



ಚಾಮರಾಜನಗರ: ಯಾವುದೇ ಜಾತಿ, ಧರ್ಮ ನೋಡದೆ ಎಲ್ಲಾ ಧರ್ಮವು ಒಂದೇ ಎಂಬ ಭಾವನೆಯಿಂದ ಎಲ್ಲಾ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ವಿಚಾರ ಎಂದು ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ ತಿಳಿಸಿದರು.
ನಗರದ ಗುಂಡ್ಲುಪೇಟೆ ರಸ್ತೆಯಲ್ಲಿರುವ ಮೌಲಾನಾ ಆಜಾದ್ ಕಮ್ಯೂನಿಟಿ ಹಾಲ್‍ನಲ್ಲಿ ಶುಕ್ರವಾರ ರೆಹ್ಬರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ, ರೆಹ್ಬರ್ ಟ್ಯಾಲೆಂಟ್ ಅವಾರ್ಡ್ -2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೆಹ್ಬರ್ ಅಸೋಸಿಯೇಷನ್ ಹಲವಾರು ಸಾಮಾಜಿಕ ಕಳಕಳಿಯುಳ್ಳ ಸಂಸ್ಥೆಯಾಗಿದ್ದು, ಸಮಾಜಮುಖಿ ಕೆಲಸಗಳಲ್ಲಿ ಅತಿ ಹೆಚ್ಚು ತೊಡಗಿಸಿಕೊಳ್ಳುತ್ತಿರುವುದು ಸಂತಸದ ವಿಚಾರ ಎಂದರು. ಇದರ ಜತೆಗೆ ಕ್ರಿಕೆಟ್, ಸ್ಕೇಟಿಂಗ್‍ನಂತಹ ಕ್ರೀಡೆಗಳನ್ನು ಸಹ ಕಲಿಸುತ್ತಿರುವುದು ಕ್ರೀಡೆ ಬೆಳವಣಿಗೆಗೆ ಪೂರಕ ಎಂದರು.
ಇತ್ತೀಚೆಗೆ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳು ಒಂದು ಸಮಾಜಕ್ಕೆ ಸೀಮಿತವಾಗುತ್ತಿದೆ. ಇಂತಹ ಸಂದರ್ಭದಲ್ಲೂ ಎಲ್ಲಾ ಸಮಾಜದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಓದುತ್ತಿರುವ 20ಕ್ಕೂ ಹೆಚ್ಚು ಶಾಲೆಯ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಅವರನ್ನು ಪುರಸ್ಕರಿಸುತ್ತಿರುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡುತಿರುವ ರೆಹ್ಬರ್ ಸಂಸ್ಥೆಯು ಮಾದರಿಯಾಗಲಿ, ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ನೆಟ್‍ಬಾಲ್ ಅಸೋಸಿಯೇಷನ್‍ನ ಅಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, ಶಿಕ್ಷಣ ಪ್ರತಿಯೊಬ್ಬರ ಹಕ್ಕು, ಪ್ರತಿ ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ಕೊಡಿಸಬೇಕು ಎಂದು ತಿಳಿಸಿದರು.
ಪ್ರತಿಭಾನ್ವಿತ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವಂತಹ ಕೆಲಸವನ್ನು ರೆಹ್ಬರ್ ಅಸೋಸಿಯೇಷನ್ ಮಾಡುತ್ತಿರುವುದು ಸಂತಸದ ವಿಚಾರ ಎಂದರು.
ಪ್ರತಿಯೊಬ್ಬರಲ್ಲೂ ಕೂಡಾ ಪ್ರತಿಭೆಗಳಿವೆ. ಶಿಕ್ಷಣ, ಕಲೆ, ಸಾಹಿತ್ಯ ಇನ್ನಿತರ ಪ್ರತಿಭೆಗಳನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತರುವಂತಹ ಕೆಲಸವನ್ನು ರೆಹ್ಬಾರ್ ಅಸೋಸಿಯೇಷನ್ ಮಾಡುತ್ತಿದೆ. ಇದರ ಜೊತೆಗೆ ಪ್ರತಿ ತಿಂಗಳು ಬಡವರು ಮತ್ತು ನಿರ್ಗತಿಕರಿಗೆ ಆಹಾರ ಸಾಮಗ್ರಿಗಳ ವಿತರಣೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ಕಾರ್ಯಕ್ರಮಗಳು, ರಕ್ತದಾನ ಶಿಬಿರಗಳು, ಕಣ್ಣಿನ ತಪಾಸಣೆ, ದಸ್ತಾವೇಜು ಶಿಬಿರಗಳು (ಆoಛಿumeಟಿಣಚಿಣioಟಿ ಅಚಿmಠಿs) , ಉಚಿತ ಆಂಬ್ಯುಲೆನ್ಸ್ ಸೇವೆ ಸೇರಿದಂತೆ ಇನ್ನು ಮುಂತಾದ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಉಚಿತವಾಗಿ ಹಮ್ಮಿಕೊಳ್ಳುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ರೆಹ್ಬಾರ್ ಅಸೋಸಿಯೇಷನ್‍ನ ಅಧ್ಯಕ್ಷ ರೆಹಾನ್, ಕಾರ್ಯದರ್ಶಿ ಫುರ್ಖಾನ್ ಪಾಷಾ, ಮೋಟಿವೇಷನಲ್ ಸ್ಪೀಕರ್ ಹಾಗೂ ಫ್ಯಾಕ್ಟ್ ಎನ್‍ಜಿಓದ ಚೇರ್ಮನ್ ಸಾದ್ ಅಹಮ್ಮದ್, ಮೌಲಾನ ಆಜಾದ್ ಕಮ್ಯೂನಿಟಿ ಹಾಲ್‍ನ ಅಧ್ಯಕ್ಷರಾದ ಜನಾಬ್ ಆಫೀಸ್ ಜಾವೀದ್ ಅಹಮ್ಮದ್, ಉದ್ಯೋಗ ಅಧಿಕಾರಿ ಮಹಮ್ಮದ್ ಅಕ್ಬರ್, ಕರಾಟೆ ಗ್ರ್ಯಾಂಡ್ ಮಾಸ್ಟರ್ ವಿ.ನಾಗರಾಜ ಜೆಟ್ಟಿ, ಸಾದ್ ಫೈಸಲ್ ಷರೀಫ್, ಅನ್ಸರ್ ಖಾನ್ ಸೇರಿದಂತೆ ಅಸೋಷಿಯೇಷನ್‍ನ ಸದಸ್ಯರು ಹಾಜರಿದ್ದರು.