ಚಾಮರಾಜನಗರ: ನಮ್ಮಲ್ಲಿ ಸಾಧು-ಸಂತರು, ದಾರ್ಶನಿಕರು, ಚಿಂತಕರ ಅನುಭಾವದ ದೊಡ್ಡ ಪರಂಪರೆಯೇ ಇದೆ ಎಂದು ಸಂಸ್ಕøತಿ ಚಿಂತಕರು ಹಾಗೂ ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಜಿ.ಎಸ್. ಜಯದೇವ ಅವರು ಅಭಿಪ್ರಾಯಪಟ್ಟರು.
ನಗರದ ಜೆ.ಎಸ್.ಎಸ್. ಮಹಿಳಾ ಕಾಲೇಜು ಸಭಾಂಗಣದಲ್ಲಿಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಜೆ.ಎಸ್.ಎಸ್. ಮಹಿಳಾ ಕಾಲೇಜು ಹಾಗೂ ರಂಗವಾಹಿನಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬಸವಣ್ಣ, ಕನಕದಾಸ, ಮಲೆ ಮಹದೇಶ್ವರ ಮತ್ತು ಮಂಟೇಸ್ವಾಮಿಯವರ ಕುರಿತ ತೌಲನಿಕ ಅಧ್ಯಯನದ ‘ಅನುಭಾವ ಪರಂಪರೆ-ತಾತ್ವಿಕ ಜಿಜ್ಞಾಸೆ’ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನುಭವ, ಅನುಭಾವ ಎಲ್ಲರಲ್ಲೂ ಹಾಸುಹೊಕ್ಕಾಗಿರುವುದರಿಂದ ಅನುಭಾವ ಪರಂಪರೆ ಎನ್ನುವುದು ವಿಶೇಷ ಆಸಕ್ತಿದಾಯಕ ತಾತ್ವಿಕ ಜಿಜ್ಞಾಸೆಯ ವಿಚಾರವಾಗಿದೆ. ಅರಿವು ಎಂಬುದು ತಾನಾಗಿ ಸಾರ್ಥಕ ಜೀವನವನ್ನು ಅನುಭವಿಸಿ ಅದರ ಸಿಹಿಯನ್ನು ಇತರರಿಗೂ ಪಸರಿಸುವುದೇ ಅನುಭಾವ. ಶಿವಶರಣರು ಅನುಭಾವ ಪರಂಪರೆಯ ಮೂಲಪುರುಷರು ಎನ್ನಬಹುದು. ಅನುಭವಿ ಸಿಹಿಯನ್ನು ತಿಂದು ಬಳಿಕ ಅದನ್ನು ಮರೆಯಬಹುದು. ಆದರೆ ಅನುಭಾವಿ ಸಿಹಿಯನ್ನು ನಿಧಾನವಾಗಿ ತಿಂದು ಅದನ್ನು ಇತರರೊಂದಿಗೂ ಹಂಚಿಕೊಂಡು ಅನುಭಾವಿಸಿ ಸಕ್ಕರೆಯಂತಾಗುತ್ತಾನೆ. ಇದೇ ಅನುಭವ ಹಾಗೂ ಅನುಭಾವಕ್ಕಿರುವ ವ್ಯತ್ಯಾಸವಾಗಿದೆ ಎಂದರು.
ಬಸವಣ್ಣನವರು ಕಂಗಳು ತುಂಬಿದರು ನೀನು ಕಾಣಿಸಲಿಲ್ಲ, ಕಿವಿಗಳು ತುಂಬಿದರು ನಿನ್ನ ದನಿ ಕೇಳಿಸಲಿಲ್ಲ, ಕೈಗಳೂ ತುಂಬಿದರೂ ನಿನ್ನ ಪೂಜಿಸಲಿಲ್ಲ ಕೂಡಲ ಸಂಗಮದೇವ ಎಂದಿದ್ದಾರೆ ಇದು ಅನುಭಾವದ ಮಾತು. ಮನುಷ್ಯ ಅನುಭಾವದ ನೆಲೆಯಿಂದ ಸಂಬಂಧಗಳ ನೆಲೆಗೆ ಬರುತ್ತಾನೆ, ಬಳಿಕ ಅನುಕಂಪದೆಡೆಗೆ ಹೊರಳುತ್ತಾನೆ ಇದಕ್ಕೆ ರಾಮಕೃಷ್ಣ ಪರಮಹಂಸ ಅವರು ನೇರ ಸಾಕ್ಷಿಪ್ರಜ್ಞೆಯಾಗಿದ್ದಾರೆ. ಸುತ್ತೂರಿನ ಗುರುಪರಂಪರೆ ಅನುಭಾವ ಪರಂಪರಯೇ ಆಗಿದೆ. ನಮ್ಮೊಳಗಿನ ಪಶುಪ್ರವೃತ್ತಿಯನ್ನು ಕಡಿಮೆ ಮಾಡಿ ಆನಂದದ ಸ್ಥಿತಿ ತಲುಪುವುದೇ ಅನುಭಾವದ ಸ್ಥಿತಿಯಾಗಿದೆ ಎಂದು ಪ್ರೊ. ಜಿ.ಎಸ್. ಜಯದೇವ ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ಜೆ.ಎಸ್.ಎಸ್. ಮಹಾವಿದ್ಯಾಪೀಠದ ಪ್ರಕಟಣಾ ಹಾಗೂ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕರಾದ ಪ್ರೊ. ಮೊರಬದ ಮಲ್ಲಿಕಾರ್ಜುನ ಅವರು ಮಾತನಾಡಿ ಬದುಕಿನ ತಾತ್ಪರ್ಯವನ್ನು ಪ್ರಸ್ತುತಪಡಿಸುವುದೇ ಅನುಭಾವ ಪರಂಪರೆ. ಅನುಭಾವವು 12ನೇ ಶತಮಾನದಿಂದ ಇದುವರೆಗೆ ನಮ್ಮ ಬದುಕಿಗೆ ಅರ್ಥಪೂರ್ಣ ತಾತ್ವಿಕ ನೆಲೆ ತಂದುಕೊಟ್ಟಿದೆ. ಮಲೆ ಮಹದೇಶ್ವರ, ಮಂಟೆಸ್ವಾಮಿ ಈ ನೆಲದ ಅನುಭಾವವಾಗಿದ್ದಾರೆ. ಹಾದಿಲೀ ಜ್ಯೋತಿ, ಬೀದಿಲೀ ಜ್ಯೋತಿ ಎಂದು ಸಾರಿ ಇಡೀ ಪರಿಸರವನ್ನೇ ಜ್ಯೋತಿರ್ಮಯ ಮಾಡಿದ ಮಹಾಪುರುಷರು ನಮ್ಮೊಳಗಿನ ಒಳ ಅಂತಃಸತ್ವವನ್ನು ಗುರುತಿಸಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಾ.ತ. ಚಿಕ್ಕಣ್ಣ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಕನ್ನಡ ಸಾಹಿತ್ಯ, ವಚನ ಸಾಹಿತ್ಯ ಹಾಗೂ ಜನಪದ ಸಾಹಿತ್ಯದಂತೆಯೇ ಅನುಭಾವ ಸಾಹಿತ್ಯವು ಪ್ರತಿಯೊಬ್ಬರನ್ನು ವ್ಯಕ್ತಿತ್ವ ವಿಕಸನದೆಡೆಗೆ ನಡೆಸುತ್ತದೆ. ಮನುಷ್ಯ ಮನುಷ್ಯರ ನಡುವೆ ಪ್ರೀತಿ, ಅಂತಃಕರಣದ ಅನುಭಾವದ ನೆಲೆಯಲ್ಲಿ ತಾತ್ವಿಕ ಸಮಾಜ ಕಟ್ಟಬೇಕು. ಬೇರೆಯವರ ಸಾರ್ಥಕ ಬದುಕನ್ನು ಗಮನಿಸಿದಾಗ ನಮ್ಮ ಜೀವನ ಅರಳುತ್ತದೆ. ಮನುಷ್ಯನಾದವನು ಮೊದಲು ಮನುಷ್ಯತ್ವವನ್ನು ಅರ್ಥ ಮಾಡಿಕೊಂಡರೆ ಬೆಳಕು ತಾನಾಗೇ ಮೂಡಲಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಂಜುಂಡಯ್ಯ, ಜೆ.ಎಸ್.ಎಸ್. ಮಹಿಳಾ ಕಾಲೇಜು ಪ್ರಾಂಶುಪಾಲರಾದ ಡಾ. ಎನ್. ಮಹದೇವಸ್ವಾಮಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಆರ್. ಉಮೇಶ್, ರಂಗವಾಹಿನಿ ಸಂಸ್ಥೆಯ ಅಧ್ಯಕ್ಷರಾದ ಸಿ.ಎಂ. ನರಸಿಂಹಮೂರ್ತಿ, ಇತರರು ಕಾರ್ಯಕ್ರಮದಲ್ಲಿ ಇದ್ದರು.
ಆರಂಭದಲ್ಲಿ ಜನಪದಶ್ರೀ ಪರಶಸ್ತಿ ಪುರಸ್ಕøತ ನೀಲಗಾರರಾದ ದೊಡ್ಡಗವಿ ಬಸಪ್ಪ ಅವರಿಂದ ಗಾಯನ ನಡೆಯಿತು.
ವೇದಿಕೆ ಕಾರ್ಯಕ್ರಮದ ಬಳಿಕ ಬಸವಣ್ಣ, ಕನಕದಾಸ, ಮಲೆ ಮಹದೇಶ್ವರ ಮತ್ತು ಮಂಟೇಸ್ವಾಮಿಯವರ ಕುರಿತ ತೌಲನಿಕ ಅಧ್ಯಯನದ ಬಗ್ಗೆ ಪ್ರೊ. ಮೊರಬದ ಮಲ್ಲಿಕಾರ್ಜುನ, ಮಂಡ್ಯದ ಜಿ. ಉಷಾರಾಣಿ, ಮೈಸೂರಿನ ಡಾ ದಳವಾಯಿ ರಾಜಪ್ಪ, ಕೆ.ಎನ್. ಗಿರೀಶ್, ಮಹದೇವ ಶಂಕನಪುರ ಅವರು ವಿಚಾರಸಂಕಿರಣಗಳನ್ನು ನಡೆಸಿಕೊಟ್ಟರು.