ಶಾಲೆಗಳಲ್ಲಿ ನೀರಿನ ಗಂಟೆ: ಶಾಲಾ ಶಿಕ್ಷಣ ಇಲಾಖೆಯ ಸ್ವಾಗತಾರ್ಹ ಆದೇಶ!

ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯುವುದನ್ನು ಜ್ಞಾಪಿಸಲು ಸಲುವಾಗಿಯೇ ನೀರಿನ ಗಂಟೆ (ವಾಟರ್ ಬೆಲ್) ಬಾರಿಸುವುದನ್ನು ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಇಲಾಖೆಯ ಪಿಎಂ ಘೋಷಣ್ ಶಕ್ತಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಇದೊಂದು ಸ್ವಾಗತಾರ್ಹ ವಿಷಯ.
ಸುತ್ತೋಲೆಯ ವಿವರ ಈ ಕೆಳಕಂಡಂತಿದೆ. ಆರೋಗ್ಯ ಬೆಳವಣಿಗೆ ದೃಷ್ಟಿಯಿಂದ ಮಕ್ಕಳು ನಿಗದಿತ ಪ್ರಮಾಣದಲ್ಲಿ ನೀರು ಕುಡಿಯಲೇ ಬೇಕು. ಆದರೆ ಮಕ್ಕಳಿಗೆ ಈ ಕುರಿತು ಸೂಕ್ತ ಅರಿವು ಇರುವುದಿಲ್ಲ. ಅದಕ್ಕಾಗಿ ಶಾಲಾ ಅವಧಿಯಲ್ಲಿ ಮಕ್ಕಳು ನಿಗದಿತ ಪ್ರಮಾಣದಲ್ಲಿ ನೀರು ಕುಡಿಯುವುದನ್ನು ನೆನಪಿಸಬೇಕಾದದ್ದು ಶಿಕ್ಷಕರು ಮತ್ತು ಸಿಬ್ಬಂದಿಯ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. 
ಮಕ್ಕಳಿಗೆ ಶುದ್ಧ ಕುಡಿಯುವ ನೀರು ನೀಡಬೇಕು. ನೀರಿನಿಂದ ಹರಡಬಹುದಾದ ಕಾಯಿಲೆಗಳಿಗೆ ತುತ್ತಾಗದಂತೆ ಎಚ್ಚರಿಕೆ ವಹಿಸಬೇಕು ಮಧ್ಯಾಹ್ನದ ಬಿಸಿಯೂಟ, ಆಟದ ಸಮಯದಲ್ಲಿ ನೀರು ಲಭ್ಯ ಇರುವಂತೆ ನೋಡಿಕೊಳ್ಳಬೇಕು. 
ಎಲ್ ಕೆ ಜಿ,  ಯು ಕೆ ಜಿ ಒಳಗೊಂಡಂತೆ ಎಲ್ಲಾ ಹಂತದಲ್ಲೂ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಈ ನಿಯಮ ಪಾಲಿಸಬೇಕು ಎಂದು ಸೂಚಿಸಿದ್ದಾರೆ.
ಈ ನಿರ್ಧಾರ, ಈ ಆದೇಶ ಅತ್ಯಂತ ಸೂಕ್ತವಾದದ್ದು. ಆರೋಗ್ಯದ ದೃಷ್ಟಿಯಿಂದ ನೀರು ಅತ್ಯವಶ್ಯಕ ನಿಜ. ಆದರೆ ನಾವು ನೀರನ್ನು ಯಾವ ಸಂದರ್ಭದಲ್ಲಿ ಕುಡಿಯಬೇಕು, ಹೇಗೆ ಬಳಸಬೇಕು, ಜೊತೆಗೆ ಯಾವ ನೀರನ್ನ ಕುಡಿಯಬೇಕು, ಎನ್ನುವುದು ಒಮ್ಮೊಮ್ಮೆ ದೊಡ್ಡವರಿಗೂ ಕೂಡ ತಿಳಿದಿರುವುದಿಲ್ಲ!.
ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ನಾವು ಇದರ ಮಹತ್ವವನ್ನು ಜೊತೆಗೆ ನೀರಿನಿಂದ ಬರಬಹುದಾದ ಕಾಯಿಲೆಗಳ ಬಗ್ಗೆ ತಿಳುವಳಿಕೆ ನೀಡಲೇಬೇಕು. ಮೊದಲು ಈ ರೀತಿಯ ನೀರು ಕುಡಿಯುವ ವ್ಯವಸ್ಥೆ ಯನ್ನು ಮನೆಯಿಂದಲೇ ರೂಡಿಸಬೇಕು. ಇದು ನಿಯಮಿತವಾದರೆ ಈಗಾಗಲೇ ಆದೇಶ ಹೊರಡಿಸಿರುವುದರಿಂದ ಶಾಲೆಯಲ್ಲಿ ಶಿಕ್ಷಕರು, ಸಿಬ್ಬಂದಿ ವರ್ಗದವರು ಈ ಬಗ್ಗೆ ಮತ್ತಷ್ಟು ಕಾಳಜಿ ವಹಿಸಿರುವುದರಿಂದ ಮಕ್ಕಳು ದೊಡ್ಡವರಾದ ನಂತರವೂ ಕೂಡ ನೀರಿನ ಮಹತ್ವವನ್ನು ತಿಳಿದು ತಾವು ಕುಡಿದು ಇತರರಿಗೂ ನೀರು ಕುಡಿಯಲು ಪ್ರೇರೇಪಣೆ ಮಾಡುತ್ತಾರೆ.
ನಿಜಕ್ಕೂ ಈ ಒಂದು ಹಂತದಲ್ಲಿ ಮಕ್ಕಳಿಗೆ ನೀರಿನ ಕುರಿತಾಗಿ ವಿವಿಧ ಕಾರ್ಯಗಾರಗಳ ಮೂಲಕ ಶಾಲಾ ದಿನಗಳಲ್ಲಿ ಆಗಿಂದಾಗೆ ಹೇಳಲೇಬೇಕು. ಈ ರೀತಿ ಮಾಡುವುದರಿಂದ ಮಕ್ಕಳಿಗೆ ಒಂದು ರೀತಿಯಲ್ಲಿ ಎಚ್ಚರಿಕೆವಹಿಸಲು ಅನುಕೂಲವಾಗುತ್ತದೆ.
ನಾವು ಶಿಕ್ಷಣದ ಜೊತೆ ಜೊತೆಗೆ ಈ ರೀತಿಯ ಒಂದು ಆರೋಗ್ಯದ ದೃಷ್ಟಿಯಿಂದ ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎನ್ನುವುದನ್ನು ಕೂಡ ಹೇಳಬೇಕು. ಇಂದಿನ ದಿನಗಳಲ್ಲಿ ನಾವು ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವವನ್ನು ಕೊಡುತ್ತಿದ್ದೇವೆ ನಿಜ. ಆದರೆ ಎಲ್ಲೋ ಒಂದು ಕಡೆ ಈ ಶಿಕ್ಷಣ ಎನ್ನುವ ವ್ಯವಸ್ಥೆಯು ಅಂಕ ಗಳಿಕೆಯತ್ತ ಸಾಗುತ್ತಿದೆ ಎಂದು ಹಲವು ತಜ್ಞರ ಅಭಿಪ್ರಾಯವಾಗಿದೆ. 
ಪೋಷಕರಾದಂತವರು, ಶಿಕ್ಷಕರುಗಳು, ತಜ್ಞರು ಈ ನಿಟ್ಟಿನಲ್ಲಿ ಚಿಂತಿಸುವ ಸಕಾಲ ಇದಾಗಿದೆ. ಮಕ್ಕಳು ತಮ್ಮ ದೈನಂದಿನ ದಿನಚರಿ ಹೇಗಿರಬೇಕು ಎನ್ನುವುದರ ಬಗ್ಗೆಯೂ ಕೂಡ ನಾವು ತಿಳುವಳಿಕೆ ನೀಡಲೇಬೇಕು. ಬೆಳಿಗ್ಗೆ ಯಾವ ಸಮಯದಲ್ಲಿ ಏಳಬೇಕು. ಎದ್ದ ನಂತರ ನಿತ್ಯ ಕರ್ಮಗಳನ್ನ ಮಾಡಿ ನಿಗದಿತ ವ್ಯಾಯಾಮಗಳನ್ನು ಮಾಡಿದ ನಂತರ ನಾವು ಕೆಲವಾರು ಸಮಯ ಅಧ್ಯಯನಕ್ಕೆ ಮೀಸಲಿಟ್ಟರೆ ಬೆಳಗಿನ ಸಮಯ ಅತ್ಯಂತ ಸೂಕ್ತವಾಗಿ ಅವರಿಗೆ ಸಿದ್ದಿಸುತ್ತದೆ.
ಬೇಗ ಮಲಗಿ, ಬೇಗ ಏಳುವ ವ್ಯವಸ್ಥೆಯನ್ನು ಕೂಡ ನಾವು ಮಕ್ಕಳಿಗೆ ರೂಢಿಸಬೇಕು. ಜೊತೆಗೆ ಮನೆಯಲ್ಲಿ ಟಿವಿ ಕಾರ್ಯಕ್ರಮಗಳನ್ನ ನೋಡುವುದನ್ನ ದೊಡ್ಡವರು  ಕಡಿಮೆ ಮಾಡಬೇಕು. ಇದರ ಜೊತೆಜೊತೆಗೆ ಮೊಬೈಲ್ ಬಳಸುವುದನ್ನು ಕೂಡ ಕಡಿಮೆ ಮಾಡಲೇಬೇಕು. ಒಂದು ವೇಳೆ ಅವರ ಮುಂದೆ ಬಳಸಿದರೆ ನಾವೇ ತಪ್ಪು ಮಾಡಿ ಅವರಿಗೆ ಹೇಳಿ ಏನು ಪ್ರಯೋಜನ?. ಅವರಿಬ್ಬರೂ ಬಳಸಿ ಅವರಿಗೆ ಪ್ರೇರಣೆ ನೀಡುವಂತಾಗಬಾರದು. 
ಏಕೆಂದರೆ ಮಕ್ಕಳಿಗೆ ಈ ಒಂದು ಕಲಿಕೆ ಹಂತದಲ್ಲಿ ಎಲ್ಲವನ್ನು ಕೂಡ ತಿಳಿದುಕೊಳ್ಳುವ, ನೋಡುವ, ಮಾಡುವ ಆತುರ ಕಾತುರ ಹೆಚ್ಚಾಗಿ ಇರುತ್ತದೆ. ಇಂತಹ ಒಂದು ಬಿಳಿ ಹಾಳೆಯಂಥಯ  ಮಕ್ಕಳ ಸೂಕ್ಷ್ಮ ಮನಸ್ಸು ಅಲ್ಲಿ ಏನು ಬೇಕಾದರೂ ಬರೆಯಬಹುದು. ಆದರೆ ಆ ಬರೆದಿದ್ದು ಶಾಶ್ವತವಾಗಿ ಆರೋಗ್ಯದ ದೃಷ್ಟಿಯಿಂದ ಉಳಿದುಕೊಳ್ಳುವಂತೆ ನೋಡಿಕೊಳ್ಳಬೇಕು. 
ಮಕ್ಕಳು ಪ್ರತಿದಿನ ಬೆಳಿಗ್ಗೆ ಬೇಗ ಎದ್ದರೆ ಅವರ ದೈನಂದಿನ ಕೆಲಸಗಳು ಸುಗಮವಾಗಿ ಸಾಗುತ್ತವೆ. ಜೊತೆಗೆ ಮಕ್ಕಳು ತಿಂಡಿಯನ್ನು ಕೂಡ ನಿಧಾನವಾಗಿ ತಿನ್ನುವಂತಹ ಪದ್ಧತಿಯು ರೂಡಿಗೆ ಬರುತ್ತದೆ. ದೊಡ್ಡವರ ಒತ್ತಡಕ್ಕೆ ಮಣಿದು ಶಾಲಾ ವಾಹನಕ್ಕೆ ನೂಕುವ ವ್ಯವಸ್ಥೆಯನ್ನು ನಾವು ಪ್ರತಿದಿನ ಮಾಡುತ್ತಿದ್ದೇವೆ. ಇದು ನಿಜಕ್ಕೂ ಶಿಕ್ಷಣದ ಮೇಲೆ, ಜೊತೆಗೆ ಮಕ್ಕಳ ಆರೋಗ್ಯದ ದೃಷ್ಟಿಯಿಂದಲೂ ಕೂಡ ಒಂದು ರೀತಿಯಲ್ಲಿ ಒತ್ತಡ ಬರುತ್ತಿದೆ. ಓದುವ ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಇರಬಾರದು. ಜೊತೆಗೆ ಅವರ ಅಧ್ಯಯನಕ್ಕೆ ನಾವು ನಿರಂತರವಾಗಿ ಸರ್ಪಗಾವಲು ಇರಬೇಕು.
ತಂದೆ ತಾಯಿ ಎಲ್ಲರೂ ಕೂಡ ಶಿಕ್ಷಣ ಹಂತದಲ್ಲೂ ಕೂಡ ಮಕ್ಕಳ ಕಲಿಕೆ ಒಂದು ರೀತಿಯಲ್ಲಿ ಆರೋಗ್ಯಪೂರ್ಣವಾಗಿರಬೇಕು. ಅಲ್ಲಿ ಶಿಕ್ಷಕರು ಒಂದಲ್ಲ ಒಂದು ರೀತಿಯಲ್ಲಿ ಮಕ್ಕಳನ್ನು ತಿದ್ದಿ ತೀಡುತ್ತಾರೆ. ಇಂತಹ ಸಂದರ್ಭದಲ್ಲಿ ನಾವು ಮಕ್ಕಳನ್ನು ಅವರ ಅಧ್ಯಯನ ಹೇಗೆ ಸಾಗುತ್ತಿದೆ ಎನ್ನುವುದರ ಬಗ್ಗೆ ಆಗಿದ್ದಾಗ ಶಾಲಾ- ಕಾಲೇಜುಗಳಿಗೆ ಭೇಟಿ ನೀಡಿ ಗುರುಗಳ ಮಾರ್ಗದರ್ಶನ ಪಡೆಯಬೇಕು. ಅವರ ಬಳಿ ಹೋಗಿ ನಮ್ಮ ಮಗು ಯಾವ ರೀತಿಯಲ್ಲಿ ಶಿಕ್ಷಣ ಪಡೆಯುತ್ತಿದೆ, ಏನಾದರೂ ಸಮಸ್ಯೆಗಳು ಇದೆಯೇ ಎಂಬುದರ ಬಗ್ಗೆ ಚರ್ಚೆ ಮಾಡಬೇಕು. ಮಕ್ಕಳಿಗೆ ಅದು ಗೊತ್ತಾಗಬಾರದು. ಒಂದು ವೇಳೆ ಶಿಕ್ಷಕರು ಮಕ್ಕಳ ಬಗ್ಗೆ ಏನಾದರೂ ನೆಗೆಟಿವ್ ಅಂಶಗಳನ್ನು ತಿಳಿಸಿದರೆ  ನಾವು ಮನೆಗೆ ಬಂದು ಮಕ್ಕಳ ಅವರ ಮನಸ್ಸನ್ನು ತಮ್ಮ ಹತೋಟಿಗೆ ಪಡೆದುಕೊಂಡು ನಂತರ ಅವರ ತಪ್ಪನ್ನು ತಿದ್ದಬೇಕು. ಆಗ ಮಾತ್ರ ನೆಗೆಟಿವ್ ಸಮಸ್ಯೆಗಳು ಪಾಸಿಟಿವ್ ಆಗಿ ಪರಿವರ್ತನೆಗೊಳ್ಳುತ್ತವೆ!. 
ಅದರಿಂದಾಗಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಭದ್ರಬುನಾದಿ ಹಾಕಿ ಕೊಟ್ಟಂತಾಗುತ್ತದೆ. ಅದು ಬಿಟ್ಟು ನಾವು ನಮ್ಮ ಒತ್ತಡವನ್ನು ನಮ್ಮ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಖಂಡಿತ ಏರಬಾರದು. ಇದು ತಪ್ಪು. ಮಕ್ಕಳನ್ನ ಸದಾ ಓದು ಎಂದು ತಿಳಿಸುವುದರ ಬದಲು ಅವರಿಗೂ ಕೂಡ ಒಂದು ಕೆಲವಾರು ಸಮಯ ಮೀಸಲಿಟ್ಟು ,ಮನರಂಜನೆ ಅಥವಾ ಅವರ ಯೋಗ ಕ್ಷೇಮದ ಬಗ್ಗೆ ವಿಚಾರಿಸಿಕೊಳ್ಳಬೇಕು. ಆಗ ಮಾತ್ರ ಮಕ್ಕಳು ದೊಡ್ಡವರ ಜೊತೆಯಲ್ಲೂ ಕೂಡ ಸರಾಗವಾಗಿ ಬೆಳೆದು, ಅವರು ಕೂಡ ನಮ್ಮನ್ನ ಗಮನಿಸುತ್ತಿದ್ದಾರೆ ಎನ್ನುವ ಭಾವನೆ ಮನದಲ್ಲಿ ಮೂಡುತ್ತದೆ.
ಆಗ ಮಾತ್ರ ಈ ರೀತಿಯ ಕಲಿಕೆಗೆ ಒಂದು ಉತ್ತಮ ವೇದಿಕೆಯಾಗುತ್ತದೆ. ಅದರಿಂದ ಈ ನೀರು ಕುಡಿಯುವ ವ್ಯವಸ್ಥೆಯನ್ನು ನಾವು ಮಕ್ಕಳಿಗೆ ತಿಳಿಸಲೇಬೇಕು. ಜೊತೆಗೆ ನೀರಿನ ಮಹತ್ವವನ್ನು ದೊಡ್ಡವರು ಕೂಡ ಅರಿತುಕೊಂಡರೆ ನೀರಿನಿಂದ ಬರುವ ಅನೇಕ ರೋಗಗಳಿಂದ ಹೇಗೆ ಮುಕ್ತರಾಗುತ್ತೇವೆ, ನೈಸರ್ಗಿಕವಾಗಿ ಸಿಗುವ ನೀರನ್ನು ಕೂಡ ಮಲಿನ ಮಾಡದಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು.
ಇಂದಿನ ದಿನಗಳಲ್ಲಿ ನೀರು ನಮಗೆ ಸರಾಗವಾಗಿ ಸಿಗುತ್ತಿದೆ ನಿಜ. ಆದರೆ ಮುಂದಿನ ದಿನಗಳಲ್ಲಿ ನೀರು ಕೂಡ ಅದು ಯಥೇಚ್ಛವಾಗಿ ಸಿಗದ ಸಂಪನ್ಮೂಲವಾಗಬಹುದು. ನಾವು ಇಂದು ನೀರನ್ನ ಅತಿ ಹೆಚ್ಚು ಪೋಲ್ ಆಗಿ ಬಳಸುತ್ತಿದ್ದೇವೆ. ನೀರು ಪ್ರಾಣಿ ಪಕ್ಷಿಗಳಿಗೂ ಕೂಡ ಸಿಗುವಂತಾಗಬೇಕು. ಈ ಸುಂದರ ಪ್ರಕೃತಿ ನಮಗೆ ಎಲ್ಲವನ್ನು ನೀಡಿದೆ. ಆದರೆ ನಾವು ಆ ಎಲ್ಲವನ್ನು ಕೂಡ ಮಲಿನ ಮಾಡುತ್ತಿದ್ದೇವೆ. 
ಆದುದರಿಂದಾಗಿ ಶಿಕ್ಷಣ ಇಲಾಖೆಯ ಹೊರಡಿಸಿರುವ ಈ ಆದೇಶದ ಸಂದರ್ಭದಲ್ಲಿ ಮಕ್ಕಳ ಶಿಕ್ಷಣ ವ್ಯವಸ್ಥೆಯ ಬಗ್ಗೆಯೂ ಕೂಡ ಚಿಂತಿಸುವಂತೆ ಆಗಬೇಕು. ಯಾವುದೇ ರೀತಿಯಲ್ಲಿ ಈ ಶಿಕ್ಷಣ ವ್ಯವಸ್ಥೆಯು ಮಕ್ಕಳಿಗೆ ಕಠಿಣ ಸಮಸ್ಯೆಯಾಗಿ ತಲೆದೋರಲೇಬಾರದು. ಜೊತೆಗೆ ನಾವು ಮಕ್ಕಳನ್ನು ಅಂಕ ಗಳಿಸಲು ಅತಿ ಹೆಚ್ಚು ಒತ್ತಡ ತರಬಾರದು. ಅವರನ್ನು ಸ್ವಲ್ಪ ಸ್ವತಂತ್ರವಾಗಿ ಬಿಟ್ಟು, ಸಮಯಕ್ಕೆ ತಕ್ಕಂತೆ ಅವರನ್ನು ಗಮನಿಸಿ ಪ್ರೋತ್ಸಾಹಿಸಿ. ಈ ರೀತಿ ಮಾಡಿದ್ದೆ ಆದರೆ ಮಕ್ಕಳು ಮುಂದೆ ಬಂದೇ ಬರುತ್ತಾರೆ. ಇವತ್ತಿನ ದಿನಗಳಲ್ಲಿ ಮಕ್ಕಳಿಗೆ ಒತ್ತಡ ಹೆಚ್ಚಾಗುತ್ತಿದ್ದು ಅವರು ಒಂದಲ್ಲ ಒಂದು ಕಾರಣಗಳಿಂದ ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಿ, ಅನೇಕ ಮಕ್ಕಳು ಆತ್ಮಹತ್ಯೆ ಹಾದಿಯನ್ನು ಕೂಡ ಹಿಡಿದಿದ್ದಾರೆ. ಆದುದರಿಂದ ಮನೆಯಲ್ಲಿ, ಶಾಲೆಯಲ್ಲಿ ಪೋಷಕರು, ಶಿಕ್ಷಕರು ಎಲ್ಲರೂ ಕೂಡ ಮಕ್ಕಳ ಸೂಕ್ಷ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಅವರ ಸಮಸ್ಯೆಯ ಬಗ್ಗೆ, ಅದರ ಪರಿಹಾರದ ಬಗ್ಗೆ ತಿಳುವಳಿಕೆ ನೀಡಬೇಕು. ಯಾವುದೇ ಸಮಸ್ಯೆ ಬಂದರೂ ಕೂಡ ಅದನ್ನು ಪರಿಹರಿಸಬಹುದು ಎನ್ನುವ ಒಂದು ಪಾಸಿಟಿವ್ ಥಿಂಕಿಂಗ್ ಅವರ ತಲೆಯಲ್ಲಿ ತುಂಬಬೇಕು.
ಒಟ್ಟಿನಲ್ಲಿ ಮಕ್ಕಳ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು ಆ ಎಲ್ಲಾ ಬದಲಾವಣೆಗೂ ಪೋಷಕರ, ಶಿಕ್ಷಕರ ಸ್ವಾಗತ ಇದ್ದೇ ಇರುತ್ತದೆ.

ಕಾಳಿಹುಂಡಿ ಶಿವಕುಮಾರ್ ಮೈಸೂರು

Leave a Reply

Your email address will not be published. Required fields are marked *