ಮೈಸೂರಿನ ಮನೆ ಮನಗಳಲ್ಲಿ ತುಂಬಿತುಳುಕಿದೆ ಹರ್ಷಧಾರೆ, ಮೈ ಮನವ ಸೂರೆಗೊಳಿಸಿದೆ ನಿಜದ ಅಮೃತಧಾರೆ, ಎನ್ನ ಮನದ ಪುಳಕ ನಾನಿನ್ನು ತಾಳಲಾರೆ, ಬೇರೆ ಏನೂ ಹೇಳಲಾರೆ, ಮುನಿಸು ಕೋಪ ತೊರೆದು ಇಳೆಗೆ ಇಳಿದಳು ವರ್ಷಧಾರೆ.
ಒಣಗಿದ ಮೈ- ಮನಸ್ಸುಗಳನ್ನು ಒದ್ದೆಯಾಗಿಸಿದ ಮಳೆ, ಮಣ್ಣು ಮಸಿಯಲ್ಲಿ ಕೊಳೆಯ ತೊಳೆದು ತುಂಬಿಸಿತು ಜೀವಕಳೆ, ಕಮರಿದ್ದ ಭೂದೇವಿಗೆ ಮಜ್ಜನದ ಸ್ನಾನ ಮಾಡಿಸಿ, ಸುರಿದಷ್ಟು ಸಿಂಗಾರದ ಭೂಷಣ ತೊಡಸಿ, ಬಾ ತಾಯೆ ಬಾ ತಾಯೆ ಬಾ ಮಾಯದ ಮಳೆಯೆ ಬಂದರೆ ಬರ ನೀಗುವಷ್ಟು ನೀ ಬಾರದಿದ್ದರೆ ಧರೆಯೆಲ್ಲ ಭೀಕರ, ಬಿಸಿಲ ಧಗೆಯಲ್ಲಿ ಒದ್ದಾಡುವ ಬಿಸಿ ಉಸಿರುಗಳಿಗೆ ಜೀವಕೊಡುವ ಜೀವಧಾರೆ, ಅವತರಿಸಿ ಬಾ ಇಳೆಯ ಧಗೆಗೆ ಸಿಹಿ ಮುತ್ತ ನೀಡಿ ತಂಪೆರೆಯಲು ಇನ್ನಷ್ಟು ಬಾ ಎಂದು ಗೋಗರಿಯುವ ಮನಸ್ಸುಗಳಿಗೆ ಕಿವಿಗೊಡುವ ಹನಿಯ ಗೊಂಚಲು, ಮನಸ್ಸೋ ಇಚ್ಚೇ ಬರಲಾರೆಯ, ಬಂದರಷ್ಟೇ ನಮಗೆ ಉಳಿಗಾಲ, ಇಲ್ಲವಾದರೆ ಕಲಿಗಾಲ-ಕಡೆಗಾಲ, ಜಾಣ ಮಳೆ ಬಂದರೆ ಉಂಟು, ಇಲ್ಲವಾದರೆ ಕನ್ನಡಿಯೊಳಗಿನ ಗಂಟು, ಸಮಸಮಾನತೆಯ ಕಾಣಬೇಕಾದರೆ ಉಳಿಸಬೇಕು ಪ್ರಕೃತಿ, ಇನ್ನಾದರೂ ನಿಲ್ಲಸಬೇಕಲ್ಲವೇ ಎಸೆಗುತ್ತಿರುವ ವಿಕೃತಿ,
ಮಳೆ ಬಿದ್ದ ನೆಲದಲಿ ಹಸಿ ಹಸಿಯ ಮುದ್ದು ಭಾವನೆಗಳ ಜೀವಸೆಲೆ ಗರಿಗೆದರುವುದು, ಹಸುರ ಕೊನರು ಅಂಕುರಗೊಳ್ಳುವುದು, ಮಣ್ಣಿನ ವಾಸನೆ ಮೂಗಿಗೆ ರಾಚುವುದು, ಹಸಿ ಮನಸ್ಸಲ್ಲಿ ಬಿಸಿ ಕನಸು ಜೀವ ತಳೆಯುವುದು,
ಆಸೆ ಅವಕಾಶ ಪಡೆದು ಜಿನುಗುಡುವ ಜೀವಂತಿಕೆಯಲ್ಲಿ ಮೈವೆತ್ತಿ ಜೀವತಾಳುವುದು.
ಬರಲಿ ಧಾರಕಾರ ಮಳೆ ಇಳೆಯ ಕೊಳೆ ತೊಳೆಯಲಿ, ತುಂಬಿ ತುಳುಕಾಡಲಿ ಕೆರೆ-ಕಟ್ಟೆ-ಬಾವಿ-ಹೊಳೆ.
ಕೂಸೆ ಹಳ್ಳಿಲೊಂದು ಗಾದೆ ಉಂಟು ಮಳೆ ಬಂದರೆ ಕೇಡಲ್ಲ ಮಗ ಉಂಡರೆ ಕೇಡಲ್ಲ ಎಂದಳು ನನ್ನವ್ವ ಸಾಕವ್ವ

-ಪರಮೇಶ ಕೆ.ಉತ್ತನಹಳ್ಳಿ,
ಕನ್ನಡ ಉಪನ್ಯಾಸಕ,
ಹವ್ಯಾಸಿ ಬರಹಗಾರ,
ಮೈಸೂರು.