳು, ಪ್ರಾಂಶುಪಾಲರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.
ವಸತಿ ಶಾಲೆ, ಹಾಸ್ಟೆಲ್ ಗಳಲ್ಲಿ ಸಾಕಷ್ಟು ಉತ್ತಮ ಸೌಲಭ್ಯಗಳನ್ನು ಒದಗಿಸಲಾಗಿದೆ. ಓದಿಗೆ ಪೂರಕವಾದ ಎಲ್ಲಾ ಅನುಕೂಲಗಳು ಇವೆ. ಹೀಗಿರುವಾಗ ಶೇ. 100ರಷ್ಟು ಫಲಿತಾಂಶ ಬರಬೇಕು. ಕಲಿಕೆಯಲ್ಲಿ ಹಿಂದೆ ಉಳಿದಿರುವ ಕೆಲವು ವಿದ್ಯಾರ್ಥಿಗಳ ಬಗ್ಗೆ ವಿಶೇಷವಾಗಿ ಕೇಂದ್ರಿಕರಿಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ತೇರ್ಗಡೆಯಾಗಲು ಮಾರ್ಗದರ್ಶನ ಮಾಡಬೇಕು. ವಿದ್ಯಾರ್ಥಿಗಳು ಓದುತ್ತಿರುವ ಶಾಲೆ, ಕಾಲೇಜಿಗೆ ವಾರ್ಡನ್ ಗಳು ಭೇಟಿ ನೀಡಿ ಫಲಿತಾಂಶ ಸುಧಾರಣೆಗೆ ಗಮನಹರಿಸಬೇಕು ಎಂದು ತಿಳಿಸಿದರು.
ಹಾಸ್ಟೆಲ್, ವಸತಿ ಶಾಲೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ತಾಜಾ ಸೊಪ್ಪು, ತರಕಾರಿ, ದಿನಸಿ ಪದಾರ್ಥಗಳನ್ನು ಬಳಸಬೇಕು. ಸಾಮಗ್ರಿಗಳ ದಾಸ್ತಾನು ವಹಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಎಲ್ಲಿಯೂ ಲೋಪಗಳಾಗಬಾರದು. ಮುಂದೆ ಏನಾದರೂ ವ್ಯತ್ಯಾಸಗಳಾದ್ದಲ್ಲಿ ಸಂಬಂಧಪಟ್ಟ ವಾರ್ಡನ್ ಗಳ ವಿರುದ್ದ ಗಂಭೀರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಎಚ್ಚರಿಕೆ ನೀಡಿದರು.
ಮೂಲ ಸೌಕರ್ಯಗಳ ನಿರ್ವಹಣೆ ಸಮರ್ಪಕವಾಗಿರಬೇಕು. ಸಂಬಂಧಪಟ್ಟ ಇಲಾಖೆಯ ತಾಲೂಕು ಅಧಿಕಾರಿಗಳು ಕಡ್ಡಾಯವಾಗಿ ಹಾಸ್ಟೆಲ್, ವಸತಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಸೌಲಭ್ಯಗಳು ಲಭ್ಯವಾಗುತ್ತಿರುವ ಬಗ್ಗೆ ವ್ಯಾಪಕವಾಗಿ ವೀಕ್ಷಣೆ ಮಾಡಬೇಕು. ಭೇಟಿ ಕುರಿತ ವರದಿಯನ್ನು ಸಲ್ಲಿಸಬೇಕು. ಜಿಲ್ಲಾಮಟ್ಟದ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸಿ ಉಸ್ತುವಾರಿ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತಾಕೀತು ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಎನ್. ಮುನಿರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಶ್ವನಾಥ್, ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಕಲ್ಯಾಣಾಧಿಕಾರಿ ಗುಡ್ಡಪ್ಪ, ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Like this:
Like Loading...
Related