
ಚಾಮರಾಜನಗರ: ವಿಚಾರಣಾಧೀನ ಬಂಧಿಗಳ ಮನ ಪರಿವರ್ತನೆ ಮಾಡುವಲ್ಲಿ ಕಾರಾಗೃಹದ ಅಧಿಕಾರಿ ಮತ್ತು ಸಿಬ್ಬಂದಿಗಳ ಪಾತ್ರ ಅಪಾರವಾದದ್ದು ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಅವರು ತಿಳಿಸಿದರು.
ನಗರದ ಜಿಲ್ಲಾ ಕಾರಾಗೃಹದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಅಧಿಕಾರಿ ಹಾಗೂ ಸಿಬ್ಬಂದಿ ಕುಟುಂಬ ಕಲ್ಯಾಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿನಿತ್ಯ ಕಾರಾಗೃಹದಲ್ಲಿ ಅಧಿಕಾರಿಗಳ ತಂಡ ಬಂಧಿತರ ದಾಖಲಾತಿ ತಪಾಸಣೆ, ಒತ್ತಡದ ಕೆಲಸ ನಿಭಾಯಿಸುವಲ್ಲಿ ಕಾರ್ಯ ನಿರತರಾಗಿರುತ್ತಾರೆ. ಈ ನಡುವೆ ಇಂತಹ ಉತ್ತಮ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷದಾಯಕವಾಗಿದೆ. ಕಾರಾಗೃಹದ ಅಧಿಕಾರಿಗಳು ಬಂಧಿಗಳ ಮನ ಪರಿವರ್ತನೆ ಕಾರ್ಯದಲ್ಲಿ ಪ್ರತಿನಿತ್ಯ ತೊಡಗಬೇಕು ಎಂದರು.
ಕಾರಾಗೃಹದಲ್ಲಿ ಉತ್ತಮ ವಾತಾವರಣದ ಜೊತೆ ಸಹದ್ಯೋಗಿ ಸ್ನೇಹಿ ವಾತಾವರಣವಿದ್ದು, ಅಧಿಕಾರಿ, ಸಿಬ್ಬಂದಿ ಬೇಧವಿಲ್ಲದೆ ಎಲ್ಲರೂ ಒಂದೇ ಕುಟುಂಬವಾಗಿ ಬೆರೆತು ಕಾರ್ಯನಿರ್ವಹಿಸಿದರೆ ಅಧಿಕಾರಿಗಳು ಸಾರ್ವಜನಿಕವಾಗಿ ಉತ್ತಮ ಸೇವೆ ಸಲ್ಲಿಸಲು ಸಾಧ್ಯ ಎಂದು ಉಮ್ಮತ್ತೂರು ಇಂದುಶೇಖರ್ ಅವರು ತಿಳಿಸಿದರು.
ಕಾರಾಗೃಹದ ಅಧೀಕ್ಷಕರಾದ ಎನ್.ಎಸ್. ಶಿವಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರಾಗೃಹದ ಸಿಬ್ಬಂದಿಗಳ ಸೇವೆ ಅವಿರತವಾಗಿದೆ. ಎಲ್ಲರ ಜೊತೆ ಬೆರೆತು ಯಾವುದೇ ಜಾತಿ, ಬೇಧ ಮರೆತು ಕೆಲಸ ನಿರ್ವಹಿಸಬೇಕು. ಈ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಸರ್ಕಾರದಿಂದ ಗೌರವ, ಪ್ರಶಸ್ತಿಗಳು ಸಿಗಲಿವೆ. ಈ ನಿಟ್ಟಿನಲ್ಲಿ ಕಾರಾಗೃಹದ ಪ್ರತಿಯೊಬ್ಬ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗುವಂತೆ ತಿಳಿಸಿದರು.
ಇದೇ ವೇಳೆ ಕಾರಾಗೃಹದ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು.
ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಎಸ್. ಮಂಜು ಹರವೆ, ಕಾರಾಗೃಹದ ಅಧಿಕಾರಿ ಶಶಿಧರ್, ಸಹ ಅಧಿಕಾರಿ ಉತ್ತಮ್ ತಳ್ಳಿಮನೆ, ಮಾದೇಗೌಡ, ನಿವೃತ್ತ ಕಾರಾಗೃಹ ಅಧಿಕಾರಿ ಕಡಕೊಳ, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಮಲ್ಲು ಕಾರ್ಯಕ್ರಮದಲ್ಲಿ ಇದ್ದರು.