
ಚಾಮರಾಜನಗರ: ವಿಶ್ವವನ್ನೇ ಚಿತ್ರಿಸುವುದರ ಜೊತೆಗೆ ಕೋಟ್ಯಾಂತರ ದೇವಾನುದೇವತೆಗಳ ಪರಿಕಲ್ಪನೆಯನ್ನು ನೀಡಿದ ವಿಶ್ವಕರ್ಮರು ಭಾರತೀಯ ಶಿಲ್ಪಕಲೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಎಂ.ಎಸ್.ಐ.ಎಲ್. ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೈವ ಸಾಕ್ಷಾತ್ಕಾರ ಪಡೆದಿದ್ದ ವಿಶ್ವಕರ್ಮರು ಬೇಲೂರು ಹಾಗೂ ಸೋಮನಾಥಪುರದಲ್ಲಿರುವ ಸುಂದರವಾದ ದೇವಸ್ಥಾನಗಳ ನಿರ್ಮಾಣ, ಭವ್ಯವಾದ ಮನೆಗಳು, ವಸ್ತುಗಳ ಸೌಂದರ್ಯಕ್ಕೆ ಮೆರುಗು ನೀಡಿದವರು. ವಿಶ್ವಕರ್ಮ ಜನಾಂಗವು ಮೂಲವೃತ್ತಿಯ ಜೊತೆಗೆ ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ಮೂಢನಂಬಿಕೆ, ಕಂದಾಚಾರಗಳನ್ನು ಬದಿಗೊತ್ತಿ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಶಾಸಕರು ತಿಳಿಸಿದರು.
ಜಿಲ್ಲಾಕೇಂದ್ರದಲ್ಲಿ ವಿಶ್ವಕರ್ಮ ಜನಾಂಗದ ಸಮುದಾಯ ಭವನಕ್ಕೆ ಸರ್ಕಾರದಿಂದ ಅಗತ್ಯ ಅನುದಾನ ನೀಡಲಾಗುವುದು. ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆದು ಜನಾಂಗಕ್ಕೆ ಅನುಕೂಲ ಕಲ್ಪಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸಮೀಕ್ಷೆಯಲ್ಲಿ ವಿಶ್ವಕರ್ಮ ಸಮುದಾಯ ನಿಖರ ಹಾಗೂ ಸ್ಪಷ್ಟ ಮಾಹಿತಿ ನಮೂದಿಸಬೇಕು. ಇದರಿಂದ ಜನಾಂಗಕ್ಕೆ ಸೌಲಭ್ಯ ನೀಡಲು ಸರ್ಕಾರಕ್ಕೆ ಅನುಕೂಲವಾಗಲಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ ಅವರು ಮಾತನಾಡಿ ಸಾವಿರಾರು ವರ್ಷಗಳ ಹಿಂದೆ ಯಾವುದೇ ವಿಜ್ಞಾನ, ತಂತ್ರಜ್ಞಾನವಿರಲಿಲ್ಲ. ಅಂತಹ ಸಂದರ್ಭದಲ್ಲಿ ಉತ್ಕ್ರುಷ್ಟ ದೇವಾಲಯಗಳನ್ನು ನಿರ್ಮಿಸಿದ ವಿಶ್ವಕರ್ಮ ಅವರು ಅಗ್ರಮಾನ್ಯರಾಗಿದ್ದಾರೆ. ವಿಶ್ವಚಕ್ರವನ್ನು ಕೆತ್ತಿ ತಮ್ಮ ಕಲಾಕೌಶಲ್ಯವನ್ನು ಜಗತ್ತಿಗೆ ಸಾರಿದವರು ವಿಶ್ವಕರ್ಮರು. ಅವರ ಮಾರ್ಗದರ್ಶನದಲ್ಲಿ ಮುನ್ನೆಡೆಯೋಣ ಎಂದು ತಿಳಿಸಿದರು.
ನಗರಸಭೆ ಉಪಾಧ್ಯಕ್ಷರಾದ ಮಮತಾ ಅವರು ಮಾತನಾಡಿ ವಿಶ್ವಕರ್ಮ ಅವರನ್ನು ವಿಶ್ವದ ಮೊದಲ ಎಂಜಿನಿಯರ್ ಎಂದರೇ ತಪ್ಪಾಗಲಾರದು. ಅಮರಾವತಿ, ದ್ವಾರಕೆ ನಿರ್ಮಾಣ, ಶಿವನಿಗೆ ತ್ರಿಶೂಲ ನೀಡಿದ್ದಲ್ಲದೆ, ನಾವೆಲ್ಲರೂ ತಿನ್ನುತ್ತಿರುವ ಅನ್ನ ಬೆಳೆಯಲು ನೇಗಿಲನ್ನು ನಿರ್ಮಾಣ ಮಾಡಿದವರು ವಿಶ್ವಕರ್ಮ ಆಗಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಮಾತನಾಡಿ ಸೃಷ್ಠಿಯ ನಂತರ ಜಗತ್ತನ್ನು ಅತ್ಯಂತ ಸುಂದರವಾಗಿ ನಿರ್ಮಿಸಿದವರು ವಿಶ್ವಕರ್ಮ. ಅವರ ಸೌಂದರ್ಯಪ್ರಜ್ಞೆ ಇಂದಿಗೂ ನಮ್ಮೆಲ್ಲರ ಕಣ್ಮನ ಸೆಳೆಯುತ್ತಿದೆ. ಸಮಾಜದಲ್ಲಿ ಎಲ್ಲಾ ಜನಾಂಗದವರು ಇರಬೇಕು. ಆಗಮಾತ್ರ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಲಿದೆ. ನಮ್ಮೆಲ್ಲಾ ಪೂರ್ವಿಕರ ಸಾಧನೆಗಳು ನಮ್ಮ ಹೆಮ್ಮೆಯಾಗಿವೆ. ಪ್ರತಿಯೊಬ್ಬರು ವಿಶ್ವಕರ್ಮ ಅವರಂತೆ ಜಾಗೃತಪ್ರಜ್ಞೆ ಬೆಳೆಸಿಕೊಳ್ಳಬೇಕು. ಉತ್ತಮ ಗುಣಗಳನ್ನು ಗುರುತಿಸುವ ಶಕ್ತಿ ಎಲ್ಲರಿಗೂ ಬರಬೇಕು ಎಂದರು.
ಮೈಸೂರು ಮಹಾರಾಣಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಎಚ್.ಆರ್. ಚಂದ್ರಕಲಾ ಅವರು ಮುಖ್ಯಭಾಷಣ ಮಾಡಿ ಶಿಲ್ಪಕಲೆಗೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ಶಿಲ್ಪಕಲೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದ ವಿಶ್ವಕರ್ಮರು ಅಮರಶಿಲ್ಪಿ ಜಕಣಾಚಾರಿಯೇ ಆಗಿದ್ದಾರೆ. ಕಲ್ಲನ್ನು ಸುಂದರ ಶಿಲೆಯಾಗಿಸುವುದು ಸುಲಭದ ಮಾತಲ್ಲ. ಏಕಾಗ್ರತೆ, ತನ್ಮಯತೆ, ತಾಂತ್ರಿಕವಾಗಿ ಕುಸುರಿಕಲೆಯಲ್ಲಿ ಪರಿಪೂರ್ಣತೆ ಪಡೆದಿದ್ದರೆ ಮಾತ್ರ ಎಂತಹ ಕಲ್ಲು ಕೂಡ ಸುಂದರ ವಿಗ್ರಹವಾಗಬಲ್ಲದು. ಅನೇಕ ಹಿಂದೂ ದೇವಾಲಯಗಳು ವೈಜ್ಞಾನಿಕ ತಂತ್ರಜ್ಞಾನದ ಆಧಾರದಲ್ಲಿ ನಿರ್ಮಾಣವಾಗಲು ವಿಶ್ವಕರ್ಮರ ಕಲೆಗಾರಿಕೆ ಸಾಕ್ಷಿಯಾಗಿದೆ. ವಿಶ್ವಕರ್ಮ ಜನಾಂಗ ಸರ್ಕಾರದ ಸೌಲಭ್ಯಗಳು ಸೇರಿದಂತೆ ಉತ್ತಮ ಶಿಕ್ಷಣ ಪಡೆದು ಸಾಮಾಜಿಕವಾಗಿ ಮುಂಚೂಣಿಗೆ ಬರಬೇಕಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜು, ಸಮುದಾಯದ ಮುಖಂಡರಾದ ವಿ. ಶ್ರೀನಿವಾಸಪ್ರಸಾದ್, ಅನಂತಕುಮಾರ್, ಲಿಂಗಣ್ಣಾಚಾರ್, ಕುಮಾರ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮರ ಭಾವಚಿತ್ರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಜಿಲ್ಲಾಡಳಿತ ಭವನದಲ್ಲಿ ಮುಕ್ತಾಯಗೊಂಡಿತು.