ಚಾಮರಾಜನಗರ: ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆ, ಕಾರ್ಯಕ್ರಮಗಳನ್ನು ಸದ್ಭಳಕೆ ಮಾಡಿಕೊಂಡು ಮಹಿಳೆಯರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಬಲರಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಂದು ತಾಲೂಕು ಪಂಚಾಯಿತಿ ಹಾಗೂ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ದೇಶದ ಎಲ್ಲಾ ಕ್ಷೇತ್ರಗಳಲ್ಲಿನ ಮಹಿಳೆಯರ ಸಾಧನೆಗೆ ಸರ್ಕಾರವು ಸಂವಿಧಾನಾತ್ಮಕವಾಗಿ ನೀಡಿರುವ ಹಕ್ಕುಗಳೇ ಕಾರಣವಾಗಿವೆ. ಆದರೂ ಮಹಿಳೆಯರ ಕೆಲ ಹಕ್ಕುಗಳು ಶೇ. 100ರಷ್ಟು ಕಾರ್ಯರೂಪಕ್ಕೆ ಬರಬೇಕು. ಇತ್ತೀಚೆಗೆ ಸರ್ಕಾರವು ಮಹಿಳೆಯರಿಗೆ ತಿಂಗಳಲ್ಲಿ ಒಂದು ದಿನದ ಋತುಚಕ್ರ ರಜೆಯನ್ನು ಮಂಜೂರು ಮಾಡಿದೆ. ಮಹಿಳೆಯರು ಕಾರ್ಯನಿರ್ವಹಿಸುವ ಸ್ಥಳದಲ್ಲಿ ಇಂದು ಹಲವು ಸಮಸ್ಯೆಗಳು ಹಾಗೂ ಒತ್ತಡದ ಪರಿಸ್ಥಿತಿ ಎದುರಿಸುತ್ತಿರುವುದು ಕಂಡುಬಂದಿದೆ. ಶಿಶುಪಾಲನಾ ರಜೆ ಸಮರ್ಪಕ ಜಾರಿಯಾಗಬೇಕು. ಸಮಾನತೆ ಎಲ್ಲಾ ಕ್ಷೇತ್ರಗಳಲ್ಲೂ ಬರಬೇಕು ಎಂದರು.
ಮಹಿಳೆಯರು ಆರೋಗ್ಯ ಸಮಸ್ಯೆಗಳಿಂದ ಸುಧಾರಣೆ ಹೊಂದಬೇಕು. ಉತ್ತಮ ಆರೋಗ್ಯದಿಂದ ಮಾತ್ರ ಕೆಲಸ-ಕಾರ್ಯಗಳಲ್ಲಿ ಪ್ರಗತಿ ಸಾಧಿಸಬಹುದು. ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಮುಂದಿರುವ ಹೆಣುಮಕ್ಕಳು ಪಿಯುಸಿ ನಂತರ ಐಟಿ, ತಾಂತ್ರಿಕ ಕ್ಷೇತ್ರಗಳಿಗೆ ಮುನ್ನುಗ್ಗಬೇಕು. ಅದಕ್ಕಾಗಿ ಪಿಯುಸಿ ಮುಗಿದ ತಕ್ಷಣವೇ ಪೋಷಕರು ಹೆಣ್ಣುಮಕ್ಕಳ ಮದುವೆ ಮಾಡದೇ ಉನ್ನತ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಬೇಕು. ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮೀ ಹಾಗೂ ಶಕ್ತಿ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಶಕ್ತಿ, ಆತ್ಮಸ್ಥೈರ್ಯ ತುಂಬಲಿವೆ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಲು ನೆರವಾಗಲಿವೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಒ ಮೋನಾ ರೋತ್ ಅವರು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು ಅವರು ಮಾತನಾಡಿ 50 ವರ್ಷಗಳನ್ನು ಪೂರೈಸಿರುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವು ಮಹಿಳೆಯರು ಸ್ವಾಭಿಮಾನ ಪ್ರದರ್ಶಿಸುವ ದಿನವಾಗಿದೆ. ಸ್ತ್ರೀಶಕ್ತಿ ಗುಂಪುಗಳು ಹಾಗೂ ಸ್ವಸಹಾಯ ಸಂಘಗಳಿಂದ ಮಹಿಳೆಯರ ಜೀವನಮಟ್ಟ ಸುಧಾರಿಸಿದೆ. ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನೆರವಾಗಿವೆ. ಮಹಿಳೆಯರು ಸಾಕಷ್ಟು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಜಿಲ್ಲೆಯಲ್ಲಿ ಸಾಕಷ್ಟು ಮಹಿಳಾ ಅಧಿಕಾರಿಗಳು ಇದ್ದಾರೆ. ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಸೋಮೇಶ್ವರ ಅವರು ಮಾತನಾಡಿ ಕೇವಲ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯರ ಸ್ವಾತಂತ್ರ್ಯ, ಸಮಾನತೆ, ಮೀಸಲಾತಿಗಾಗಿ ಹೋರಾಟ ನಡೆಸಿ ಮುಂಚೂಣಿಗೆ ತಂದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಈ ದೇಶದ ಪ್ರತಿಯೊಬ್ಬ ಮಹಿಳೆಯು ಸ್ಮರಿಸಬೇಕಾಗಿದೆ. ಮಹಿಳೆಯರಿಗೆ ಕುಟುಂಬ ನಿರ್ವಹಣೆ ಜೊತೆಗೆ ತಾಳ್ಮೆ, ಸಹನೆಯು ಇರಬೇಕು. ಆಗಮಾತ್ರ ಎಂತಹ ಸಮಸ್ಯೆಗಳನ್ನಾದರೂ ಮೆಟ್ಟಿನಿಲ್ಲಬಲ್ಲರು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಿ.ಸಿ. ಶೃತಿ ಹಾಗೂ ಸಮಗ್ರ ಕೃಷಿ ಪದ್ಧತಿಯ ಸಾಧಕಿ ತಾಲೂಕಿನ ಅಟ್ಟುಗೂಳಿಪುರದ ಪ್ರಭಾಮಣಿ ಪ್ರಕಾಶ್ ಅವರು ಮಹಿಳಾ ದಿನಾಚರಣೆ ಮಹತ್ವದ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ವೇಳೆ ಸರ್ಕಾರವು ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾದ ಕೋಟಂಬಳ್ಳಿ ಗ್ರಾಮದ ಮೀನಾ ಹಾಗೂ ಕೊತ್ತಲವಾಡಿ ಗ್ರಾಮದ ಮಹೇಶ್ವರಿ ಅವರು ಗ್ಯಾರಂಟಿ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಂಡರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಿರಿಧರ್, ಸಹಾಯಕ ಕೃಷಿ ನಿರ್ದೇಶಕರಾದ ರೂಪ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಮಂಜುಳ, ಚಿನ್ನಸ್ವಾಮಿ, ರಾಜು, ಸುಕುಮಾರ್, ಮಲ್ಲಿಕಾರ್ಜುನ, ಎಂ. ಕುಮಾರ್, ಸಿದ್ದಿಖ್, ರಮೇಶ್, ಕುಮಾರಸ್ವಾಮಿ, ರಾಜೇಶ್, ಗಣೇಶ್‍ಕುಮಾರ್, ಲಿಂಗಣ್ಣ, ರಂಗಸ್ವಾಮಿ, ಜಡೇಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಲಾವತಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು