ಕೊಳ್ಳೇಗಾಲ: ಹೆಣ್ಣು ಮಕ್ಕಳು ಹೆಚ್ಚು ವಿದ್ಯಾಭ್ಯಾಸದ ಜ್ಞಾನವನ್ನು ಪಡೆದುಕೊಂಡು ಜೀವನದಲ್ಲಿ ಆರೋಗ್ಯ, ಆಹಾರ,ಇವುಗಳೆಲ್ಲದರ ಪ್ರಾಮುಖ್ಯತೆ ಮತ್ತು ಹಿಂದೂ ಧರ್ಮದ ಧಾರ್ಮಿಕ ಸನಾತನವನ್ನು ಆಚರಿಸಬೇಕು ಹಾಗೂ ಸಮಾಜದ ಹಿತವನ್ನು ಕಾಪಾಡಲು ಒಟ್ಟಾಗಿ ಶ್ರಮಿಸಬೇಕು ಎಂದು ಮೈಸೂರು ಆಕಾಶವಾಣಿಯ ಸಮುದ್ಯತಾ ಕೇಳುಗರ ಬಳಗದ ಅಧ್ಯಕ್ಷರಾದ ಕಣ್ಣೂರು ವಿ ಗೋವಿಂದಾಚಾರಿ ಮಾತನಾಡಿದರು.
ಕೊಳ್ಳೇಗಾಲದಲ್ಲಿ ವಿಶ್ವಕರ್ಮ ಸಮಾಜದಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾತನಾಡುತ್ತಾ ವಿದ್ಯಾವಂತರು ಗಂಡು-ಹೆಣ್ಣು ಎಂಬ ಭೇದವಿಲ್ಲದೆ ತಾವು ಬೆಳೆದು ಸಮಾಜವನ್ನ ಬೆಳೆಸಲು ಕಾರ್ಯ ಪ್ರವೃತ್ತರಾಗಬೇಕು ಎಂಬ ಸಂದೇಶವನ್ನ ಮಹಿಳೆಯರಿಗೆ ನೀಡಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಜೆಎಸ್ಎಸ್ ದಂತ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಸಹಪ್ರಾಧ್ಯಾಪಕರಾದ ಡಾ ಇಂದಿರಾ ಶ್ರೀನಿವಾಸ್ ರವರು ಮಾತನಾಡುತ್ತಾ, ಇಂದಿನ ನನ್ನ ಯಶಸ್ವಿ ಸಾಧನೆಗೆ ನನ್ನ ತಂದೆ- ತಾಯಿಗಳು, ಅತ್ತೆ- ಮಾವ, ಕುಟುಂಬ ವರ್ಗದವರು ಮುಖ್ಯವಾಗಿ ಕಾರಣವಾಗಿದ್ದಾರೆ. ಒಂದು ಗಿಡದ ಬೇರಾಗಿ, ಗಟ್ಟಿಯಾಗಿ ನಿಂತು ಹೆಮ್ಮರವಾಗಿ ಬೆಳೆಯಲು ಪ್ರೋತ್ಸಾಹಿಸಿದ್ದಾರೆ. ಅದೇ ರೀತಿ ನೀವು ಕೂಡ ಆತ್ಮವಿಶ್ವಾಸದಿಂದ, ಭರವಸೆಯಿಂದ ಶಿಕ್ಷಣವನ್ನು ಪಡೆದು, ಹೆಣ್ಣಿಗೆ ಹೆಣ್ಣೇ ಶತ್ರುವಾಗದೆ, ನೀವು ಬೆಳೆದು ಇತರರನ್ನು ಬೆಳೆಸಬೇಕು. ಜೊತೆಗೆ ಈ ನಿಟ್ಟಿನಲ್ಲಿ ಪುರುಷರು ಕೂಡ ಕೈಜೋಡಿಸಬೇಕು ಎಂಬ ಸರಳ ಸೂತ್ರವನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೊಳ್ಳೇಗಾಲದ 5 ಸಾಧಕ ಮಹಿಳೆಯರನ್ನು ವಿಶ್ವಕರ್ಮ ಸಮಾಜದ ವತಿಯಿಂದ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಲಾಯಿತು.
ಕೊಳ್ಳೇಗಾಲ ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಹಾಗೂ ನಿವೃತ್ತ ಶಿಕ್ಷಕರಾದ ಮುಳ್ಳೂರು ಪಿ ಸಿದ್ದಪ್ಪಾಜಿ ಯವರು ಅಧ್ಯಕ್ಷತೆ ವಹಿಸಿದ್ದರು.
ಭಾಗ್ಯಲಕ್ಷ್ಮಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಜೆ ಸಂಪತ್ ರವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.