ಚಂದಕವಾಡಿಯಲ್ಲಿ  ವಿಜೃಂಭಣಿ ಲಕ್ಷ್ಮೀದೇವಿ ರಥೋತ್ಸವ

ಚಾಮರಾಜನಗರ: ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ಲಕ್ಷ್ಮೀದೇವಿ  ರಥೋತ್ಸವ ಶುಕ್ರವಾರ ಸಡಗರ, ಸಂಭ್ರಮದಿಂದ ನೆರವೇರಿತು.   ಗ್ರಾಮದ ದೇವಸ್ಥಾನದ ಮುಂಭಾಗದಲ್ಲಿ ರಥವನ್ನು ತಳಿರು ತೋರಣ ಹಾಗೂ ಬಣ್ಣದ ಬಣ್ಣದ ಬಟ್ಟೆಗಳಿಂದ ಶೃಂಗರಿಸಲಾಯಿತು. ಬಾಳೆಗೊನೆ, ಎಳೆನೀರು, ಹೂವುಗಳನ್ನು ಕಟ್ಟಿದ ಸರ್ವಾಲಂಕೃತ ಲಕ್ಷ್ಮೀದೇವಿ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ  ಭಕ್ತಾಧಿಗಳ ಜಯಘೋಷಣೆಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
16 ಹಳ್ಳಿಗಳಲ್ಲಿ ಸಂಭ್ರಮ: ಚಂದಕವಾಡಿ ಗ್ರಾಮವೂ ಸೇರಿದಂತೆ ಕೋಡಿಮೋಳೆ, ದಡದಹಳ್ಳಿ, ಅರಳಿಪುರ, ಬಸವನಪುರ ಕರಿಯನಕಟ್ಟೆ, ಕಣ್ಣೀಗಾಲ,
ಹಂಚಿತಾಳಪುರ, ಅಯ್ಯನಪುರ, ಸರಗೂರು, ಬಸಪ್ಪನಪಾಳ್ಯ ಸೇರಿದಂತೆ 16 ಹಳ್ಳಿಗಳ ಜನರು ಶ್ರದ್ಧಾಭಕ್ತಿಯಿಂದ ಲಕ್ಷ್ಮಿದೇವಿ ಜಾತ್ರೆ ಆಚರಿಸಿದರು.  ಚಂದಕವಾಗಿ ಸೇರಿದಂತೆ ಸುತ್ತಮುತ್ತಲಿನ
ಹಳ್ಳಿಗಳಿಂದ ಭಕ್ತರು ಭಾಗವಹಿಸಿದ್ದರು. ರಥಕ್ಕೆ ನವದಂಪತಿಗಳು ಹಣ್ಣು, ಧವನ ಎಸೆದು ಇಷ್ಟಾರ್ಥ ಸಿದ್ದಗಾಗಿ ಪ್ರಾರ್ಥಿಸಿದರು.
ರಥೋತ್ಸವಕ್ಕೂ ಮುನ್ನಾ ಸತ್ತಿಗೆ ಸೂರಪಾನಿ, ಬಿರುದುಗಳನ್ನು ತೆಗೆದುಕೊಂಡು ಮಂಟೇಸ್ವಾಮಿ ದೇವಸ್ಥಾನಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಹುಲಿವಾಹನ ಜತೆಗೂಡಿ ಬಿರುದುಗಳನ್ನು ರಥದ ಮುಂಭಾಗ ಬರುತ್ತಿದ್ದಂತೆ ರಥೋತ್ಸವ ಆರಂಭಗೊಂಡಿತು. ಗ್ರಾಮದ ಎತ್ತ ನೋಡಿದರೂ ಜನರ ಕಲರವ ಕಂಡು ಬಂತು. ಎಲ್ಲರ ಮನೆಯಲ್ಲೂ ನೆಂಟರಿಷ್ಟರು ಸಂಭ್ರಮದಿಂದ ಅಡ್ಡಾಡುತ್ತಿದ್ದರು. ಜಾತ್ರೆ ಹಿನ್ನೆಲೆಯಲ್ಲಿ ವ್ಯಾಪಾರ, ವಹಿವಾಟು  ಜೋರಾಗಿತ್ತು. ಸಂಸದ ಭಾಗಿ :  ಸಂಸದ ಸುನೀಲ್ ಬೋಸ್ ಅವರು ಶ್ರೀಲಕ್ಷ್ಮೀದೇವಿ ಅಮ್ಮನವರ ರಥೋತ್ಸವದಲ್ಲಿ ಭಾಗವಹಿಸಿ, ಲಕ್ಷ್ಮೀದೇವಿ ದರ್ಶನ ಪಡೆದು ಮಾತನಾಡಿ, ಶ್ರೀಲಕ್ಷ್ಮೀದೇವಿ ತಾಯಿಯು ಉತ್ತಮ ಮಳೆ ಬೆಳೆ ತಂದು ಎಲ್ಲರಿಗೂ ಒಳಿತು ಮಾಡಲಿ ಎಂದು ಪ್ರಾರ್ಥಿಸಿದರು.

Leave a Reply

Your email address will not be published. Required fields are marked *