ಚಾಮರಾಜನಗರ: ದೇಶದ ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸುವ ಶಿಕ್ಷಕ ವೃತ್ತಿ ಬಹಳ ಶ್ರೇಷ್ಠ ಹಾಗೂ ಮಹತ್ವವಾದದ್ದು ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯಪಟ್ಟರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮತ್ತು ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ, ಡಾ. ಎಸ್. ರಾಧಾಕೃಷ್ಣನ್ ಹಾಗೂ ಸಾವಿತ್ರಿ ಬಾಪುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಶಿಕ್ಷಕರು ಶಾಲೆಗಳಲ್ಲಿ ಪಾಠ, ಪ್ರವಚನ ಮಾಡಬಲ್ಲರು, ಹಾಗೆಯೇ ಶಿಕ್ಷಕರಾಗಿದ್ದ ಮಾಜಿ ಉಪರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್‍ರಂತೆ ದೇಶದ ಆಡಳಿತದ ಚುಕ್ಕಾಣಿ ಹಿಡಿಯಬಲ್ಲರು. ಮಹಾತ್ಮ ಜ್ಯೋತಿ ಬಾಪುಲೆ ಅವರು ಮಹಿಳೆಯರಿಗೆ ದೇಶದಲ್ಲಿಯೇ ಮೊದಲಬಾರಿಗೆ ಶಾಲೆಗಳನ್ನು ತೆರೆದು ಶಿಕ್ಷಣ ನೀಡಿದರು. ಅವರ ಪತ್ನಿ ಸಾವಿತ್ರಿ ಬಾಪುಲೆ ಅವರು ದೇಶದ ಮೊದಲ ಶಿಕ್ಷಕಿಯಾಗಿ ಶಿಕ್ಷಕ ವೃತ್ತಿಯ ಶ್ರೇಷ್ಠತೆಯನ್ನು ಸಾರಲು ಧೈರ್ಯದಿಂದ ಮುನ್ನುಗ್ಗಿದರು. ಭಾವಿ ಸತ್ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಎಲ್ಲಾ ಶಿಕ್ಷಕರಿಗೂ ಇದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ ಶಿಕ್ಷಕ ಸೇವೆ ಅವಿಸ್ಮರಣೀಯವಾದದ್ದು. ನಮ್ಮಲ್ಲಿ ಆದಿಕಾಲದಿಂದಲೂ ಗುರು ಪರಂಪರೆ ಇದೆ. ಆಗ ಎಲ್ಲರಿಗೂ ಶಿಕ್ಷಣ ದೊರೆಯುತ್ತಿರಲಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕನ್ನು ನೀಡಿದರು. ಮಹಾತ್ಮ ಜ್ಯೋತಿ ಬಾಪುಲೆ ಹಾಗೂ ಅವರ ಪತ್ನಿ ಸಾವಿತ್ರಿ ಬಾಪುಲೆ ಅವರು ದೇಶದ ಮೂಲ ನಿವಾಸಿಗಳಿಗೆ ಶಿಕ್ಷಣ ನೀಡಿದರು. ಅವರ ತ್ಯಾಗ, ಪರಿಶ್ರಮ, ದೂರದೃಷ್ಠಿ ವ್ಯಕ್ತಿತ್ವ ನಮ್ಮೆಲ್ಲರಿಗೂ ಮಾದರಿಯಾಗಿದೆ. ಶಿಕ್ಷಕರು ಆದರ್ಶ ಶಿಕ್ಷಕರಾಗಿ ಹೊರಹೊಮ್ಮಬೇಕು. ವಿದ್ಯಾರ್ಥಿಗಳ ಬದುಕು ಹಸನಾಗಿ ಸಮಾಜದ ಉತ್ತಮ ವ್ಯಕ್ತಿಯಾಗಲು ಗುಣಮಟ್ಟದ ಬೋಧನೆಯ ಶಿಕ್ಷಕರು ಬೇಕು ಎಂದರು.
ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಬಿಪಿನ್ ನಾಗರಾಜು ಅವರು ಮುಖ್ಯ ಭಾಷಣ ಮಾಡಿ ಶಿಕ್ಷಕರ ದಿನ ಆಚರಣೆಗಿಂತ ಶಿಕ್ಷಣ ಮೌಲ್ಯಗಳ ಅನುಸರಣೆಯಾಗಬೇಕು. ಶಿಕ್ಷಣದ ಅರಿವಿಲ್ಲದಿದ್ದರೆ ಉತ್ತಮ ಶಿಕ್ಷಕರಾಗಲು ಸಾಧ್ಯವಿಲ್ಲ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬುದು ನಾಣ್ನುಡಿಯಲ್ಲ, ನೈಜ ಸತ್ಯವಾಗಿದೆ. ಇಂದಿನ ಶಿಕ್ಷಕರು ಪರಿಪಕ್ವವಾಗಬೇಕು. ವೈಚಾರಿಕ ನೆಲೆಗಟ್ಟಿನಲ್ಲಿ ಮಕ್ಕಳಿಗೆ ಪಾಠ ಮಾಡಬೇಕು. ವಿದ್ಯಾರ್ಥಿಗಳ ಅಂಕು, ಡೊಂಕುಗಳನ್ನು ತಿದ್ದಿ ತೀಡುವ ಕಲಾಕಾರರಾಗಬೇಕು. ಶಿಕ್ಷಕರು ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಪ್ರಭಾವ ಬೀರುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.
ಬುದ್ಧ, ಬಸವಣ್ಣ, ಕನಕದಾಸರು, ಮಹಾತ್ಮ ಜ್ಯೋತಿ ಬಾಪುಲೆ, ಸಾವಿತ್ರಿ ಬಾಪುಲೆ, ಮುಸ್ಲಿಂ ಶಿಕ್ಷಕಿ ಫಾತೀಮಾ ಬೇಗಂ, ಡಾ. ಬಿ.ಆರ್. ಅಂಬೇಡ್ಕರ್, ಪೆರಿಯಾರ್ ರಾಮಸ್ವಾಮಿ, ಬ್ರಹ್ಮಶ್ರೀ ನಾರಾಯಣಗುರು, ನಾಲ್ವಡಿ ಕೃಷ್ಣರಾಜ ಒಡೆಯರ್, ಇನ್ನಿತರ ಪೂರ್ವಿಕರ ಹೋರಾಟದ, ಪರಿಶ್ರಮದ ಫಲವಾಗಿ ನಾವೆಲ್ಲರೂ ಶಿಕ್ಷಣ ಕಲಿತಿದ್ದೇವೆ, ಕಲಿಯುತ್ತಿದ್ದೇವೆ. ನೆಮ್ಮದಿ ಜೀವನ ನಡೆಸುತ್ತಿದ್ದೇವೆ. ನಮಗೆ ಮೆರವಣಿಗೆಯ ಆದರ್ಶ ವ್ಯಕ್ತಿ ಬೇಡ, ಬರವಣಿಗೆಯ ವ್ಯಕ್ತಿ ಬೇಕು. ಇಂದಿನ ಶಿಕ್ಷಕರು ಕಂದಾಚಾರ, ಮೌಢ್ಯ ಬಿಟ್ಟು ಜಾಗೃತರಾಗಿ ಸಮಸಮಾಜ ಕಟ್ಟುವಲ್ಲಿ ಪೂರ್ವಿಕರನ್ನು ಅನುಸರಿಸೋಣ, ವಿದ್ಯಾರ್ಥಿಗಳ ಬದುಕಿಗೆ ಆದರ್ಶ ಶಿಕ್ಷಕರಾಗೋಣ ಎಂದು ಬಿಪಿನ್ ನಾಗರಾಜು ಅವರು ಹೇಳಿದರು.
ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು ಹಾಗೂ ನಗರಸಭಾ ಸದಸ್ಯರಾದ ಎಂ. ಮಹೇಶ್ ಅವರು ಶಿಕ್ಷಕರ ದಿನ ಆಚರಣೆಯ ಪ್ರಾಮುಖ್ಯತೆ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ವೇಳೆ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಆಯ್ಕೆಯಾದ ಶಿಕ್ಷಕರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ, ನಿವೃತ್ತ ಶಿಕ್ಷಕರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಮೃತ ಶಿಕ್ಷಕರ ಗೌರವಾರ್ಥ ಒಂದು ನಿಮಿಷಗಳ ಕಾಲ ಮೌನ ಆಚರಿಸಲಾಯಿತು.
ಕಾವೇರಿ ಜಲಾನಯನ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್. ಚಂದ್ರ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಜಿಲ್ಲಾ ಹಾಗೂ ತಾಲೂಕುಮಟ್ಟದ ಎಲ್ಲಾ ಶಿಕ್ಷಕರ ಸಂಘಗಳು, ಬೋಧಕ, ಬೋಧಕೇತರ ಸಂಘಗಳು, ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾಡಳಿತ ಭವನದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಪೇಟೆ ಪ್ರೈಮರಿ ಶಾಲೆಯಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಡಾ. ಎಸ್. ರಾಧಾಕೃಷ್ಣನ್ ಹಾಗೂ ಸಾವಿತ್ರಿ ಬಾಪುಲೆ ಅವರ ಭಾವಚಿತ್ರಗಳ ಮೆರವಣಿಗೆ ಆಕರ್ಷಕ ಕಲಾತಂಡಗಳೊಂದಿಗೆ ನಡೆಯಿತು.