ಒಳ ಮೀಸಲಾತಿಯಲ್ಲಿ ಅನ್ಯಾಯವಾದರೆ ಬಲಗೈ ಸಮುದಾಯದ ಮೂವರು ಸಚಿವರು ರಾಜೀನಾಮೆ : ಎ.ಆರ್. ಕೃಷ್ಣಮೂರ್ತಿ
ಮಾ. 25 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ‘ಬಲಗೈ’ ಶಕ್ತಿ ಪ್ರದರ್ಶನಕ್ಕೆ ಬನ್ನಿ : ಶ್ರೀಗಳ ಕರೆ
ಚಾಮರಾಜನಗರ:
ರಾಜ್ಯ ಸರ್ಕಾರ ಒಳ ಮೀಸಲಾತಿ ನೀಡುವಲ್ಲಿ ಬಲಗೈ ಸಮುದಾಯವನ್ನು ತಾತ್ಸಾರ ಮಾಡಿದ ಮಾರನೇ ದಿನವೇ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪತನಗೊಳ್ಳಲಿದೆ ಎಂದು ಮೈಸೂರಿನ ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ್‌ಸ್ವಾಮೀಜಿ ಎಚ್ಚರಿಕೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ, ಗಡಿ ಕಟ್ಟೆಯಜಮಾನರುಗಳ ಹಾಗೂ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ನ್ಯಾ.ನಾಗಮೋಹನ ದಾಸ್ ರವರ ಒಳಮೀಸಲಾತಿ ವರದಿಯ ಸಾಧಕ – ಬಾಧಕಗಳ ಕುರಿತು ವಿಚಾರ ಸಂಕಿರಣವನ್ನು ಉದ್ಗಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಿದ್ದೇ ಬಲಗೈ ಸಮುದಾಯ ಎಂಬುದನ್ನು ಅವರು ಮರೆತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆ 257 ಮತಗಳ ಅಂತರದಲ್ಲಿ ಗೆಲ್ಲಲು ಬಲಗೈ ಸಮುದಾಯ ಕಾರಣ. ಇಲ್ಲಿದ್ದರೆ ರಾಜಕೀಯ ಭವಿಷ್ಯವೇ ಮಾಸಿ ಹೋಗುತ್ತಿತ್ತು. ಅಂದು ಶ್ರೀನಿವಾಸಪ್ರಸಾದ್ ನಾಯಕತ್ವದಲ್ಲಿ ನಡೆದ ಚುನಾವಣೆಯನ್ನು ನೆನಪು ಮಾಡಿಕೊಳ್ಳಬೇಕು. ಈಗಾಗಲೇ ಸಿದ್ದರಾಮಯ್ಯ ಪೆನ್ನು ಸ್ವಲ್ಪ ಹಿಂದೆ ಸರಿಸಿದೆ. ಮಾ. 25 ರಂದು ಪ್ರೀಡಂ ಪಾರ್ಕ್ನಲ್ಲಿ ನಡೆಯುವ ನಮ್ಮ ಬಲಗೈ ಸಮುದಾಯದ ಶಕ್ತಿ ಪ್ರದರ್ಶನವು ಮತ್ತೊಂದು ಎಚ್ಚರಿಕೆ ಗಂಟೆಯಾಗಬೇಕು ಎಂದು ತಿಳಿಸಿದರು.
ಅಲ್ಲದೇ ವಿಶೇಷ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಅವರ ನೇತೃತ್ವದ ಸಚಿವರು ತೆಗೆದುಕೊಳ್ಳುವ ತೀರ್ಮಾನದಲ್ಲಿ ನಿಮ್ಮ ಸರ್ಕಾರ ಒಳಿಯಲಿದೆ ಎಂದು ಈಗಾಗಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೇಳಿದ್ದೇನೆ. ಇಷ್ಟಾಗಿಯು ಒಳ ಮೀಸಲಾತಿ ವಿಚಾರದಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ. ಮೀಸಲಾತಿ ವಿಚಾರದಲ್ಲಿ ಬಲಗೈ ಮತ್ತು ಎಡಗೈ ಭಿನ್ನಾ ಮಾಡಿ, ನಮ್ಮಲ್ಲಿಯೇ ವೈಮನಸ್ಸು ಉಂಟು ಮಾಡುವ ಕುತಂತ್ರ ನಡೆದಿದೆ. ಇದನ್ನು ಭೇದಿಸುವ ಶಕ್ತಿ ನಮ್ಮಲ್ಲಿದೆ. ನಾವು ಅಂಬೇಡ್ಕರ್ ಬುದ್ದನ ಅನುಯಾಯಿಗಳು. ಹೀಗಾಗಿ ನಮ್ಮ ಹೋರಾಟ ನಿರಂತರವಾಗಿರಲಿ ಎಂದರು.
ದಲಿತ ಸಿಎಂ ತಪ್ಪಿಸುವ ಹುನ್ನಾರ : ಸರ್ಕಾರ ಹಿಂದೆ ಖಾಸಗೀಕರಣ ಮಾಡಿ ಸಂವಿಧಾನವನ್ನು ಸರ್ವ ನಾಶ ಮಾಡಲು ಹೊರಟಿತ್ತು. ಈಗ ಒಳ ಮೀಸಲಾತಿ ತಂದು ಬಲಗೈ ಎಡಗೈ ಸಮುದಾಯವನ್ನು ಬೀದಿಗೆ ತಂದು ನಿಲ್ಲಿಸಿ, ದಲಿತರನ್ನು ಸರ್ವ ನಾಶ ಮಾಡಲು ಹೊರಡಿದೆ. ಇದರ ಭಾಗವಾಗಿ ಪರಿಶಿಷ್ಟ ಜಾತಿಗಳ 101 ಜಾತಿಗಳ ಪೈಕಿ ಹೆಚ್ಚು ಸಂಖ್ಯೆಯಲ್ಲಿರುವವರು ಹೊಲಯ ಹಾಗೂ ಮಾದಿಗ ಸಮುದಾಯದವರು. ಇವರು ಒಂದಾಗಿದ್ದರೆ, ದಲಿತರೊಬ್ಬರು ಸಿಎಂ ಆಗುತ್ತಾರೆ ಎಂಬ ಕಾರಣಕ್ಕಾಗಿ ಈ ಒಳ ಮೀಸಲಾತಿ ಜಾರಿ ಎಂಬ ಹುನ್ನಾರವನ್ನು ತಂದಿದ್ದಾರೆ. ಇದು ನಮಗೆ ಅರ್ಥ ಆಗಿದೆ. ಆದರೆ, ನಮ್ಮ ಸಹೋದರ ಸಮಾಜವಾದ ಮಾದಿಗರಿಗೆ ಅರ್ಥವಾಗಿಲ್ಲ ಎಂದರು.
ಬಲಗೈ ಸಮುದಾಯದ ಸಚಿವರಿಂದ ರಾಜೀನಾಮೆ ಪತ್ರ ಸಿದ್ದ : ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಒಳ ಮೀಸಲಾತಿ ಜಾರಿ ಮಾಡುವ ಬಿಲ್ ಅನ್ನು ಸದನದಲ್ಲಿ ವಿರೋಧಿಸಿದೆ. ಆದರೆ, ಧ್ವನಿ ಮತಕ್ಕೆ ಹಾಕಿ ವಿಧಾನ ಸಭೆಯಲ್ಲಿ ಚರ್ಚೆ ಇಲ್ಲದೇ ಪಾಸ್ ಆಯಿತು. ಆದರೆ, ಮೇಲ್ಮನವಿಯಲ್ಲಿ ಇದು ಚರ್ಚೆ ನಡೆದು, ಕೆಲವು ಮಾರ್ಪಾಡು ಮಾಡಲು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಒಪ್ಪಿಗೆ ಸೂಚಿಸಿದರು. ಇದಕ್ಕೆ ಪ್ರಮುಖ ಕಾರಣರು ನಮ್ಮ ಸಮುದಾಯದ ಅಧಿಕಾರಿ ಡಿ. ಚಂದ್ರಶೇಖಯ್ಯ ಎಂದರೆ ತಪ್ಪಾಗಲಾದು. ಛಲವಾದಿ ನಾರಾಯಣಸ್ವಾಮಿ ಅವರಿಗೆ ಎಲ್ಲಾ ಪೂರಕವಾದ ಮಾಹಿತಿಯನ್ನು ನೀಡಿದ್ದರು. ಇಂಥ ಅಧಿಕಾರಿಗಳು ನಮ್ಮ ಸಮಾಜದ ಆಸ್ತಿ. ಮಾದಿಗ ಸಮಾಜದ ಸಚಿವರು ರಾಜೀನಾಮೆ ನೀಡಲು ಸಿದ್ದ ಎನ್ನುತ್ತಿದ್ದಾರೆ. ಆದರೆ, ನಮ್ಮ ಸಮಾಜದ ಮೂವರು ಸಚಿವರು ಸಹ ರಾಜೀನಾಮೆ ಪತ್ರವನ್ನು ಬರೆದು ಸಿದ್ದಪಡಿಸಿಕೊಂಡಿದ್ದಾರೆ. ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ನ್ಯಾಯ ಸಿಗದಿದ್ದ ದಿನವೇ ರಾಜೀನಾಮೆ ನೀಡುತ್ತಾರೆ ಎಂದು ಕೃಷ್ಣಮೂರ್ತಿ ತಿರುಗೇಟು ನೀಡಿದರು.
ಕೇಂದ್ರ ಸರ್ಕಾರ ಜಾರಿ ಮಾಡಿರುವ ನರೇಗಾ ಯೋಜನೆಯಲ್ಲಿ ಮಹಾತ್ಮಾಗಾಂಧಿ ನರೇಗಾವನ್ನು ಬದಲಾಯಿಸಿದ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ವಿಶೇಷ ಅಧಿವೇಶವನ್ನು ಕರೆದಿದ್ದು. ಇದರ ಪರ ಹಾಗೂ ವಿರೋಧ ಚರ್ಚೆ ನಡೆಯುತ್ತಿತ್ತು. ಈ ಮಧ್ಯೆಯೇ ಒಳ ಮೀಸಲಾತಿಯನ್ನು ನೀಡುವ ಬಿಲ್ ಅನ್ನು ಈ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದುಕೊಳ್ಳುವ ಹುನ್ನಾರವನ್ನು ಪರ ಹಾಗು ವಿರೋಧ ಪಕ್ಷಗಳಲ್ಲಿರುವವರು ಮಾಡಿದರು. ಇದರ ಫಲವಾಗಿ ಈ ಬಿಲ್‌ಗೆ ಚರ್ಚೆ ಇಲ್ಲದೇ ಪಾಸ್ ಆಯಿತು. ಎಲ್ಲದಕ್ಕು ವಿರೋಧ ವ್ಯಕ್ತಪಡಿಸುತ್ತಿದ್ದ ವಿರೋಧ ಪಕ್ಷದವರು ಒಳ ಮೀಸಲಾತಿ ವಿಚಾರದಲ್ಲಿ ನಮ್ಮ ನಮ್ಮ ಸಮುದಾಯದ ಪರವಾಗಿ ಇರಲಿಲ್ಲ. ಇದೊಂದು ಪಿತೂರಿ ಮತ್ತು ಹುನ್ನಾರವಾಗಿದೆ. ಹೀಗಾಗಿ ಬಲಗೈ ಸಮುದಾಯದವರು ಎಚ್ಚರಿಕೆ ಯಾಗಿದೆ. ಇನ್ನಾದರು ಯಾರು ನಮ್ಮ ಪರ ಧ್ವನಿಯಾಗುತ್ತಾರೆ ಎಂಬುದನ್ನು ಅರ್ಥೈಯಿಸಿಕೊಳ್ಳಬೇಕು ಎಂದು ಕೃಷ್ಣಮೂರ್ತಿ ತಿಳಿಸಿದರು.
ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ ಒಳ ಮೀಸಲಾತಿ ಜಾರಿಯ ಸಾಧಕ ಭಾದಕ ಕುರಿತು ವಿಚಾರ ಮಂಡಿಸಿ, ನ್ಯಾ. ನಾಗಮೋಹನ್ ದಾಸ್ ಆಯೋಗ ವರದಿಯೇ ಅವೈಜ್ಙಾನಿಕವಾಗಿದೆ. ಅಲ್ಲದೇ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡುವ ದುರುದ್ದೇಶದಿಂದಲೇ ಆಯೋಗ ರಚನೆ ಮಾಡಿದ್ದಂತೆ ಆಗಿದೆ. ಅಲ್ಲದೇ ಹೆಚ್ಚು ಉಂಡವವರು. ಹಸಿದವರಿಗೆ ಅನ್ನ ನೀಡಬೇಕೆಂದು ಹೇಳಿರುವುದು ಅವರ ತರ್ಕಿಗೆ ವಾದವಾಗಿದೆ. ಈ ವರದಿಯನ್ನು ಸರ್ಕಾರ ಎಡಕಾಲಿನಿಂದ ಓದೆಯುವಂತಾಗಿದೆ ಎಂದರು.
ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಮಾತನಾಡಿ, ಒಳ ಮೀಸಲಾತಿಯಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾದರೆ ಸುಮ್ಮನೆ ಕೂರುವ ಪ್ರಶ್ನೆ ಇಲ್ಲ. ಚಾ.ನಗರದಿಂದ ಹಚ್ಚು ಕಿಡಿ ರಾಜ್ಯಾದ್ಯಂತ ಹೋರಾಟ ಶುರುವಾಗುತ್ತದೆ. ಇದನ್ನು ಸರ್ಕಾರ ಗಮನಿಸಬೇಕು. ಸಿದ್ದರಾಮಯ್ಯ ಹಾಗೂ ಮಹದೇವಪ್ಪ, ಪ್ರಿಯಾಂಗ್ ಖರ್ಗೆ, ಡಾ.ಪರಮೇಶ್ವರ ಅವರು ನಮ್ಮ ಸಮಾಜದ ಪರವಾಗಿದ್ದಾರೆ ಎಂದರು.
ಸಭೆಯಲ್ಲಿ ಅಂಬೇಡ್ಕರ್ ವಿಚಾರವಾದಿ ಡಾ.ಪಿ.ದೇವರಾಜು ಮಾತನಾಡಿದರು. ಛಲವಾದಿ ಗುರುಪೀಠ ಶ್ರೀ ಬಸವರಾಜನಾಗಿ ಸ್ವಾಮೀಜಿ, ನಗರಸಭಾ ಮಾಜಿ ಸದಸ್ಯ ಅರ್.ಪಿ.ನಂಜುಂಡಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ತಾ.ಪಂ. ಮಾಜಿ ಅಧ್ಯಕ್ಷ ಆರ್.ಮಹದೇವ್ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಅಯ್ಯನಪುರ ಶಿವಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಆರ್.ಮಹದೇವಯ್ಯ, ಯುವ ಮುಖಂಡ ನಲ್ಲೂರುಮಹದೇವಸ್ವಾಮಿ, ಚಾಮುಲ್ ನಿರ್ದೇಶಕ ರೇವಣ್ಣ, ವಕೀಲ ಪಸನ್ನಕುಮಾರ್, ಗಡಿ ಯಜಮಾನರಾದ ರವಿಕುಮಾರ್, ವೀರಣ್ಣ, ರಂಗಸ್ವಾಮಿ, ನಾಗರಾಜು, ಕಟ್ಟೆ ಯಜಮಾನರಾದ ಪಾಪಣ್ಣ, ಸೋಮಣ್ಣ, ಸಿದ್ದಯ್ಯ, ಕೆ.ರಂಗಸ್ವಾಮಿ, ಪುಟ್ಟಸ್ವಾಮಿ, ಚೆನ್ನಂಜಯ್ಯ, ಮಹದೇವಯ್ಯ , ಸಮುದಾಯದ ಮುಖಂಡರಾದ ಸೋಮೇಶ್ವರ, ನಾಗಯ್ಯ, ವೀರಭದ್ರಸ್ವಾಮಿ, ಹೆಬ್ಬಸೂರು ರಂಗಸ್ವಾಮಿ, ಗೋವಿಂದರಾಜು, ಸಿದ್ದಪ್ಪಾಜಿ , ಡಾ.ಬಿ.ಆರ್. ಅಂಭೇಡ್ಕರ್ ಸಂಘ ಸಂಸ್ಥೆಯ ಪದಾಧಿಕಾರಿಗಳು ಗಡಿಕಟ್ಟೆ ಯಜಮಾನರು ಮುಖಂಡರು ಭಾಗವಹಿಸಿದ್ದರು.