ಕೆ.ಶಿವರಾಂ ಅವರ ನುಡಿನಮನ ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ಕೆ.ದೀಪಕ್ ಅಭಿಮತ
ಚಾಮರಾಜನಗರ: ಕೆ.ಶಿವರಾಂ ಅವರು ಅಧಿಕಾರಿಯಾಗಿದ್ದಾಗ ಅವರು ಮಾಡಿದ್ದ ಕೆಲಸಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಪ್ರಗತಿಪರ ಚಿಂತಕ ಹಾಗೂ ಹಿರಿಯ ಪತ್ರಕರ್ತ ಕೆ.ದೀಪಕ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ.ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಛಲವಾದಿ ಮಹಾಸಭಾ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಬಡವರ ಬೆಳಕು ಕೆ.ಶಿವರಾಂರವರ ಪುಣ್ಯಸ್ಮರಣೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ಸಿನಿಮಾದಲ್ಲಿ ಬಂದ ಮೇಲೆ ಸ್ಟಾರ್‍ಗಳಾತ್ತಾರೆ. ಆದರೆ, ಕೆ.ಶಿವರಾಂ ಅವರು ಸಿನಿಮಾ ಮಾಡುವ ಮೊದಲೇ ಸ್ಟಾರ್ ಆಗಿದ್ದರು ಎಂದರು.

ಸಿನಿಮಾ ಮಾಡುವ ಮೊದಲೇ ಆಗುವವರೇ ರಿಯಲ್ ಸ್ಟಾರ್. ಕೆ.ಶಿವರಾಂ ಅವರು ಸಿನಿಮಾ ಮಾಡುವ ಮೊದಲೇ ದಲಿತ ಸಮುದಾಯಕ್ಕೆ ಸೆಲಿಬ್ರಿಟಿಯಾಗಿದ್ದರು. ಕನ್ನಡದಲ್ಲಿ ಐಎಎಸ್ ಮಾಡಿರುವುದು ದೊಡ್ಡ ಸಾಧನೆ.
ಕೆ.ಶಿವರಾಂ ಐಎಎಸ್ ಮಾಡಿದ ಮೇಲೆ ದಲಿತರಲ್ಲಿಯೂ ತಮ್ಮ ಮಕ್ಕಳನ್ನು ಐಎಎಸ್ ಮಾಡಿಸಬೇಕೆಂಬ ಆಸೆಗಳನ್ನು ತಂದವರು ಅವರು.
ಕೆ.ಶಿವರಾಂ ಅವರು ಜಾತಿಯನ್ನು ಹೇಳಿಕೊಳ್ಳಲು ಹಿಂಜರಿಯಲಿಲ್ಲ. ಬಹುತೇಕ ದಲಿತ ಅಧಿಕಾರಿಗಳಿಗೆ ಜಾತಿಯ ಬಗ್ಗೆ ಕೀಳರಿಮೆ ಇದೆ ಎಂದರು.

ಛಲವಾದಿ ಮಹಾಸಭಾದ ಅಧ್ಯಕ್ಷ ಅಣಗಳ್ಳಿ ಬಸವರಾಜು ಮಾತನಾಡಿ, ಕೆ.ಶಿವರಾಂ ಅವರು ಜಿಲ್ಲೆಯ ಹನೂರು ತಾಲೂಕಿನ ತೆಳ್ಳನೂರು ಗ್ರಾಮದವರು ಎಂಬುದು ಹೆಮ್ಮೆಯ ವಿಚಾರ. ಕಡು ಬಡತನದಲ್ಲಿ ಬೆಳೆದ ಕೆ.ಶಿವರಾಂ ಅವರು ಪ್ರಥಮ ಬಾರಿಗೆ ಕನ್ನಡದಲ್ಲಿ ಐಎಎಸ್ ಪಾಸು ಮಾಡಿದ್ದಾರೆ. ಇದಕ್ಕೂ ಮುನ್ನ ಪೆÇಲೀಸ್ ಇಲಾಖೆ ಸೇರಿದಂತೆ ಇತರೆ ಕಡೆಗಳಲ್ಲಿ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಮೈಸೂರು, ದಾವಣಗೆರೆಯಲ್ಲಿ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಗುಡಿಸಲು ಮುಕ್ತ ಮಾಡಲು ಶ್ರಮಿಸಿದ್ದಾರೆ ಎಂದರು.
ಟಿ.ನರಸೀಪುರ ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ, ಚಿತ್ರದುರ್ಗದ ಛಲವಾದಿ ಮಠದ ಛಲವಾದಿ ಬಸವ ಸ್ವಾಮೀಜಿ, ವಾಣಿ ಕೆ.ಶಿವರಾಂ, ನಗರಸಭಾ ಸದಸ್ಯ ಆ.ಪಿ.ನಂಜುಂಡಸ್ವಾಮಿ, ಮುಖಂಡ ವೆಂಕಟರಮಣಸ್ವಾಮಿ ಸೇರಿದಂತೆ ಇತರರಿದ್ದರು.