ಎಲ್ಲಾ ಕಾಲದಲ್ಲೂ ಕಣ್ಣಿಗೆ ಮತ್ತು ಕಿವಿಗಳಿಗೆ ಗೋಚರಿಸುವುವಂಥದ್ದು “ಅರಮನೆ” ಮತ್ತು “ಆಕಾಶವಾಣಿ”


ಮೈಸೂರು ಆಕಾಶವಾಣಿ ಕೇಳುಗರ ಬಳಗದ ಅಧ್ಯಕ್ಷ ಕಣ್ಣೂರು ವಿ ಗೋವಿಂದಾಚಾರಿ ಅಭಿಪ್ರಾಯ


ಆಕಾಶವಾಣಿ ಮತ್ತು ಕೇಳುಗರ ನಡುವೆ ಭಾವ ಸೇತು ವಾಗಿರುವ "ಸಮುದ್ಯತಾ ಶ್ರೋತೃ ಬಳಗ" ಮೈಸೂರು ಆಕಾಶವಾಣಿಯಿಂದ ಕಳೆದ ತಿಂಗಳು ನಿವೃತ್ತರಾದ ಉಮೇಶ್ ಎಸ್ ಎಸ್, ಉಪ ನಿರ್ದೇಶಕರು ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಬಳಗದ ವತಿಯಿಂದ ಇತ್ತೀಚಿಗೆ ಮೈಸೂರಿನ ವಿಜಯ ವಿಠಲ ಶಿಕ್ಷಣ ಸಂಸ್ಥೆಯ ಆವರಣದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಈ ಬೀಳ್ಕೊಡುಗೆ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷರಾದ ಕಣ್ಣೂರು ವಿ ಗೋವಿಂದಾಚಾರಿ ರವರು ವಹಿಸಿ, ಮಾತನಾಡುತ್ತಾ..... ಕನ್ನಡ ವರ್ಣಮಾಲೆಯ ಮೊದಲ ಹಾಗೂ ಎರಡನೆಯ ಅಕ್ಷರಗಳಾದ ಅ, ಆ ದ ಬಗ್ಗೆ ಅರ್ಥಪೂರ್ಣವಾಗಿ ವಿಶ್ಲೇಷಿಸಿದರು. "ಆ"- ಅಂದರೆ ಅಮ್ಮನೂ ಹೌದು ಅರಮನೆಯು ಹೌದು "ಆ"- ಎಂದರೆ ಆಕಾಶವಾಣಿ ಆಗುತ್ತದೆ. ಏಕೆಂದರೆ ನಮ್ಮ ಕಣ್ಣಿಗೆ ಮತ್ತು ಕಿವಿಗಳಿಗೆ ಗೋಚರಿಸುವುದು,  ಮೈಸೂರಿಗರಷ್ಟೇ ಅಲ್ಲದೆ ವಿಶ್ವದಲ್ಲೆಡೆ ಮೈಸೂರು ಅರಮನೆ ಮತ್ತು ಮೈಸೂರು ಆಕಾಶವಾಣಿ ಎಲ್ಲರಿಗೂ ಇಷ್ಟವಾದಂತದ್ದು. ಮೈಸೂರಿನ ಜೊತೆ ಇವೆರಡೂ ಕೂಡ ಸೇರಿಕೊಂಡು ಹಲವು ಪ್ರಥಮ ಗಳಿಗೆ ನಾಂದಿ ಯಾಗಿವೆ. 

ಈ ಸಂದರ್ಭದಲ್ಲಿ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಮುಖ್ಯವಾಗಿ ಮೈಸೂರು ಆಕಾಶವಾಣಿಗೆ ಆಶ್ರಯದಾತರಾಗಿದ್ದರು ಮತ್ತು ಎಂ ವಿ ಗೋಪಾಲ ಸ್ವಾಮಿ ರವರ ಕೊಡುಗೆಯನ್ನು ಪ್ರತಿಯೊಬ್ಬರೂ ಕೂಡ ನೆನಪಿಸಿಕೊಳ್ಳಲೇಬೇಕು. ಇತಿಹಾಸ ನಿರ್ಮಿಸಿದ ಮೈಸೂರು ಆಕಾಶವಾಣಿಯ ಮೊದಲ ಸಹಾಯಕ ನಿರ್ದೇಶಕರಾಗಿದ್ದ ಡಾ ನಾ ಕಸ್ತೂರಿ ಮುಖ್ಯ ತಳಹದಿಯಾದರು. ನಂತರದಲ್ಲಿ ಎ ಎಸ್ ಮೂರ್ತಿ, ಎಂ ನಟೇಶ್ ಮುಂತಾದವರು, ಅಲ್ಲದೆ   ಮೈಸೂರು ಆಕಾಶ ವಾಣಿ ಕಟ್ಟಡದ ವಾಸ್ತುಶಿಲ್ಪಿ ಜರ್ಮನಿಯ ಆಟೋ ಕೊನಿಕ್ಸ್ ಬರ್ಗರ್ ಇವರೆಲ್ಲರೂ ಕೂಡ ಕೇಂದ್ರದ ಬೆಳವಣಿಗೆಗೆ ದುಡಿದರು. ಈ ವೇದಿಕೆಯಲ್ಲಿ ಎಂ ವಿ ಗೋಪಾಲಸ್ವಾಮಿಯವರ ಮೊಮ್ಮಗಳು ಭಾರತಿ ಘನ ಶ್ಯಾಂ ಇರುವುದು ವೇದಿಕೆಗೆ ಘನತೆ ತಂದಿದೆ ಎಂದರು. 

ಮುಂದಿನ ದಿನಗಳಲ್ಲಿ ನಮ್ಮ ಬಳಗದ ಮೂಲಕ ಮೈಸೂರು ಆಕಾಶವಾಣಿಯ ಸಹಭಾಗಿತ್ವದಲ್ಲಿ ಅನೇಕ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಬಳಗದ ವತಿಯಿಂದ ಸನ್ಮಾನ ಸ್ವೀಕರಿಸಿದ ಮೈಸೂರು ಆಕಾಶವಾಣಿಯ ನಿವೃತ್ತ ಉಪ ನಿರ್ದೇಶಕರಾದ ಉಮೇಶ್ ಎಸ್ ಎಸ್ ಮಾತನಾಡುತ್ತಾ….. ನಾನು ಆಕಾಶವಾಣಿಗೆ ಸೇರುವ ಮುಂಚೆ ನಾಟಕ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇತ್ತು. ಕಲಬುರ್ಗಿ ಆಕಾಶವಾಣಿ ಕೇಂದ್ರಕ್ಕೆ ಕೆಲಸಕ್ಕೆ ಸೇರಿದ ನಂತರ ನಾಟಕದ ಹಲವಾರು ಮಜಲುಗಳ ದರ್ಶನವಾಯಿತು. 

ಅಲ್ಲದೆ ಜೊತೆ ಜೊತೆಗೆ ಹವಾಮಾನ ವರದಿಗಳು, ಪ್ರವಾಹ, ಸುನಾಮಿ, ಕೋವಿಡ್ ಇನ್ನಿತರ ತುರ್ತು ಸಂದರ್ಭದಲ್ಲಿ ಕೂಡ ಹೆಮ್ಮೆಯಿಂದ ಕೆಲಸ ನಿರ್ವಹಿಸಿದ್ದೇನೆ. ಜೊತೆಗೆ ವಿವಿಧ ಆಕಾಶವಾಣಿಗಳಲ್ಲಿ ಕೆಲಸ ಮಾಡಿದ್ದೇನೆ. 

ಮೈಸೂರು ಆಕಾಶವಾಣಿಯಲ್ಲಿ ಮೊದಲು ಕಾರ್ಯಕ್ರಮ ನಿರ್ವಾಹಕನಾಗಿದ್ದೆ. ಸಹಾಯಕ ನಿರ್ದೇಶಕನಾಗಿ ಎರಡನೇ ಬಾರಿಗೆ ಮೈಸೂರಿಗೆ ಬಂದು ಈಗ ಉಪ ನಿರ್ದೇಶಕನಾಗಿ ನನಗೆ ಸಾಕಷ್ಟು ಅವಕಾಶಗಳನ್ನ ಮಾಡಲು ಆಕಾಶವಾಣಿ ಮೈಸೂರು ನೆರವಾಗಿದೆ. ಜೊತೆಗೆ ಇಲ್ಲಿನ ಸಿಬ್ಬಂದಿ ವರ್ಗದವರು ಕೂಡ ಸಹಕರಿಸಿದ್ದಾರೆ ಎಂದರು. 

ನಾನು ದೇಶ-ವಿದೇಶಗಳ ಬಹುತೇಕ ಆಕಾಶವಾಣಿ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಆದರೆ ಮೈಸೂರು ಆಕಾಶವಾಣಿಯ ಕಟ್ಟಡ ಮತ್ತು ಸೌಲಭ್ಯಗಳು ಬೇರೆಲ್ಲೂ ಕೂಡ ಕಾಣಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಜೊತೆಗೆ ತಮ್ಮ ಪೋರ್ಟ್ ಬ್ಲೇರ್ ಕೇಂದ್ರದ ಆಕಾಶವಾಣಿಯ ಬಗ್ಗೆ, ಜೊತೆಗೆ ಸಭೆಯಲ್ಲಿ ಹಾಜರಿದ್ದ ಕೇಳುಗರೊಂದಿಗೆ ಸಂವಾದದಲ್ಲಿ ಅವರು ಕೇಳಿದ ಪ್ರಶ್ನೆಗಳಿಗೆ ತಮ್ಮ ಅನುಭವದ ಉತ್ತರ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೈಸೂರು ಆಕಾಶವಾಣಿಯ ಸಂಸ್ಥಾಪಕರಾದ ಡಾ ಎಂ ವಿ ಗೋಪಾಲಸ್ವಾಮಿ ಅವರ ಮೊಮ್ಮಗಳು ಭಾರತಿ ಘನ ಶ್ಯಾಂ ಆಗಮಿಸಿದ್ದು ವಿಶೇಷವಾಗಿತ್ತು. ಅವರು ಮಾತನಾಡುತ್ತಾ…. ನಮ್ಮ ತಾತ ಸಮಾಜಕ್ಕೆ ಅತಿ ಮುಖ್ಯವಾದ ಸಂಪರ್ಕ ಸಾಧನವನ್ನ ಬಹಳ ಆಸಕ್ತಿ ವಹಿಸಿ, ಮುಂದಾಲೋಚನೆಯಿಂದ ಎಲ್ಲರೂ ನೆನಪಿಸಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ. ಆ ಮಹಾನ್ ಕಾರ್ಯದಿಂದ ಅವರನ್ನ ಇಂದಿಗೂ ಕೂಡ ಗೌರವದಿಂದ ಎಲ್ಲೆಡೆ ಕಾಣುತ್ತಿದ್ದಾರೆ. 

ಅದರಲ್ಲೂ ಮೈಸೂರು ಆಕಾಶವಾಣಿಯ ಕೇಳುಗರ ಬಳಗ ನನ್ನನ್ನು ಕರೆದು, ಗೌರವಿಸಿದ್ದು ತುಂಬಾ ಸಂತಸ ತಂದಿದೆ. ಈ ಸಂಭ್ರಮ ಬಹುಕಾಲ ಉಳಿಯುವಂತದ್ದು. ಜೊತೆಗೆ ನಿಮ್ಮ ಬಳಗದ ಬಗ್ಗೆ ನನಗೆ ಕುತೂಹಲ ಮತ್ತು ಅಚ್ಚರಿ ಉಂಟಾಗಿದೆ. ನಾನು ಒಬ್ಬ ಆರೋಗ್ಯ ಕುರಿತಾದ ಲೇಖಕಿ ಆಗಿರುವುದರಿಂದ ಅದನ್ನೆಲ್ಲ ದಾಖಲಿಸುವ ಪ್ರಯತ್ನ ಮಾಡುತ್ತೇನೆ. 

"ನಿರೀಕ್ಷೆ ಇಲ್ಲದೆ ಮಾಡಿದ ಕೆಲಸಗಳು ಸಫಲತೆಯನ್ನು ಪಡೆಯುತ್ತವೆ"- ಎನ್ನುವುದಕ್ಕೆ ನಿಮ್ಮ ಬಳಗವೇ ಸಾಕ್ಷಿ ಎಂದರು. ಇದೇ ವೇದಿಕೆಯಲ್ಲಿ ಕೇಳುಗರ ಬಳಗದ ಹಿರಿಯ ಸದಸ್ಸೆ ಸುಧಾರಾಜ್ ಮತ್ತು ಉಮೇಶ್ ಎಸ್ ಎಸ್ ರವರ ಪತ್ನಿ ರಾಜೇಶ್ವರಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಬಳಗಕ್ಕೆ ಹೊಸ ಸದಸ್ಯರು ಸೇರ್ಪಡೆಯಾದರು.

ವಿ. ಭಾಗ್ಯಲಕ್ಷ್ಮಿ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ನಾಗರತ್ನ ನಾರಾಯಣಸ್ವಾಮಿ ಎಲ್ಲರನ್ನ ಆತ್ಮೀಯವಾಗಿ ಸ್ವಾಗತಿಸಿದರು. ಕಲಾಪ್ರಸಾದ್, ಕಾಳಿಹುಂಡಿ ಶಿವಕುಮಾರ್ ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. 

ಸಂಘದ ಕಾರ್ಯದರ್ಶಿ ರಾಜೇಶ್ವರಿ ಟಿ ಎನ್ ರವರು ಪ್ರಸ್ತಾವಿಕ ನುಡಿಗಳನ್ನು ಆಡಿದರು. ಇಡೀ ಕಾರ್ಯಕ್ರಮವನ್ನು ಚಂದ್ರಕಲಾ ನಿರೂಪಿಸಿದರು. ದುಗ್ಗಳ್ಳಿ ಪರಶಿವಮೂರ್ತಿ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *