ಚಾಮರಾಜನಗರ: ತಾಯಿ, ಸಹೋದರಿ, ಮಡದಿ, ಮಗಳು ಹೀಗೆ ಕುಟುಂಬದ ಎಲ್ಲಾ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮಹಿಳೆಯರ ಪಾತ್ರ ಬಹುದೊಡ್ಡದು. ಮಹಿಳೆಯೆಂದರೆ ಶಕ್ತಿ, ಧೈರ್ಯ, ಕಾಳಜಿ ಎಂದು ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಹೇಳಿದರು.
ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಕುಟುಂಬದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿದ್ದಾರೆ. ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬರು ಇರುತ್ತಾರೆ ಎಂಬುದನ್ನು ಒಪ್ಪಬೇಕಿದೆ. ತಾಳ್ಮೆ, ಸಹನೆ ಪ್ರತೀಕವಾದ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದಿದ್ದಾರೆ. ಇತಿಹಾಸವನ್ನು ನೋಡಿದಾಗ ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮಿಬಾಯಿಯಂತಹ ವೀರ ಹೋರಾಟಗಾರರು ತಮ್ಮದೇ ಆದ ಶೌರ್ಯ ಪ್ರದರ್ಶಿಸಿದ್ದಾರೆ ಎಂದರು.
ಮಹಿಳೆಯರ ಸಾಧನೆ ಗೌರವಿಸಬೇಕು. ರಾಜಕೀಯ, ಸಮಾಜ ಸೇವೆ, ಕ್ರೀಡೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಆದರ್ಶ ನಮ್ಮ ಮುಂದಿದೆ. ಉತ್ತಮ ಸಕಾಲಿಕ ಸಲಹೆ, ಅಭಿಪ್ರಾಯಗಳನ್ನು ನೀಡುವ ಮಹಿಳೆಯರು ಕುಟುಂಬದ ಯಶಸ್ಸಿಗೆ ಕಾರಣರಾಗುತ್ತಿದ್ದಾರೆ. ಪೂಜ್ಯ ಗೌರವ ಭಾವನೆಯಿಂದ ಮಹಿಳೆಯರನ್ನು ಕಾಣಲಾಗುತ್ತಿದೆ. ಜಿಲ್ಲೆಯಲ್ಲಿಯೂ ಸಾಕಷ್ಟು ಪ್ರತಿಭಾನ್ವಿತ ಮಹಿಳೆಯರು ಇರುವುದು ಹೆಮ್ಮೆಯ ವಿಷಯವಾಗಿದೆ ಎಂದು ಕಾಡಾ ಅಧ್ಯಕ್ಷರಾದ ಮರಿಸ್ವಾಮಿ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ದೊಡ್ಡ ಶಕ್ತಿ ಎನಿಸಿಕೊಳ್ಳುವ ಮಹಿಳೆಯರ ಹಿಂದಿನ ನೋವುಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಹಲವು ಸಂದರ್ಭಗಳಲ್ಲಿ ಹೆಣ್ಣು ಮಕ್ಕಳು ಅಪಮಾನ, ತಿರಸ್ಕಾರಕ್ಕೆ ಒಳಗಾದರು ಸಹ ಸೋತಿದ್ದೇವೆ ಎಂದು ಮೇಲ್ನೋಟಕ್ಕೆ ತೋರಿಸಿಕೊಳ್ಳುವುದಿಲ್ಲ. ನೋವನ್ನು ನುಂಗಿ ಚಡಪಡಿಸುವ ಸಣ್ಣ ವಯಸ್ಸಿನ ಹೆಣ್ಣುಮಕ್ಕಳು ಸಹ ತಮ್ಮಲ್ಲೇ ಕೊರಗುತ್ತಾರೆ. ಇಂತಹ ಹೆಣ್ಣುಮಕ್ಕಳಿಗೆ ಧೈರ್ಯ ತುಂಬುವುದಕ್ಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮರ್ಪಣೆಯಾಗಲಿ ಎಂದು ಜಿಲ್ಲಾಧಿಕಾರಿಗಳು ಆಶಿಸಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಚಾಮರಾಜನಗರ ಜಿಲ್ಲೆಯ ಮಹಿಳೆಯರ ಆರೋಗ್ಯ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಜಿಲ್ಲಾಡಳಿತ ಎರಡು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ. ಆರೋಗ್ಯ ಕಾಳಜಿಗಾಗಿ ಕ್ಯಾನ್ಸರ್ ತಪಾಸಣೆ, ಚಿಕಿತ್ಸೆ ಜಾಗೃತಿಗಾಗಿ ಸ್ತ್ರೀ ಸೌಖ್ಯ ಕಾರ್ಯಕ್ರಮ ಇಂದು ಆರಂಭಗೊಳಿಸಲಾಗಿದೆ. ಮಹಿಳೆಯರಿಂದಲೇ ಕರಕುಶಲ ವಸ್ತುಗಳ ಉತ್ಪನ್ನಗಳ ತಯಾರಿಸಿ ಮಾರಾಟದ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸುವ ಉದ್ದೇಶದೊಂದಿಗೆ ಚಾಮರಸಿ ಎಂಬ ಕಾರ್ಯಕ್ರಮವನ್ನು ರೂಪಿಸಿ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಯವರು ಹೇಳಿದರು.
ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಯಾವ ಸಾಧನೆಯೂ ದೊಡ್ಡದಲ್ಲ. ತ್ಯಾಗ, ಸಹನೆಯಿಂದ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಮಹಿಳೆಯರ ಅಭ್ಯುದೇಯಕ್ಕೆ ಸದಾ ಸಹಾಯವಾಗಿ ನಿಲ್ಲಬೇಕು. ಅಗತ್ಯ ನೆರವು, ಪ್ರೋತ್ಸಾಹ ನೀಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹಿಳೆಯರೊಂದಿಗೆ ಸದಾ ಜೊತೆಯಾಗಿ ಇರಲಿದೆ. ಮಹಿಳೆಯರಿಗೆ ಎಲ್ಲ ಬಗೆಯ ಸಹಕಾರ ನೀಡಲು ಸಿದ್ದವಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಹೆಚ್.ವಿ. ಚಂದ್ರು ಅವರು ಮಾತನಾಡಿ ಮಹಿಳಾ ಸಾಧಕರನ್ನು ಸನ್ಮಾನಿಸುವುದರಿಂದ ಇತರೆ ಮಹಿಳೆಯರಿಗೂ ಪ್ರೇರಣೆಯಾಗಲಿದೆ. ರಾಜ್ಯ ಸರ್ಕಾರ ರೂಪಿಸಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರ ಅಭಿವೃದ್ದಿಯ ಗುರಿ ಹೊಂದಿದೆ. ಗೃಹಲಕ್ಷ್ಮಿ, ಶಕ್ತಿ ಯೋಜನೆಯಂತಹ ಕಾರ್ಯಕ್ರಮಗಳಿಮದ ಮಹಿಳೆಯರಿಗೆ ಹೆಚ್ಚು ಅನುಕೂಲ ಕಲ್ಪಿಸಿಕೊಡಲಾಗಿದೆ ಎಂದರು.
ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನ ಅವರು ಮಾತನಾಡಿ ಮಹಿಳೆಯರು ಇಂದು ಅನೇಕ ಉನ್ನತ ಹಂತಕ್ಕೆ ತಲುಪಿದ್ದಾರೆ. ಕ್ರೀಡೆ, ವಿಮಾನಯಾನ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಹೆಚ್ಚು ಅವಕಾಶಗಳನ್ನು ಪಡೆದು ತಮ್ಮ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಪುರುಷ ಮಹಿಳೆ ಸರಿಸಮಾನವಾಗಿ ಎಲ್ಲ ರಂಗದಲ್ಲಿಯೂ ಇರಲು ಉತ್ತೇಜನ ಬಹಳ ಮುಖ್ಯವಾಗುತ್ತದೆ. ಔದ್ಯೋಗಿಕ, ಶೈಕ್ಷಣಿ, ಆಡಳಿತ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಗೆ ನಿರಂತರವಾಗಿ ಅವಕಾಶಗಳು ಪ್ರೋತ್ಸಾಹಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 8 ಮಹಿಳಾ ಸಾಧಕಿಯರನ್ನು, ಉತ್ತಮವಾಗಿ ಕಾರ್ಯನಿರ್ವಹಿಸಿರುವ ಐವರು ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಗುರುಲಿಂಗಮ್ಮ ಅವರು ರಚಿಸಿರುವ ತಿರುವು ಶೀರ್ಷಿಕೆಯ ಕಥಾ ಸಂಕಲವನ್ನು ಗಣ್ಯರು ಬಿಡುಗಡೆ ಮಾಡಿದರು.
ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷರಾದ ಸೋಮೇಶ್ವರ, ಉಮಾಪತಿ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲ ಪಂಚಾಯತ್ ಉಪಕಾರ್ಯದರ್ಶಿ ಶೃತಿ. ಡಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಹೆಚ್.ಆರ್. ಸುರೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Like this:
Like Loading...
Related