ಹರದನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಮಧುಮೇಹ ದಿನ ಆಚರಣೆ

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹರದನಹಳ್ಳಿ ಪಾಥಮಿಕ ಆರೋಗ್ಯ ಕೇಂದ್ರ ಸಹಯೋಗದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮವನ್ನು ಹರದನಹಳ್ಳಿ ಪಾಥಮಿಕ ಆರೋಗ್ಯ ಕೇಂದ್ರದಲ್ಲಿಂದು ಆಚರಿಸಲಾಯಿತು.

  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಎನ್.ಸಿ.ಡಿ ಕಾರ್ಯಕ್ರಮಾಧಿಕಾರಿ ಡಾ. ಸುಂದರೇಶ್ ಅವರು ಇಡೀ ರಾಜ್ಯದಲ್ಲಿಯೇ ನಮ್ಮ ಜಿಲ್ಲೆಯಲ್ಲಿ ಪ್ರತಿ ಬುಧವಾರ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ನಗರ ಆರೋಗ್ಯ ಕೇಂದ್ರಗಳಲ್ಲಿ ಡಯಾಬಿಟಿಕ್ ಕ್ಲಿನಿಕ್ ತೆರೆದು ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆಯಲ್ಲಿ ಮಧುಮೇಹ ರೋಗಿಗಳಿಗೆ ಉಚಿತ ಸಲಹೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದರು. 

  ರಕ್ತದಲ್ಲಿನ ಗ್ಲೂಕೋಸ್ ಉತ್ಪಾದನೆ ಹೆಚ್ಚಾಗಿ ಇನ್ಸುಲಿನ್ ಉತ್ಪಾದನೆ ಕಡಿಮೆ ಆದಾಗ ಮಧುಮೇಹ ಕಂಡು ಬರುತ್ತದೆ. ಜನರ ಜೀವನ ಶೈಲಿಯ ಮಾರ್ಪಾಡು ಹಾಗೂ ಬದಲಾದ ಜೀವನ ಶೈಲಿಯಿಂದ ಮಧುಮೇಹ ಬರುವ ಸಾಧ್ಯತೆ ಹೆಚ್ಚಿದೆ. ಜನರು ಚಟುವಟಿಕೆ ಜೀವನ ನಡೆಸಿ, ಸತ್ವಭರಿತ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಮಧುಮೇಹ ಕಾಯಿಲೆಯಿಂದ ದೂರ ಉಳಿಯಬಹುದು ಎಂದು ಡಾ. ಸುಂದರೇಶ್ ಅವರು ತಿಳಿಸಿದರು.

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗುರುರಾಜ್ ಅವರು ಹಿಂದೆ ಸಕ್ಕರೆಕಾಯಿಲೆ ಕಡಿಮೆ ಪ್ರಮಾಣದಲ್ಲಿ ವರದಿಯಾಗುತ್ತಿತ್ತು. ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ನಾಣ್ನುಡಿಯಂತೆ ಜನರು ಶ್ರಮ ರಹಿತ ಜೀವನದಿಂದ ಹೊರಬಂದು ದೈಹಿಕ ಚಟುವಟಿಕೆ ಹಾಗೂ ಹಸಿರು ಸೊಪ್ಪು, ತರಕಾರಿ ಹೆಚ್ಚಾಗಿ ಉಪಯೋಗಿಸಿ ಆರೋಗ್ಯವಂತರಾಗುವಂತೆ ಸಲಹೆ ಮಾಡಿದರು. 

  ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜನರಲ್ಲಿ ಮಧುಮೇಹದ ಜಾಗೃತಿ ಮೂಡಿಸಲು ಪ್ರತಿವರ್ಷ ನವೆಂಬರ್ 14ರಂದು ವಿಶ್ವ ಮಧುಮೇಹ ದಿನಾಚರಣೆ ಆಚರಿಸಲಾಗುತ್ತಿದೆ. ಜನರು ಇತ್ತೀಚಿನ ದಿನಗಳಲ್ಲಿ ದೈಹಿಕ ಚಟುವಟಿಕೆ ಕಡಿಮೆ ಮಾಡಿ ಶ್ರಮರಹಿತ ಜೀವನವನ್ನು ನಡೆಸುತ್ತಿದ್ದು, ಝಂಕ್ ಫುಡ್‍ಗಳ ಮೊರೆ ಹೋಗುತ್ತಿದ್ದಾರೆ. ಚಟುವಟಿಕೆ ಜೀವನಕ್ಕಾಗಿ ಸತ್ವಭರಿತ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದರು. 

  ಸಮುದಾಯ ಆರೋಗ್ಯಾಧಿಕಾರಿ ಸೌಜನ್ಯ, ಶುಶ್ರೂಷಣಾಧಿಕಾರಿ ರಾಜೇಶ್ವರಿ, ಲಕ್ಷ್ಮೀ, ಆರೋಗ್ಯ ಸಿಬ್ಬಂದಿ ಮಹದೇವಸ್ವಾಮಿ, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *