ತಮಿಳುನಾಡಿಗೆ ಟಿಎಂಸಿ ನೀರು ; ಕರ್ನಾಟಕಕ್ಕೆ ಗುಟುಕು ನೀರು

169ನೇ ದಿನವೂ ಮುಂದುವರಿದ ವಿನೂತನ ಪ್ರತಿಭಟನೆ
ಚಾಮರಾಜನಗರ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು 169ನೇ ದಿನವಾದ ಇಂದು ಕಾರ್ಯಕರ್ತರಿಗೆ ಮಗ್‍ನಲ್ಲಿ ಗುಟುಕು ನೀರು ನೀಡುವ ಮೂಲಕ ಪ್ರತಿಭಟನೆ ನಡೆಸಿದರು.

168ದಿನಗಳಿಂದಲೂ ನಿರಂತರವಾಗಿ ಪ್ರತಿಭಟಿಸುತ್ತಿರುವ ಕಾರ್ಯಕರ್ತರು, ಇಂದು ಕೂಡಾ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ನಗರದ ಭುವನೇಶ್ವರಿ ವೃತ್ತದಲ್ಲಿ ಹೆದ್ದಾರಿ ಸಂಚಾರವನ್ನು ತಡೆದು ಪ್ರತಿಭಟಿಸಿದರು.

ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕರ್ನಾಟಕದಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ. ಜಲಾಶಯಗಳು ಬತ್ತಿಹೋಗುತ್ತಿವೆ. ಬಿಸಿಲಿನ ತಾಪ ಹೆಚ್ಚಾಗಿದ್ದು, ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಬೊಗಸೆ ಕೈನಲ್ಲಿ ಗುಟುಕು ನೀರು ಕುಡಿಯುವ ಮೂಲಕ ಕುಡಿಯಲು ನೀರಿಲ್ಲ. ತಮಿಳುನಾಡಿಗೆ ಟಿಎಂಸಿ ನೀರು ಕರ್ನಾಟಕಕ್ಕೆ ಗುಟುಕು ನೀರು ಎಂಬ ವಿನೂತನ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಒಕ್ಕೂಟದ ವ್ಯವಸ್ಥೆಯ ಮೇಲೆ ಗೌರವ ಇದ್ದರೆ, ಎರಡು ರಾಜ್ಯಗಳನ್ನು ಕರೆದು ಮಾತನಾಡುವ ಮೂಲಕ ಮಧ್ಯ ಪ್ರವೇಶ ಮಾಡಿ ರಾಜ್ಯದ ಜನತೆಗೆ ನ್ಯಾಯ ಒದಗಿಸುವಂತಹ ಕೆಲಸವನ್ನು ಮಾಡಬೇಕು ಎಂದರು.

ಮುಂದಿನ ದಿನಗಳಲ್ಲಿ ಕುಡಿಯಲು ನೀರಿಲ್ಲದಂತಹ ಪರಿಸ್ಥಿತಿಗೆ ಸಿಲುಕಬೇಕಾಗುತ್ತದೆ. ತಮಿಳುನಾಡಿನ ಒತ್ತಡಕ್ಕೆ ಮಣಿದು ಹರಿಸುತ್ತಿರುವ ಕಾವೇರಿ ನೀರನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಿಯವರೆಗೆ ನೀವು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗಡಿನಾಡು ಕನ್ನಡ ರಕ್ಷಣ ಹೋರಾಟ ವೇದಿಕೆ ಅಧ್ಯಕ್ಷ ಚಾ.ರಂ.ಕುಮಾರ್, ಪಣ್ಯದಹುಂಡಿ ರಾಜು, ನಿಜಧ್ವನಿ ಗೋವಿಂದರಾಜು, ವೀರಭದ್ರ, ನಂಜುಂಡಶೆಟ್ಟಿ, ತಾಂಡವಮೂರ್ತಿ, ಮಹೇಶ್‍ಗೌಡ, ಲಿಂಗರಾಜು, ಗು.ಪುರುಷೋತ್ತಮ್, ಸೋಮವಾರಪೇಟೆ ಮಂಜು, ರವಿಚಂದ್ರ, ಆಟೋ ನಾಗೇಶ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *