ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ವಾರಸುದಾರರು ಇಲ್ಲದ ಠೇವಣಿ ಖಾತೆಗಳಲ್ಲಿನ ಹಣ ಹಿಂದಿರುಗಿಸುವ ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನವನ್ನು ಇಂದು ಅಧಿಕೃತವಾಗಿ ಆರಂಭಿಸಲಾಯಿತು.
ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮೋನಾ ರೋತ್ ಅವರು ‘ನಿಮ್ಮ ಹಣ ನಿಮ್ಮ ಹಕ್ಕು’ ಎಂಬ ಪೋಸ್ಟರ್ ಪ್ರದರ್ಶಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಮೋನಾ ರೋತ್ ಅವರು ವಾರಸುದಾರರು ಇಲ್ಲದ ಠೇವಣಿ ಸಂಬಂಧ ಸರ್ಕಾರಿ ಖಾತೆಗಳ ಪರಿಹಾರಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಭಾರತೀಯ ರಿಸರ್ವ್ ಬ್ಯಾಂಕ್‍ನ ಬೆಂಗಳೂರಿನ ಮಹಾ ಪ್ರಬಂಧಕರಾದ ಮೀನಾಕ್ಷಿ ಗಂಜು ಅವರು ಮಾತನಾಡಿ ಬ್ಯಾಂಕುಗಳು ಠೇವಣಿದಾರರನ್ನು ಪತ್ತೆಹಚ್ಚಿ, ಮೂಲ ಠೇವಣಿದಾರರಿಗೆ ಅಥವಾ ಅವರ ನಾಮನಿರ್ದೇಶಿತರಿಗೆ (ನಾಮಿನಿಗಳಿಗೆ) ಅನ್ವಯವಾಗುವಂತೆ ಮೊತ್ತವನ್ನು ಮರುಪಾವತಿಸಲು ಗಂಭೀರ ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಡಿಇಎಎಫ್ (ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ)ಗೆ ವರ್ಗಾಯಿಸಲಾದ ಠೇವಣಿಗಳನ್ನು ಮರುಮುಖ್ಯವಾಹಿನಿಗೆ ತರಲು ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಅಗತ್ಯವಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 1,21,881 ಡಿಇಎಎಫ್ ಖಾತೆಗಳು ಬಾಕಿ ಉಳಿದಿದ್ದು, 30.51 ಕೋಟಿ ರೂ ಮೊತ್ತ ವಾರಸುದಾರರು ಇಲ್ಲದ ಠೇವಣಿಯಾಗಿ ಉಳಿದಿದೆ. ಇಂದಿನವರೆಗೆ 208 ಖಾತೆಗಳು ಒಟ್ಟು 6.11 ಕೋಟಿ ರೂ. ಮೊತ್ತ ಗುರುತಿಸಲ್ಪಟ್ಟು ಪರಿಹಾರಗೊಂಡಿದೆ ಎಂದು ಮಾಹಿತಿ ನೀಡಿದರು.
ಭಾರತೀಯ ರಿಸರ್ವ್ ಬ್ಯಾಂಕ್‍ನ ಬೆಂಗಳೂರಿನ ಸಹಾಯಕ ಮಹಾ ಪ್ರಬಂಧಕರಾದ ಪ್ರಭಾಕರನ್, ಮೈಸೂರಿನ ಎಸ್‍ಬಿಐ ಉಪ ಮಹಾಪ್ರಬಂಧಕರಾದ ಅರುಣ್ ಕುಮಾರ್ ಪಣಿಗ್ರಾಹಿ, ಚಾಮರಾಜನಗರದ ಎಸ್‍ಬಿಐ ಪ್ರಾದೇಶಿಕ ವ್ಯವಸ್ಥಾಪಕರಾದ ಸೀತಾರಾಮ, ಕೆಜಿಬಿ ಪ್ರಾದೇಶಿಕ ವ್ಯವಸ್ಥಾಪಕರಾದ ತ್ರಿವೇಣಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಸುರೇಖಾ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್‍ಸೀಸ್ ಬ್ಯಾಂಕ್, ಎಚ್‍ಡಿಎಫ್‍ಸಿ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕುಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Like this:
Like Loading...
Related