ಆಸ್ಪತ್ರೆ, ಅಂಗನವಾಡಿ, ಪುರಾಣಿಪೋಡಿಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ-ಮೂಲಸೌಕರ್ಯಗಳ ಪರಿಶೀಲನೆ

ಚಾಮರಾಜನಗರ: ಕರ್ನಾಟಕ ರಾಜ್ಯ ಮಹಿಳಾ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಅವರು ಇಂದು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆ, ಗುಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಮತ್ತು ಬಿಳಿಗಿರಿರಂಗನಬೆಟ್ಟದ ಪುರಾಣಿಪೋಡಿಗೆ ಭೇಟಿ ನೀಡಿ ಅಲ್ಲಿನ ಮೂಲಸೌಲಭ್ಯಗಳ ಪರಿಶೀಲನೆ ನಡೆಸಿದರು.

ಮೊದಲಿಗೆ ಕೊಳ್ಳೇಗಾಲಕ್ಕೆ ಆಗಮಿಸಿದ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಅವರು ಉಪವಿಭಾಗ ಆಸ್ಪತ್ರೆಗೆ ಭೇಟಿ ನೀಡಿ ಅಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ರಾಜಶೇಖರ್ ಹಾಗೂ ಡಾ. ಲೋಕೇಶ್ವರಿ ಅವರಿಂದ ಅಲ್ಲಿ ರೋಗಿಗಳಿಗೆ ಕಲ್ಪಿಸಿರುವ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ಆಸ್ಪತ್ರೆಯ ಐ.ಸಿ.ಯು ಘಟಕ ಹಾಗೂ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಆತ್ಮೀಯವಾಗಿ ಮಾತನಾಡಿಸಿ ಧೈರ್ಯ ತುಂಬಿದರು.

ಅಸ್ಪತ್ರೆಯ ಹೊರ ಅವರಣ ವೀಕ್ಷಿಸಿದ ಅಧ್ಯಕ್ಷರು ಇತ್ತೀಚೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚರಂಡಿಯಲ್ಲಿ ತ್ಯಾಜ್ಯ, ಕೊಳಚೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಅಸ್ಪತ್ರೆಯ ಟೆರೇಸ್ ಮೇಲಿನ ನೀರಿನ ಟ್ಯಾಂಕರ್‍ಗಳಲ್ಲಿನ ನೀರನ್ನು ಪರಿಶೀಲಿಸಿ ನೀರಿನ ಟ್ಯಾಂಕ್‍ಗಳನ್ನು ಪ್ರತಿ ತಿಂಗಳು ಸ್ವಚ್ಚಗೊಳಿಸಬೇಕು. ಅಸ್ಪತ್ರೆಗೆ ಬರುವವವರಿಗೆ ಶುದ್ದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಉತ್ತಮ ವೈದ್ಯಕೀಯ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಲು ಅಲ್ಲಿನ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. 

ನಂತರ ಗುಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ರಾಜ್ಯ ಮಹಿಳಾ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಅವರು ಅಲ್ಲಿಯೂ ಸಹ ಚಿಕಿತ್ಸೆಗಾಗಿ ಬಂದಿದ್ದ ರೋಗಿಗಳನ್ನು ಮಾತನಾಡಿಸಿದರು. ಅಲ್ಲಿನ ವೈದ್ಯಾಧಿಕಾರಿಗಳಾದ ಡಾ. ತನುಜಾ ಹಾಗೂ ಡಾ. ರೇವತಿ ಅವರಿಂದ ಆರೋಗ್ಯ ಕೇಂದ್ರದಲ್ಲಿರುವ ಸೌಲಭ್ಯಗಳು ಹಾಗೂ ಐ.ಇ.ಸಿ. ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ರೋಗಿಗಳಿಗೆ ಗುಣಮಟ್ಟದ ಸೇವೆ ಒದಗಿಸುವಂತೆ ತಿಳಿಸಿದ ಅಧ್ಯಕ್ಷರು ಆರೋಗ್ಯಕೇಂದ್ರಕ್ಕೆ ಬೇಕಾಗಿರುವ ವ್ಯವಸ್ಥೆಗಳ ಬಗ್ಗೆ ಪಟ್ಟಿ ತಯಾರಿಸಿ ಸಲ್ಲಿಸುವಂತೆ ವೈದ್ಯರಿಗೆ ಸೂಚಿಸಿದರು.

ತದನಂತರ ಅಲ್ಲಿನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಅವರು ಅಲ್ಲಿನ ಮಕ್ಕಳೊಂದಿಗೆ ಕುಳಿತು ಮಾತನಾಡಿ ಅಂಗನವಾಡಿ ಕೇಂದ್ರದಲ್ಲಿ ನೀಡುತ್ತಿರುವ ಸೌಲಭ್ಯಗಳ ಕುರಿತು ಸ್ವತಹ ಅಲ್ಲಿನ ಮಕ್ಕಳನ್ನೇ ಕೇಳಿ ತಿಳಿದುಕೊಂಡರು. ಮಕ್ಕಳಿಗೆ ಮೆನು ಪ್ರಕಾರವೇ ನಿಗದಿತ ಪೌಷ್ಠಿಕ ಆಹಾರ ನೀಡಬೇಕು. ಅಂಗನವಾಡಿಯ ಸುತ್ತಲಿನ ಪರಿಸರ ಸ್ವಚ್ಚತೆಗೆ ಆದ್ಯತೆ ನೀಡುವಂತೆ ಮೇಲ್ವಿಚಾರಕರಾದ ಸರಸ್ವತಿ ಹಾಗೂ ಸಹಾಯಕಿ ಮಂಜುಳ ಅವರು ಸೂಚಿಸಿದರು. ಅಲ್ಲದೆ ಅಂಗನವಾಡಿಯಲ್ಲಿ ಮಕ್ಕಳಿಗಾಗಿ ಸಿರಿಧಾನ್ಯಗಳಿಂದ ತಯಾರಿಸಿದ್ದ ರುಚಿಯಾದ ತಿಂಡಿಯ ಸ್ವಾದವನ್ನು ಸವಿದರು. 

ಇದೇ ವೇಳೆ ಗುಂಬಳ್ಳಿ ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಅಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಅವರಿಂದ ಪಂಚಾಯಿತಿಮಟ್ಟದಲ್ಲಿ ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷದಲ್ಲಿ ಎಷ್ಟು ಜನರಿಗೆ ಎಷ್ಟು ದಿವಸ ಕೆಲಸ ನೀಡಲಾಗಿದೆ. ಮಹಿಳೆಯರಿಗೆ ಆದ್ಯತೆ ನೀಡಲಾಗಿದೆಯೇ ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಂಡರು. ಅಲ್ಲದೆ ಕೃಷಿಸಖಿ, ಪಶುಸಖಿ, ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರನ್ನು ಮಾತನಾಡಿಸಿ ಅವರ ಕಾರ್ಯವೈಖರಿಯನ್ನು ಆಯೋಗದ ಅಧ್ಯಕ್ಷರು ವಿಚಾರಿಸಿದರು. 

ಬಳಿಕ ಬಿಳಿಗಿರಿರಂಗನಬೆಟ್ಟದ ದೇವಾಲಯಕ್ಕೆ ಆಗಮಿಸಿದ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಅವರು ಬಿಳಿಗಿರಿರಂಗನಾಥಸ್ವಾಮಿಯ ದರ್ಶನ ಪಡೆದರು. ದೇವಸ್ಥಾನದ ಇತಿಹಾಸದ ಬಗ್ಗೆ ಅರ್ಚಕರಿಂದ ಮಾಹಿತಿ ಪಡೆದರು. ನಂತರ ಬಿಳಿಗಿರಿರಂಗನ ಬೆಟ್ಟದ ತಪ್ಪಲಿನಲ್ಲಿ ಸೋಲಿಗರು ವಾಸಿಸುವ ಪುರಾಣಿಪೋಡಿಗೆ ಭೇಟಿ ನೀಡಿ ಅಲ್ಲಿನ ಮೂಲಸೌಲಭ್ಯಗಳ ಬಗ್ಗೆ ಅದಿವಾಸಿಗಳಿಂದ ಸಮಸ್ಯೆ, ಕುಂದುಕೊರತೆ, ಅಹವಾಲುಗಳನ್ನು ಆಲಿಸಿದರು.

ಪುರಾಣಿಪೋಡುವಿನಲ್ಲಿ 108 ಅದಿವಾಸಿ ಕುಟುಂಬಗಳು ವಾಸಿಸುತ್ತಿದ್ದು, ವಾಸಿಸಲು ಮನೆ, ಸಮರ್ಪಕ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೌಲಭ್ಯಗಳಿಲ್ಲದೆ ಸಂಕಷ್ಟದ ಸ್ಥಿತಿ ಎದುರಾಗಿದೆ. ಸಂಜೆಯಾದರೆ ಕಾಡುಪ್ರಾಣಿಗಳ ಉಪಟಳದಿಂದ ಯಾರು ಸಹ ಮನೆಯಿಂದ ಹೊರಬರಲಾಗದ ಪರಿಸ್ಥಿತಿ ಎದುರಾಗಿದೆ. ಕಳೆದ ಎರಡು ವರ್ಷಗಳಿಂದ ಪ್ರತಿದಿನ ರಾತ್ರಿ ಕಗ್ಗತ್ತಲಿನಲ್ಲಿ ಕಾಲ ಕಳೆಯಬೇಕಾಗಿದೆ. ಅದಷ್ಟು ಶೀಘ್ರವಾಗಿ ಅವಶ್ಯ ಮೂಲಸೌಕರ್ಯಗಳನ್ನು ಒದಗಿಸುವಂತೆ ಅಲ್ಲಿನ ನಿವಾಸಿಗಳು ಮನವಿ ಮಾಡಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಅವರು ಈ ಬಗ್ಗೆ ವಿವರವಾದ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದರು. ಪುರಾಣಿಪೋಡಿಗೆ ಸೋಲಾರ್ ಮೂಲಕ ವಿದ್ಯುತ್ ಒದಗಿಸಲು 5 ವರ್ಷಗಳ ಅವಧಿಗೆ ಏಜೆನ್ಸಿಯಿಂದ ಕರಾರು ಮಾಡಿಕೊಳ್ಳಲಾಗಿತ್ತು. 5 ವರ್ಷಗಳ ಕರಾರು ಒಪ್ಪಂದ ಮುಗಿದು 2 ವರ್ಷಗಳಾಗಿವೆ. ವಿದ್ಯುತ್ ಲೈನ್ ವ್ಯವಸ್ಥೆಗೂ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಹೀಗಾಗಿ ಪೋಡಿಗೆ 2 ವರ್ಷಗಳಿಂದ ವಿದ್ಯುತ್ ವ್ಯವಸ್ಥೆ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದÀರು. 

ಕಳೆದ ಎರಡು ವರ್ಷಗಳಿಂದ ಕಗ್ಗತ್ತಲಿನಲ್ಲಿರುವ ಜನರ ಸ್ಥಿತಿ ಕಂಡು ತೀವ್ರ ಮರುಕ ಹಾಗೂ ವಿಷಾದ ವ್ಯಕ್ತಪಡಿಸಿದ ಆಯೋಗದ ಅಧ್ಯಕ್ಷರು ಅದಿವಾಸಿ ಜನರ ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಜನರ ಸಂಕಷ್ಟಗಳನ್ನು ಪರಿಹರಿಸಲು ಅಧ್ಯತೆ ನೀಡಬೇಕು ಎಂದ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಅವರು ಈ ಬಗ್ಗೆಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು. 

ಇದೇ ವೇಳೆ ಪುರಾಣಿಪೋಡಿನ ಮನೆಗಳಿಗೆ ಹಲವು ಭೇಟಿ ನೀಡಿ ಮನೆಗಳ ದುಸ್ಥಿತಿಯನ್ನು ವೀಕ್ಷಣೆ ಮಾಡಿದರು. ಬಳಿಕ ಅಲ್ಲಿನ ಆಶ್ರಮ ಶಾಲೆಗೆ ಭೇಟಿ ನೀಡಿ ಶಾಲೆಯ ಮಕ್ಕಳನ್ನು ಮಾತನಾಡಿಸಿದರು. ವಿದ್ಯಾಭ್ಯಾಸದ ಮುಂದಿನ ಗುರಿ ಏನೇಂದು ಮಕ್ಕಳಿಂದ ತಿಳಿದುಕೊಂಡರು. ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಪೌಷ್ಠಿಕ ಆಹಾರ ವಿತರಣೆಯಾಗುತ್ತಿರುವ ಬಗ್ಗೆ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಕ್ಕಳಿಗೆ ಹಾಲು ವಿತರಣೆಯಾಗದಿರುವ ಬಗ್ಗೆ ಗಮನಿಸಿದ ಅಧ್ಯಕ್ಷರು ಸರ್ಕಾರವೇ ಮಕ್ಕಳಿಗೆ ಮಕ್ಕಳಿಗೆ ಹಾಲು ನೀಡುವಂತೆ ಮೆನು ಚಾರ್ಟ್ ನೀಡಿದೆ. ಅದರಂತೆ ಕಡ್ಡಾಯವಾಗಿ ಹಾಲು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಯಳಂದೂರು ತಾಲೂಕು ತಹಶೀಲ್ದಾರ್ ಜಯಪ್ರಕಾಶ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿ, ಪುರಾಣಿಪೋಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾವ್ಯ, ಜಿಲ್ಲಾ ಬುಡಕಟ್ಟು ಅದಿವಾಸಿಗಳ ಸಂಣಘದ ಅಧ್ಯಕ್ಷರಾದ ಮಾದೇಗೌಡ, ಅರಣ್ಯ ಅಧಿಕಾರಿಗಳು, ತಾಲೂಕುಮಟ್ಟದ ಅಧಿಕಾರಿಗಳು, ಅದಿವಾಸಿ ಮುಖಂಡರು, ಇತರರು ಇದ್ದರು.

Leave a Reply

Your email address will not be published. Required fields are marked *