ಚಾಮರಾಜನಗರ: ರಾಜಕೀಯ ರಂಗದಲ್ಲಿ ವಂಶಪಾರಂಪರ್‍ಯ ಆಡಳಿತ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಿತಿ ಮೀರಿದ್ದು, ಇದನ್ನು ಸುಧಾರಿಸಲು ಯುವಜನರು ಜಾಗೃತಿಗೊಳ್ಳಬೇಕು ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಸಲಹೆ ನೀಡಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಮೈಸೂರಿನ ದಾರಿ ಫೌಂಡೇಶನ್, ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಯೋಗದೊಂದಿಗೆ ಆಯೋಜಿಸಿದ್ದ “ಭವಿಷ್ಯದಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಜವಾಬ್ದಾರಿ ಯುವ ಶಕ್ತಿಯ ಕೈಯಲ್ಲಿ-ಮುಕ್ತ ಸಂವಾದ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಕ್ಷಭೇದವಿಲ್ಲದೇ ಈಗ ವಂಶಪಾರಂಪರ್‍ಯ ರಾಜಕಾರಣ ನಡೆಯುತ್ತಿದೆ. ರಾಜಕೀಯ ಮುಖಂಡರ ಮಕ್ಕಳು, ಸೋದರರೇ ಶಾಸಕರು, ಸಚಿವರಾಗುತ್ತಿದ್ದಾರೆ. ಒಂದೊಂದು ಜಿಲ್ಲೆಯನ್ನು ಒಬ್ಬೊಬ್ಬರು ಹಿಡಿದರೆ ಜನಸಾಮಾನ್ಯರ ಗತಿಯೇನು? ಇದಕ್ಕೆ ಪ್ರಜಾಪ್ರಭುತ್ವ ಎನ್ನುತ್ತಾರಾ? ಇದರ ಸುಧಾರಣೆ ಯಾರು ಮಾಡಬೇಕು? ಯುವ ಜನರಾದ ನೀವು ಜಾಗೃತಿಗೊಳ್ಳಬೇಕು. ಯುವ ಜನತೆ ಕಡ್ಡಾಯವಾಗಿ ಮತದಾನ ಮಾಡಬೇಕು. ಚುನಾವಣೆಗೆ ನಿಲ್ಲಲೂ ಸಿದ್ಧರಿರಬೇಕು ಎಂದು ಅವರು ಹೇಳಿದರು.
ವಧು-ವರ ನೋಡುವಾಗ ಎಲ್ಲವನ್ನೂ ಪರೀಕ್ಷೆ ಮಾಡುತ್ತೇವೆ. ಅವನು ಉದ್ಯೋಗದಲ್ಲಿದ್ದಾನಾ? ಒಳ್ಳೆಯ ನಡತೆಯುಳ್ಳವನಾ? ಎಂದು ಪರಿಶೀಲನೆ ಮಾಡುತ್ತೇವೆ. ಆದರೆ ಚುನಾವಣೆಗೆ ಸ್ಪರ್ಧಿಸಿರುವ ಜನಪ್ರತಿನಿಧಿಯಾಗುವವನನ್ನು ಆರಿಸುವಾಗ ಮೈಮರೆಯುತ್ತೇವೆ. ಸ್ಪರ್ಧಿಗಳ ಜಾತಿ ನೋಡಿ ಮತ ಹಾಕಬೇಡಿ. ಯಾರು ಯೋಗ್ಯರು ಎಂದು ನಿರ್ಧರಿಸಿ ಮತ ಹಾಕಿ. ನಿಮ್ಮ ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸ ಮಾಡುವವರಿಗೆ ಮತ ಹಾಕಿ. ಆತ್ಮಸಾಕ್ಷಿಯಂತೆ, ಕಡ್ಡಾಯವಾಗಿ ಮತ ಹಾಕಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತರಕಾರಿ ಕೊಳ್ಳುವಾಗ ಇದು ಚೆನ್ನಾಗಿದೆಯಾ? ಇದು ತಾಜಾ ಇದೆಯಾ? ಎಂದು ಪರೀಕ್ಷಿಸಿ ಕೊಳ್ಳುತ್ತೀರಿ. ಇದೇ ರೀತಿಯ ಕಾಳಜಿ ಜನಪ್ರತಿನಿಧಿ ಆರಿಸುವಾಗಲೂ ಇರಬೇಕು ಎಂದು ಅವರು ಸಲಹೆ ನೀಡಿದರು.
ರೈತರು ಬೆಳೆದ ಬೆಳೆಗಳಿಗೆ ಬೆಲೆಯಿಲ್ಲ. ಬೆಳೆಯುವ ರೈತನಿಗೆ ಹಣ ದೊರಕುವುದಿಲ್ಲ. ಮಧ್ಯವರ್ತಿಗಳಿಗೆ ಅದರ ಲಾಭ ದೊರಕುತ್ತಿದೆ. ಹತ್ತಿ ಬೆಳೆದವನಿಗೆ ಬೆಲೆ ಇಲ್ಲ. ಕಾಟನ್ ಇಂಡಸ್ಟ್ರೀಸ್ ಲಾಭ ಮಾಡುತ್ತಾರೆ. ಟೊಮೆಟೋ ಬೆಳೆದವನಿಗೆ ದರ ಇಲ್ಲ. ಸಾಸ್, ಕೆಚಪ್ ಮಾಡಿದವರಿಗೆ ಬೆಲೆ ದೊರಕುತ್ತದೆ. ಜನಪ್ರತಿನಿಧಿಗಳಾದವರು ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಕೊಡಿಸಲು ಕಾಳಜಿ ವಹಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ಪತ್ರಕರ್ತ ಕೆ.ಎಸ್. ಬನಶಂಕರ ಆರಾಧ್ಯ ಮಾತನಾಡಿ, ಜಗತ್ತಿನಲ್ಲಿ ಅತಿ ಹೆಚ್ಚು ಯುವ ಜನರನ್ನು ಹೊಂದಿರುವ ದೇಶ ಭಾರತ. ಯುವಜನರೇ ದೇಶದ ಭವಿಷ್ಯ. ಮೂಢನಂಬಿಕೆಗಳನ್ನು ಬಿಡಿ. ವೈಜ್ಞಾನಿಕವಾಗಿ ಚಿಂತಿಸಿ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಮಾಹಿತಿಗಳನ್ನು ಪರಿಶೀಲಿಸಿ. ಮೊಬೈಲ್ ಗೆ ಬಂದದ್ದನ್ನೆಲ್ಲ ಪರಾಮರ್ಶಿಸದೇ ಫಾರ್ವರ್‍ಡ್ ಮಾಡಬೇಡಿ ಎಂದು ಹೇಳಿದರು.
ಸಕರ್ಕಾರಿ ಪ್ರಥಮ ದಜರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎಸ್. ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್. ಎನ್. ಸಿದ್ದಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಲಕ್ಕೂರು, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಶೈಲೇಶ್ ಕುಮಾರ್, ದಾರಿ ಫೌಂಡೇಶನ್ ಅಧ್ಯಕ್ಷ ಎಲ್. ರಂಗಯ್ಯ, ಸಂಚಾಲಕ ಪ್ರಭಾಕರ್, ಕಾರ್ಯದರ್ಶಿ ತಗಡೂರು ವೀರೇಶ್‌ಕುಮಾರ್, ಖಜಾಂಚಿ ವಿಶ್ವನಾಥ್ ಕುಲಕರ್ಣಿ,ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ,
ತೋಂಟೇಶ್, ಶಾಂತರಾಜು ಪ್ರಾಧ್ಯಾಪಕರಾದ ಡಾ ಬಿ.ಆರ್. ಜಯಣ್ಣ, ಮಲ್ಲಣ್ಣ, ಲಿಖಿತಾ,
ಮತ್ತು ಕಾಲೇಜು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.