ಬೋಧಗಯಾ ಮಹಾ ವಿಹಾರದ ಸಂಪೂರ್ಣ ಆಡಳಿತವನ್ನು ಬೌದ್ಧರಿಗೆ ಒಪ್ಪಿಸಬೇಕು :ವಿನಯಾಚಾರ್ಯ ಬಂತೇಜಿ

  • ಬಿ.ಟಿ.ಆಕ್ಟ್-೧೯೪೯  ರದ್ದುಗೊಳಿಸಬೇಕೆಂದು  ನಡೆಯುತ್ತಿರುವ ಹೋರಾಟಕ್ಕೆ  ಎಲ್ಲರೂ ಸಂಪೂರ್ಣ ಸಹಕಾರ  ನೀಡಲು ಮನವಿ

ಚಾಮರಾಜನಗರ : ಬಿಹಾರದಲ್ಲಿರುವ ಬೌದ್ಧರ ಪವಿತ್ರ ಸ್ಥಳವಾದ ಬೋಧಗಯಾ ಮಹಾ ವಿಹಾರದ ಸಂಪೂರ್ಣ ಆಡಳಿತವನ್ನು ಬೌದ್ಧರಿಗೆ ಒಪ್ಪಿಸಬೇಕು ಹಾಗೂ ಬಿ.ಟಿ.ಆಕ್ಟ್-೧೯೪೯ ಅನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಬೌದ್ಧ ಉಪಾಸಕರು, ಅಂಬೇಡ್ಕರ್ ಅನುಯಾಯಿಗಳು ಕೈ ಜೋಡಿಸಬೇಕು ಎಂದು ಬಿಹಾರದ ವಿನಯಾಚಾರ್ಯ ಬಂತೇಜಿ ಮನವಿ ಮಾಡಿದರು.
    ನಗರದ ಹೊರವಲಯದ ಯಡಬೆಟ್ಟದಲ್ಲಿರುವ ನಳಂದ ಬೌದ್ಧ ವಿಶ್ವವಿದ್ಯಾನಿಲಯ ಧ್ಯಾನ ಮತ್ತು ಅಧ್ಯಯನ ಕೇಂದ್ರದಲ್ಲಿ ಭಾನುವಾರ ಇಂಟರ್ ನ್ಯಾಷನಲ್ ಬುದ್ದಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್, ಉಪಾಸಿಕ ಮತ್ತು ಉಪಾಸಕ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ಮಾತೆ ಸಾವಿತ್ರಿ ಬಾಪುಲೆ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
    ಬೋಧಗಯಾದ ಮಹಾವಿಹಾರ ಸಂಪೂರ್ಣವಾಗಿ ಬುದ್ದರ ಅಧೀನದಲ್ಲಿಲ್ಲ. ಹಾಗಾಗಿ ಆ ಮಹಾ ವಿಹಾರವನ್ನು ಬೌದ್ಧರಿಗಾಗಿ ಬಿಡಿಸಿಕೊಳ್ಳಲು ಹೋರಾಟ ರೂಪಿಸಿದ್ದೇವೆ. ನಮ್ಮ ಪೂರ್ವಿಕರು ಅಪಮಾನದ ವಿರುದ್ಧ ಹೋರಾಡಿ ಭೀಮಾ ಕೋರೆಗಾಂವ್ ವಿಜಯೋತ್ಸವ ಸಾಧಿಸಿದ್ದಾರೆ. ಪ್ರಸ್ತುತ ನಾವು ಮಹಾಬೋಧಿ ಮಹಾ ವಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋರಿದರು.
   ಬಿಹಾರದಲ್ಲಿರುವ ಬೌದ್ಧ ಮಹಾವಿಹಾರವನ್ನು ಬೌದ್ದರಿಗೆ ಬಿಡಿಸಿಕೊಡಬೇಕೆಂದು ಶ್ರೀಲಂಕಾ ಮತ್ತು ಜಪಾನ್ ದೇಶಗಳು ಪ್ರಯತ್ನ ನಡೆಸಿದವು ಆದರೆ, ಬೆಂಬಲ ಸಿಗದೆ ಸಾಧ್ಯವಾಗಲಿಲ್ಲ. ಆದರೆ, ನಾವು ಮಹಾವಿಹಾರವನ್ನು ಪಡೆಯಲು ಹೋರಾಟ ಶುರು ಮಾಡಿದ್ದೇವೆ. ದೇಶಾದ್ಯಂತ ಸಂಚಾರ ಮಾಡಿ ಬೌದ್ಧರನ್ನು ಸಂಘಟಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.
ಮಹಿಳಾ ದಿನವಾಗಿ ಘೋಷಿಸಲಿ : ಡಾ.ಟಿ.ಪದ್ಮಶೀ
  ಮೈಸೂರಿನ ಮಾನಸ ಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಉಪನ್ಯಾಸಕಿ ಡಾ.ಟಿ.ಪದ್ಮಶ್ರೀ ಮಾತನಾಡಿ, ತೆಲಂಗಾಣ ಸರ್ಕಾರದ ಮಾದರಿಯಲ್ಲಿ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳು ಅಕ್ಷರದವ್ವ ಸಾವಿತ್ರಿಬಾಯಿಫುಲೆ ಅವರ ಜನ್ಮ ದಿನವನ್ನು ಮಹಿಳಾ ದಿನಾಚರಣೆಯನ್ನಾಗಿ ಘೋಷಿಸಬೇಕು ಎಂದರು.
ಪತಿ ಪತ್ನಿಯರಾದ ಜ್ಯೋತಿಬಾಫುಲೆ ಮತ್ತು ಸಾವಿತ್ರಿಬಾಫುಲೆ ಅವರಿಬ್ಬರನ್ನು ಬೇರ್ಪಡಿಸಿ ಮಾತನಾಡುವುದು ಸಾಧ್ಯವೇ ಇಲ್ಲ. ಈ ಮಾದರಿ ದಂಪತಿಯನ್ನು ಇತಿಹಾಸದಲ್ಲೂ ಕಾಣಲು ಸಾಧ್ಯವಿಲ್ಲ. ಅವರ ಹೆಜ್ಜೆಗಳು ಚರಿತ್ರೆಯ ಪುಟದಲ್ಲಿ ಜೊತೆಯಾಗಿವೆ ಎಂದು ತಿಳಿಸಿದರು.
ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಹೆಣ್ಣು ಮಕ್ಕಳ ಶಾಲೆ ತೆರೆದ ಕೀರ್ತಿ ಈ ದಂಪತಿಗೆ ಸಲ್ಲುತ್ತದೆ. ಪತಿ ಆಶಯವನ್ನು ಈಡೇರಿಸಲು ಅವರು ಆರಂಭಿಸಿದ ಶಾಲೆಯಲ್ಲಿ ಪತ್ನಿ ಶಿಕ್ಷಕಿಯಾಗಿ ಪಾಠ ಹೇಳಿಕೊಟ್ಟರು. ಜ್ಯೋತಿ ಬಾಫುಲೆ ಅವರ ಕಾರ್ಯಕ್ರಮಗಳನ್ನು ಮುಂದುವರಿಸಿದ ಕಟ್ಟಾಳು ಎಂದರು.
ಬಾಹ್ಮಣಶಾಹಿ ಕುತಂತ್ರದ ಯಾವುದಕ್ಕೂ ಜಗ್ಗ, ಬಗ್ಗದೆ ಮಹಿಳೆಯರಿಗೆ ಆಲೋಚನೆ ಶಕ್ತಿ ತಂದು ಕೊಟ್ಟರು. ಫುಲೆ ಅವರ ದಂಪತಿಯ ಆಚರಣೆಗಳು, ಪ್ರಯೋಗಕ್ಕೆ ಬಂದಾಗ ತ್ಯಾಗದ ಬದುಕಿಗೆ ಅರ್ಥ ಬರುತ್ತದೆ. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಮರಜ್ಯೋತಿ ಬಂತೇಜಿ ಮಾತನಾಡಿದರು. ನಾಗರತ್ನ ಬಂತೇಜಿ, ಯಶ ಬಂತೇಜಿ, ಬಿ.ಆರ್.ರಂಗಸ್ವಾಮಿ, ನಾಗಸಿದ್ದಾರ್ಥ ಹೊಲೆಯಾರ್, ಎನ್.ನಾಗಯ್ಯ, ನಲ್ಲೂರು ಪರಮೇಶ್, ಕೃಷ್ಣಯ್ಯ, ಎಂ.ಸಿದ್ದರಾಜು ಸೋಮವಾರಪೇಟೆ, ಭಾರತೀಯ ಬೌದ್ಧ ಮಹಾಸಭಾ ಮಹಿಳಾ ಘಟಕ ಅಧ್ಯಕ್ಷೆ ನಾಗಶಿಲ್ಪ, ರಮಾಬಾಯಿ ಫೌಂಡೇಶನ್ ಅಧ್ಯಕ್ಷೆ ಪುಷ್ಪ ಮರಿಸ್ವಾಮಿ ಬೌದ್ಧ ಉಪಾಸಕರು ಹಾಜರಿದ್ದರು.

Leave a Reply

Your email address will not be published. Required fields are marked *